ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಕೇವಲ ಅಧಿಕಾರಕ್ಕಾಗಿ ಹೋರಾಟ ನಡೆಯುವುದಿಲ್ಲ. ಅದೊಂದು ಸಿದ್ಧಾಂತ ಮತ್ತು ಬಣ್ಣದ ಲೋಕದ ಅದ್ಭುತ ಸಮ್ಮಿಲನ. ದ್ರಾವಿಡ ನೆಲದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಬೇರ್ಪಡಿಸಲಾಗದ ಒಂದು ನಂಟಿದೆ. ಈ ಪರಂಪರೆಯಲ್ಲಿ ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರಂತಹ ಮಹಾನ್ ನಾಯಕರು ಜನಮಾನಸದಲ್ಲಿ ದೈವಸಮಾನವಾಗಿ ನಿಂತವರು. ಈಗ ಅದೇ ಹಾದಿಯಲ್ಲಿ ನಟ ಜೋಸೆಫ್ ವಿಜಯ್ ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ಭರ್ಜರಿ ಎಂಟ್ರಿ ಕೊಟ್ಟು, ತಮಿಳುನಾಡು ರಾಜಕೀಯದ ಚಿತ್ರಣವನ್ನೇ ಬದಲಿಸಿದ್ದಾರೆ. ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಸರಳ ಬಹುಮತ ಸಾಧಿಸಿ ಸರ್ಕಾರ ರಚಿಸಲು 10 ಶಾಸಕರ ಬೆಂಬಲ ಬೇಕು. ಈ ಯಶಸ್ಸಿನ ಹಿಂದೆ ಅವರ ಸ್ಟಾರ್‌ಡಮ್ ಮಾತ್ರವಲ್ಲದೆ ಜನರು DMK ಮತ್ತು AIDMK ಎರಡೂ ಪಕ್ಷದಿಂದ ಬೇಸತ್ತಿದ್ದರು ಅನ್ನೋದಕ್ಕೆ ಈ ಜನಾದೇಶವೇ ಸಾಕ್ಷಿ. ಹಾಗೇಯೇ ಟಿವಿಕೆ ಪಕ್ಷ ಘೋಷಿಸಿದ ಆಕರ್ಷಕ ಚುನಾವಣಾ ಪ್ರಣಾಳಿಕೆಗಳು ಜೋಸೆಫ್ ವಿಜಯ್ ಗೆಲುವಿನ ಹಾದಿಯನ್ನ ಸುಲಭ ಮಾಡಿದೆ.
ಇನ್ನು ತಮಿಳುನಾಡಿನ ರಾಜಕೀಯದಲ್ಲಿ ದಶಕಗಳಿಂದ ಬೇರೂರಿದ್ದ ಪ್ರಮುಖ ದ್ರಾವಿಡ ಪಕ್ಷಗಳ ಏಕಸ್ವಾಮ್ಯವನ್ನು ಈ ಹೊಸ ಪಕ್ಷದ ಗೆಲುವು ಮುರಿದುಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭ್ರಷ್ಟಾಚಾರ, ವಂಶಪಾರಂಪರ್ಯ ರಾಜಕಾರಣ ಮತ್ತು ಸದ್ಯಕ್ಕೆ ಇರುವ ಹಳೆಯ ರಾಜಕೀಯ ವ್ಯವಸ್ಥೆಯನ್ನು ಕೊನೆಗಾಣಿಸಬೇಕು ಎಂಬ ಜನರ ಇಚ್ಛೆಗೆ ಈ ಫಲಿತಾಂಶ ಸಾಕ್ಷಿಯಾಗಿದೆ. ದಕ್ಷ ಆಡಳಿತ ನೀಡುವ ಈ ಮೆಗಾ ಸ್ಟಾರ್ ಅವರ ಭರವಸೆಯನ್ನು ಮತದಾರರು ಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಸರ್ಕಾರದ ವಿರುದ್ಧವಿದ್ದ ಒಂದು ‘ಆಡಳಿತ ವಿರೋಧಿ ಅಲೆ’ಯು ಈ ನಟ-ರಾಜಕಾರಣಿಯನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್, ವಿಸಿಕೆ (VCK) ಮತ್ತು ಎಡಪಕ್ಷಗಳು ಟಿವಿಕೆ (TVK) ಪಕ್ಷಕ್ಕೆ ಹೊರಗಿನಿಂದ ಬೆಂಬಲ ನೀಡಲು ಮುಂದೆ ಬರುವ ಸಾಧ್ಯತೆಗಳಿವೆ. ಇದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನು “10 ರೂಪಾಯಿ ಮಂತ್ರಿ” ಅಂತ ಕುಖ್ಯಾತಿ ಗಳಿಸಿದ ಡಿಎಂಕೆ ಸೆಂಥಿಲ್ ಬಾಲಾಜಿ ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪ. ಡಿಎಂಕೆ ಪಕ್ಷದ ಪ್ರಭಾವಿ ನಾಯಕ ವಿ. ಸೆಂಥಿಲ್ ಬಾಲಾಜಿ ಈ ಹಿಂದೆ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ (2011-2015), ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನೂರಾರು ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪವಿದೆ. ವರ್ಗಾವಣೆ ಅಥವಾ ನೇಮಕಾತಿಗಾಗಿ ಪ್ರತಿಯೊಂದಕ್ಕೂ ನಿಗದಿತ ಕಮಿಷನ್ ದರ ಇತ್ತು ಎಂಬ ಕಾರಣಕ್ಕೆ ವಿರೋಧ ಪಕ್ಷದವರು ಇವರನ್ನು “10 ರೂಪಾಯಿ ಮಂತ್ರಿ” ಎಂದು ಲೇವಡಿ ಮಾಡುತ್ತಾರೆ. ಈ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಬಾಲಾಜಿ ಅವರನ್ನು ಬಂಧಿಸಿ ದೀರ್ಘಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದರು. ಇಡಿ ದಾಳಿಯ ಸಮಯದಲ್ಲಿ ಹಗರಣಕ್ಕೆ ಸಂಬಂಧಿಸಿದ ಅನೇಕ ಡಿಜಿಟಲ್ ಪುರಾವೆಗಳು ಮತ್ತು ಹಣಕಾಸಿನ ವಹಿವಾಟಿನ ಡೈರಿಗಳು ಪತ್ತೆಯಾಗಿದ್ದವು. ಬಂಧನದ ನಂತರವೂ ಅವರು ದೀರ್ಘಕಾಲ ಸಚಿವರಾಗಿ ಮುಂದುವರಿದಿದ್ದು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಒಬ್ಬ ಸಚಿವರ ಮೇಲೆ ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪ ಬಂದಿರುವುದು ಡಿಎಂಕೆ ಸರ್ಕಾರದ ಆಡಳಿತದ ಮೇಲೂ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.

ಇದೆಲ್ಲಾ ಒಂದು ಕಡೆ ಆದ್ರೆ ಈಗ ಉದ್ಭವಿಸುವ ಪ್ರಮುಖ ಪ್ರಶ್ನೆ ಪ್ರಣಾಳಿಕೆಗಳ ಬಗ್ಗೆ. ಜೋಸೆಫ್ ವಿಜಯ್ ಪಕ್ಷ ಆಶ್ವಾಸನೆ ಕೊಟ್ಟಿರುವಂತೆ ಎಲ್ಲಾ ಪಕ್ಷಗಳೂ ಆಶ್ವಾಸನೆ ಕೊಟ್ಟಿವೆ. “ಇವೆಲ್ಲವೂ ಹೊಸದೇನೂ ಅಲ್ವಲ್ಲ?” ಎಂಬುದೇ ಈಗ ಉದ್ಭವಿಸಿರುವ ಪ್ರಶ್ನೆ. ಚುನಾವಣೆಯ ಹೊಸ್ತಿಲಲ್ಲಿ ಆಮಿಷಗಳು, ಭರವಸೆಗಳ ಮಹಾಪೂರ ಹರಿಸುವುದು ದಶಕಗಳಿಂದ ನಡೆದು ಬಂದಿರುವ ರಾಜಕೀಯ ಸಂಪ್ರದಾಯ.
