ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಭಾರತದ ಶಿಲ್ಪಕಲೆಯಲ್ಲೇ ಹೊಯ್ಸಳ ಶಿಲ್ಪಕ್ಕೆ ಅದ್ವಿತೀಯವಾದ ಹೆಸರಿದೆ. ಹೊಯ್ಸಳ ಶಿಲ್ಪವು ತನ್ನ ಉತ್ತುಂಗವನ್ನು ಮುಟ್ಟಿರುವುದು ಹಾಸನದಲ್ಲಿ ಎಂದರೆ ಅತಿಶಯೋಕ್ತಿ ಅಲ್ಲ. ಅದರಲ್ಲೂ ನಾಟ್ಯಕಲೆಯ ವಿವಿಧ ಅಂಗಭಂಗಿಗಳು ಸಹಜವಾಗಿ, ನೈಜವಾಗಿ ಮತ್ತು ಆಕರ್ಷಕವಾಗಿ ಪಡಿಮೂಡಿರುವುದು ಹಳೇಬೀಡು, ಬೇಲೂರು, ಕೊಂಡಜ್ಜಿ, ದೊಡ್ಡಗದ್ದವಳ್ಳಿ ಮತ್ತಿತರ ಹೊಯ್ಸಳ ಶಿಲ್ಪಕಲೆ ಕೆತ್ತಲ್ಪಟ್ಟ ಕಡೆಗಳಲ್ಲಿ. ಹೊಯ್ಸಳರ ಪಟ್ಟದ ರಾಣಿ- ನಾಟ್ಯರಾಣಿ ಶಾಂತಲೆಯ ಪ್ರತಿರೂಪವನ್ನು ಇಟ್ಟುಕೊಂಡೇ ಈ ನಾಟ್ಯಕಲೆಯ ಭಂಗಿಗಳು ರೂಪಿತವಾಗಿವೆಯೆಂದು ಹೇಳಲಾಗುತ್ತದೆ. ಹೀಗಾಗಿ ಶಿಲ್ಪ ಕಲೆ ಮತ್ತು ನಾಟ್ಯ ಕಲೆಗೆ ಅನನ್ಯ ಸಂಬಂಧವಿದೆ. ಆದರೆ ಶಾಂತಲೆಯ ಕಾಲದ ನಂತರ 12ನೆಯ ಶತಮಾನದಿಂದ 20ನೆಯ ಶತಮಾನದವರೆಗೆ ಹಾಸನ ಜಿಲ್ಲೆಯ ಶಾಸ್ತ್ರೀಯ ನೃತ್ಯ ಕಲಾವಿದರ ಬಗ್ಗೆ ಐತಿಹಾಸಿಕ ಮಾಹಿತಿಯೇನೂ ದಕ್ಕುವುದಿಲ್ಲ. ಹಾಗೆ ನೂರಾರು ವರ್ಷಗಳಿಂದ ಇಲ್ಲಿ ಪರಂಪರಾನುಗತವಾಗಿ ಸೋಮನ ಕುಣಿತ, ನಂದಿಕೋಲು, ಸುಗ್ಗಿ ಕುಣಿತ, ಕೋಲು ಹುಯ್ಯುವ ಜಾನಪದ ನೃತ್ಯಗಳು ಚಾಲ್ತಿಯಲ್ಲಿವೆ. ಅದರಲ್ಲಿ ಮಹಿಳೆಯರ ವಿವಿಧ ಬಗೆಯ ಕೋಲಾಟಗಳು ಚನ್ನರಾಯಪಟ್ಟಣ ಭಾಗದಲ್ಲಿ ಇಂದಿಗೂ ಪ್ರಸಿದ್ಧವಾಗಿವೆ.
