ಬಸವಣ್ಣನವರು ಕರುಣಿಸಿದ ಇಷ್ಟಲಿಂಗಧಾರಿಗಳಾದ ಪಂಚಮಸಾಲಿ ಸಮಾಜವು ಕಾಲಾಂತರದಲ್ಲಿ ಅವರ ಸಿದ್ಧಾಂತಗಳನ್ನು ಮರೆತು ಬಿಟ್ಟಿತು. ಲಿಂಗಾಯತದ ಉಪಪಂಗಡಗಳು ಪರಸ್ಪರ ಸಹಭೋಜನವನ್ನಾಗಲಿ, ವೈವಾಹಿಕ ಸಂಬಂಧಗಳನ್ನಾಗಲಿ ಬೆಳೆಸಲಿಲ್ಲ. ಹೀಗಾಗಿ ಲಿಂಗಾಯತದ ಒಳಪಂಗಡಗಳು ದೂರಾದವು.
ಹಿಂದಿನ ಸಂಚಿಕೆಯಲ್ಲಿ (ಭಾಗ- 3 ಇತಿಹಾಸ ಮರೆತ ಸಮಾಜ) ಬ್ಯಾಳಿ ಗುರುಗಳು, ಶ್ರೀಪಾದಪ್ಪ ಅಧಿಕಾರಿಯವರು ಮತ್ತು ಸೋರಟೂರ ಸಂಗಪ್ಪನವರು ಸೇರಿ ಈ ಸಮಾಜದ ಸಂಘಟನೆಯನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ವಿವರಿಸಲಾಗಿದೆ. ಹನ್ನೆರಡನೆಯ ಶತಮಾನದಿಂದ ಇಪ್ಪತ್ತನೆಯ ಶತಮಾನದ ಅವಧಿಯಲ್ಲಿ ಪಂಚಮಸಾಲಿ ಸಮಾಜದ ಬೆಳವಣಿಗೆಯನ್ನು ನಾನಿಲ್ಲಿ ಚರ್ಚಿಸುತ್ತಿಲ್ಲ. ಕೇವಲ ಇತ್ತೀಚಿನ (ಸಮಕಾಲೀನ) ಇತಿಹಾಸದ, ಅಂದರೆ ಕಳೆದ ಮೂವತ್ತೈದು ವರ್ಷಗಳಲ್ಲಿ ನಡೆದ ಈ ಸಮಾಜದ ಸಂಘಟನೆಯ ಕುರಿತು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
ಮುಂದುವರಿದ ಭಾಗ…
‘ಕತ್ತಲೆಯಲ್ಲಿ ಹುದುಗಿದ ಇತಿಹಾಸಕ್ಕೆ ಸತ್ಯದ ಕಿರಣಗಳು ಸೋಂಕಿದಾಗ ಅದು ಸೂರ್ಯನಂತೆ ಪ್ರಕಾಶಿಸುತ್ತದೆ’. ಪಂಚಮಸಾಲಿ ಸಮಾಜದ ಸಂಸ್ಥಾಪಕ ಅಧ್ಯಕ್ಷರೆಂದು ಪೂಜಿಸಲ್ಪಡುವ ಬಿ. ಎಂ. ಹನುಮನಾಳ ಗುರುಗಳು ಈ ಸಮಾಜ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರೆಂದು ಇಂದಿನವರೆಗೂ ಬಿಂಬಿಸಲ್ಪಟ್ಟಿದ್ದಾರೆ. ಆದರೆ ಸತ್ಯ ಬೇರೆಯೇ ಆಗಿದೆ. ಬಿ. ಎಂ. ಹನುಮನಾಳ ಗುರುಗಳ ಪೂರ್ವದಲ್ಲಿ ಈ ಸಮಾಜ ಸಂಘಟನೆಯ ಮುಂಚೂಣಿಯಲ್ಲಿದ್ದು ಸಂಘದ ಅಧ್ಯಕ್ಷರಾಗಿದ್ದವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಶ್ರೀಪಾದಪ್ಪ ಅಧಿಕಾರಿಯವರು. ಆದರೆ ಈ ಐತಿಹಾಸಿಕ ಸತ್ಯವನ್ನು ಮರೆತದ್ದು ಜಾಣ ಕುರುಡೋ, ಸಮಾಜದ ಅಜ್ಞಾನವೋ ಅಥವಾ ಸ್ಥಳೀಯ ರಾಜಕೀಯ ಷಡ್ಯಂತ್ರವೋ ತಿಳಿಯದು.
