ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವೆಚ್ಚ ಲೆಕ್ಕ ಹಾಕಿ ವಾಸ್ತವಿಕ ಬೆಂಬಲ ಬೆಲೆ ನಿಗದಿಪಡಿಸಿದರೆ ಮಾತ್ರ ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತಿ ವರ್ಷ ಪ್ರತಿಭಟನೆ ಮತ್ತು ತಾತ್ಕಾಲಿಕ ಪುಡಿಗಾಸಿನ ನೆರವು ನೀಡುವಂತಹ ನಾಟಕೀಯ ಘಟನೆಗಳು ಮುಂದುವರೆಯುತ್ತಲೇ ಇರುತ್ತವೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾವು ಬೆಳೆಗಾರರು ಮತ್ತು ರೈತರ ಪ್ರತಿಭಟನೆ, ಮನವಿ ಸಲ್ಲಿಕೆ ನಂತರ ಅಹವಾಲುಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಮಾವು ಬೆಳೆಗಾರರಿಗೆ ಪರಿಹಾರದ ನೆಪದಲ್ಲಿ ಪುಡಿಗಾಸು ಬೆಂಬಲ ಬೆಲೆ ಘೋಷಿಸಿದ್ದಿ, ರೈತರ ಮೂಗಿಗೆ ತುಪ್ಪ ಸವರುವ ನಾಟಕವಾಡ ಶಾಶ್ವತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಅಗ್ರಹಿಸಿದರು.
ಹವಾಮಾನ ವೈಪರೀತ್ಯ ಮತ್ತು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಕರ್ನಾಟಕದ ಮಾವು ಬೆಳೆಗಾರರು ನೆರವು ಕೋರಿದ್ದರಿಂದ ಕೇಂದ್ರ ಸರ್ಕಾರ, ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹1,750 ಬೆಂಬಲ ಬೆಲೆಯಲ್ಲಿ 1.30 ಲಕ್ಷ ಟನ್ ಮಾವು ಖರೀದಿಸುವುದಾಗಿ ಘೋಷಿಸಿತ್ತು.
ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕೃಷಿ ತೋಟಗಾರಿಕೆ ಸಹಕಾರಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಮಾರಾಟದ ಬೆಲೆಯನ್ನು ನಿರ್ಧರಿಸಿದ್ದು, 1.30 ಲಕ್ಷ ಟನ್‌ಗಳವರೆಗಿನ ಮಾವು ಉತ್ಪನ್ನಗಳನ್ನು ಕ್ವಿಂಟಲ್‌ಗೆ ₹1,750 ಮಾರುಕಟ್ಟೆ ಹಸ್ತಕ್ಷೇಪ ಬೆಲೆ(ಏಂಐಪಿ)ಯನ್ನು ನಿಗದಿಪಡಿಸಿದೆ.
ಮಾವು ಬೆಳೆಗಾರ ರಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ₹1,750ರಲ್ಲಿ ಕೇವಲ ಶೇ.25(₹437.5)ರಷ್ಟನ್ನು ಪಾವತಿ ಮಾಡುತ್ತವೆ. ಇದನ್ನು ಒಂದು ಟನ್ ಮಾವಿಗೆ ಲೆಕ್ಕ ಹಾಕಿದರೆ ₹4,375 ಆಗುತ್ತದೆ. ಒಟ್ಟಾರೆಯಾಗಿ ತೋತಾಪುರಿ ಮಾವಿನ ಪ್ರತಿ ಕೆಜಿಗೆ ಕೇವಲ ₹4.37ರಷ್ಟು ಸರ್ಕಾರದ ಬೆಂಬಲ ಬರುತ್ತದೆ. ಹಾಗಾಗಿ ರೈತರು ಅಸಮಾಧಾನಗೊಂಡಿದ್ದು, ಕೃಷಿಗಾಗಿ ಖರ್ಚು ಮಾಡಿದ ಹಣವನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಸಿದ ರೈತನಿಗೆ ಊಟ ನೀಡುವ ಬದಲು ನೀರು ಕೊಟ್ಟು ದಾರಿ ತಪ್ಪಿಸಲು ನೋಡುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು MIPಯನ್ನು ಮರುಪರಿಶೀಲಿಸಿ ನಾವು ಕೇಳಿದ್ದನ್ನು ಒದಗಿಸಬೇಕು. ಬೇರೆ ಯಾವುದೇ ಮಾವಿಗೂ ಬೆಂಬಲ ಬೆಲೆ ಬೇಡ. ತೋತಾಪುರಿ ಮಾವು ಹಣ್ಣುಗಳಿಗೆ ಕೆಜಿಗೆ ₹10 ನೀಡುವಂತೆ ಮನವಿ ಮಾಡಿದ್ದೇವೆ. ಆದರೆ ನಮಗೆ ಕೆಜಿಗೆ ಕನಿಷ್ಠ ₹8 ನೀಡಬೇಕಾಗಿತ್ತು. ಇದರಿಂದ ಪ್ರತಿ ಟನ್‌ಗೆ ₹8,000ವರೆಗೆ ಬರುತ್ತಿತ್ತು. ಕಳೆದ ವರ್ಷ, ತೋತಾಪುರಿಗಾಗಿ ನಾವು ರಾಜ್ಯ ಮತ್ತು ಕೇಂದ್ರದಿಂದ ಕೆಜಿಗೆ ₹4.20 ಪಡೆದಿದ್ದೇವೆ. ಈ ವರ್ಷ ಕೇಂದ್ರ ಸರ್ಕಾರ ಕೇವಲ 17 ಪೈಸೆ ಹೆಚ್ಚಿಸಿದೆ” ಎಂದು ದೂರಿದರು.