ಮುಂದೆ- ನಾಟ್ಯವೆಂದರೇ ಮೂಗು ಮುರಿಯುವ 1960ರ ಕಾಲಘಟ್ಟದಲ್ಲಿಯೇ ಸಂಗೀತ ನೃತ್ಯವನ್ನೇ ಜೀವಾಳವಾಗಿಸಿಕೊಂಡು ಅನೇಕ ಅಡೆತಡೆಗಳನ್ನು ಮೀರಿ ಖ್ಯಾತ ಸಂಗೀತ ಕಲಾವಿದರಾಗಿದ್ದ ಬಿ.ಎಸ್.ರಾಜಯ್ಯಂಗಾರರ ಪುತ್ರಿ ಅಲಮೇಲುರವರು ಹಾಸನದಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದರೆನ್ನುವುದಕ್ಕೆ ದಾಖಲೆಗಳಿವೆ. ಅವರು ಅನೇಕ ಶಿಷ್ಯರನ್ನೂ ಆ ಕಾಲಕ್ಕೇ ತಯಾರು ಮಾಡಿದ್ದರಂತೆ. ಮುಂದೆ ಅವರು ಬೆಂಗಳೂರಿಗೆ ತೆರಳಿದರು. ಕೇರಳ ಮೂಲದ ನೃತ್ಯ ಕಲಾವಿದರಾದ ಕಣ್ಣನ್ ಮಾರಾರ್ ಅವರು ಕೆಲ ಕಾಲ ಹಾಸನ ಸುತ್ತಮುತ್ತಲವರಿಗೆ ನೃತ್ಯಭ್ಯಾಸ ಮಾಡಿಸುತ್ತಿದ್ದರಂತೆ ಅವರಿಂದ ಇಂದಿನ ಖ್ಯಾತ ನೃತ್ಯ ಕಲಾವಿದೆ ಉಷಾ ದಾತಾರ್ ಮತ್ತವರ ಸೋದರರು ಕೆಲ ಕಾಲ ಕಲಿತಿದ್ದಾರೆ. ನಂತರ ಇವರೂ ಬೆಂಗಳೂರಿಗೆ ತೆರಳಿದ್ದಾರೆ. ಮುಂದೆ 1980ರ ವೇಳೆಗೆ ವಾಣಿ ಕೌಶಿಕ್ ಎಂಬ ನಾಟ್ಯ ಕಲಾವಿದರು ಇದ್ದುದು, 1981-82ರಲ್ಲಿ ಲಕ್ಷ್ಮಿ ಮೂರ್ತಿ ಎಂಬ ಕಲಾವಿದರು ನೃತ್ಯ ತರಗತಿ ನಡೆಸುತ್ತಾ, ಪ್ರದರ್ಶನ ನೀಡುತ್ತಿದ್ದುದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ
ಮಡಿಕೇರಿಯ ನಾಟ್ಯ ವಿದುಷಿ ಅಂಬಳೆ ರಾಜೇಶ್ವರಿಯವರು ತಮ್ಮ ಶಿಷ್ಯೆಯೊಬ್ಬಳಿಗೆ ನಾಟ್ಯ ಕಲಿಸುವ ಸಲುವಾಗಿ 1986ರಲ್ಲಿ ಹಾಸನಕ್ಕೆ ಬಂದು ನೆಲೆ ನಿಂತು ಇಲ್ಲಿನವರೆ ಆಗಿಹೋದರು. ‘ಭಾರತೀಯ ಸಂಗೀತ ನೃತ್ಯ ಕಲಾ ಶಾಲೆ’ಯ ಹಾಸನ ಶಾಖೆಯನ್ನು ಪ್ರಾರಂಭಿಸಿ, ನಾಟ್ಯ ಕಲೆಯನ್ನು ಆಸಕ್ತರಿಗೆ ಹೇಳಿಕೊಡಲು ಪ್ರಾರಂಭಿಸಿದರು. ಇವರಿಂದ ಈ ನಾಲ್ಕು ದಶಕಗಳಲ್ಲಿ ಸಾವಿರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಲಿತಿದ್ದಾರೆ. ತಾವೇ ಸ್ವತಃ ಕಲಾಶಾಲೆಗಳನ್ನು ತೆರೆದು ನೃತ್ಯ ಕಲೆಯನ್ನು ಎಲ್ಲೆಡೆ ಹರಡುತ್ತಿದ್ದಾರೆ. ದೇಶವಿದೇಶಗಳಲ್ಲಿ ರಾಜೇಶ್ವರಿ ಮತ್ತು ಅವರ ಶಿಷ್ಯರು ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಇವರು ಕಲೆಯನ್ನೇ ಜೀವನವಾಗಿ ಸ್ವೀಕರಿಸಿ ತಮ್ಮ ಕಲಾರಾಧನೆಯ ಮೂಲಕವೇ ಲಕ್ಷಕ್ಕೂ ಅಧಿಕ ಶಿಷ್ಯವೃಂದವನ್ನು ಪ್ರಖರ ಪ್ರತಿಭೆಗಳಾಗಿ ಸಮಾಜಕ್ಕೆ ನೀಡಿದ್ದಾರೆ. ಕಲೆಯನ್ನೇ ಬದುಕಾಗಿಸಿಕೊಂಡಿರುವ ಸಾಧಕರಾಗಿ ಅಂಬಳೆ ರಾಜೇಶ್ವರಿ ಮಾದರಿಯಾಗಿದ್ದಾರೆ. ಅವರು ಇಲ್ಲೇ ನೆಲೆ ನಿಂತು ಹಾಸನವು ನಾಟ್ಯಕಲೆಯ ಪ್ರಮುಖ ಕಲಿಕಾ ಕೇಂದ್ರವಾಗಲು ಕಾರಣವಾದರು. ಇವರ ಸಾವಿರಾರು ಶಿಷ್ಯರಲ್ಲಿ ನೃತ್ಯವನ್ನೇ ವೃತ್ತಿಯಾಗಿಸಿಕೊಂಡಿರುವ ಹಾಸನದ- ಉನ್ನತ್ ಜೈನ್, ಲಕ್ಷ್ಮಿ, ಐಶ್ವರ್ಯ, ವಾಣಿ, ಪೂಜಿತ, ದೇವಿಕ, ರಮ್ಯ ಮುಂತಾದವರು ಪ್ರಮುಖರು. ರಾಜೇಶ್ವರಿಯವರ ನೃತ್ಯಾಭಿಮಾನ ಎಷ್ಟೆಂದರೆ- ವಿವಾಹ, ಮಕ್ಕಳು, ಸಂಸಾರದಲ್ಲಿ ಮುಳುಗಿದರೆ ನೃತ್ಯದೆಡೆಗೆ ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ಅವಿವಾಹಿತರಾಗಿಯೇ ಉಳಿದಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು
ದೇಶವಿದೇಶಗಳಲ್ಲಿ ವಿದುಷಿ ರಾಜೇಶ್ವರಿ ಮತ್ತು ಅವರ ಶಿಷ್ಯರು ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರ ಲಕ್ಷಾಂತರ ವಿದ್ಯಾರ್ಥಿಗಳು ಇವರಂತೆಯೇ ನೃತ್ಯ ಶಾಲೆಗಳನ್ನು ಆರಂಭಿಸಿ ನೃತ್ಯ ಕಲೆಯನ್ನು ಪಸರಿಸುತ್ತಿದ್ದಾರೆ. ‘ಸಂಗೀತ-ನೃತ್ಯ ಕಲಿತ ಮಕ್ಕಳಿಗೆ ಮತ್ತು ತನ್ಮೂಲಕ ಕುಟುಂಬಕ್ಕೆ ಉತ್ತಮ ಸಂಸ್ಕಾರ ದೊರಕಿ ಬದುಕಿನಲ್ಲಿ ಪರಿಪೂರ್ಣತೆಯನ್ನು, ಮನಸಿಗೆ ನೆಮ್ಮದಿಯನ್ನು ತಂದುಕೊಳ್ಳುತ್ತಾರೆ. ಅದರಿಂದ ಉತ್ತಮ ಸಮಾಜದ ನಿರ್ಮಾಣಕ್ಕೆ ಸಂಗೀತ-ನೃತ್ಯವು ವಿಶಿಷ್ಟ ಕೊಡುಗೆಯಾಗಿದೆ’ ಎಂದು ರಾಜೇಶ್ವರಿ ಹೆಮ್ಮೆಯಿಂದ ಹೇಳುತ್ತಾರೆ. ಈ ಮಾತು ನಿಜವೂ ಆಗಿದೆ. ಹೀಗೆ ನೃತ್ಯ ಪರಂಪರೆಗೆ ಲೆಕ್ಕವಿಲ್ಲದಷ್ಟು ವಿಶಿಷ್ಟ ಶಿಷ್ಯ ಸಮೂಹವನ್ನೇ ಕೊಡುಗೆಯಾಗಿ ನೀಡಿರುವ ಇವರ ಸಾಧನೆಗಾಗಿ ಸಂದಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ಪ್ರಶಸ್ತಿಗಳು, ಬಿರುದು ಬಾವಲಿಗಳು, ಮೆಚ್ಚುಗೆಗಳು ಸಾವಿರಾರು! 2006ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಅದರಲ್ಲಿ ಕೆಲ ಮುಖ್ಯವಾದುದು.