ಸ್ಥಾಪಕ ಅಧ್ಯಕ್ಷರ ಕುರಿತಾದ ಸತ್ಯ
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಆಗಸ್ಟ್ 8, 1994ರಂದು ನಡೆದ ಐತಿಹಾಸಿಕ ಪ್ರಪ್ರಥಮ ಪಂಚಮಸಾಲಿ ಅಧಿವೇಶನ ಮತ್ತು ಅದರ ಸಾಧನೆ ತಮಗೆಲ್ಲ ತಿಳಿದಿರಬಹುದು. ಆದರೆ, ಸಂಘಟನೆಯ ಹಿಂದಿರುವ ಇತಿಹಾಸ ತುಂಬ ರೋಚಕವಾಗಿದೆ. ಲಿಂಗಾಯತ ಧರ್ಮವು ಬಾಲರೋಗದಿಂದ ಹೇಗೆ ಬಳಲಿತ್ತೋ, ಹಾಗೆಯೇ ಈ ಧರ್ಮದ ಮೂಲ ಸಮಾಜವೂ ಕೂಡ ಅದೇ ಬಾಲರೋಗಕ್ಕೆ ತುತ್ತಾಗಿದ್ದು ಐತಿಹಾಸಿಕ ವೈಚಿತ್ರ್ಯ. ಬಸವಣ್ಣನವರು ಅನುಭವ ಮಂಟಪ ಕಟ್ಟಲು, ದೇಹವೇ ದೇವಾಲಯ ಎನ್ನಲು, ಮಾನವರೆಲ್ಲರೂ ಸಮಾನರೆಂದು ಸಾರಲು ಹೇಗೆ ಕಾರಣಗಳಿದ್ದವೋ, ಹಾಗೆಯೇ ಕೊಪ್ಪಳ ಜಿಲ್ಲೆಯಲ್ಲಿ ಈ ಸಮಾಜ ಸಂಘಟನೆಗೂ ಕಾರಣಗಳಿವೆ. ಆಧುನಿಕ ಕಾಲದಲ್ಲಿ ನಡೆದದ್ದು ವರ್ಗ ಸಂಘರ್ಷವಲ್ಲ, ಧರ್ಮ ಸಂಘರ್ಷವೂ ಅಲ್ಲ. ಅಲ್ಲಿದ್ದದ್ದು ಜಾತಿರಾಜಕೀಯ ಸಂಘರ್ಷ. ಪಂಚಮಸಾಲಿ ಸಮಾಜದ ಮೊದಲ ಅಧಿವೇಶನ ಹಮ್ಮಿಕೊಳ್ಳುವ ಹಿಂದಿರುವ ಸ್ಥಳೀಯ ರಾಜಕೀಯದ ಇತಿಹಾಸ ತುಂಬ ಕುತೂಹಲಕಾರಿಯಾಗಿದೆ.