ಹಾಗಾಗಿ ಜೋಸೆಫ್ ವಿಜಯ್ ಅವರ ಪ್ರಣಾಳಿಕೆಯಲ್ಲಿರುವ ಅಂಶಗಳು ಮತ್ತು ಅದರ ಮುಂದಿರುವ ನೈಜ ಸವಾಲುಗಳ ವಿಶ್ಲೇಷಣೆಯಲ್ಲಿ ನೋಡೋಣ…
ಟಿವಿಕೆ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು
ನಟ ಜೊಸೆಫ್ ವಿಜಯ್ ಅವರು ಸಮಾಜದ ಪ್ರತಿಯೊಂದು ವರ್ಗವನ್ನೂ ತಲುಪುವ ಉದ್ದೇಶದಿಂದ ಅತ್ಯಂತ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ:
ಶಿಕ್ಷಣ ಮತ್ತು ನಿರುದ್ಯೋಗಕ್ಕೆ ಮದ್ದು: ಪದವಿ ಪಡೆದು ಉದ್ಯೋಗವಿಲ್ಲದೆ ಅಲೆಯುತ್ತಿರುವ ಯುವಕರಿಗೆ ಮಾಸಿಕ ₹2,500 ರಿಂದ ₹4,000 ವರೆಗೆ ಭತ್ಯೆ ನೀಡುವ ಭರವಸೆ ನೀಡಲಾಗಿದೆ. ಇದರೊಂದಿಗೆ 50 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹಾಗೂ ಶಿಕ್ಷಣಕ್ಕಾಗಿ ₹20 ಲಕ್ಷದವರೆಗೆ ಸಾಲ ಸೌಲಭ್ಯದ ಆಶ್ವಾಸನೆ ನೀಡಲಾಗಿದೆ.
ಮಹಿಳಾ ಸಬಲೀಕರಣ: ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಸಿಲಿಂಡರ್, ಪ್ರತಿ ವಧುವಿಗೆ ಒಂದು ಪೌಂಡ್ ಚಿನ್ನ ಮತ್ತು ರೇಷ್ಮೆ ಸೀರೆಯಂತಹ ಜನಪ್ರಿಯ ಯೋಜನೆಗಳನ್ನು ಘೋಷಿಸಲಾಗಿದೆ. ಇದು ತಮಿಳುನಾಡಿನ ಸಾಂಪ್ರದಾಯಿಕ ‘ಉಚಿತ ಕೊಡುಗೆ’ (Freebie) ರಾಜಕೀಯಕ್ಕೆ ಸಾಕ್ಷಿಯಾಗಿದೆ.
ರೈತರಿಗೆ ಮತ್ತು ಕೃಷಿಗೆ ಆದ್ಯತೆ: ಸಣ್ಣ ರೈತರ (5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರು) ಸಂಪೂರ್ಣ ಬೆಳೆ ಸಾಲ ಮನ್ನಾ ಮತ್ತು ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹4,500 ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ ಗ್ರಾಮೀಣ ಮತದಾರರನ್ನು ಸೆಳೆಯುವಲ್ಲಿ ಜೊಸೆಫ್ ವಿಜಯ್ ಯಶಸ್ವಿಯಾಗಿದ್ದಾರೆ.
ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆ: ಪ್ರತಿ ಕುಟುಂಬಕ್ಕೆ ₹25 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ತಮಿಳುನಾಡನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ.
