ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲೆಯ ಪ್ರಥಮ ಪೌರಾಣಿಕ ನಾಟಕ ನಿರ್ದೇಶಕಿ- ಸವಿತಾ ಕುಮಾರ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ತಮ್ಮನ್ನು, ತಮ್ಮ ಸಾಮರ್ಥ್ಯ, ಪ್ರತಿಭೆಗಳನ್ನು ಅರಿಯಲು ಮಹಿಳೆಯರಿಗೆ ಅಸಾಧ್ಯವಾಗಿಸುವ ಹಲವು ಹೊಣೆ, ನಿರ್ವಹಣೆಗಳ ದೆಸೆಯಿಂದ ಜ್ಞಾನ, ನಾಯಕತ್ವ, ಮಾರ್ಗದರ್ಶನಗಳಂತ ಕೌಶಲ್ಯ ಬೇಡುವ ಸ್ಥಾನಗಳಲ್ಲಿ ಮಹಿಳೆಯರು ಕಾಣಬರುವುದು ಅಪರೂಪ. ಮುಗಿಯದ ಮನೆಯ ಜವಾಬ್ದಾರಿಗಳನ್ನು ಈಗಲೂ ಮಹಿಳೆಯರೇ ಹೊರಬೇಕಾದ ಸ್ಥಿತಿ ಮತ್ತು ಕಾಲಘಟ್ಟದಲ್ಲಿ- ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದ ಸವಿತಾಕುಮಾರ ಎಂಬ ಮಹಿಳೆ ಪೌರಾಣಿಕ ನಾಟಕ ಮತ್ತು ಸಂಗೀತ ನಿರ್ದೇಶಕಿಯಾಗಿ ಗಮನಿಸಬೇಕಾದ ಮುಖ್ಯ ಮಾದರಿಯಾಗಿ ಕಾಣುತ್ತಾರೆ.

