ಉದ್ಯೋಗ ಖಾತರಿಗೆ ಕೇಂದ್ರ ಕತ್ತರಿ: ಶ್ರಮಿಕರ ಬದುಕಿಗೆ ಉರುಳಾಯಿತೇ ವಿಬಿ ಜಿ ರಾಮ್‌ ಜಿ?

Date:

ಕಳೆದ ತಿಂಗಳು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ, ಸರ್ಕಾರವು ವಿಬಿ ಜಿ ರಾಮ್‌ ಜಿ ಅಡಿಯಲ್ಲಿ ಉದ್ಯೋಗವನ್ನು ಕೋರುವ ಶೇ.99.5ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ ಎಂದು ಹೇಳಿದೆ. ಆದರೆ, ಜುಲೈ 22ರ ವೇಳೆಗೆ 5.2 ಕೋಟಿಗೂ ಅಧಿಕ ಮಾನವ ದಿನಗಳು ಸೃಷ್ಟಿಯಾಗಿವೆ. ಆದಾಗ್ಯೂ, ಇತ್ತೀಚಿನ ಮಾಸಾಂತ್ಯದ ಅಂಕಿಅಂಶಗಳು ಜುಲೈನ ಉಳಿದ ಅವಧಿಯಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿ ಕಡಿತವಾಗಿರುವುದನ್ನು ಸೂಚಿಸುತ್ತವೆ.

ಸರ್ಕಾರ ಹೊಸದಾಗಿ ಆರಂಭಿಸಿದ ವಿಬಿ ಜಿ ರಾಮ್‌ ಜಿ(ಗ್ರಾಮೀಣ ಉದ್ಯೋಗ) ಕಾರ್ಯಕ್ರಮದಡಿ ಮೊದಲ ತಿಂಗಳಲ್ಲೇ ಅರ್ಧದಷ್ಟು ಉದ್ಯೋಗ ಸೃಷ್ಟಿ ಕುಸಿದಿದ್ದು, ಜುಲೈನಲ್ಲಿ 7.67 ಕೋಟಿಗೆ ಇಳಿದಿರುವ ಮಾನವ ದಿನಗಳ ಕೆಲಸ ಕಳೆದ ವರ್ಷ ಇದೇ ತಿಂಗಳಲ್ಲಿ 15.33 ಕೋಟಿಯಷ್ಟಿತ್ತು. ಅಧಿಕೃತ ಅಂಕಿಅಂಶಗಳನ್ನು ಗಮನಿಸಿದರೆ ಉದ್ಯೋಗ ಖಾತರಿಯಾಗಬೇಕಾಗಿದ್ದ ವಿಬಿ ಜಿ ರಾಮ್‌ ಜಿ ಗ್ರಾಮೀಣ ಭಾರತದ ಬಡವರ ಪಾಲಿಗೆ ಉರುಳಾಗಿ ಪರಿಣಮಿಸಿದೆ.

- Advertisement -

ಜುಲೈ 1 ರಿಂದ ಕೇಂದ್ರವು ಎರಡು ದಶಕಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯನ್ನು ಬದಲಿಸಿದ ಕೇಂದ್ರ ಸರ್ಕಾರ, ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ) VB-G RAM Gಯನ್ನು ಅನುಷ್ಠಾನಗೊಳಿಸಿದ ಕೆಲವೇ ವಾರಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.49.94ರಷ್ಟು ಉದ್ಯೋಗ ಕುಸಿತವಾಗಿರುವುದು ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಮಾನವ ದಿನ ಎಂದರೆ ಮನರೇಗಾ ಕಾರ್ಯಕ್ರಮದಡಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಉದ್ಯೋಗ ಒದಗಿಸುವುದನ್ನು ಸೂಚಿಸುತ್ತದೆ ಮತ್ತು ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಉತ್ಪತ್ತಿಯಾಗುವ ಕೆಲಸವನ್ನು ಪತ್ತೆಹಚ್ಚಲು ಬಳಸುವ ಪ್ರಮಾಣಿತ ಮಾಪನವಾಗಿದೆ. ಆದರೆ, ಕೇಂದ್ರ ಸರ್ಕಾರವು ವಿಬಿ ಜಿ ರಾಮ್‌ ಜಿಯನ್ನು ಮನರೇಗಾಕ್ಕೆ ನವೀಕರಿಸಿದ ಆವೃತ್ತಿಯಾಗಿ ಯೋಜಿಸಿದ್ದು, “ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದೆ. ಜತೆಗೆ ವೇತನವನ್ನೂ ಹೆಚ್ಚಿಸುತ್ತದೆ. ಪರಿಷ್ಕೃತ ಕಾರ್ಯಕ್ರಮವು ಶಾಶ್ವತ ಗ್ರಾಮೀಣ ಆಸ್ತಿ ಸೃಷ್ಟಿ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಹೊಸ ಕಾರ್ಯಕ್ರಮಕ್ಕೆ ಪರಿವರ್ತನೆಯು ಅನುಷ್ಠಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಮರ್ಥಿಸಿಕೊಂಡಿದೆ.

ಕಳೆದ ತಿಂಗಳು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ, ಸರ್ಕಾರವು ವಿಬಿ ಜಿ ರಾಮ್‌ ಜಿ ಅಡಿಯಲ್ಲಿ ಉದ್ಯೋಗವನ್ನು ಕೋರುವ ಶೇ.99.5ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ ಎಂದು ಹೇಳಿದೆ. ಆದರೆ, ಜುಲೈ 22ರ ವೇಳೆಗೆ 5.2 ಕೋಟಿಗೂ ಅಧಿಕ ಮಾನವ ದಿನಗಳು ಸೃಷ್ಟಿಯಾಗಿವೆ. ಆದಾಗ್ಯೂ, ಇತ್ತೀಚಿನ ಮಾಸಾಂತ್ಯದ ಅಂಕಿಅಂಶಗಳು ಜುಲೈನ ಉಳಿದ ಅವಧಿಯಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿ ಕಡಿತವಾಗಿರುವುದನ್ನು ಸೂಚಿಸುತ್ತವೆ.

ಯೋಜನೆಯ ಮೊದಲ ಪೂರ್ಣ ತಿಂಗಳಲ್ಲಿ ಉತ್ಪತ್ತಿಯಾಗುವ ಸುಮಾರು ಶೇ.50ರಷ್ಟು ಮಾನವ ದಿನಗಳ ಕೆಲಸ ವರ್ಷದಿಂದ ವರ್ಷಕ್ಕೆ ಕುಸಿಯುವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಇನ್ನೂ ವಿವರವಾದ ಮಾಹಿತಿಯನ್ನು ನೀಡಿಲ್ಲ. ಜುಲೈ ದತ್ತಾಂಶವು ವಿಬಿ ಜಿ ರಾಮ್‌ ಜಿ ಜಾರಿಗೆ ಬಂದ ನಂತರದ ಮೊದಲ ಪೂರ್ಣ ತಿಂಗಳ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಮುಂಬರುವ ತಿಂಗಳುಗಳಲ್ಲಿನ ಉದ್ಯೋಗ ಅಂಕಿಅಂಶಗಳು ಮನರೇಗಾದಿಂದ ಪರಿವರ್ತನೆಗೆ ಸಂಬಂಧಿಸಿವೆಯೇ ಅಥವಾ ಗ್ರಾಮೀಣ ಉದ್ಯೋಗ ಸೃಷ್ಟಿಯಲ್ಲಿ ವ್ಯಾಪಕವಾದ ವಿಳಂಬ ಪ್ರತಿಬಿಂಬಿಸುತ್ತದೆಯೇ ಎಂಬುದನ್ನು ಸೂಚಿಸುತ್ತದೆ.