ಭರವಸೆಗಳ ಅಸಲಿಯತ್ತು: ಹೊಸದೇನೂ ಇಲ್ಲದ ಹಳೇ ಹಾದಿ?
ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂದಿಲ್ಲೊಂದು ರೀತಿಯಲ್ಲಿ ಇವು ಹಳೆಯ ಯೋಜನೆಗಳ ಮರುಜಾರಿಯಂತೆ ಕಾಣುತ್ತವೆ. ನಿರುದ್ಯೋಗ ಭತ್ಯೆ, ಉಚಿತ ಅಡುಗೆ ಅನಿಲ, ಮತ್ತು ರೈತರ ಸಾಲ ಮನ್ನಾ – ಇವು ಭಾರತದ ಬಹುತೇಕ ಚುನಾವಣೆಗಳಲ್ಲಿ ಕಾಮನ್ ಆಗಿ ಕೇಳಿಬರುವ ಅಂಶಗಳು. ಜೋಸೆಫ್ ವಿಜಯ್ ಅವರ ಈ ‘ಮ್ಯಾನಿಫೆಸ್ಟೋ’ ಕೂಡ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದಶಕಗಳಿಂದ ಇಂತಹದ್ದೇ ಗಿಮಿಕ್‌ಗಳ ಮೂಲಕ ಜನರ ಮುಂದೆ ಹೋಗುತ್ತಿವೆ. ಮಿಕ್ಸಿ, ಗ್ರೈಂಡರ್, ಲ್ಯಾಪ್‌ಟಾಪ್‌ಗಳಿಂದ ಹಿಡಿದು ಉಚಿತ ಅಕ್ಕಿಯವರೆಗೆ ಎಲ್ಲವನ್ನೂ ತಮಿಳುನಾಡು ರಾಜಕೀಯ ಕಂಡಿದೆ. ಹೀಗಿರುವಾಗ, ಜೊಸೆಫ್ ವಿಜಯ್ ಅವರ ಭರವಸೆಗಳು ಕೇವಲ “ಹಳೆಯ ಮದ್ಯ ಹೊಸ ಸೀಸೆಯಲ್ಲಿ” ಬಂದಂತಿದೆ ಎಂಬ ಟೀಕೆಯೂ ಇದೆ. ಆದರೆ, ಈ ಭರವಸೆಗಳನ್ನೇ ಜನರು ನಂಬಿ ಮತ ಚಲಾಯಿಸಿದ್ದಾರೆ ಎಂದರೆ, ಇಂದಿಗೂ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳು ಹಾಗೆಯೇ ಇವೆ ಎಂಬುದು ಸ್ಪಷ್ಟವಾಗುತ್ತದೆ.
ಈಡೇರಿಸುವಲ್ಲಿರುವ ಸವಾಲುಗಳೇನು?
ಘೋಷಣೆ ಮಾಡುವುದು ಸುಲಭ, ಆದರೆ ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಜಾರಿಗೆ ತರುವುದು ಬೆಟ್ಟವನ್ನು ಉರುಳಿಸಿದಷ್ಟೇ ಕಷ್ಟದ ಕೆಲಸ. ಜೋಸೆಫ್ ವಿಜಯ್ ಅವರ ಪ್ರಣಾಳಿಕೆಯನ್ನು ಜಾರಿಗೆ ತರಲು ಸಾವಿರಾರು ಕೋಟಿ ರೂಪಾಯಿಗಳ ಬಜೆಟ್ ಅಗತ್ಯವಿದೆ. ಈಗಾಗಲೇ ಸಾಲದ ಸುಳಿಯಲ್ಲಿರುವ ತಮಿಳುನಾಡಿನಂತಹ ರಾಜ್ಯಕ್ಕೆ 50 ಲಕ್ಷ ಉದ್ಯೋಗ ಸೃಷ್ಟಿ ಮತ್ತು ಭಾರೀ ಪ್ರಮಾಣದ ಸಬ್ಸಿಡಿಗಳನ್ನು ನೀಡುವುದು ಆರ್ಥಿಕವಾಗಿ ದೊಡ್ಡ ಹೊರೆಯಾಗಲಿದೆ.