- Advertisement -

1978ರ ಜನವರಿ 1ರಂದು ಜನಿಸಿದ ಜೆ.ಬ್ಯಾಡರಹಳ್ಳಿಯ ಸಾಕಮ್ಮ, ಬೆಟ್ಟೇಗೌಡರ ಮಗಳಾದ ಸವಿತಾರಿಗೆ ಒಟ್ಟು ಮೂವರು ಸೋದರಿಯರು, ಒಬ್ಬ ಸೋದರ. ಸವಿತಾ- ಕೂಲಿ ಕೆಲಸ ಮಾಡುತ್ತಾ, ಆ ಹಣದಿಂದ ಪಿಯುಸಿ, ಹಿಂದಿ ರತ್ನ ಪೂರೈಸಿದರೆ, ಈಕೆಯ ಅಣ್ಣ ಮುಂಬೈಯಲ್ಲಿ ಕೆಲಸ ಮಾಡುತ್ತಾ ಹಿಂದಿ ಬಿಎಡ್ ಮಾಡಲು ತಂಗಿಗೆ ನೆರವಾದರು. 23 ವರ್ಷಕ್ಕೆ ಮದುವೆಯಾದ ಸವಿತಾ, ಕೆಲ ಕಾಲ ಕಾನ್ವೆಂಟ್ ಶಿಕ್ಷಕಿಯಾಗಿ ಕೆಲಸ ಮಾಡಿ, ನಂತರ ಎ.ಬೆಳಗುಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಾಯಕರಾಗಿ ಸೇರಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು. ಎರಡು ಹೆಣ್ಣುಮಕ್ಕಳ ತಾಯಿಯಾಗಿರುವ ಸವಿತಾ ಅವರಿಗೆ ಸಹೋದ್ಯೋಗಿಗಳ ಸಹವಾಸ, ಚರ್ಚೆಗಳು ದೂರಶಿಕ್ಷಣದ ಮೂಲಕ ಬಿಎ ಮತ್ತು ಎಂಎ ಸಮಾಜಶಾಸ್ತ್ರ ಪದವಿ ಪಡೆಯಲು ಪ್ರೇರಣೆಯಾದವು. ಹೀಗೆ ಇವರ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಇದೇ ಸಂಸ್ಥೆಯಲ್ಲಿ ಬಡ್ತಿ ಸಿಕ್ಕಿ ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಚಿಕ್ಕಂದಿನಲ್ಲಿ ಪಕ್ಕದ ಮನೆಯಲ್ಲೇ ನಡೆಯುತ್ತಿದ್ದ ನಾಟಕದ ತಾಲೀಮನ್ನು ನೋಡುತ್ತಾ, ತಂದೆಯವರು ನಾಟಕದಲ್ಲಿ ಪಾತ್ರ ಮಾಡುತ್ತಿದ್ದುದನ್ನು ಗಮನಿಸುತ್ತಾ ಬೆಳೆದ ಸವಿತಾ, ಶಾಲಾ ದಿನಗಳಲ್ಲಿ ಸಖಿ ಪಾತ್ರ ಮಾಡುತ್ತಿದ್ದರು, ಸ್ಪರ್ಧೆಗಳಲ್ಲಿ ರಂಗಗೀತೆ ಹಾಡುತ್ತಿದ್ದರು. ಮದುವೆಯ ನಂತರ, ರಂಗ ಸೌರಭ ಹಾಗೂ ಯುವಜನ ಮೇಳಗಳಲ್ಲಿ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ, ಜನಪದ ಗೀತೆ, ರಂಗಗೀತೆ, ಭಾವಗೀತೆಗಳು, ಶಕುನಿ ಏಕಪಾತ್ರಾಭಿನಯ, ಲಾವಣಿ ಮುಂತಾದವುಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಾಲೆಗಳಲ್ಲೆಲ್ಲ ದೃಶ್ಯಾವಳಿಗಳು, ನೃತ್ಯ, ಹಾಸ್ಯ ಪ್ರಸಂಗಗಳನ್ನೂ ಸಂಯೋಜಿಸಿದ್ದರು. ಪೌರಾಣಿಕ ನಾಟಕದ ಬಗ್ಗೆ ಪ್ರೀತಿ, ಹಾರ್ಮೋನಿಯಂ ಕಲಿಯುವ ಆಸೆಗಳನ್ನು ಬೆಳೆಸಿಕೊಂಡ ಸವಿತಾರಿಗಾಗಿ ಬಾಳಸಂಗಾತಿ ಕುಮಾರರು- ನಾಟಕ ನಿರ್ದೇಶಕರಾದ ಸಿ.ಕೆ.ಮೂರ್ತಿಯವರಿಂದ ಸಂಗೀತ ಮತ್ತು ನಾಟಕ ನಿರ್ದೇಶನ ಕಲಿಕೆಗೆ ಮನೆಯಲ್ಲೇ ಏರ್ಪಾಡು ಮಾಡಿದರು. ಬಸವರಾಜ ನುಗ್ಗೇಹಳ್ಳಿಯವರು, ಸಿ.ಕೆ.ಮೂರ್ತಿಯವರನ್ನು ಪ್ರತಿದಿನ ಮನೆಗೆ ಕರೆತಂದು, ವಾಪಸ್ ಬಿಡುವ ಮೂಲಕ ಬೆಂಬಲ ನೀಡುತ್ತಾ, ತಾವೂ ಜೊತೆಗೇ ಕಲಿತು ನಾಟಕ ನಿರ್ದೇಶಕರಾದರು… ಹೀಗೆ ಒಂದು ವರ್ಷ ಕಾಲ ಕಲಿತ ಸವಿತಾ ಪೂರಕವಾಗಿ, ಚನ್ನರಾಯಪಟ್ಟಣದ ರಾಮಚಂದ್ರಪ್ಪರಿಂದ ಮೂರು ತಿಂಗಳ ಕಾಲ ಸಂಗೀತ ಸ್ವರಗಳು, ರಾಗಗಳನ್ನೂ ಕಲಿತರು. ಹೀಗೆ ವಿಶಾಲ ಮನಸಿನ ಕಣ್ಣುಗಳಿಗೆ ರೂಪುಗೊಳ್ಳಲಿದ್ದ ಮಾದರಿ ವ್ಯಕ್ತಿತ್ವವೊಂದು ಕಂಡು ಪೋಷಿಸಿ, ಸವಿತಾರ ಜೊತೆ ನಿಂತ ಕಲಾಪೋಷಕರು ಮಾದರಿ ಮನುಷ್ಯರಾಗಿ ಕಾಣುತ್ತಾರೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ನೇರಲಕೆರೆಯಲ್ಲಿ ಹಿಂದಿನ ಕಾಲದಿಂದಲೂ ನಾಟಕ ಮಾಡಿಕೊಂಡು ಬರುತ್ತಿದ್ದು, ಸೊಸೆಯಾಗಿ ಸವಿತಾ ಇಲ್ಲಿಗೆ ಬಂದ ಮೇಲೆ ನಾಟಕ, ಸಂಗೀತ ನಿರ್ದೇಶಕಿಯಾದರು. ತಮ್ಮ ಬಿಡುವಿನ ಸಮಯದಲ್ಲಿ ಹಾಡುಗಳಿಂದ ಮೊದಲ್ಗೊಂಡು, ಸವಿತಾ ಅವರು ಹಾರ್ಮೋನಿಯಂ, ನಾಟಕ, ಸಂಗೀತ ನಿರ್ದೇಶನ ಕಲಿತುದಲ್ಲದೆ, ಕುರುಕ್ಷೇತ್ರ, ರಾಜ ಸತ್ಯವ್ರತ ನಾಟಕಗಳನ್ನು ಕರಗತ ಮಾಡಿಕೊಂಡರು. 