ಸಂಖ್ಯಾಬಲವಿದ್ದರೂ ಲಭಿಸದ ಶಾಸಕ ಸ್ಥಾನದ ಭಾಗ್ಯ
ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಾರಂಭವಾದ ಕಾಲದಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಯಾರೊಬ್ಬರಿಗೂ ಶಾಸಕ ಸ್ಥಾನದ ಭಾಗ್ಯ ಸಿಕ್ಕಿಲ್ಲ. 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶ ಈ ಸಮಾಜದ ಬಸಪ್ಪ ಲಾಡಿ ಎಂಬ ಸಂಯುಕ್ತ ಕರ್ನಾಟಕ ಪತ್ರಿಕೆಯ ಏಜೆಂಟರಿಗೆ ಸಿಕ್ಕರೂ, ಅವರು ತಮಗಿಂತ ಅರ್ಹ ಅಭ್ಯರ್ಥಿಯಾಗಿದ್ದ ರೆಡ್ಡಿ ಸಮಾಜದ ಹಿರಿಯರಾದ ಅಯ್ಯನಗೌಡರಿಗೆ ತಮ್ಮ ಉಮೇದುವಾರಿಕೆಯನ್ನು ಹಸ್ತಾಂತರಿಸಿದರಂತೆ. ಅದರಂತೆ ಮಾನ್ಯ ಅಯ್ಯನಗೌಡರು ಈ ಕ್ಷೇತ್ರದ ಮೊದಲ ಶಾಸಕರು. ಅಂದು ಅವಕಾಶ ಕಳೆದುಕೊಂಡ ಅವಕಾಶವನ್ನು ಎಪ್ಪತ್ತೈದು ವರ್ಷಗಳಿಂದಲೂ ಮರಳಿ ಸಿಕ್ಕಿಲ್ಲ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಹದಿನೆಂಟು ಸಾರ್ವತ್ರಿಕ ಚುನಾವಣೆಗಳಲ್ಲಿ ಪಂಚಮಸಾಲಿ ಸಮಾಜದವರಿಗೆ ಯಾವುದೇ ರಾಷ್ಟ್ರೀಯ ಪಕ್ಷದವರು ಉಮೇದುವಾರಿಕೆ ನೀಡಿಲ್ಲ, ಹೀಗಾಗಿ ಶಾಸಕರಾಗಿ ಚುನಾಯಿತರಾಗುವ ಭಾಗ್ಯ ಒಲಿದು ಬಂದಿಲ್ಲ. ಈ ಕ್ಷೇತ್ರದಲ್ಲಿ ಪಂಚಮಸಾಲಿಗರು ಬಲಶಾಲಿಗಳು, ಬಹುಸಂಖ್ಯಾತರು, ಆರ್ಥಿಕವಾಗಿ ಬಲಾಢ್ಯರಾಗಿದ್ದರೂ ಸಹ ರಾಜಕೀಯ ಪ್ರಾಬಲ್ಯ ಇಲ್ಲದಿರುವುದು ಈ ಸಮಾಜದ ಮುಖಂಡರಿಗೆ ನುಂಗಲಾರದ ತುತ್ತಾಗಿತ್ತು. ಇವರಿಗಿಂತ ಜನಸಂಖ್ಯೆಯಲ್ಲಿ ಕಡಿಮೆ ಇರುವ:
- ಲಿಂಗಾಯತ ರೆಡ್ಡಿ ಸಮಾಜದವರು ಹದಿಮೂರು ಬಾರಿ ಶಾಸಕರಾಗಿದ್ದಾರೆ.
- ಲಿಂಗಾಯತ ಗಾಣಿಗ ಸಮಾಜದವರಿಗೆ ನಾಲ್ಕು ಬಾರಿ ಶಾಸಕ ಸ್ಥಾನ ಲಭಿಸಿದೆ.
- ಲಿಂಗಾಯತ ಕೂಡುವಕ್ಕಲಿಗ ಸಮಾಜದವರು ಕೂಡ ಒಮ್ಮೆ ಶಾಸಕರಾಗಿದ್ದಾರೆ.
- ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಸಿಕ್ಕ ಅವಕಾಶ “೦”.
ಇಂತಹ ರಾಜಕೀಯ ಹಿನ್ನೆಲೆಯು ಯಲಬುರ್ಗ ಕ್ಷೇತ್ರದ ಪಂಚಮಸಾಲಿ ಸಮಾಜದ ಹಿರಿಯರನ್ನು ಕಾಡಲಾರಂಭಿಸಿತು. “ರಾಜಕೀಯ ಪ್ರಾತಿನಿಧ್ಯವಿಲ್ಲದೆ ಸಮಾಜದ ಏಳಿಗೆ ಅಸಾಧ್ಯ ಎಂಬ ಭಾವನೆ ಬರಲು ಪ್ರಾರಂಭವಾಯಿತು” ಎನ್ನುತ್ತಾರೆ ಯಲಬುರ್ಗಾ ತಾಲ್ಲೂಕಿನ ಹಿರಿಯರಾದ ಶ್ರೀಪಾದಪ್ಪ ಅಧಿಕಾರಿಯವರು. ಈ ಹಿನ್ನೆಲೆಯಲ್ಲಿ ಸಮಾಜದ ಸಂಘಟನೆ ಪ್ರಾರಂಭವಾಯಿತು.
