ಕಾಗದಕ್ಕಷ್ಟೇ ಸೀಮಿತವಾಯಿತೇ ಲಿಂಗ್ಡೋ ಸಮಿತಿ ಶಿಫಾರಸುಗಳು? ಸಮಿತಿಯ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದರೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರಗಳು ಹಿಂಜರಿಯುತ್ತಿರುವುದು ಏಕೆ? ಪಕ್ಷ ಯಾವುದೇ ಇರಲಿ, ಅಧಿಕಾರಕ್ಕೆ ಬಂದ ತಕ್ಷಣ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಹತೋಟಿಯಲ್ಲಿಡಲು ಯತ್ನಿಸುವ ಆಡಳಿತ ಯಂತ್ರದ ಇಬ್ಬಂದಿ ನೀತಿ ಇದಲ್ಲವೇ? ಯುವ ಧ್ವನಿಯನ್ನು ಅಡಗಿಸುವುದು ಯತ್ನವಲ್ಲವೇ?
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕಾಲೇಜು ಕ್ಯಾಂಪಸ್ಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘದ ಚುನಾವಣೆಗಳು ಅತ್ಯಂತ ಅಗತ್ಯ. ದೇಶದ ಉನ್ನತ ನ್ಯಾಯಾಲಯದ ನಿರ್ದೇಶನದಂತೆ ಜೆ.ಎಂ. ಲಿಂಗ್ಡೋ ಸಮಿತಿಯು ಶಿಫಾರಸು ಮಾಡಿದ ನಿಯಮಾವಳಿಗಳ ಅನ್ವಯ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಬೇಕು ಎಂಬ ಸ್ಪಷ್ಟ ನಿಯಮ ಹಾಗೂ ಸರ್ಕಾರದ ಆದೇಶವಿದೆ. ಆದರೆ ಪ್ರಸ್ತುತ ಕ್ಯಾಂಪಸ್ಗಳಿಂದ ವಿದ್ಯಾರ್ಥಿ ಸಂಘಟನೆಗಳನ್ನು ದೂರವಿಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಈ ಮೂಲಕ ಕಾಗದದ ಮೇಲೆ ಪ್ರಜಾಪ್ರಭುತ್ವದ ಮಾತುಗಳನ್ನು ಆಡುವ ಆಡಳಿತ ವ್ಯವಸ್ಥೆಯು, ಪ್ರಾಯೋಗಿಕವಾಗಿ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳು ಸಂಘಟಿತರಾಗುವುದನ್ನು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಗಳ ಲೋಪದೋಷಗಳನ್ನು ಪ್ರಶ್ನಿಸುವ ಧ್ವನಿಗಳನ್ನು ಅಡಗಿಸಲು ಸರ್ಕಾರಗಳು ಇಂತಹ ಪರೋಕ್ಷ ನಿಷೇಧ ಅಥವಾ ನಿರ್ಬಂಧದ ತಂತ್ರಗಳನ್ನು ಬಳಸುತ್ತಿವೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳನ್ನು ನಡೆಸಿ ಯುವ ನಾಯಕರನ್ನು ರೂಪಿಸುವ ಬದಲು, ತಮಗೆ ಅನುಕೂಲಕರವಾದ ‘ನೇಮಕ’ ಪದ್ಧತಿಯನ್ನು ಅಥವಾ ರಾಜಕೀಯ ಪ್ರಭಾವ ನೆಪ ಒಡ್ಡಿ ಸಂಘಟನೆಗಳನ್ನು ಕ್ಯಾಂಪಸ್ನಿಂದ ಹೊರಗಿಡುವ ಹಾದಿಯನ್ನು ಸರ್ಕಾರಗಳು ತುಳಿಯುತ್ತಿರುವುದು ಆತಂಕಕಾರಿ.
ಇದನ್ನೂ ಓದಿ: ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಏನಿದು ಲಿಂಗ್ಡೋ ಸಮಿತಿ, ಅದು ಏನು ಹೇಳುತ್ತದೆ?
ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಅತಿಯಾಗುತ್ತಿದ್ದ ಹಣಬಲ, ತೋಳುಬಲ, ರಾಜಕೀಯ ಪಕ್ಷಗಳ ನೇರ ಹಸ್ತಕ್ಷೇಪ ಮತ್ತು ಹಿಂಸಾಚಾರವನ್ನು ತಡೆಯಲು ದೇಶದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ 2005ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ದೇಶದ ಮಾಜಿ ಮುಖ್ಯ ಚುನಾವಣೆ ಆಯುಕ್ತರಾದ ಜೆ.ಎಂ. ಲಿಂಗ್ಡೋ (J.M. Lyngdoh) ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಕಾರಣ ಇದನ್ನು ‘ಲಿಂಗ್ಡೋ ಸಮಿತಿ’ ಎಂದು ಕರೆಯಲಾಗುತ್ತದೆ. ಈ ಸಮಿತಿಯು 2006ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು, ಶೈಕ್ಷಣಿಕ ವಾತಾವರಣ ಕೆಡದಂತೆ ಪಾರದರ್ಶಕ ಚುನಾವಣೆ ನಡೆಸಲು ಪ್ರಮುಖ ಶಿಫಾರಸುಗಳನ್ನು ಮಾಡಿದೆ.
ಈ ಸಮತಿ ಶಿಫಾರಸಿನಂತೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಿಗದಿತ ವಯೋಮಿತಿ (ಪದವಿ ವಿದ್ಯಾರ್ಥಿಗಳಿಗೆ 17 ರಿಂದ 22 ವರ್ಷ) ಇರಬೇಕು. ಅಭ್ಯರ್ಥಿಯು ಕನಿಷ್ಠ 75% ಹಾಜರಾತಿ ಹೊಂದಿರಬೇಕು ಮತ್ತು ಯಾವುದೇ ಪರೀಕ್ಷೆ ಉತ್ತೀರ್ಣವಾಗದೆ ಉಳಿಸಿಕೊಂಡಿರಬಾರದು (Backlogs) ಅಥವಾ ಅಪರಾಧ ಹಿನ್ನೆಲೆ ಹೊಂದಿರಬಾರದು. ಚುನಾವಣೆಗೆ ಒಬ್ಬ ಅಭ್ಯರ್ಥಿ ಗರಿಷ್ಠ ₹5,000 ಮಾತ್ರ ವೆಚ್ಚ ಮಾಡಬಹುದು ಮತ್ತು ಫಲಿತಾಂಶ ಬಂದ 2 ವಾರಗಳಲ್ಲಿ ಲೆಕ್ಕಪತ್ರ ಸಲ್ಲಿಸಬೇಕು.
ಸಮಿತಿ ಶಿಫಾರಸಿನಂತೆ ಚುನಾವಣೆಯಲ್ಲಿ ಮುದ್ರಿತ ಪೋಸ್ಟರ್ಗಳು, ಕರಪತ್ರಗಳು ಹಾಗೂ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪೋಸ್ಟರ್ಗಳನ್ನು ಸಂಸ್ಥೆ ನಿಗದಿಪಡಿಸಿದ ಸ್ಥಳದಲ್ಲಿ ಹಸ್ತಪ್ರತಿಯಾಗಿ ಮಾತ್ರ ಅಂಟಿಸಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಪಕ್ಷಗಳ ನೇರ ಪ್ರಭಾವ, ಹಣಕಾಸಿನ ನೆರವು ಅಥವಾ ಪಕ್ಷದ ಚಿಹ್ನೆ/ಬ್ಯಾನರ್ಗಳನ್ನು ಬಳಸುವಂತಿಲ್ಲ. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಫಲಿತಾಂಶ ಪ್ರಕಟಣೆವರೆಗಿನ ಸಂಪೂರ್ಣ ಪ್ರಕ್ರಿಯೆಯು 10 ದಿನ ಮೀರಬಾರದು. ಆದರೆ ಇದೀಗ ರಾಜ್ಯ ಸರ್ಕಾರವು ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಕತ್ತರಿ ಹಾಕುತ್ತಿದೆ. ವಿದ್ಯಾರ್ಥಿ ಸಂಘಟನೆಗಳ ದೂರವಿಡಲು ಸರ್ಕಾರದ ಹುನ್ನಾರ ನಡೆಯುತ್ತಿದೆ ಎಂಬ ಆರೋಪವಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಿತಿಯ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಪ್ರತಿಕ್ರಿಯಿಸಿದ್ದು, “ಕರ್ನಾಟಕ ರಾಜ್ಯ ಸರ್ಕಾರವು 37 ವರ್ಷ ವಿದ್ಯಾರ್ಥಿ ಕ್ಯಾಂಪಸ್ ಚುನಾವಣೆಯನ್ನು ನಿಷೇಧಿಸಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸಿದ ಫಲವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವುದಾಗಿ ಸರ್ಕಾರ ನಿರ್ಧಾರ ಮಾಡಿದೆ. ಆ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಭೆಯನ್ನೂ ಕರೆಯಲಾಗಿತ್ತು. ನಮ್ಮ ಸಲಹೆಗಳನ್ನೂ ಕೇಳಿದ್ದರು. ರಾಜಕೀಯ ಪಕ್ಷದ ಹೆಸರಲ್ಲಿ ಚುನಾವಣೆ ನಡೆಯಬಾರದು, ಪ್ರೊಫೆಸರ್- ಉಪಕುಲಪತಿಗಳು ಚುನಾವಣೆ ವೇಳೆ ಪಕ್ಷಗಳ ಬೆಂಬಲವಾಗಿರಬಾರದು ಎಂಬ ಬಗ್ಗೆ ಮಾತನಾಡಿದ್ದೇವೆ. ಆದರೆ ಬಳಿಕ ಡಿ ಕೆ ಶಿವಕುಮಾರ್ ಸರ್ಕಾರ ಬಂತು. ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ಯುಜಿಸಿ ಗುರುತಿಸಿದ ಸಂಘಟನೆಗಳು ಚುನಾವಣೆ ನಡೆಸಬಹುದು ಎಂದು ಹೇಳಿದರು. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಂತದಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದರು. ಅದಕ್ಕೆ ವಿದ್ಯಾರ್ಥಿ ಸಂಘಟನೆಗಳು ಒಪ್ಪಿಕೊಂಡವು. ಆದರೆ ಈಗ ಪಿಯುಸಿ ಹಂತದಲ್ಲಿ ಚುನಾವಣೆ ನಡೆಸುತ್ತೇವೆ, ಆದರೆ ಕ್ಯಾಂಪಸ್ ಒಳಗಡೆ ಇರುವ ವಿದ್ಯಾರ್ಥಿ ಸಂಘಟನೆಗಳಿಗೆ ಮಾತ್ರ ಅವಕಾಶ, ಹೊರಗಿನ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶವಿಲ್ಲ ಎಂದಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್ಗಳಿಂದ ರಾಜ್ಯ ಸರ್ಕಾರ ದೂರವಿಟ್ಟಿದೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?
“ಇದನ್ನು ಎಸ್ಎಫ್ಐ ಸೇರಿದಂತೆ ಹಲವು ಸಂಘಟನೆಗಳು ಪ್ರಶ್ನಿಸಿದೆ. ಅಷ್ಟಕ್ಕೂ ವಿದ್ಯಾರ್ಥಿ ಸಂಘಟನೆ ಎಂದರೆ ಭಯವೇಕೆ? ಪ್ರಜಾಪ್ರಭುತ್ವ ದೇಶದಲ್ಲಿ ಕಾಲೇಜುಗಳಲ್ಲಿ ನಮ್ಮ ಸಂಘಟನೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ. ಉಳಿದ ರಾಜ್ಯಗಳಲ್ಲಿ ಅವಕಾಶವಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಈ ರೀತಿ ಅವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಶೇಕಡ 50-60ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯದ ಶಾಸಕರು, ಸಂಸದರ ಮಾಲೀಕತ್ವದಲ್ಲಿರುವುದು. ವಿದ್ಯಾರ್ಥಿ ಸಂಘಟನೆಗಳಿಗೆ ಕ್ಯಾಂಪಸ್ನಲ್ಲಿ ಅವಕಾಶ ಕೊಟ್ಟರೆ ಸಮಸ್ಯೆಗಳ ವಿರುದ್ಧ ದೊಡ್ಡ ಮಟ್ಟಿನ ಹೋರಾಟ ನಡೆಸುವ ಆತಂಕದಲ್ಲಿ ಸರ್ಕಾರವಿದೆ” ಎಂದು ದೂರಿದರು.
“ಇತ್ತೀಚೆಗೆ ಜಂತರ್ಮಂತರ್ನಲ್ಲಿ ಸಿಜೆಪಿ, ಎಸ್ಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ಹೋರಾಟ ನಡೆಸಿ, ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಿದೆ. ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಇಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್ನಿಂದ ದೂರ ಇಡುವ ಯತ್ನ ನಡೆಸುತ್ತಿದೆ. ಸಚಿವ ಸಂಪುಟದಲ್ಲಿ ಚುನಾವಣೆ ನಡೆಸುವ ಸಂಬಂಧ ತೆಗೆದುಕೊಂಡ ನಿರ್ಧಾರದ ನೋಟಿಫಿಕೇಷನ್ ಇನ್ನೂ ಜಾರಿ ಮಾಡಿಲ್ಲ. ಇಂತಹ ನಡೆಯನ್ನು ಎಸ್ಎಫ್ಐ ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ (AISF) ಕರ್ನಾಟಕ ರಾಜ್ಯ ಅಧ್ಯಕ್ಷೆ ವೀಣಾ ನಾಯ್ಕ್ ಈದಿನ ಡಾಟ್ ಕಾಮ್ ಜತೆ ಮಾತನಾಡಿ, “ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚುನಾವಣೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ಮೊದಲು ವಿದ್ಯಾರ್ಥಿ ಸಂಘಟನೆಗಳಿಗೆ ಕ್ಯಾಂಪಸ್ ಒಳಗೆ ಅವಕಾಶವಿದೆ ಎಂದು ಹೇಳಿ ಈಗ ನಿರ್ಬಂಧ ವಿಧಿಸಿರುವುದು ಖಂಡನೀಯ. ವಿದ್ಯಾರ್ಥಿ ಸಂಘಟನೆಗಳಿಗೆ ಕ್ಯಾಂಪಸ್ ಚುನಾವಣಾ ಪ್ರಕ್ರಿಯೆಯಲ್ಲಿ ಅವಕಾಶ ನೀಡದೆ ಹೋದರೆ ಅದು ಹೇಗೆ ಕ್ಯಾಂಪಸ್ ಡೆಮಾಕ್ರಸಿಯನ್ನು ಉಳಿಸಿಕೊಂಡಂತಾಗುತ್ತೆ? ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುದಾದರೂ ಹೇಗೆ? ಈಗಾಗಲೇ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಒಬ್ಬ ವಿದ್ಯಾರ್ಥಿ ಯನ್ನು ಮೊದಲೆ ಆಯ್ಕೆ ಮಾಡಿ ಸಾಂಕೇತಿಕವಾಗಿ ಚುನಾವಣೆ ನಡೆಸುವ ಹಾಗೂ ಅವರನ್ನೆ ಶಾಲೆಯ ನಾಯಕ/ ನಾಯಕಿಯರನ್ನಾಗಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದೆ ರೀತಿ ಕಾಲೇಜುಗಳಲ್ಲೂ ಮುಂದುವರೆದರೆ ಅದನ್ನು ಕ್ಯಾಂಪಸ್ ವಿದ್ಯಾರ್ಥಿ ಚುನಾವಣೆ ಎಂದು ಹೇಳಲಾಗದು” ಎಂದರು.
ಇನ್ನು ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಕರ್ನಾಟಕ ರಾಜ್ಯ ಸಮಿತಿಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, “ಸರ್ಕಾರ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್ನಿಂದ ದೂರ ಇಟ್ಟಿರುವುದನ್ನು ನಾವು ಖಂಡಿಸುತ್ತೇವೆ. ರಾಜಕೀಯ ಹಸ್ತಾಕ್ಷೇಪ ಆಗಬಾರದು ಎಂಬ ನೆಪವೊಡ್ಡಿ ಕ್ಯಾಂಪಸ್ ಚುನಾವಣೆಯಿಂದ ವಿದ್ಯಾರ್ಥಿ ಸಂಘಟನೆಗಳನ್ನು ದೂರವಿಡಲಾಗುತ್ತಿದೆ. ಬೇರೆ ರಾಜ್ಯದ ಜೆಎನ್ಯು, ದೆಹಲಿ ವಿಶ್ವವಿದ್ಯಾನಿಲಯ ಮೊದಲಾದವುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಯುತ್ತದೆ. ಅಲ್ಲೆಲ್ಲ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶವಿದೆ” ಎಂದು ಹೇಳಿದರು.