2013ನೆಯ ಇಸವಿಯಲ್ಲಿ ಮೊದಲಬಾರಿಗೆ ‘ಕುರುಕ್ಷೇತ್ರ’, ನಂತರ ಅದೇ ವರ್ಷದಲ್ಲಿ ‘ರಾಜ ಸತ್ಯವ್ರತ ಅಥವಾ ಶನಿಪ್ರಭಾವ’ ಎಂಬ ಪೌರಾಣಿಕ ನಾಟಕಗಳನ್ನೂ ನಿರ್ದೇಶಿಸಿದರು. ಕಳೆದ 15 ವರ್ಷಗಳಿಂದ ಸ್ವತಃ ಸಂಗೀತ ನಿರ್ದೇಶಕರಾಗಿ, ಹಾರ್ಮೋನಿಯಂ ನುಡಿಸುತ್ತಾ, ಹಾಡುತ್ತಾ, ಪೌರಾಣಿಕ ನಾಟಕ ಕಲಿಸುವ ಸವಿತಾ ತಾವು ಸಂಪೂರ್ಣವಾಗಿ ಕಲಿತ ನಾಟಕಗಳನ್ನು ಇತರರಿಗೆ ಕಲಿಸುತ್ತಾರೆ. ಪೌರಾಣಿಕ ನಾಟಕಗಳನ್ನು ಕಲಿಸುವ, ಪ್ರದರ್ಶನ ನೀಡುವ ಒಲವುಳ್ಳ ಇವರು ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ, ರಾಜ ಸತ್ಯವ್ರತ ಅಥವಾ ಶನಿ ಪ್ರಭಾವ, ರಾಮಾಯಣ ಹಾಗೂ ದೇವಿ ಮಹಿಮೆ ಎಂಬ ನಾಟಕಗಳನ್ನು ಕಲಿಸುತ್ತಾರೆ.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಹೀಗೆ, ಅಲ್ಲಿಂದ ಇಲ್ಲಿಯವರೆಗೂ ಸುಮಾರು 48 ಬಾರಿ ಕುರುಕ್ಷೇತ್ರ ನಾಟಕವನ್ನು ಹಾಗೂ 65ಕ್ಕೂ ಹೆಚ್ಚು ಬಾರಿ ‘ರಾಜ ಸತ್ಯವ್ರತ’ ಎಂಬ ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿದ್ದು, ದೇವಿ ಮಹಾತ್ಮೆ ನಾಟಕವನ್ನೂ ನಿರ್ದೇಶಿಸಿದ್ದಾರೆ. ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನೂ ನಿರ್ದೇಶಿಸಿದ ಸಾಧನೆ ಇವರದು. ಮೊದಲ ಬಾರಿ ಕುರುಕ್ಷೇತ್ರಕ್ಕಾಗಿ ನಿರ್ದೇಶನ ಮಾಡಿದ ಸವಿತಾ, ಅದಕ್ಕಾಗಿ ಬೆಳ್ಳಿ ಕಿರೀಟ ಪಡೆದಿದ್ದನ್ನು ಪ್ರೀತಿಯಿಂದ ನೆನೆಯುತ್ತಾ, ಸುತ್ತೂರು ಜಾತ್ರೆ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ನಾಟಕ ಮಾಡಿದ್ದು, ಹಾಸನದ ಕಲಾಭವನ, ಮೈಸೂರಿನಲ್ಲಿ ಪುರುಷರಿಗಾಗಿ ಮೂರು ನಾಟಕಗಳನ್ನು ನಿರ್ದೇಶಿಸಿದ್ದು, ಮಹಿಳೆಯರಿಗಾಗಿ ಮೈಸೂರು ಕಲಾಭವನದಲ್ಲಿ, ಎಸ್.ಎಲ್.ಭೈರಪ್ಪ ಸ್ಮರಣಾರ್ಥವಾಗಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ನಾಟಕ ಮಾಡಿದ್ದನ್ನೂ ಸ್ಮರಿಸುತ್ತಾರೆ.