1990ರ ಹೊತ್ತಿಗೆ ನಾಟ್ಯ ಕಲಾವಿದೆಯರಾದ ವಾಣಿಶ್ರೀ, ಸುಮನ, ಪ್ರಭಾನಾಡಿಗ್, ಮಾಲಿನಿ, ಶೈಲಜಾ ಮಹೇಶ್… ಮುಂತಾದವರು ಹಾಸನ, ಮತ್ತಿತರ ತಾಲ್ಲೂಕುಗಳಲ್ಲೂ ಭರತ ನಾಟ್ಯವನ್ನು ಆಸಕ್ತರಿಗೆ ಕಲಿಸಿ, ಕಲೆಯನ್ನು ವ್ಯಾಪಕಗೊಳಿಸಿದರು. 2001ರಿಂದ ಕುಮಾರಿ ಸುಧಾರವರು ಗೊರೂರು, ಅರಕಲಗೂಡು ಮತ್ತು ಹೊಳೆನರಸೀಪುರಗಳಲ್ಲಿ ಭರತನಾಟ್ಯ ಶಿಕ್ಷಣವನ್ನು ನೀಡುತ್ತಾ ವೇಗವಾಗಿ ಕಲೆಯನ್ನು ಎಲ್ಲೆಡೆ ಹರಡುತ್ತಿದ್ದಾರೆ. ಇದಷ್ಟೇ ಅಲ್ಲದೇ ಬಹಳಷ್ಟು ಕಲಾವಿದೆಯರು ತಾವೂ ಈ ಕ್ಷೇತ್ರದಲ್ಲಿ ಸಾಧಿಸುತ್ತಾ, ಮುಂದಿನ ತಲೆಮಾರಿಗೂ ನೃತ್ಯವನ್ನು ಕಲಿಸುತ್ತಾ ಒಳ್ಳೆಯ ಕಲೆಯ ವಾತಾವರಣವನ್ನು ಹಾಸನದಾದ್ಯಂತ ಪಸರಿಸಲು ಕಾರಣಕರ್ತರಾಗಿದ್ದಾರೆ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಅರಸೀಕೆರೆ ಮೂಲದವರಾದ ಖ್ಯಾತ ನಾಟ್ಯ ಕಲಾವಿದೆ ಉಷಾ ದಾತಾರ್ ಭಾರತೀಯ ನಾಟ್ಯ ಪರಂಪರೆಯ ವಿಶಿಷ್ಟ ಪ್ರಕಾರಗಳಾದ ಭರತನಾಟ್ಯಂ, ಮೋಹಿನಿ ಆಟ್ಟಂ, ಕುಚಿಪುಡಿ ಮತ್ತು ಕಥಕ್ಕಳಿ ನಾಟ್ಯ ಶೈಲಿಗಳಲ್ಲಿ ಪರಿಣತಿ ಗಳಿಸಿ ವಿಶಿಷ್ಟ ಕೊಡುಗೆಯನ್ನು ನೀಡುವ ಮೂಲಕ, ಕರ್ನಾಟಕ ನೃತ್ಯ ಕ್ಷೇತ್ರಕ್ಕೆ ಮೆರುಗು ನೀಡಿದ ಪ್ರಮುಖ ದೈತ್ಯ ಪ್ರತಿಭೆ. ಉಷಾ ದಾತಾರ್ ಅವರ ತಾಯಿ ಸ್ನೇಹ ಪ್ರಭಾ ಅವರೂ ನಾಟ್ಯ ಕಲಾವಿದೆ ಮತ್ತಿವರ ಮೊದಲ ಗುರು. ಉಷಾ ಅವರು ಸುಮಾರು 25 ವರ್ಷಗಳಿಂದ ಒಂದು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ದೇಶ-ವಿದೇಶಗಳಲ್ಲಿ ನೀಡಿದ್ದಾರೆ. ‘ದೇವಾಲಯ ನೃತ್ಯದ ಪುನರ್ಚೇತನ’ ಇವರ ವಿಶಿಷ್ಟ ಕಾರ್ಯಕ್ರಮ. ಅದು ಮತ್ತು ಅವರ ನಿರ್ದೇಶನದ ನೃತ್ಯ ರೂಪಕಗಳು ದೂರದರ್ಶನದಲ್ಲಿ ಬಿತ್ತರಗೊಂಡು ದೇಶದಾದ್ಯಂತ ಜನಮನ್ನಣೆಯನ್ನು ಗಳಿಸಿವೆ.