ರಾಮನಗರ ಮಾವು ಬೆಳೆಗಾರ ಶ್ರೀನಿವಾಸ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಕನಿಷ್ಠ ಬೆಲೆಯಾಗಿದೆ. ಹಣ್ಣುಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ರೈತರು ಹೈರಾಣಾಗಿರುತ್ತಾರೆ. ಹೀಗಿರುವಾಗ ಕೇಂದ್ರದ ಬೆಲೆ ಮೂಗಿಗೆ ತುಪ್ಪ ಸವರಿದಂತಿದೆ. ನಾವು ಶೀಘ್ರದಲ್ಲೇ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಹಾಗೂ ರಾಜ್ಯ ಸರ್ಕಾರಕ್ಕೆ ಮತ್ತೊಂದು ಜ್ಞಾಪಕ ಪತ್ರವನ್ನು ಸಲ್ಲಿಸುತ್ತೇವೆ” ಎಂದು ಹೇಳಿದರು.
ಹಿನ್ನೆಲೆ
ತೋತಾಪುರಿ ಮಾವಿನ ಬೆಲೆ ಕಡಿಮೆಯಾದ ಬಗ್ಗೆ ಜೂನ್ 22ರಂದು ಕೋಲಾರದಲ್ಲಿ ಸಾವಿರಾರು ರೈತರು ಪ್ರತಿಭಟನೆಗಳನ್ನು ನಡೆಸಿದ್ದರು. ಬಳಿಕ ರಾಜ್ಯ ಸರ್ಕಾರ ಮಾವು ಬೆಳೆಗಾರರಿಗೆ MIP ನೀಡುವಂತೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು.
ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾವು ಬೆಳೆಗಾರರ ರಕ್ಷಣೆಗೆ ತ್ವರಿತವಾಗಿ ಧಾವಿಸಬೇಕು ಎಂದು ಮನವಿ ಮಾಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು.
ಕಳೆದ ಐದಾರು ದಿನಗಳ ಹಿಂದಷ್ಟೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಮನವರಿಕೆ ಮಾಡಿಕೊಟ್ಟಿದ್ದರು. ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್)ಯಡಿ ನೆರವಾಗುವಂತೆ ಒತ್ತಾಯಿಸಿದ್ದರು.
ಜೋಶಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು, ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವಂತೆ ತ್ವರಿತ ಕ್ರಮ ಕೈಗೊಂಡಿದ್ದು, ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದ್ದು, ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS)ಯಡಿ ಬೆಲೆ ಕೊರತೆ ಪಾವತಿ (PDP) ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. MIS ಮಾರ್ಗಸೂಚಿಯಂತೆ 2026-27ರ ಮಾರುಕಟ್ಟೆ ಹಂಗಾಮಿನಲ್ಲಿ ತೋತಾಪುರಿ ಮಾವಿಗೆ ಬೆಲೆ ಕೊರತೆ ಪಾವತಿಯನ್ನು ಜಾರಿಗೆ ತರಲು ನಿರ್ದೇಶಿಸಿದೆ. MIS ಅಡಿಯಲ್ಲಿ ನೆರವು ಘೋಷಿಸಿರುವ ಕೇಂದ್ರ ಸರ್ಕಾರ, ಗರಿಷ್ಠ 1,30,000 MTವರೆಗೆ ಅನ್ವಯಿಸುವಂತೆ ಪ್ರತಿ ಕ್ವಿಂಟಲ್‌ಗೆ ₹1,750 ಸಹಾಯಧನ ನಿಗದಿಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಹೊರಡಿಸಿದೆ.
ಕೇಂದ್ರ ಸರ್ಕಾರವು MIP ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ʼಎಂಐಎಸ್ ಮಾರ್ಗಸೂಚಿಯಂತೆ 2026-27ರ ಮಾರುಕಟ್ಟೆ ಹಂಗಾಮಿನಲ್ಲಿ ರಾಜ್ಯದ ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡಲು ನಿರ್ದೇಶಿಸಲಾಗಿದೆ. ಒಂದು ತಿಂಗಳವರೆಗೆ ‘ಬೆಲೆ ಕೊರತೆ ಪಾವತಿ’ ಯೋಜನೆ ಜಾರಿಯಲ್ಲಿರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಂಡಿಗಳಲ್ಲಿ ವ್ಯಾಪಾರ ಮಾಡಬೇಕು. ರಾಜ್ಯ ಸರ್ಕಾರವು ತೋತಾಪುರಿ ಮಾವಿನ ವ್ಯಾಪಾರಿಗಳ ಪಟ್ಟಿ ಪ್ರಕಟಿಸಬೇಕು. ನೋಂದಾಯಿತ ರೈತರಿಗೆ ಬೆಲೆ ನಷ್ಟ ಪಾವತಿಯನ್ನು ಆಧಾರ್ ಲಿಂಕ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಮೂಲಕವೇ ನೇರ ನಗದು ವರ್ಗಾವಣೆ(ಡಿಬಿಟಿ) ಮಾಡಲಾಗುತ್ತದೆ” ಎಂದು ಸೂಚಿಸಿದೆ.
ತೋತಾಪುರಿ ಮಾವಿಗೆ ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವು ಪುಡಿಗಾಸು ಎಂದು ತಿಳಿದ ನಂತರ, ಕೋಲಾರ ಜಿಲ್ಲೆಯ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾರುಕಟ್ಟೆ ಹಸ್ತಕ್ಷೇಪ ಬೆಲೆ(MIP) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ? ‘ವರ್ಷದ ಕಷ್ಟ – ಕ್ಷಣದಲ್ಲಿ ನಷ್ಟ’; ಭಾರೀ ಮಳೆಗೆ ನಲುಗಿದ ಮಾವು ಬೆಳೆಗಾರರು
ಬೆಳೆಯ ವೆಚ್ಚ ಪ್ರತಿ ಕೆಜಿಗೆ ₹17.50ರಿಂದ ₹39 ತಲುಪುತ್ತಿರುವಾಗ ಕೇಂದ್ರ ನೀಡಿರುವ ಕೇವಲ ₹4.37 ಪರಿಹಾರ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಮಾರುಕಟ್ಟೆ ಬೆಲೆ ಕುಸಿತ, ಅನಿರೀಕ್ಷಿತ ಮಳೆ, ಹವಾಮಾನ ವೈಪರೀತ್ಯ, ರಫ್ತು ಸಮಸ್ಯೆಗಳು ಮುಂತಾದವು ಪುನರಾವರ್ತನೆಯಾಗುತ್ತಿರುವುದರಿಂದ ಸಾಕಷ್ಟು ಬೆಂಬಲ ಬೆಲೆ, ಸುಧಾರಿತ ಸಂಸ್ಕರಣಾ ಘಟಕಗಳು, ರಫ್ತು ಉತ್ತೇಜನ ಮತ್ತು ಬೆಳೆ ವಿಮೆಯ ಸುಧಾರಣೆಯಂತಹ ಶಾಶ್ವತ ಪರಿಹಾರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವೆಚ್ಚ ಲೆಕ್ಕ ಹಾಕಿ ವಾಸ್ತವಿಕ ಬೆಂಬಲ ಬೆಲೆ ನಿಗದಿಪಡಿಸಿದರೆ ಮಾತ್ರ ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತಿ ವರ್ಷ ಪ್ರತಿಭಟನೆ ಮತ್ತು ತಾತ್ಕಾಲಿಕ ಪುಡಿಗಾಸಿನ ನೆರವು ನೀಡುವಂತಹ ನಾಟಕೀಯ ಘಟನೆಗಳು ಮುಂದುವರೆಯುತ್ತಲೇ ಇರುತ್ತವೆ.