WhatsApp Image 2026 04 02 at 15.58.01
ಸವಿತಾ ಕುಮಾರ್- ರಂಗ ತಾಲೀಮಿನಲ್ಲಿ…

ಟೀಕೆ, ಅಣಕಗಳು ಮನೆಯವರಿಂದ ಹಿಡಿದು ಊರ ಮಹಿಳೆಯರು, ಗಂಡಸರಿಂದ ಕೇಳಿ ಬಂದರೂ ಎಲ್ಲವನ್ನೂ ಬದಿಗೊತ್ತಿ, ಏನೇ ಒತ್ತಡವಿದ್ದರೂ ಕಲೆಯ ತಪದಲ್ಲಿ ಮರೆಯುತ್ತಾ, ಕೆಲಸದ ಮೂಲಕವೇ ಉತ್ತರಿಸುತ್ತಾ ಬಂದಿದ್ದಾರೆ ಸವಿತಾ. ‘ಹೆಣ್ಣುಮಕ್ಕಳು ನಾಟಕದ ಮೇಷ್ಟ್ರಾಗಿರುವುದು ಕಡಿಮೆ, ಇವರು ಸಖಿಯ ಪಾತ್ರ ಮಾಡುತ್ತಿದ್ದಂತವರು, ಕಲೆ ಇತ್ತು. ಈಗ ನಮಗೆ ಕಲಿಸಲು ಬಂದಿದ್ದಾರೆ’ ಎಂದು ನಗು, ಸಂತಸ ತುಂಬಿದ ಮೊಗದಲಿ ಹೇಳುತ್ತಾರೆ ಇವರಿಂದ ನಾಟಕ ಕಲಿತ ನಾಗರಾಜರು. ನಿರ್ದಿಷ್ಟ ಪಾತ್ರಗಳಿಗಾಗಿ ಜಗಳವಾಡುವ ಹಳ್ಳಿ ಜನರಲ್ಲಿ- ವ್ಯಕ್ತಿತ್ವ, ಧ್ವನಿಗಳ ಗುರುತಿಸಿ ಸವಿತಾ ಸೂಕ್ತ ಪಾತ್ರದ ಸಲಹೆಯನ್ನೂ ನೀಡುತ್ತಾರೆ. ಕಲೆಯ ದಾಟಿಸುವ, ಪ್ರತಿಭೆಗಳ ಹುಡುಕಿ ತೋರಿಸುವ, ಜನರನ್ನು ಕಲೆಹಾಕುವ, ಸಂಘಟಿಸುವ, ಉದಾತ್ತ ಉದ್ದೇಶಗಳ ಸವಿತಾರ ನಿರ್ದೇಶನದಲ್ಲಿ ಪುರುಷರೂ ಕಲಿಯುವುದು ಜ್ಞಾನಕ್ಕೆ ಸಲ್ಲುವ ಗೌರವವೂ ಆಗಿದೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ನಾಟಕ ಕಲಿಯಲು ಹಳ್ಳಿಯ ಜನ ನೀಡುವ ಹಣ, ಓಡಾಟದ ಖರ್ಚಿಗಾದರೆ ಸಾಕೆನ್ನುವ ಸವಿತಾ ‘ಹಣಕ್ಕಾಗಿ ನಾನು ನಾಟಕ ಕಲಿಸುತ್ತಿಲ್ಲ, ಇದೊಂದು ಕಲಾ ಸೇವೆ ಅಷ್ಟೇ. ಕಲೆ ಕಲ್ತಿರೋದು ಆಡುಸ್ಬೇಕು ಸಮಾಜಕ್ಕೆ… ಇದು ಕಡಿಮೆ ಫೀಸ್. ನಾವು ಹೋಗಿ ಬರೋಕೆ, ಪೆಟ್ರೋಲ್ ಖರ್ಚಿಗೆ ಆದ್ರೆ ಸಾಕು’ ಎನ್ನುತ್ತಾರೆ. ಇವರು ಕೆಲವೊಮ್ಮೆ 50 ಕಿಮೀಗಳಷ್ಟು ದೂರ ಕ್ರಮಿಸಿ ಸ್ಕೂಟರಿನಲ್ಲಿ ಹೋಗಿ ನಾಟಕ ಕಲಿಸಿದ್ದೂ ಇದೆ. ‘ಕಲೆಯೇ ನನ್ನ ಜೀವನ, ನನ್ನ ದುಡಿಮೆ ಏನೇ ಇರಲಿ, ಕಲೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತೇನೆ. ನಾನು ದುಡಿಮೆಯ ಆಸೆಯಿಂದ ಈ ಕ್ಷೇತ್ರಕ್ಕೆ ಬಂದವಳಲ್ಲ ಗ್ರಾಮೀಣ ಸೊಗಡು, ಕಲೆ ಉಳಿಯಬೇಕು. ಮುಂದಿನ ಪೀಳಿಗೆಗೂ ಬೀಜವಾಗಿ ಬಿತ್ತಬೇಕು ಎಂಬುದೇ ನನ್ನ ಬಯಕೆ’ ಎನ್ನುತ್ತಾರೆ. ಹಾಸನ ಜಿಲ್ಲೆಯ ಏಕೈಕ ಮಹಿಳಾ ಪೌರಾಣಿಕ ನಾಟಕ ನಿರ್ದೇಶಕಿಯಾಗಿರುವ ಸವಿತಾರಿಗೆ ಬೆಂಬಲವಾಗಿ, ಕಲೆಯನ್ನು ಉಳಿಸಲು ಗ್ರಾಮಸ್ಥರೂ ಸಹಕಾರ ನೀಡುತ್ತಿದ್ದಾರೆ. ಇವರ ಕಲಾಸೇವೆಯ ಫಲವಾಗಿ ಮಹಿಳಾ, ಪುರುಷ ಕಲಾವಿದರು ತಾಲೂಕಿನಲ್ಲಿ ಹೆಚ್ಚಿದ್ದು ವೇದಿಕೆಗಳಲ್ಲಿ ತಮ್ಮ ಪಾತ್ರದ್ದೂ ಸೇರಿದಂತೆ ಪೌರಾಣಿಕ ಹಾಡುಗಳನ್ನು ಹಾಡುತ್ತಾರೆ. ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ಮಹಿಳೆಯರ ತಂಡವೊಂದಕ್ಕೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಕಲಿಸಿ ಪ್ರದರ್ಶನ ನೀಡಿಯೂ ಸವಿತಾ ಯಶಸ್ಸು ಕಂಡಿದ್ದಾರೆ.

ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು 

ಸವಿತಾರ ಕಲಾ ಸಾಧನೆಗಾಗಿ ಪಬ್ಲಿಕ್ ಟಿವಿಯವರು ಪಬ್ಲಿಕ್ ಹೀರೋ ಎಂದು ಗುರುತಿಸಿ ಸಂದರ್ಶಿಸಿದ್ದಾರೆ. ಹಾಗೂ ಅರ್ಧನಾರೀಶ್ವರ ಕಲಾ ಟ್ರಸ್ಟ್(ರಿ) ಬೆಂಗಳೂರು ವತಿಯಿಂದ ಸಾಧಕರತ್ನ ಮತ್ತು ರಂಗರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕರುನಾಡ ಕಲಾ ಸಂಘ(ರಿ) ಬೆಂಗಳೂರು ಇವರ ಸಂಯಕ್ತಾಶ್ರಯದಲ್ಲಿ ‘ಕರುನಾಡ ಕಲಾರತ್ನ’ ಹಾಗೂ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿಯನ್ನು ಪಡೆದಿದ್ದಾರೆ. 77ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೈಸೂರಿನಲ್ಲಿ ಮತ್ತು ಚನ್ನರಾಯಪಟ್ಟಣದಲ್ಲಿ ತಾಲ್ಲೂಕುಮಟ್ಟ, ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ, ಕನ್ನಡ ಕಲಾಸಿರಿ ಸಂಘದಿಂದ ಕರುನಾಡ ಕಲಾ ಶಾರದೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಮಾಣ ಪತ್ರ ದೊರೆತಿವೆ.

ವೇದಿಕೆಗಳ ಮೇಲೆ ಸವಿತಾರ ಕಲೆಯ ಕುರಿತು ಪ್ರಶಂಸಿಸುವ ಅದೇ ಜನರು, ಕೆಲಸ ಮಾಡುವೆಡೆ ನಾಟಕದವಳು ಎನ್ನುವುದನ್ನು ನೆನೆದು ನಗುವ ಸವಿತಾರಲ್ಲಿ ಅನುಭವ, ಶಿಕ್ಷಣ, ಜ್ಞಾನಗಳು ಸೇರಿದ ಪ್ರಬುದ್ಧತೆ ಕಾಣುತ್ತದೆ. ಸದ್ಯ ಇಡೀ ಕರ್ನಾಟಕದಲ್ಲಿ ಬಹುಶಃ ಸವಿತಾ ಏಕೈಕ ಪೌರಾಣಿಕ ನಾಟಕ ನಿರ್ದೇಶಕಿಯಾಗಿದ್ದಾರೆ(ಇದ್ದ ಇನ್ನೊಬ್ಬಾಕೆ ಬೆಳ್ಳೂರು ಕ್ರಾಸ್‌ನವರು, ಆಕ್ಸಿಡೆಂಟ್‌ನಲ್ಲಿ ತೀರಿಹೋಗಿದ್ದಾರೆ). ಸಾಮಾಜಿಕ ನಾಟಕಗಳನ್ನೂ ಆಯೋಜಿಸುವ ಆಶಯ ಹೊಂದಿರುವ ಸವಿತಾ, ಇಂತಹ ಟೀಕೆ, ಟಿಪ್ಪಣಿಗಳಿಗೆ ಇದುವರೆಗೂ ಗಳಿಸಿರುವ ಅನುಭವ, ಜ್ಞಾನ ಸಂಪತ್ತುಗಳನ್ನು ತೊಡಗಿಸಿ ಇದೇ ಸಾಮಾಜಿಕ ನಾಟಕಗಳಿಂದ ಬದಲಾವಣೆಯ ನವಚೈತನ್ಯ ಹರಿಸುವಂತಾಗಲಿ. ಅವರ ಈ ನಡಿಗೆಗೆ ನಾಡು, ಸಾಹಿತಿಗಳು ಬಲವಾಗಿ ಬರಲಿ.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಇಷ್ಟಲ್ಲದೆ, ಕಿರುತೆರೆಯ ಬಿಗ್ ಬಾಸ್, ಕಾಮೆಡಿ, ಸಂಗೀತ ಕಾರ್ಯಕ್ರಮ, ಡ್ರಾಮಾ ಜೂನಿಯರ್… ಮುಂತಾದ ವೇದಿಕೆಗಳಲ್ಲಿ ಹಾಡಲು ಉತ್ಸಾಹ ತೋರುವ ಸವಿತಾ ಅವರಿಗೆ ಸುಗಮ ಸಂಗೀತ ಕ್ಷೇತ್ರದ ಬಗ್ಗೆಯೂ ಕನಸಿದೆ. ತಮ್ಮ ನಾಟಕಕ್ಕಾಗಿ ವೇದಿಕೆ ಕಟ್ಟಲು ಯೂಟ್ಯೂಬ್ ಮುಂತಾದ ವೇದಿಕೆಗಳಲ್ಲಿ ಸೂಕ್ತವೆನಿಸಿದುದನ್ನು ಉಲ್ಲೇಖಿಸಿ ಅಳವಡಿಸಿಕೊಳ್ಳುತ್ತಾರೆ. ಸ್ನೇಹಿತರೊಂದಿಗೆ ಮತ್ತು ತಮ್ಮಲ್ಲಿಯೇ ಹಾಡಿಕೊಳ್ಳುವುದು ಖುಷಿ ಕೊಡುವ ವಿಚಾರಗಳೆನ್ನುವ ಸವಿತಾ, ಸ್ನೇಹಿತರೊಂದಿಗೆ ಪ್ರವಾಸ ಹೋಗುವುದು, ಹರ್ಷ ಕೂಟಗಳಿಗೆ ತಮ್ಮನ್ನು ಆಹ್ವಾನಿಸುವುದನ್ನು ನೆನೆದು, ಹರ್ಷಿಸುತ್ತಾ, ನಸುನಗುತ್ತಾ ಹಂಚಿಕೊಳ್ಳುತ್ತಾರೆ. ‘ಹಾಸ್ಯ, ನಾಟಕ ಕಲಾವಿದರಾಗಿರುವ- ತನ್ನನ್ನು ಓದಿಸಿದ ಅಣ್ಣ ಮಹಾದೇವರು ತನ್ನ ರೋಲ್ ಮಾಡೆಲ್’ ಎಂದು ಭಾವುಕರಾಗುತ್ತಾರೆ. ತಮ್ಮ ಕಲಿಕೆ, ಕಾಯಕ, ಕಲಾ ನಿಷ್ಠೆಗಳಿಂದ, ನಗು ಮೊಗದಿಂದ ಇಷ್ಟು ದೂರ ಸಾಗಿ ಮನ್ನಣೆ ಗಳಿಸಿರುವ ಸವಿತಾರ ಜೀವನ ಶೈಲಿ ಚಿಂತನಾರ್ಹ ಮತ್ತು ಜೊತೆಗಿದ್ದು ಬೆಂಬಲಿಸಿದವರೆಲ್ಲರೂ ಅಭಿನಂದನಾರ್ಹರು.