‘ಕಾಡು ಕುದುರೆ’, ‘ಮಾಡಿ ಮಾಡಿದವರು’ ಮುಂತಾದ ಕನ್ನಡ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನವನ್ನು ಸಹ ಇವರು ಮಾಡಿದ್ದಾರೆ. ನಾಟ್ಯ ವಿಶಾರದೆ- ಖ್ಯಾತ ಚಲನಚಿತ್ರ ತಾರೆ ವೈಜಯಂತಿ ಮಾಲಾರವರು ಮೋಹಿನಿ ಅಟ್ಟಂ ನೃತ್ಯವನ್ನು ಉಷಾ ದಾತಾರ್‌ರಿಂದ ಕಲಿತಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿದ ಕಥಕ್ಕಳಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷೆಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ನೃತ್ಯ ಪರೀಕ್ಷಾ ಮಂಡಳಿಗೆ ಮಾರ್ಗದರ್ಶಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ವಿಭಾಗದಲ್ಲಿ ರೀಡರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 1982-84ರ ಸಾಲಿನ ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ನೇಮಕಗೊಂಡಿದ್ದರು. ಸರ್ಕಾರದ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಸಹ ಕೆಲಸ ನಿರ್ವಹಿಸಿದ್ದಾರೆ. 1994-95ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರದಾನ ಮಾಡುವ, ‘ಕರ್ನಾಟಕ ಕಲಾ ತಿಲಕ’ ಬಿರುದು ಮತ್ತು ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಹಾಸನ ಜಿಲ್ಲೆಯ ಹಿರಿಮೆ ಗರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ಯುವಲ್ಲಿ ಕಲಾಸಕ್ತರಿಗೆ ಮಾದರಿಯಾಗಿದ್ದಾರೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಹಾಸನದ ಮತ್ತೋರ್ವ ನಾಟ್ಯಕಲಾ ಸಾಧಕರು- ವಿದುಷಿ ಪಿ.ವಾಣಿಶ್ರೀ. ಭರತನಾಟ್ಯದಲ್ಲಿ ವಿದ್ವತ್ ಮಾಡಿಕೊಂಡಿರುವ ಇವರು ಕಥಕ್, ಮಣಿಪುರಿ ಮತ್ತು ಒಡಿಸ್ಸಿಯ ಅಲ್ಪಾವಧಿಯ ಕೋರ್ಸ್ ಕೂಡ ಮಾಡಿಕೊಂಡಿದ್ದಾರೆ. ಅಂಬಳೆ ರಾಜೇಶ್ವರಿ, ವಸುಂಧರಾ ದೊರೆಸ್ವಾಮಿ ಮತ್ತು ವಾಲ್ಮೀಕಿ ಬ್ಯಾನರ್ಜಿಯವರು ಇವರ ಗುರುಗಳು. ನೃತ್ಯಾಂಜಲಿ ಕಲಾ ನಿಕೇತನ ಟ್ರಸ್ಟ್ರಿ(ರಿ) ಸ್ಥಾಪಿಸಿ ಸಾವಿರಾರು ಶಿಷ್ಯರನ್ನು ಶಾಸ್ತ್ರೀಯ ನೃತ್ಯಕಲೆಯಲ್ಲಿ, ಸಂಗೀತ ಕಲೆಯಲ್ಲಿ ಸಿದ್ಧಗೊಳಿಸಿದ್ದಾರೆ. 