“ಸರ್ಕಾರ ಹೇಳಿರುವಂತೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಚುನಾವಣೆ ನಡೆಸಲಾಗುತ್ತದೆ. ಈಗ ಪ್ರಜಾತಾಂತ್ರಿಕ ವಾತಾವರಣದಲ್ಲಿ ಅವಶ್ಯಕವಾದ ವಿವಿಧ ವೈಚಾರಿಕತೆಯನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆಗಳನ್ನೇ ಈ ಚುನಾವಣೆಯಿಂದ ದೂರವಿಟ್ಟಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುವ ಈ ವಿದ್ಯಾರ್ಥಿಗಳನ್ನು ಯಾವುದೇ ವೈಚಾರಿಕತೆ ಅಥವಾ ಸಂಘಟನೆಯಿಂದ ದೂರವಿಡಲಾಗುತ್ತದೆ. ಇದರ ಮೂಲಕ ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವಂತಹ ವಿದ್ಯಾರ್ಥಿಗಳ ಹಕ್ಕನೇ ಸರ್ಕಾರ ಕಸಿಯುತ್ತಿದೆ” ಎಂದು ದೂರಿದರು.
“ವಿದ್ಯಾರ್ಥಿ ಸಂಘಟನೆ ಇದ್ದರೆ ವಿದ್ಯಾರ್ಥಿಗಳನ್ನು ಸಂಘಟಿಸಲು, ಮಾರ್ಗದರ್ಶನ ನೀಡಲು, ಸರಿ ಯಾವುದು-ತಪ್ಪು ಯಾವುದು ಎಂದು ಯೋಚಿಸುವ ಪ್ರಜ್ಞಾವಂತರನ್ನಾಗಿಸಲು ಸಂಘಟನೆಗಳು ಬೇಕು. ಇಡೀ ದೇಶದಲ್ಲಿ ಇಂತಹ ವಿದ್ಯಾರ್ಥಿ ಸಂಘಟನೆಗಳು ಇರುವುದರಿಂದಾಗಿ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಹೋರಾಟಗಳು ನಡೆಯುತ್ತಿರುವುದು. ಔಪಚಾರಿಕವಾಗಿ ವಿದ್ಯಾರ್ಥಿ ಚುನಾವಣೆ ನಡೆಸಲು ಮುಂದಾದರೆ ಅದರಿಂದ ಯಾರಿಗೂ ಲಾಭವಿಲ್ಲ. ಅವರೇ ಒಬ್ಬರನ್ನು ಆಯ್ಕೆ ಮಾಡಿ ನೀನೇ ನಾಯಕ ಎಂದರೆ ಅದು ಪ್ರಜಾಪ್ರಭುತ್ವವಾಗದು. ಇದರಿಂದಾಗಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವ ವೈಚಾರಿಕತೆ ಬೆಳೆಯುವುದಿಲ್ಲ. ಅಷ್ಟಕ್ಕೂ ಲಿಂಗ್ಡೋ ಸಮಿತಿ ಶಿಫಾರಸಿನಲ್ಲಿ ಎಲ್ಲೂ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸುವಂತೆ ಸಲಹೆ ನೀಡಿಲ್ಲ. ಹಾಗಾಗಿ ಕಾಲೇಜು ಚುನಾವಣೆಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ವಕೀಲರು, ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಸಂಚಾಲಕಿ ಲೇಖಾ ಅಡವಿ, “ಲಿಂಗ್ಡೋ ಸಮಿತಿ ಶಿಫಾರಸಿನ ಪ್ರಕಾರ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಹೊರಟಿದೆ. ಇತರೆ ವಿವಿಗಳಲ್ಲೂ ಈ ಸಮಿತಿ ಪ್ರಕಾರ ನಡೆಯುತ್ತಿದ್ದರೂ ರಾಜಕೀಯ ವಿಚಾರಗಳನ್ನು ದೂರವಿಟ್ಟು ಮಾಡಿಸುತ್ತಿಲ್ಲ (ಉದಾಹರಣೆ: HCU, JNU, DU, Jadavpur University, ಹಾಗೂ ಇತರೆ ವಿವಿಗಳು). ಸರ್ಕಾರವು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಮರುಸ್ಥಾಪಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳ ನಡುವೆ ಕೊಂಡೊಯ್ಯಲು. ಫ್ಯಾಸಿಸಂ ತಲೆ ಮೇಲೇರಿರುವಾಗ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಮುಖ್ಯವಾಗಿದ್ದರೆ, ರಾಜಕೀಯ/ಸೈದ್ಧಾಂತಿಕ ವಿಚಾರಗಳು ಚುನಾವಣೆಯಲ್ಲಿರುವುದು ಬಹುಮುಖ್ಯವಾಗಿದೆ. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಹೇಗೆ ನೀಡಬೇಕು” ಎಂದು ಪ್ರಶ್ನಿಸಿದರು.