-ರೇಖಾ ಹೊಸಹಳ್ಳಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ಹೊಸ ಖಾಸಗಿ ಶಾಲೆಗಳ ಸ್ಥಾಪನೆ ನಿಯಮ ಸಡಿಲಿಕೆ: ಎರಡು ಕಡ್ಡಾಯ ಷರತ್ತುಗಳ ರದ್ದು

ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಇರುವ ನಿಯಮಗಳನ್ನು ದೆಹಲಿ ಸರ್ಕಾರವು ಸಡಿಲಿಸಿದ್ದು,...

ಶಿವಮೊಗ್ಗ | ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆ ಆತ್ಮಹತ್ಯೆಗೆ ಶರಣು

ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಶಿವಮೊಗ್ಗ...

ಕೇರಳ ಸರ್ಕಾರದಲ್ಲಿ ಭಿನ್ನಮತ ಸ್ಫೋಟ; ಮುಖ್ಯಮಂತ್ರಿ ವಿರುದ್ಧವೇ ತಿರುಗಿಬಿದ್ದ ಯುಡಿಎಫ್ ಸಂಚಾಲಕ

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ...

ಜಮಖಂಡಿಯಲ್ಲಿ ಅ.4ರಂದು 10ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ನಾಡು–ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಸೊಗಡನ್ನು ಪಸರಿಸುವ ಉದ್ದೇಶದಿಂದ ಜಮಖಂಡಿ...