ಇಲ್ಲಿ ವಿಬಿ ಜಿ ರಾಮ್‌ ಜಿ ಕುರಿತು ಸರ್ಕಾರ ಮುಂದಿಡುತ್ತಿರುವ ವಾದವನ್ನೂ ಗಮನಿಸಬೇಕು. ಹೊಸ ವ್ಯವಸ್ಥೆಯಲ್ಲಿ ಹಿಂದಿನ 100 ದಿನಗಳ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬುದು ಸರ್ಕಾರದ ಪ್ರಮುಖ ಪ್ರತಿಪಾದನೆ. ಅಂದರೆ ಕಾಗದದ ಮೇಲಿನ ಶಾಸನಬದ್ಧ ಖಾತರಿ ಹಿಂದಿಗಿಂತ ಹೆಚ್ಚಾಗಿದೆ. ಸರ್ಕಾರ ಹೊಸ ವ್ಯವಸ್ಥೆಯನ್ನು ಗ್ರಾಮೀಣ ಅಭಿವೃದ್ಧಿ, ಆಸ್ತಿ ನಿರ್ಮಾಣ ಮತ್ತು ಉದ್ಯೋಗದ ಉತ್ತಮ ಸಂಯೋಜನೆಯಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ 125 ದಿನಗಳ ಅವಕಾಶವನ್ನು ಕಾರ್ಮಿಕ ವಿರೋಧಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕಾನೂನಿನಲ್ಲಿ ಬರೆದಿರುವ ಗರಿಷ್ಠ ದಿನಗಳ ಸಂಖ್ಯೆಯಿಂದ ಮಾತ್ರವಲ್ಲ; ಎಷ್ಟು ಕುಟುಂಬಗಳು ಕೆಲಸ ಕೇಳಿದವು, ಅವರಲ್ಲಿ ಎಷ್ಟು ಕುಟುಂಬಗಳಿಗೆ ಕೆಲಸ ಸಿಕ್ಕಿತು, ಸರಾಸರಿ ಎಷ್ಟು ದಿನ ಕೆಲಸ ಸಿಕ್ಕಿತು, ಎಷ್ಟು ಮಾನವ ದಿನಗಳು ಸೃಷ್ಟಿಯಾದವು, ಕೆಲಸ ಕೇಳಿದ ನಂತರ ಎಷ್ಟು ದಿನಗಳಲ್ಲಿ ಉದ್ಯೋಗ ನೀಡಲಾಯಿತು, ಕೂಲಿ ಎಷ್ಟು ದಿನಗಳಲ್ಲಿ ಪಾವತಿಸಲಾಯಿತು ಮತ್ತು ಕೆಲಸ ಸಿಗದವರಿಗೆ ನಿರುದ್ಯೋಗ ಭತ್ಯೆ ದೊರೆಯಿತೇ ಎಂಬ ನೆಲಮಟ್ಟದ ಸೂಚಕಗಳಿಂದ ಕಾಯ್ದೆಯ ಯಶಸ್ಸು ಸಾಬೀತಾಗುತ್ತದೆ.

ಇದೇ ಕಾರಣಕ್ಕೆ 2026ರ ಜುಲೈ ಅಂಕಿಅಂಶಗಳು ಮಹತ್ವ ಪಡೆಯುತ್ತವೆ. ಒಂದೆಡೆ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ಘೋಷಣೆ ಇದ್ದರೆ, ಮತ್ತೊಂದೆಡೆ ಮೊದಲ ತಿಂಗಳ ಉದ್ಯೋಗ ವರ್ಷದಿಂದ ವರ್ಷಕ್ಕೆ 15.33 ಕೋಟಿಯಿಂದ 7.67 ಕೋಟಿಗೆ ಕುಸಿದಿರುವ ಮಾಪನವಿದೆ. ಅಂದರೆ ಕಾಗದದ ಮೇಲೆ ಶೇ.25ರಷ್ಟು ಹೆಚ್ಚು ದಿನಗಳ ಭರವಸೆ ಇದ್ದರೂ, ಹೋಲಿಕೆಯ ತಿಂಗಳಲ್ಲಿ ವಾಸ್ತವವಾಗಿ ಸೃಷ್ಟಿಯಾದ ಮಾನವ ದಿನಗಳು ಸುಮಾರು ಶೇ.50ರಷ್ಟು ಕುಸಿದಿವೆ. ಈ ವಿರೋಧಾಭಾಸವೇ ಈಗ ಉತ್ತರಿಸಬೇಕಾದ ಮುಖ್ಯ ಪ್ರಶ್ನೆ.

ವಿತ್ತೀಯ ವರ್ಷ                      ಕುಟುಂಬಗಳು                    ಮಾನವ ದಿನಗಳು

2022-23                                      1.75 ಕೋಟಿ                             23.47 ಕೋಟಿ

2023-24                                      2.09 ಕೋಟಿ                             27.14 ಕೋಟಿ

2024-25                                      1.62 ಕೋಟಿ                             20.30 ಕೋಟಿ

2025-26                                      1.42 ಕೋಟಿ                             15.33 ಕೋಟಿ

2026-27                                         68 ಲಕ್ಷ                                    7.67 ಕೋಟಿ

ಇದು ಹೊಸ ವ್ಯವಸ್ಥೆಯ ಆರಂಭಿಕ ಆಡಳಿತಾತ್ಮಕ ಕಾರಣವೇ? ರಾಜ್ಯಗಳು ಇನ್ನೂ ಸಂಪೂರ್ಣವಾಗಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳದ ಪರಿಣಾಮವೇ? ಮಳೆಯ ಕಾರಣದಿಂದ ಕೃಷಿಯಲ್ಲಿ ಹೆಚ್ಚಿನ ಉದ್ಯೋಗ ಲಭ್ಯವಾಗಿ ಉದ್ಯೋಗ ಖಾತರಿ ಬೇಡಿಕೆ ಕಡಿಮೆಯಾಯಿತೇ? ಕೆಲಸಕ್ಕೆ ಬೇಡಿಕೆ ಇದ್ದರೂ ಕಾಮಗಾರಿಗಳನ್ನು ತೆರೆಯಲಾಗಲಿಲ್ಲವೇ? ಹಣಕಾಸು ಹಂಚಿಕೆ ಅಥವಾ ಅನುಮೋದನೆಯಲ್ಲಿ ವಿಳಂಬವಾಗಿದೆಯೇ? ಇಲ್ಲವೇ ಹೊಸ ವ್ಯವಸ್ಥೆಯ ವಿನ್ಯಾಸವೇ ಉದ್ಯೋಗ ಸೃಷ್ಟಿಯನ್ನು ನಿಯಂತ್ರಿಸುತ್ತಿದೆಯೇ? ಎಂಬ ಪ್ರಶ್ನೆಗಳು ಗಂಭೀರವಾಗಿವೆ.