ಜೋಸೆಫ್ ವಿಜಯ್ ರಾಜಕೀಯಕ್ಕೆ ಸಂಪೂರ್ಣವಾಗಿ ಹೊಸಬರು. ಸಿನಿಮಾ ಸುಲ್ತಾನನಾಗಿ ತೆರೆಯ ಮೇಲೆ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸುವ ದೃಶ್ಯಗಳಿಗೂ, ಆಡಳಿತಾತ್ಮಕವಾಗಿ ಜಟಿಲವಾದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಹತ್ತು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಸವಾಲಿನ ಸಂಗತಿ. ಇಲ್ಲಿ ಒಕ್ಕೂಟ ರಾಜಕೀಯದ ಒತ್ತಡಗಳು ಜೋಸೆಫ್ ವಿಜಯ್ ಅವರ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಅವರು ಹೇಳಿದ್ದರೂ, ವ್ಯವಸ್ಥೆಯಲ್ಲಿನ ಹಳೇ ಬೇರುಗಳನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ.
ದಶಕಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊನೆಯಲ್ಲಿ ನಿರಾಸೆಯಾಯಿತು. ಕಮಲ್ ಹಾಸನ್ ಪಕ್ಷ ಕಟ್ಟಿದರೂ ಅದು ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲಿಲ್ಲ. ಆದರೆ ಜೋಸೆಫ್ ವಿಜಯ್ ಅವರ ವಿಚಾರದಲ್ಲಿ ವಿಷಯ ಬೇರೆಯೇ ಇತ್ತು. ಜೊಸೆಫ್ ವಿಜಯ್ ತಮ್ಮ ತಂದೆಯ ರಾಜಕೀಯ ನೆರಳಿನಿಂದ ಹೊರಬಂದು, ಯುವ ಸಮೂಹವನ್ನು ಸಂಘಟಿಸಿ, ನೇರವಾಗಿ ಮೈದಾನಕ್ಕೆ ಇಳಿದರು. ಸಿನಿಮಾ ಸ್ಟಾರ್‌ಡಮ್ ಅನ್ನು ಅವರು ಕೇವಲ ಗ್ಲಾಮರ್‌ಗಾಗಿ ಬಳಸದೆ, ಒಂದು ವ್ಯವಸ್ಥಿತವಾದ ಕಾರ್ಯಕರ್ತರ ಪಡೆಯಾಗಿ ಪರಿವರ್ತಿಸಿದರು. ತಮಿಳುನಾಡಿನ ಯುವಕರು ಇಂದು ಬದಲಾವಣೆಯನ್ನು ಬಯಸುತ್ತಿದ್ದಾರೆ. ಕರುಣಾನಿಧಿ ಮತ್ತು ಜಯಲಲಿತಾ ಅವರ ನಂತರದ ಶೂನ್ಯವನ್ನು ತುಂಬಲು ಒಬ್ಬ ಬಲಿಷ್ಠ ನಾಯಕನ ಹುಡುಕಾಟದಲ್ಲಿರುವ ಜನರಿಗೆ ಜೋಸೆಫ್ ವಿಜಯ್ ಆಶಾದೀಪದಂತೆ ಕಂಡಿದ್ದಾರೆ.