2008ರಲ್ಲಿ ದುಬೈನ ಕನ್ನಡ ಸಂಘ, 2008ರಲ್ಲಿ ಕತಾರ್‌ನ ಕನ್ನಡ ಸಂಘ, 2009ರಲ್ಲಿ ಸಿಂಗಾಪುರ, ಮಲೇಶಿಯಾ, ಬ್ಯಾಂಕಾಕ್, ಕೆನಡಾ, ನೇಪಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಂತಾರಾಷ್ಟ್ರೀಯ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಲ್ಲದೇ ಹೊಯ್ಸಳ ಮಹೋತ್ಸವ, ಕನ್ನಡ ಮತ್ತು ಸಂಸ್ಕೃತಿ ವಿಭಾಗದ ನೃತ್ಯ ಕಾರ್ಯಕ್ರಮ, ಹಂಪಿ ಉತ್ಸವ, ಗಣಪತಿ ಉತ್ಸವ, ಹೊರನಾಡು ಕಾರ್ಯಕ್ರಮ, ಮೈಸೂರು ದಸರಾ ಉತ್ಸವ…ಇತ್ಯಾದಿ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ತಮ್ಮ ತಂಡದೊಡನೆ ಭಾಗವಹಿಸಿ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ಗಳಿಸಿದ್ದಾರೆ.
ವಿದುಷಿ ವಾಣಿಶ್ರೀಯವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಾದ- ದುಬೈನಲ್ಲಿ ಅತ್ಯುತ್ತಮ ನೃತ್ಯಗಾರ್ತಿ ಪ್ರಶಸ್ತಿ, ಸಿಂಗಾಪುರದಲ್ಲಿ ನಾಟ್ಯ ರಾಣಿ ಪ್ರಶಸ್ತಿ, ಇಂಟರ್ನ್ಯಾಷನಲ್ ಶಿಕ್ಷಕ್ ಪ್ರಶಸ್ತಿಗಳು ದೊರಕಿವೆ. ಇದಲ್ಲದೇ ಬೆಂಗಳೂರಿನಲ್ಲಿ ಉಗಾದಿ ಪ್ರತಿಭಾ ಪುರಸ್ಕಾರ-2004, ಹಾಸನ ಜೈನ ಸಂಘ ಪ್ರಶಸ್ತಿ-2005, 2007ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2008ರಲ್ಲಿ ಕೊಡಗಿನ ಭಾರತೀಯ ವಿದ್ಯಾ ಭವನದಲ್ಲಿ ನೃತ್ಯಶ್ರೀ ಪ್ರಶಸ್ತಿ, 2007ರಲ್ಲಿ ಮೈಸೂರು ದಸರಾ ಪ್ರಶಸ್ತಿ, 2009ರಲ್ಲಿ ಗಂಗೂಬಾಯಿ ಪ್ರಶಸ್ತಿ, 2009ರಲ್ಲಿ ದೆಹಲಿಯಲ್ಲಿ ಉತ್ತಮ ಕಲಾಗುರು ಪ್ರಶಸ್ತಿ, 2010ರಲ್ಲಿ ಹುಬ್ಬಳ್ಳಿಯಲ್ಲಿ ಕಲಾ ಗುರು ಪ್ರಶಸ್ತಿ ಇತ್ಯಾದಿ… ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳು ಇವರ ಸಾಧನೆಗೆ ಸಂದಿವೆ.
ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ
ಹಿರಿಯ ವಿದುಷಿ ವಾಣಿರಾವ್‌ರವರಿಂದ ನೃತ್ಯಾಭ್ಯಾಸ ಕಲಿತಿರುವ ವಿದುಷಿ ಭಾನು ಚಿದಾನಂದ ಅವರು, ಕಳೆದ 25 ವರ್ಷಗಳಿಂದ ‘ಮೇದಿನಿ ನೃತ್ಯ ನಿಕೇತನ’ ಎಂಬ ನಾಟ್ಯ ಕಲಾಶಾಲೆ ನಡೆಸುತ್ತಿದ್ದಾರೆ. ಕೆಲವು ಅಶಕ್ತ ಆಸಕ್ತರಿಗೆ ಉಚಿತವಾಗಿಯೂ ತರಬೇತಿ ನೀಡುತ್ತಿದ್ದಾರೆ. ಸಾವಿರಕ್ಕೂ ಮೀರಿ ವಿದ್ಯಾರ್ಥಿಗಳು ಇವರ ಶಿಕ್ಷಣದ ಉಪಯೋಗ ಪಡೆದು ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷದಿಂದ ಸಂಸ್ಥೆಗೆ 25 ವಸಂತಗಳು ಕಳೆದ ಸಂಭ್ರಮದ ನೆನಪಿಗಾಗಿ ಹಾಸನದ ವಿಶೇಷತೆಗಳನ್ನು ಒಳಗೊಂಡ ‘ಸಿಂಹಾಸನ ಪುರಿ ವೈಭವ’ವನ್ನು ಪ್ರದರ್ಶಿಸಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ವಿದುಷಿ ಭಾನು ಚಿದಾನಂದ್. ವರ್ಷವಿಡೀ ಪ್ರತೀ ತಿಂಗಳ ಕಡೆಯ ಶನಿವಾರದಂದು ಯಾರಿಗೂ ಪರಿಚಯವಾಗದ ಎಲೆಮರೆಯ ಇತರ ಕ್ಷೇತ್ರದ ಕಲೆಗಾರರನ್ನು, ಸಾಧಕರನ್ನು ಅರಸಿ ‘ತೆರೆಮರೆಯ ಕಲಾ ತಾರೆ’ ಪ್ರಶಸ್ತಿ ನೀಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಹಾಸನ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಪ್ರತಿಭಾನ್ವಿತ ಮಹಿಳೆ, ಮಹಿಳಾ ಸಾಧಕಿ, ಅಕ್ಕಮಹಾದೇವಿ ಪ್ರಶಸ್ತಿ, ‘ನೃತ್ಯಕಲಾಭಿಘ್ನೆ’, ‘ನಾಟ್ಯ ವಿಭೂಷಣೆ’, ‘ನೃತ್ಯ ಕಲಾ ಪ್ರಪೂರ್ಣೆ’ ಎಂಬ ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ.
ಡಾ.ರಮ್ಯ ಸಿ.ಆರ್ ಅವರು ಯುವ ನೃತ್ಯ ಸಾಧಕಿ. ಸಂಗೀತ ಮತ್ತು ನೃತ್ಯ ಎರಡರಲ್ಲೂ ಉನ್ನತ ಮಟ್ಟದ ವ್ಯಾಸಂಗ ಮಾಡಿ 2003ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಾಟ್ಯ ಇನ್ಸಿಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿಯಲ್ಲಿ ಸ್ನಾತಕೋತ್ತರ ಪದವಿ, 2005ರಲ್ಲಿ ಸಂಗೀತ ಸ್ನಾತಕೋತ್ತರ ಪದವಿ, 2015ರಲ್ಲಿ ನೃತ್ಯದಲ್ಲಿ ಸ್ನಾತಕೋತ್ತರ ಪದವಿ, 2022ರಲ್ಲಿ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭರತನಾಟ್ಯದಲ್ಲಿ ಪಿಎಚ್.ಡಿ ಮಾಡಿ ಡಾಕ್ಟರೇಟ್ ಪಡೆದಿರುತ್ತಾರೆ. ಡಿಜಿಟಲ್ ಹಂಪಿ ಯೋಜನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಬೆಂಗಳೂರು ಡಾ.ಕರುಣಾ ವಿಜಯೇಂದ್ರರೊಂದಿಗೆ ಸಹಕರಿಸಿರುತ್ತಾರೆ. ರೇವಾ ವಿವಿಯನ್ನೂ ಒಳಗೊಂಡಂತೆ, ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸಹಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಹಲವಾರು ಐತಿಹಾಸಿಕ ಪೌರಾಣಿಕ ಪ್ರಸಂಗಗಳ ಮಹಾಪ್ರಬಂಧಗಳ ಮಂಡನೆ ನಿರ್ದೇಶನ, ಸಂಯೋಜನೆ ಮಾಡಿರುತ್ತಾರೆ. ಇವರ ಅನನ್ಯ ಸಾಧನೆಗಾಗಿ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ಸಂಸ್ಥೆಗಳಿಂದ ನಾಟ್ಯ ಸರಸ್ವತಿ, ಕರ್ನಾಟಕ ಭೂಷಣ, ಗಾನ ಕೋಗಿಲೆ, ಉಭಯ ಕಲಾ ವಿಶಾರದೆ, ಕಲಾತಪಸ್ವಿ ಹೀಗೇ 35ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.