ವಿಬಿ ಜಿ ರಾಮ್‌ ಜಿ ಅಡಿಯಲ್ಲಿ ಸಾಮಾನ್ಯ ರಾಜ್ಯಗಳಿಗೆ ಕೇಂದ್ರ ಮತ್ತು ರಾಜ್ಯಗಳ ವೆಚ್ಚ ಹಂಚಿಕೆಯ ವಿನ್ಯಾಸದಲ್ಲಿ 60:40 ಮಾದರಿಯನ್ನು ಸರ್ಕಾರ ವಿವರಿಸಿದೆ; ಈಶಾನ್ಯ ಮತ್ತು ಕೆಲವು ಹಿಮಾಲಯದ ರಾಜ್ಯಗಳಿಗೆ 90:10 ಅನುಪಾತವಿದೆ. ಗ್ರಾಮೀಣ ಉದ್ಯೋಗ ಖಾತರಿ ಎಂಬುದು ದೊಡ್ಡ ಪ್ರಮಾಣದ ಸಾರ್ವಜನಿಕ ಹಣಕಾಸು ಅಗತ್ಯವಿರುವ ಕಾರ್ಯಕ್ರಮ. ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಹಣಕಾಸಿನ ಹೊಣೆ ಬಿದ್ದರೆ ಹಣಕಾಸು ದುರ್ಬಲವಾಗಿರುವ ರಾಜ್ಯಗಳು ಬೇಡಿಕೆಯಷ್ಟು ಉದ್ಯೋಗ ಒದಗಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ವಿಶೇಷವಾಗಿ ಬರಗಾಲ, ಪ್ರವಾಹ ಅಥವಾ ಕೃಷಿ ಬಿಕ್ಕಟ್ಟು ಸಂಭವಿಸಿದ ವರ್ಷಗಳಲ್ಲಿ ಕೆಲಸದ ಬೇಡಿಕೆ ಏಕಾಏಕಿ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಸಾವಿರಾರು ಕೋಟಿ ರೂಪಾಯಿ ಒದಗಿಸುವ ಸಾಮರ್ಥ್ಯ ಇಲ್ಲದಿದ್ದರೆ, ಕಾನೂನಿನಲ್ಲಿ 125 ದಿನಗಳ ಹಕ್ಕು ಇದ್ದರೂ ನೆಲಮಟ್ಟದಲ್ಲಿ ಉದ್ಯೋಗದ ಲಭ್ಯತೆ ಕುಗ್ಗುವ ಅಪಾಯವಿರುತ್ತದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಕರ್ನಾಟಕದಂತಹ ರಾಜ್ಯಕ್ಕೆ ಈ ಪ್ರಶ್ನೆ ಇನ್ನಷ್ಟು ಮುಖ್ಯ. ರಾಜ್ಯದ ಅನೇಕ ಜಿಲ್ಲೆಗಳ ಕೃಷಿ ಇನ್ನೂ ಮಳೆಯ ಮೇಲೆ ಅವಲಂಬಿತವಾಗಿದೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಮಳೆ ವಿಫಲವಾದರೆ ರೈತನಷ್ಟೇ ಅಲ್ಲದೆ ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಗ್ರಾಮೀಣ ಮಹಿಳೆ, ಕೂಲಿ ಕುಟುಂಬ ಎಲ್ಲರೂ ಒಂದೇ ಆರ್ಥಿಕ ಆಘಾತಕ್ಕೆ ಸಿಲುಕುತ್ತಾರೆ. ಇಂತಹ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆ ಕೆರೆ ಹೂಳೆತ್ತುವುದು, ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಕೃಷಿ ಹೊಂಡ, ನೀರು ಹರಿವಿನ ಕಾಲುವೆ ಮುಂತಾದ ಕೆಲಸಗಳನ್ನು ಕೈಗೊಳ್ಳುವುದರಿಂದ ಎರಡು ರೀತಿಯ ಪ್ರಯೋಜನವಾಗುತ್ತದೆ. ತಕ್ಷಣಕ್ಕೆ ಕಾರ್ಮಿಕನ ಕೈಗೆ ಕೂಲಿ ಸಿಗುತ್ತದೆ; ದೀರ್ಘಾವಧಿಯಲ್ಲಿ ಬರವನ್ನು ಎದುರಿಸಲು ಗ್ರಾಮಕ್ಕೆ ಅಗತ್ಯವಾದ ನೀರು ಮತ್ತು ಭೂಸಂಪನ್ಮೂಲ ಆಸ್ತಿಗಳು ನಿರ್ಮಾಣವಾಗುತ್ತವೆ. ಹೀಗಾಗಿ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸುವುದು ಕೇವಲ ಇಂದಿನ ಕಾರ್ಮಿಕನ ಕೂಲಿಯನ್ನು ಕಡಿಮೆ ಮಾಡುವ ಪ್ರಶ್ನೆಯಲ್ಲ; ಭವಿಷ್ಯದ ಬರ ನಿರ್ವಹಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಮನರೇಗಾ ಹಿನ್ನೆಲೆ

ಉದ್ಯೋಗ ಖಾತರಿ ಯೋಜನೆ ಎಂದರೆ, ಕೇವಲ ಸರ್ಕಾರ ನಡೆಸುವ ಮತ್ತೊಂದು ಕಲ್ಯಾಣ ಕಾರ್ಯಕ್ರಮವಲ್ಲ. ಗ್ರಾಮೀಣ ಭಾರತದ ಬಡವರು, ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ನೀಡುವ ಬದುಕಿನ ಮಹತ್ವಾಕಾಂಕ್ಷಿ ಯೋಜನೆ, ಸ್ವಾಭಿಮಾನದ ಭರವಸೆ . ಕೃಷಿ ಕೈಕೊಟ್ಟಾಗ, ಮಳೆ ಬಾರದಾಗ, ಬರಗಾಲ ಆವರಿಸಿದಾಗ, ಕೃಷಿ ಕೂಲಿ ಕೆಲಸ ನಿಂತಾಗ ಅಥವಾ ಕುಟುಂಬಕ್ಕೆ ಬೇರೆ ಯಾವುದೇ ಆದಾಯದ ಮೂಲ ಇಲ್ಲದಾಗ ಕನಿಷ್ಠ ಕೆಲವು ದಿನಗಳಾದರೂ ದುಡಿದು ಬದುಕಲು ಅವಕಾಶ ಕಲ್ಪಿಸುವ ಆರ್ಥಿಕ ಸುರಕ್ಷತೆಯ ಗುರಾಣಿಯಾಗುವುದೇ ಉದ್ಯೋಗ ಖಾತರಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ) ಇದೇ ಕಾರಣಕ್ಕೆ ಭಾರತದ ಗ್ರಾಮೀಣ ಆರ್ಥಿಕತೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿತ್ತು. ಆದರೆ ಮನರೇಗಾ ಬದಲಿಗೆ ಜಾರಿಗೆ ಬಂದಿರುವ VB-G RAM G ವ್ಯವಸ್ಥೆಯ ಮೊದಲ ಹಂತದ ಉದ್ಯೋಗದ ಅಂಕಿಅಂಶಗಳು ಈಗ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