ಸದ್ಯಕ್ಕೆ ತಮಿಳುನಾಡಿನ ಮತದಾರರು ಜೋಸೆಫ್ ವಿಜಯ್ ಅವರ ಮೇಲೆ ನಂಬಿಕೆಯಿಟ್ಟು ಮತ ನೀಡಿದ್ದಾರೆ. ಆದರೆ ಇತಿಹಾಸವನ್ನು ಗಮನಿಸಿದರೆ, ಅನೇಕ ನಾಯಕರು ಚುನಾವಣಾ ಪ್ರಣಾಳಿಕೆಯನ್ನು ಕೇವಲ ಮತ ಗಳಿಸುವ ‘ಕಾಗದದ ಚೂರು’ ಎಂಬಂತೆ ಬಳಸಿದ್ದಾರೆ. ಜೊಸೆಫ್ ವಿಜಯ್ ಅವರು ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಈಡೇರಿಸಲು ಸಾಧ್ಯವೇ? ₹25 ಲಕ್ಷದ ಆರೋಗ್ಯ ವಿಮೆ ಅಥವಾ 50 ಲಕ್ಷ ಉದ್ಯೋಗ ಎಂಬುದು ಕೇವಲ ಅಂಕಿಅಂಶಗಳ ಆಟವೇ ಎಂಬ ಅನುಮಾನಗಳು ಜನರ ಮನಸ್ಸಲ್ಲಿ ಸಹಜವಾಗಿಯೇ ಇವೆ.
ಜೋಸೆಫ್ ವಿಜಯ್ ಹೇಳಿದಂತೆ ಇದು ಕೇವಲ ಆರಂಭವಷ್ಟೇ, ಅಸಲಿ ಪಿಕ್ಚರ್ ಇನ್ನು ಮುಂದೆ ಬರಲಿದೆ. ಈ ಪಿಕ್ಚರ್‌ನಲ್ಲಿ ಜೋಸೆಫ್ ವಿಜಯ್ ಒಬ್ಬ ಯಶಸ್ವಿ ‘ನಾಯಕ’ನಾಗಿ ಹೊರಹೊಮ್ಮುತ್ತಾರಾ ಅಥವಾ ಕೇವಲ ಒಬ್ಬ ‘ರಾಜಕಾರಣಿ’ಯಾಗಿ ಉಳಿಯುತ್ತಾರಾ ಎಂಬುದು ಕಾಲವೇ ನಿರ್ಧರಿಸಬೇಕು. ತಮಿಳುನಾಡಿನ ಮಣ್ಣಿನಲ್ಲಿ ಸಿನಿಮಾ ಮತ್ತು ರಾಜಕೀಯದ ಈ ಹೊಸ ಅಧ್ಯಾಯ ಕುತೂಹಲಕಾರಿಯಾಗಿದೆ. ಜೋಸೆಫ್ ವಿಜಯ್ ಅವರ ಗೆಲುವು ಕೇವಲ ವ್ಯಕ್ತಿಗತ ಯಶಸ್ಸಲ್ಲ, ಅದು ಪ್ರಸ್ತುತ ಇರುವ ರಾಜಕೀಯ ವ್ಯವಸ್ಥೆಯ ಮೇಲಿನ ಜನರ ಅಸಮಾಧಾನದ ಪ್ರತಿರೂಪ ಕೂಡ ಹೌದು. ಭರವಸೆಗಳ ಮಹಾಪೂರ ಹರಿಸಿರುವ ‘ದಳಪತಿ’, ಈ ಸವಾಲುಗಳ ಸಮುದ್ರವನ್ನು ಹೇಗೆ ದಾಟುತ್ತಾರೆ ಮತ್ತು ತಮ್ಮ ಮ್ಯಾನಿಫೆಸ್ಟೋಗೆ ಹೇಗೆ ಜೀವ ತುಂಬುತ್ತಾರೆ ಎಂಬುದನ್ನು ಇಡೀ ದೇಶ ಕಾತರದಿಂದ ಗಮನಿಸುತ್ತಿದೆ. ಅವರ ಆಡಳಿತವು ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕಿನಲ್ಲಿ ಹೊಸ ಬದಲಾವಣೆ ತರಲಿ ಎಂಬುದು ಎಲ್ಲರ ಆಶಯ.