ಹೀಗೆ ಅಧಿಕಾರದಲ್ಲಿ ಬಿಜೆಪಿ ಇರಲಿ ಅಥವಾ ಕಾಂಗ್ರೆಸ್ ಇರಲಿ, ಪ್ರತಿಯೊಂದು ರಾಜಕೀಯ ಪಕ್ಷವೂ ಆಡಳಿತಕ್ಕೆ ಬಂದಾಗ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಹತೋಟಿಯಲ್ಲಿಡಲು ಒಂದೇ ರೀತಿಯ ಧೋರಣೆಯನ್ನು ತಳೆಯುತ್ತವೆ ಎಂಬುದು ಕಹಿ ಸತ್ಯ. ವಿರೋಧ ಪಕ್ಷದಲ್ಲಿದ್ದಾಗ ವಿದ್ಯಾರ್ಥಿ ಸಂಘಟನೆಗಳ ಹಕ್ಕುಗಳು ಮತ್ತು ಚುನಾವಣೆಯ ಪರವಾಗಿ ಧ್ವನಿ ಎತ್ತುವ ನಾಯಕರು, ಅಧಿಕಾರಕ್ಕೆ ಬರುತ್ತಿದ್ದಂತೆ ಅದೇ ವಿದ್ಯಾರ್ಥಿ ಸಂಘಟನೆಗಳನ್ನು ಸಂಶಯದ ಕಣ್ಣಿನಿಂದ ನೋಡಲು ಪ್ರಾರಂಭಿಸುತ್ತಾರೆ. ಯುವಜನರು ಪ್ರಶ್ನೆ ಮಾಡುವುದನ್ನು ಕಲಿಯುತ್ತಾರೆ, ಸರ್ಕಾರದ ತಪ್ಪು ನೀತಿಗಳನ್ನು ಕ್ಯಾಂಪಸ್ಗಳಲ್ಲಿ ಪ್ರತಿಭಟಿಸುತ್ತಾರೆ ಎಂಬ ಭಯವೇ ಎಲ್ಲಾ ಸರ್ಕಾರಗಳು ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್ಗಳಿಂದ ದೂರವಿಡಲು ಮೂಲ ಕಾರಣ ಎಂಬುದು ಸ್ಪಷ್ಟ.
ಪ್ರಜಾಪ್ರಭುತ್ವದ ತಳಹದಿಯನ್ನು ಗಟ್ಟಿಗೊಳಿಸಬೇಕಾದ ಸರ್ಕಾರಗಳೇ ಈ ರೀತಿ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹಸಿಬಿಸಿಯಾಗಿ ಹಸಿಗೋಡೆಗೆ ತಳ್ಳುತ್ತಿರುವುದು ತೀವ್ರ ಖಂಡನೀಯ. ಲಿಂಗ್ಡೋ ಸಮಿತಿಯಂತಹ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದಾಗಲೂ, ಹಿಂಸಾಚಾರ ಅಥವಾ ರಾಜಕೀಯದ ನೆಪವೊಡ್ಡಿ ಇಡೀ ವಿದ್ಯಾರ್ಥಿ ಸಮುದಾಯದ ಪ್ರಾತಿನಿಧ್ಯವನ್ನೇ ಕಸಿದುಕೊಳ್ಳುವ ಸರ್ಕಾರ ಧೋರಣೆ ಸರಿಯಲ್ಲ. ಪ್ರಜಾಪ್ರಭುತ್ವವು ಕೇವಲ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗಳಿಗೆ ಸೀಮಿತವಾಗಿರದೆ, ಯುವಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವ ಕಾಲೇಜು ಕ್ಯಾಂಪಸ್ಗಳಿಂದಲೇ ಆರಂಭವಾಗಬೇಕಿದೆ. ಆದ್ದರಿಂದ ಸರ್ಕಾರ ತನ್ನ ಇಬ್ಬಂದಿ ನೀತಿಯನ್ನು ಬಿಟ್ಟು, ತಕ್ಷಣವೇ ನಿಯಮಾನುಸಾರ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಅವಕಾಶ ಮಾಡಿಕೊಡಬೇಕಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