2025ರ ಜುಲೈನಲ್ಲಿ ಮನರೇಗಾ ಅಡಿಯಲ್ಲಿ ಸುಮಾರು 15.33 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದ್ದರೆ, 2026ರ ಜುಲೈನಲ್ಲಿ ವಿಬಿ ಜಿ ರಾಮ್‌ ಜಿ ಅಡಿಯಲ್ಲಿ ಅದು ಸುಮಾರು 7.67 ಕೋಟಿ ಮಾನವ ದಿನಗಳಿಗೆ ಇಳಿದಿದೆ. ಅಂದರೆ ಒಂದೇ ವರ್ಷದ ಜುಲೈ ತಿಂಗಳನ್ನು ಹೋಲಿಸಿದಾಗ ಸುಮಾರು 7.66 ಕೋಟಿ ಮಾನವ ದಿನಗಳು ಕಡಿಮೆಯಾಗಿದ್ದು, ಕುಸಿತದ ಪ್ರಮಾಣ ಸುಮಾರು ಶೇ.50ರಷ್ಟಿದೆ. ಒಂದು ಮಾನವ ದಿನ ಎಂದರೆ ಒಬ್ಬ ಕಾರ್ಮಿಕನಿಗೆ ಒಂದು ದಿನದ ಕೆಲಸ. ಹೀಗಾಗಿ ಈ ಕುಸಿತವನ್ನು ಕೇವಲ ಶೇಕಡಾವಾರು ಸಂಖ್ಯೆಯಾಗಿ ನೋಡದೆ, ಗ್ರಾಮೀಣ ಕುಟುಂಬಗಳಿಗೆ ಲಭ್ಯವಾದ ಕೋಟ್ಯಂತರ ಕೂಲಿ ದಿನಗಳ ವ್ಯತ್ಯಾಸವಾಗಿ ನೋಡಬೇಕಾಗಿದೆ. ಒಂದು ತಿಂಗಳ ಕುಸಿತಕ್ಕೆ ಹೊಸ ವ್ಯವಸ್ಥೆಯೇ ಏಕೈಕ ಕಾರಣ…. ಆಡಳಿತಾತ್ಮಕ ಪರಿವರ್ತನೆ ಮತ್ತು ರಾಜ್ಯವಾರು ಅನುಷ್ಠಾನ ವಿಫಲವಾಗಿರುವುದು ಜಗಜ್ಜಾಹೀರಾಗಿದೆ.

ಮನರೇಗಾದ ನಿಜವಾದ ಶಕ್ತಿ ಅದರ ʼಉದ್ಯೋಗ ಖಾತರಿʼ ಎಂಬ ಪರಿಕಲ್ಪನೆಯಲ್ಲಿತ್ತು. ಸಾಮಾನ್ಯ ಸರ್ಕಾರಿ ಯೋಜನೆಯಲ್ಲಿ ಸರ್ಕಾರ ಯಾವುದೋ ಕಾಮಗಾರಿಯನ್ನು ಘೋಷಿಸುತ್ತದೆ ಮತ್ತು ಅದಕ್ಕೆ ಕಾರ್ಮಿಕರನ್ನು ನೇಮಿಸುತ್ತದೆ. ಆದರೆ ಉದ್ಯೋಗ ಖಾತರಿ ಕಾಯ್ದೆಯ ತಾತ್ವಿಕ ನೆಲೆ ಇದಕ್ಕಿಂತ ಭಿನ್ನ. ಗ್ರಾಮೀಣ ಕುಟುಂಬದ ವಯಸ್ಕ ಕೌಶಲ್ಯರಹಿತ ಸದಸ್ಯರು ದೈಹಿಕ ಕೆಲಸಕ್ಕೆ ಸಿದ್ಧರಿದ್ದರೆ ಅವರು ಉದ್ಯೋಗ ಕೇಳಬಹುದು ಮತ್ತು ಸರ್ಕಾರ ಅದಕ್ಕೆ ಸ್ಪಂದಿಸಬೇಕು ಎಂಬು ಹಕ್ಕು ಆಧಾರಿತ ವ್ಯವಸ್ಥೆ ಇದರ ಮೂಲವಾಗಿತ್ತು. ಇದೇ ಕಾರಣದಿಂದ ಮನರೇಗಾವನ್ನು ಹಲವು ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರು ಗ್ರಾಮೀಣ ಭಾರತದ ʼemployment safety netʼ ಅಥವಾ ಸಂಕಷ್ಟದ ಸಮಯದ ಆದಾಯ ರಕ್ಷಾಕವಚವಾಗಿ ನೋಡುತ್ತಾರೆ.

2024-25ರಲ್ಲಿಯೇ ಮನರೇಗಾ ಅಡಿ ದೇಶಾದ್ಯಂತ ಸುಮಾರು 290.60 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. 2020-21ರಂದು ಕೊರೊನಾ ಸೋಂಕಿನಿಂದ ದೇಶದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದ ಕಾಲದಲ್ಲಿ ಮನರೇಗಾ ಮಹತ್ವ ಮತ್ತಷ್ಟು ಸ್ಪಷ್ಟವಾಗಿತ್ತು. ಆ ವರ್ಷ ಮನರೇಗಾ ಅಡಿ ಸುಮಾರು 389.09 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. ನಗರಗಳಲ್ಲಿ ಕೆಲಸ ಕಳೆದುಕೊಂಡು ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಿದಾಗ ಕೃಷಿಯಿಂದ ಮಾತ್ರ ಎಲ್ಲರಿಗೂ ತಕ್ಷಣ ಉದ್ಯೋಗ ನೀಡಲು ಸಾಧ್ಯವಿರಲಿಲ್ಲ. ಅಂತಹ ಹೊತ್ತಿನಲ್ಲಿ ಉದ್ಯೋಗ ಖಾತರಿ ದೊಡ್ಡ ಆಸರೆ(shock absorber)ಯಾಯಿತು.