ಇದನ್ನು ಓದಿದ್ದೀರಾ?: ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ
ಇವರಲ್ಲದೇ ನಾಟ್ಯ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ಹಿರಿದನ್ನು ಸಾಧಿಸಿರುವ ಸ್ವಾತಿ ಪಿ.ಭಾರದ್ವಾಜ್- ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ 4 ಗಂಟೆ 20 ನಿಮಿಷಗಳ ಕಾಲ ನಿರಂತರ ನೃತ್ಯ ಮಾಡುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿದರು. ಇದುವರೆಗೂ ಸುಮಾರು 16 ದೇಶಗಳಲ್ಲಿ ತಮ್ಮ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಇವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಸಂದಿದ್ದು ಕಿರಿಯ ವಯಸ್ಸಿನಲ್ಲೇ ‘ಅಸಾಧಾರಣ ಪ್ರತಿಭೆ ಪ್ರಶಸ್ತಿ’ಯನ್ನು ರಾಜ್ಯಪಾಲರಿಂದ ಸ್ವೀಕರಿಸಿರುತ್ತಾರೆ. ಜೊತೆಗೆ ರಾಜ್ಯ ಸರ್ಕಾರದ ‘ಕರ್ನಾಟಕ ಅಚೀವರ್’ ಸಾಧಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಇವರೆಲ್ಲರೊಂದಿಗೆ ನಾಟ್ಯಕಲಾ ಪ್ರಕಾರಕ್ಕೆ ಭರವಸೆಯ ಬೆಳಕಾಗಿರುವ ವೈಷ್ಣವಿ, ಮಾನಸ… ಮೊದಲಾದ ಕಿರಿಯ ತಲೆಮಾರಿನ ನೃತ್ಯ ಕಲಾವಿದೆಯರು ಹಾಸನದಲ್ಲಿ ಇದ್ದಾರೆ. ಎಲ್ಲ ಹಿರಿಯ ನಾಟ್ಯ, ಸಂಗೀತ ಕಲಾವಿದೆಯರೂ ತಾವು ಈ ಕ್ಷೇತ್ರದಲ್ಲಿ ಬೆಳೆಯುವುದಲ್ಲದೇ ಅಪಾರ ಸಂಖ್ಯೆಯ ಕಿರಿಯರಿಗೂ ವಿಶಾಲ ತಳಪಾಯವನ್ನು ಒದಗಿಸಿ ಬೆಳೆಸುತ್ತಿರುವುದು ಹಾಸನದ ಹೆಮ್ಮೆ. ನನಗೆ ಸಿಕ್ಕ ಅಲ್ಪ ಕಾಲಾವಧಿಯಲ್ಲಿ ನನ್ನ ಮಿತಿಯೊಳಗೆ ಸಂಗ್ರಹಿಸಿದ ಮಾಹಿತಿಯನ್ನಷ್ಟೇ ಇಲ್ಲಿ ದಾಖಲಿಸಿರುವೆ. ಇದರಾಚೆಗೂ ಅನೇಕ ಪ್ರತಿಭೆಗಳು ಇರಬಹುದು, ಇದ್ದಾರೆ. ಎಲ್ಲರಿಗೂ ಹೃದಯಪೂರ್ವಕ ನಮನಗಳು.
-ಜಿ.ಎಸ್. ಕಲಾವತಿ ಮಧುಸೂದನ