ಇಂಥ ಬರಗಾಲದ ಸಂದರ್ಭದಲ್ಲಿ ಉದ್ಯೋಗ ಖಾತರಿಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬಹುಪಾಲು ಕುಟುಂಬಗಳ ನೇರ ಅಥವಾ ಪರೋಕ್ಷ ಆದಾಯದ ಮೂಲವೇ ಕೃಷಿ. ಮಳೆ ಚೆನ್ನಾಗಿ ಬಂದರೆ ರೈತ ಬಿತ್ತನೆ ಮಾಡುತ್ತಾನೆ; ಬಿತ್ತನೆ ನಡೆದರೆ ಹೊಲದಲ್ಲಿ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಔಷಧ ಸಿಂಪಡಿಸುವುದು, ಕೊಯ್ಲು, ಸಾಗಣೆ ಸೇರಿದಂತೆ ಅನೇಕ ಕೆಲಸಗಳು ಸೃಷ್ಟಿಯಾಗುತ್ತವೆ. ರೈತನ ಹೊಲದಲ್ಲಿ ಕೆಲಸ ಮಾಡುವ ಭೂರಹಿತ ಕೃಷಿ ಕಾರ್ಮಿಕನಿಗೂ ಆದಾಯ ಸಿಗುತ್ತದೆ. ಆದರೆ ಮಳೆ ವಿಫಲವಾದರೆ ಈ ಸಂಪೂರ್ಣ ಸರಪಳಿ ಕುಸಿಯುತ್ತದೆ. ರೈತ ಬಿತ್ತನೆ ಕಡಿಮೆ ಮಾಡುತ್ತಾನೆ ಅಥವಾ ಬಿತ್ತನೆಯನ್ನೇ ಕೈಬಿಡುತ್ತಾನೆ; ಬೆಳೆ ನಷ್ಟವಾದರೆ ಮುಂದಿನ ಹಂತದ ಕೃಷಿ ಕೆಲಸಗಳೂ ಇರುವುದಿಲ್ಲ. ಆಗ ಭೂಮಿ ಹೊಂದಿರುವ ರೈತನಿಗೆ ಬೆಳೆ ನಷ್ಟವಾದರೆ, ಭೂರಹಿತ ಕಾರ್ಮಿಕನಿಗೆ ಕೂಲಿ ನಷ್ಟವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಏಕಕಾಲಕ್ಕೆ ಸಾವಿರಾರು ಕುಟುಂಬಗಳ ಆದಾಯ ಕುಸಿಯುತ್ತದೆ. ಇಂತಹ ಸಮಯದಲ್ಲಿ ಸರ್ಕಾರವೇ ಉದ್ಯೋಗ ಒದಗಿಸಿ ಕೂಲಿ ನೀಡಿದರೆ, ಕೃಷಿಯಿಂದ ಕಳೆದುಕೊಂಡ ಆದಾಯದ ಒಂದು ಭಾಗವನ್ನು ಬಡ ಕುಟುಂಬಗಳು ನಷ್ಟವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಇದೇ ಮನರೇಗಾದ ಅತ್ಯಂತ ಮುಖ್ಯವಾದ ಬರ ಪರಿಹಾರ ಕಾರ್ಯ(drought-relief function)ವಾಗಿತ್ತು.

ಈ ಹಿನ್ನೆಲೆಯಲ್ಲಿಯೇ ಹಿಂದೆ ಬರ ಅಥವಾ ನೈಸರ್ಗಿಕ ವಿಕೋಪದಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಲ್ಲಿ ಸಾಮಾನ್ಯ ಉದ್ಯೋಗ ಖಾತರಿಗಿಂತ ಹೆಚ್ಚುವರಿ ಉದ್ಯೋಗ ನೀಡುವ ಕ್ರಮವನ್ನೂ ಕೇಂದ್ರ ಸರ್ಕಾರ ಅನುಸರಿಸಿತ್ತು. ಉದಾಹರಣೆಗೆ ಬರಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ 100 ದಿನಗಳ ಕೆಲಸದ ಜತೆಗೆ ಹೆಚ್ಚುವರಿ 50 ದಿನಗಳ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಗರಿಷ್ಠ 150 ದಿನಗಳವರೆಗೆ ಕೆಲಸ ಒದಗಿಸುವ ವ್ಯವಸ್ಥೆಯನ್ನು ಬಳಸಲಾಗಿತ್ತು. ಇದರ ಹಿಂದಿನ ತರ್ಕ ಬಹಳ ಸರಳ. ಬರಗಾಲದಲ್ಲಿ ಕೃಷಿ ಕೆಲಸ ಕಡಿಮೆಯಾಗುವುದರಿಂದ ಗ್ರಾಮೀಣ ನಿರುದ್ಯೋಗ ಹೆಚ್ಚುತ್ತದೆ; ಆ ಹೆಚ್ಚುವರಿ ನಿರುದ್ಯೋಗ ಸಮಸ್ಯೆ ಸರ್ಕಾರದ ಸಾರ್ವಜನಿಕ ಕಾಮಗಾರಿಗಳ ಮೂಲಕ ನೀಗಿದರೆ, ಕುಟುಂಬಗಳಿಗೆ ಕನಿಷ್ಠ ಆದಾಯ ದೊರೆಯುತ್ತದೆ.

ಕೆರೆಗಳ ಹೂಳೆತ್ತುವುದು, ನೀರು ಸಂರಕ್ಷಣಾ ಕಾಮಗಾರಿ, ಕೃಷಿ ಹೊಂಡ, ಸಣ್ಣ ನೀರಾವರಿ ಕಾಮಗಾರಿ, ಮಣ್ಣಿನ ಸಂರಕ್ಷಣೆ, ಗ್ರಾಮೀಣ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ಒಂದೆಡೆ ತಕ್ಷಣದ ಉದ್ಯೋಗ ಸೃಷ್ಟಿಸಿದರೆ, ಮತ್ತೊಂದೆಡೆ ಮುಂದಿನ ಬರಗಾಲ ಎದುರಿಸಲು ಬೇಕಾದ ಗ್ರಾಮೀಣ ಆಸ್ತಿಗಳನ್ನು ಭದ್ರಪಡಿಸುತ್ತಿದ್ದವು. ಹೀಗಾಗಿ ಬರಗಾಲದ ಸಂದರ್ಭದಲ್ಲಿ ಮನರೇಗಾ ಮಾಡಿದ ವೆಚ್ಚವನ್ನು ಕೇವಲ ʼಕೂಲಿ ವೆಚ್ಚʼ ಎಂದು ನೋಡುವುದಕ್ಕಿಂತ ಬರ ಪರಿಸ್ಥಿತಿಯನ್ನು ಎದುರಿಸುವುದರ(drought resilience) ಮೇಲಿನ ಹೂಡಿಕೆಯೆಂದೂ ನೋಡಬೇಕಾಗುತ್ತದೆ.

ಗ್ರಾಮೀಣ ಕಾರ್ಮಿಕನ ದೃಷ್ಟಿಯಿಂದ ಉದ್ಯೋಗದ ದಿನಗಳು ಕಡಿಮೆಯಾಗುವುದು ನೇರವಾಗಿ ದುಷ್ಪರಿಣಾಮ ಬೀರುತ್ತವೆ. ಉದಾಹರಣೆಗೆ ದಿನಕ್ಕೆ ₹350 ಕೂಲಿ ಎಂದು ಸರಳ ಲೆಕ್ಕಕ್ಕಾಗಿ ತೆಗೆದುಕೊಂಡರೆ, 50 ದಿನ ಕೆಲಸ ಸಿಕ್ಕ ಕುಟುಂಬಕ್ಕೆ ₹17,500 ಆದಾಯ ಬರುತ್ತದೆ. 100 ದಿನ ಕೆಲಸ ದೊರೆತರೆ ₹35,000 ಮತ್ತು 125 ದಿನ ಕೆಲಸ ಸಿಕ್ಕರೆ ₹43,750 ಆದಾಯ ಸಾಧ್ಯ. ಬಡ ಕುಟುಂಬಕ್ಕೆ ಈ ಹಣ ದೊಡ್ಡ ಮೊತ್ತ. ಅದರಿಂದ ಆಹಾರಧಾನ್ಯ, ಮಕ್ಕಳ ಶಿಕ್ಷಣ, ಔಷಧಿ, ವಿದ್ಯುತ್ ಬಿಲ್, ಕೃಷಿಗೆ ಬೇಕಾದ ಬಿತ್ತನೆ ಬೀಜ–ಗೊಬ್ಬರ, ಹಳೆಯ ಸಾಲದ ಕಂತು ಸೇರಿದಂತೆ ಅನೇಕ ಅಗತ್ಯಗಳನ್ನು ಪೂರೈಸಿಕೊಳ್ಳಲಾಗುತ್ತದೆ. ಹೀಗಾಗಿ ಕಾಯ್ದೆಯಲ್ಲಿ ಎಷ್ಟು ದಿನಗಳ ಉದ್ಯೋಗ ಖಾತರಿ ಬರೆಯಲಾಗಿದೆ ಎನ್ನುವುದಕ್ಕಿಂತ ನೆಲಮಟ್ಟದಲ್ಲಿ ಕುಟುಂಬಕ್ಕೆ ನಿಜವಾಗಿ ಎಷ್ಟು ದಿನಗಳ ಕೆಲಸ ದೊರೆಯುತ್ತಿದೆ ಎಂಬುದೇ ಮುಖ್ಯ.

2025ರ ಜುಲೈ ಮತ್ತು 2026ರ ಜುಲೈ ನಡುವಿನ 7.66 ಕೋಟಿ ಮಾನವ ದಿನಗಳ ವ್ಯತ್ಯಾಸವನ್ನು ಕೇವಲ ಉದಾಹರಣಾರ್ಥ ₹350 ದಿನಗೂಲಿಗೆ ಗುಣಿಸಿದರೆ ಸುಮಾರು ₹2,681 ಕೋಟಿ ಮೌಲ್ಯದ ಕೂಲಿ ದಿನಗಳಿಗೆ ಸಮನಾಗುತ್ತದೆ. ಆದರೆ ಇದನ್ನು ನೇರವಾಗಿ ₹2,681 ಕೋಟಿ ʼಆದಾಯ ನಷ್ಟʼ ಎಂದು ಕರೆಯಲು ಸಾಧ್ಯವಿಲ್ಲ; ಏಕೆಂದರೆ ಎಲ್ಲ ರಾಜ್ಯಗಳ ಮನರೇಗಾ ಕೂಲಿ ದರ ₹350 ಅಲ್ಲ ಮತ್ತು ಕೆಲಸ ಸಿಗದವರು ಬೇರೆ ಉದ್ಯೋಗ ಪಡೆದಿರಬಹುದಾದ ಸಾಧ್ಯತೆಯೂ ಇದೆ. ಆದರೂ ಉದ್ಯೋಗದ ದಿನಗಳ ಕುಸಿತದ ಆರ್ಥಿಕ ಪ್ರಮಾಣ ಎಷ್ಟು ದೊಡ್ಡದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೆಕ್ಕ ನೆರವಾಗುತ್ತದೆ.

ಮನರೇಗಾದ ಮತ್ತೊಂದು ಅತ್ಯಂತ ಮಹತ್ವದ ಆಯಾಮ ಮಹಿಳೆಯರ ಉದ್ಯೋಗ. 2024-25ರಲ್ಲಿ ಮನರೇಗಾ ಅಡಿ ಸುಮಾರು 4.407 ಕೋಟಿ ಮಂದಿ ಮಹಿಳೆಯರು ಕೆಲಸ ನಿರ್ವಹಿಸಿದ್ದರು. ಒಟ್ಟು ಮಾನವ ದಿನಗಳ ಕೆಲಸದಲ್ಲಿ ಶೇ.58.15ರಷ್ಟು ಮಹಿಳೆಯರ ಪಾಲಿತ್ತು. 2013-14ರಲ್ಲಿ ಸುಮಾರು ಶೇ.48ರಷ್ಟು ಮಹಿಳೆಯರ ಪಾಲು ಇದ್ದದನ್ನು ಗಮನಿಸಿದರೆ, ಕಾಲಕ್ರಮೇಣ ಗ್ರಾಮೀಣ ಮಹಿಳೆಯರಿಗೆ ಈ ಯೋಜನೆ ಎಷ್ಟು ಮಹತ್ವ ಪಡೆದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಮಹಿಳೆಯರು ದೂರದ ನಗರಗಳಿಗೆ ಹೋಗಿ ಉದ್ಯೋಗ ಹುಡುಕುವುದು ಅನೇಕ ಸಾಮಾಜಿಕ ಮತ್ತು ಕುಟುಂಬ ಸಂಬಂಧಿ ಕಾರಣಗಳಿಂದ ಕಷ್ಟವಾಗಬಹುದು. ಆದರೆ ತಮ್ಮ ಗ್ರಾಮದ ಸಮೀಪದಲ್ಲಿಯೇ ಸಾರ್ವಜನಿಕ ಕಾಮಗಾರಿಯಲ್ಲಿ ಕೆಲಸ ದೊರೆತರೆ ಮನೆ, ಮಕ್ಕಳು ಮತ್ತು ಉದ್ಯೋಗವನ್ನು ನಿರ್ವಹಿಸಲು ಅನುಕೂಲವಾಗುತ್ತದೆ.

ಉದ್ಯೋಗ ಖಾತರಿ ಕಾಯ್ದೆಯಿಂದ ಗುಳೆ(distress migration) ತಡೆಯುವುದು ಮತ್ತೊಂದು ದೊಡ್ಡ ಸಕಾರಾತ್ಮಕ ಪರಿಣಾಮವಾಗಿ ಕಂಡುಬಂದಿದೆ. ಕೃಷಿಯಲ್ಲಿ ಕೆಲಸ ಇಲ್ಲದಾಗ ಗ್ರಾಮೀಣ ಬಡ ಕುಟುಂಬದ ಮುಂದೆ ಸಾಮಾನ್ಯವಾಗಿ ಮೂರು ದಾರಿಗಳಿರುತ್ತವೆ: ಸಾಲ ಮಾಡುವುದು, ಕುಟುಂಬದ ಖರ್ಚು ಕಡಿಮೆ ಮಾಡುವುದು ಅಥವಾ ಉದ್ಯೋಗಕ್ಕಾಗಿ ನಗರಗಳಿಗೆ ಗುಳೆ ಹೋಗುವುದು. ಈ ಗುಳೆ ಎಲ್ಲ ಸಂದರ್ಭದಲ್ಲೂ ಸ್ವಯಂಪ್ರೇರಿತವಾಗಿರುವುದಿಲ್ಲ. ಕೆಲವೊಮ್ಮೆ ಬದುಕಲು ಬೇರೆ ದಾರಿ ಇಲ್ಲದೆ ಕುಟುಂಬದ ಒಬ್ಬ ಅಥವಾ ಇಬ್ಬರು ಸದಸ್ಯರು ನಗರಕ್ಕೆ ಹೋಗಬೇಕಾಗುತ್ತದೆ. ಇದನ್ನೇ ಸಂಕಷ್ಟದ ಗುಳೆ(distress migration) ಎಂದು ಕರೆಯಲಾಗುತ್ತದೆ.

ವಿವಿಧ ಅಧ್ಯಯನಗಳು ಮನರೇಗಾದಂತಹ ಸ್ಥಳೀಯ ಉದ್ಯೋಗ ಲಭ್ಯತೆ seasonal ಅಥವಾ distress migration ಅನ್ನು ತಗ್ಗಿಸುವಲ್ಲಿ ಪಾತ್ರವಹಿಸಿರುವುದನ್ನು ಸೂಚಿಸಿವೆ. ಅದರ ಸರಳ ಕಾರಣವೇನೆಂದರೆ, ಹಳ್ಳಿಯಲ್ಲಿಯೇ ಕನಿಷ್ಠ ಕೂಲಿ ಆದಾಯ ದೊರೆಯುತ್ತಿದ್ದರೆ ಕುಟುಂಬವನ್ನು ಬಿಟ್ಟು ನೂರಾರು ಕಿಲೋಮೀಟರ್ ದೂರ ಹೋಗುವ ಅನಿವಾರ್ಯತೆ ಕಡಿಮೆಯಾಗುತ್ತದೆ. ಆದರೆ ಗ್ರಾಮೀಣ ಉದ್ಯೋಗ ಖಾತರಿ ದುರ್ಬಲವಾದರೆ ಬರಗಾಲ ಅಥವಾ ಕೃಷಿ ಬಿಕ್ಕಟ್ಟಿನ ಸಂದರ್ಭದಲ್ಲಿ ನಗರಗಳತ್ತ ವಲಸೆ ಹೆಚ್ಚುವ ಅಪಾಯವಿದೆ.

ಮನರೇಗಾ ಕೂಲಿಯ ಪರಿಣಾಮ ಕೆಲಸ ಮಾಡಿದ ವ್ಯಕ್ತಿಗೆ ಮಾತ್ರ ಸೀಮಿತವಾಗುವುದಿಲ್ಲ. ಗ್ರಾಮೀಣ ಕಾರ್ಮಿಕರ ಖಾತೆಗೆ ಬಂದ ₹300 ಅಥವಾ ₹400 ಸಾಮಾನ್ಯವಾಗಿ ಬ್ಯಾಂಕ್ ಖಾತೆಯಲ್ಲಿಯೇ ಉಳಿಯುವುದಿಲ್ಲ. ಅವರು ಅದನ್ನು ಗ್ರಾಮದ ದಿನಸಿ ಅಂಗಡಿಯಲ್ಲಿ ಅಕ್ಕಿ, ಬೇಳೆ, ಎಣ್ಣೆ ಖರೀದಿಸಲು ಬಳಸುತ್ತಾರೆ; ಮಕ್ಕಳ ಶಾಲಾ ವೆಚ್ಚ ಪಾವತಿಸುತ್ತಾರೆ; ಔಷಧಿ ಖರೀದಿಸುತ್ತಾರೆ; ಮೊಬೈಲ್ ರೀಚಾರ್ಜ್ ಮಾಡುತ್ತಾರೆ; ಸಾಲದ ಕಂತು ಕಟ್ಟುತ್ತಾರೆ; ಕೃಷಿಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗಾಗಿ ಸರ್ಕಾರ ನೀಡುವ ಕೂಲಿ ಹಣ ಗ್ರಾಮೀಣ ಮಾರುಕಟ್ಟೆಯೊಳಗೆ ಮರುಚಲಾವಣೆಯಾಗುತ್ತದೆ.

ಒಂದು ಪ್ರದೇಶದಲ್ಲಿ ಸಾವಿರಾರು ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಸಿಕ್ಕರೆ ಸ್ಥಳೀಯ ಅಂಗಡಿ, ಸಣ್ಣ ವ್ಯಾಪಾರಿ, ಸಾರಿಗೆ ಮತ್ತು ಸೇವಾ ವಲಯಕ್ಕೂ ಬೇಡಿಕೆ ಸೃಷ್ಟಿಯಾಗುತ್ತದೆ. ಅದೇ ರೀತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ದಿನಗಳು ಕಡಿಮೆಯಾದರೆ ಗ್ರಾಮೀಣ ಕುಟುಂಬಗಳ ಖರೀದಿ ಸಾಮರ್ಥ್ಯ ಕುಸಿದು ಸ್ಥಳೀಯ ಬೇಡಿಕೆ ಮೇಲೆಯೂ ಒತ್ತಡ ಉಂಟಾಗಬಹುದು. ಹೀಗಾಗಿ ಉದ್ಯೋಗ ಖಾತರಿಯ ಮಾನವ ದಿನಗಳ ಕುಸಿತವನ್ನು ʼಕೆಲಸ ಕಡಿಮೆಯಾಯಿತುʼ ಎಂಬ ಒಂದೇ ಆಯಾಮದಲ್ಲಿ ನೋಡದೆ ಗ್ರಾಮೀಣ ಬಳಕೆ ಮತ್ತು ಬೇಡಿಕೆ(consumption ಮತ್ತು demand) ಮೇಲಿನ ಪರಿಣಾಮದ ದೃಷ್ಟಿಯಿಂದಲೂ ಪರಿಶೀಲಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ 2026ರ ಜುಲೈನ ಸುಮಾರು ಶೇ.50ರ ಮಾನವ ದಿನಗಳ ಕುಸಿತವನ್ನು ಎಚ್ಚರಿಕೆಯ ಸಂಕೇತವಾಗಿ ಪರಿಗಣಿಸಬೇಕಾಗಿದೆ. ಒಂದೇ ತಿಂಗಳ ಅಂಕಿಅಂಶದಿಂದ ʼಉದ್ಯೋಗ ಖಾತರಿ ಕಾಯ್ದೆʼಯನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗುತ್ತಿದೆʼಯೇ? ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಹಿಂದಿನ ವರ್ಷದ ಅದೇ ತಿಂಗಳಿಗೆ ಹೋಲಿಸಿದಾಗ ಸುಮಾರು 7.66 ಕೋಟಿ ಮಾನವ ದಿನಗಳ ಉದಯೋಗ ಕಡಿಮೆಯಾಗಿರುವುದು ಸಾಮಾನ್ಯ ವ್ಯತ್ಯಾಸವೆಂದು ನಿರ್ಲಕ್ಷಿಸುವಷ್ಟು ಚಿಕ್ಕ ಸಂಖ್ಯೆಯೂ ಅಲ್ಲ. ಹಾಗಾಗಿ ಮುಂದಿನ ಎರಡು–ಮೂರು ತಿಂಗಳಲ್ಲಿ ಇದೇ ಪ್ರವೃತ್ತಿ ಮುಂದುವರೆರಿಯುತ್ತದೆಯೇ, ಯಾವ ರಾಜ್ಯಗಳಲ್ಲಿ ಕುಸಿತ ಹೆಚ್ಚು, ಮಹಿಳೆಯರ ಉದ್ಯೋಗದ ಪಾಲು ಹೇಗೆ ಬದಲಾಗಿದೆ, ಪರಿಶಿಷ್ಟ ಜಾತಿ–ಪಂಗಡಗಳ ಕಾರ್ಮಿಕರಿಗೆ ಎಷ್ಟು ಕೆಲಸ ಸಿಕ್ಕಿದೆ, ಎಷ್ಟು ಕುಟುಂಬಗಳು ಕೆಲಸ ಕೇಳಿ ಕಾಯುತ್ತಿವೆ ಮತ್ತು ಬರಪೀಡಿತ ಜಿಲ್ಲೆಗಳಲ್ಲಿ ಉದ್ಯೋಗದ ಬೇಡಿಕೆ–ಪೂರೈಕೆ ನಡುವಿನ ಅಂತರ ಎಷ್ಟು ಎಂಬ ಅಂಕಿಅಂಶಗಳು ಬಹಿರಂಗವಾದರೆ ವಿಬಿ ಜಿ ರಾಮ್‌ ಜಿ ನಿಜವಾಗಿ ಮನರೇಗಾಗಿಂತ ಉತ್ತಮ ವ್ಯವಸ್ಥೆಯೇ ಅಥವಾ ಗ್ರಾಮೀಣ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸುತ್ತಿದೆಯೇ ಎಂಬುದಕ್ಕೆ ಹೆಚ್ಚು ದೃಢವಾದ ಸ್ಪಷ್ಟತೆ ಸಿಗುತ್ತದೆ.

ಅಂತಿಮವಾಗಿ ಪ್ರಶ್ನೆ 100 ದಿನಗಳೋ 125 ದಿನಗಳೋ ಎಂಬುದಷ್ಟೇ ಅಲ್ಲ. ʼಕೆಲಸ ಬೇಕುʼ ಎಂದು ಕೇಳಿದ ಗ್ರಾಮೀಣ ಕಾರ್ಮಿಕರಿಗೆ ನಿಜವಾಗಿ ಕೆಲಸ ಸಿಗುತ್ತಿದೆಯೇ? ಎಂಬುದೇ ಉದ್ಯೋಗ ಖಾತರಿ ಕಾಯ್ದೆಯ ಯಶಸ್ಸಿನ ನಿಜವಾದ ಪರೀಕ್ಷೆ. ಮಳೆ ಚೆನ್ನಾಗಿರುವ ವರ್ಷದಲ್ಲಿ ಕೃಷಿಯೇ ಗ್ರಾಮೀಣ ಜನರಿಗೆ ಉದ್ಯೋಗ ನೀಡಬಹುದು. ಆದರೆ ಮಳೆ ಕೈಕೊಟ್ಟು ಬೆಳೆ ಒಣಗಿದ ದಿನ, ಕೃಷಿ ಕೂಲಿ ನಿಂತ ದಿನ, ಕುಟುಂಬದ ಆದಾಯ ಶೂನ್ಯಕ್ಕೆ ಸಮೀಪಿಸಿದ ದಿನ ಸರ್ಕಾರದ ಉದ್ಯೋಗ ಖಾತರಿಯ ನಿಜವಾದ ಅಗತ್ಯ ಆರಂಭವಾಗುತ್ತದೆ. ಅಂಥ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಕಾರ್ಮಿಕರ ಕೈ ಹಿಡಿಯುವಷ್ಟು ಬಲವಾದ ವ್ಯವಸ್ಥೆ ದೇಶದಲ್ಲಿದೆಯೇ ಎಂಬುದೇ ಮುಖ್ಯ.

ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಯುವಜನರ ಕನಸುಗಳನ್ನು ಕದ್ದವರು ಯಾರು?

ಏಕೆಂದರೆ ಬರಗಾಲದಲ್ಲಿ ಒಣಗುವುದು ಬೆಳೆ ಮಾತ್ರವಲ್ಲ; ಅದರೊಂದಿಗೆ ಉದ್ಯೋಗ, ಆದಾಯ, ಆಹಾರ ಭದ್ರತೆ ಮತ್ತು ಗ್ರಾಮೀಣ ಮಾರುಕಟ್ಟೆಯೂ ಒಣಗುತ್ತದೆ. ಆ ಸರಪಳಿಯನ್ನು ಮುರಿಯಲು ಮನರೇಗಾದಂತಹ ಉದ್ಯೋಗ ಖಾತರಿ ವ್ಯವಸ್ಥೆ ಹಲವು ವರ್ಷಗಳಿಂದ ಒಂದು ರಕ್ಷಣೆಯ ಗುರಾಣಿಯಾಗಿ ಕೆಲಸ ಮಾಡಿತ್ತು. ಈಗ ಅದರ ಸ್ಥಾನಕ್ಕೆ ಬಂದಿರುವ ಹೊಸ ವ್ಯವಸ್ಥೆ ಆ ಗುರಾಣಿಯನ್ನು ಬಲಪಡಿಸುತ್ತದೆಯೇ ಅಥವಾ ಅದರ ಕೊಂಡಿಗಳನ್ನು ಕಳಚುತ್ತದೆಯೇ ಎಂಬುದನ್ನು ನಿರ್ಧರಿಸಲು 2026ರ ಜುಲೈ ಅಂಕಿಅಂಶಗಳು ಮೊದಲ ಮಹತ್ವದ ಪರೀಕ್ಷೆಯಾಗಿ ನಿಂತಿವೆ.

ಅಲ್ಲದೆ, ಸರ್ಕಾರವು 2025-26ನೇ ಸಾಲಿಗೆ ವಾರ್ಷಿಕ 1.52 ಲಕ್ಷ ಕೋಟಿ ರೂ.ಗಳ ಹೆಚ್ಚಿನ ವೆಚ್ಚದೊಂದಿಗೆ ವಿಬಿಜಿ ರಾಮ್‌ ಜಿಯನ್ನು ಪ್ರಾರಂಭಿಸಿ, ಮನರೇಗಾಕ್ಕೆ ಬಜೆಟ್ ಮಾಡಲಾದ 86,000 ಕೋಟಿ ರೂ.ಗಳಿಗೆ ಹೋಲಿಸಿದರೆ, ವೇತನ ಹೆಚ್ಚಳ, ವಿಸ್ತೃತ ಉದ್ಯೋಗ ಖಾತರಿ ಮತ್ತು ಆರ್ಥಿಕ ಭದ್ರತೆಯಂಥ ಗ್ರಾಮೀಣ ಸಂಪತ್ತುಗಳನ್ನು ರಚಿಸುವತ್ತ ಬಲವಾದ ಗಮನವನ್ನು ನೀಡುವ ಭರವಸೆ ನೀಡಿತ್ತು. ಆದರೆ ಈ ಬದಲಾವಣೆಗಳ ಹೊರತಾಗಿಯೂ, ಮೊದಲ ತಿಂಗಳ ದತ್ತಾಂಶದ ಪ್ರಕಾರ ಕೇಂದ್ರವು, ವಿಬಿ ಜಿ ರಾಮ್‌ ಜಿ ಯೋಜನೆಯ ಅನುಷ್ಠಾನ ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವುದು ಸಾಬೀತಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ನ್ಯಾ. ಹೆಚ್. ಶಶಿಧರ್ ಶೆಟ್ಟಿ

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ, ಇಲಾಖೆಗಳು ಅಥವಾ ಸರ್ಕಾರೇತರ ಸಂಸ್ಥೆಗಳ...

ಪಿಎಂ ಮೋದಿ, ಯುವತಿಯ ಡೀಪ್‌ಫೇಕ್ ಫೋಟೋ: ಸಿಜೆಪಿ ನಾಯಕರು, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳ ಮುಖವನ್ನು ಕೃತಕ ಬುದ್ಧಿಮತ್ತೆ (AI)...

ಚಿಕ್ಕಮಗಳೂರು | ಜ್ಞಾನೇಶ್ ಕುಮಾರ್ ವಜಾಗೊಳಿಸಿ-SIR ರದ್ದುಗೊಳಿಸಿ; ಕೆ.ಎಲ್ ಅಶೋಕ್ 

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ SIR ವಿರೋಧಿ ಒಕ್ಕೂಟ ಮುಖಂಡರಾದ ಕೆ. ಎಲ್...

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...