ಲಿಂಗಾಯತ ಧರ್ಮವು ಜಾತಿಯಾಗಿ ಮಾರ್ಪಟ್ಟಿತು
ಬಸವಣ್ಣನವರು ಕರುಣಿಸಿದ ಇಷ್ಟಲಿಂಗಧಾರಿಗಳಾದ ಪಂಚಮಸಾಲಿ ಸಮಾಜವು ಕಾಲಾಂತರದಲ್ಲಿ ಅವರ ಸಿದ್ಧಾಂತಗಳನ್ನು ಮರೆತು ಬಿಟ್ಟಿತು. ಲಿಂಗಾಯತದ ಉಪಪಂಗಡಗಳು ಪರಸ್ಪರ ಸಹಭೋಜನವನ್ನಾಗಲಿ, ವೈವಾಹಿಕ ಸಂಬಂಧಗಳನ್ನಾಗಲಿ ಬೆಳಸಲಿಲ್ಲ. ಹೀಗಾಗಿ ಲಿಂಗಾಯತದ ಒಳಪಂಗಡಗಳು ದೂರಾದವು.
ತಮ್ಮತಮ್ಮ ಸಮಾಜದ ಸಂಘಟನೆಗಾಗಿ ಬೇರೆಬೇರೆ ಸಂಘಗಳನ್ನು ಸ್ಥಾಪಿಸಿಕೊಂಡವು. ಮೇಲಾಗಿ ಸರ್ಕಾರಗಳು ಲಿಂಗಾಯತರನ್ನು ಜಾತಿಗಳಲ್ಲಿ ವಿಭಜಿಸಿ,ಮೀಸಲಾತಿಯ ಅಮಿಷ ಒಡ್ಡಿದವು. “ಲಿಂಗಾಯತ ಎಂಬ ನಡುಗಡ್ಡೆ ಹಿಂದೂ ಮಹಾಸಾಗರದ ಅಲೆಗಳು ಹೊಡೆತಕ್ಕೆ ಸಿಕ್ಕು ನಲುಗಿ ಹೋಗಲಾರಂಭಿಸಿತು”. ಪರಿಣಾಮ ಹಿಂದೂ ಧರ್ಮದ ಜಾತಿಗಳಾಗಿ ಲಿಂಗಾಯತದ ಉಪಪಂಗಡಗಳು ಬದಲಾದವು. ಈ ಮೊದಲು ದಿ. ದೇವರಾಜ ಅರಸು ರವರು ಲಿಂಗಾಯತರಲ್ಲಿನ ಅನೇಕ ಪಂಗಡಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿ ಅವರಿಗೆ ಮೀಸಲಾತಿಯನ್ನು (Reservation) ನೀಡಿ, ಲಿಂಗಾಯತರನ್ನು ಜಾತಿಗಳಲ್ಲಿ ವಿಂಗಡಿಸಿ ಬಿಟ್ಟಿದ್ದರು. ಅದು ಅಂದಿನ ಅವಶ್ಯಕತೆಯಾದರೂ ಅವರು ‘ಲಿಂಗಾಯತ ವಿರೋಧಿ’ ಎಂದು ಪಟ್ಟ ಕಟ್ಟಿಕೊಂಡಿದ್ದು ಆಶ್ಚರ್ಯ.
ಯಲಬುರ್ಗಾದಲ್ಲಿ ನಡೆದದ್ದು ಧರ್ಮ ರಾಜಕೀಯವಲ್ಲ. ಅಲ್ಲಿದ್ದದ್ದು ಲಿಂಗಾಯತದ ಒಳಜಾತಿ ರಾಜಕೀಯ. ಅಂತರಂಗದ ಜ್ವಾಲಾಮುಖಿ 1994ರಲ್ಲಿ ಬಹಿರಂಗವಾಗಿ ಹೊರಹೊಮ್ಮಿತು. ಪಂಚಮಸಾಲಿ ಸಮಾಜದ ಸ್ಥಳೀಯ ನಾಯಕರಾದ ಶ್ರೀಪಾದಪ್ಪ ಅಧಿಕಾರಿ ಮತ್ತು ಸಾಹುಕಾರ ಸೋರಟೂರ ಸಂಗಪ್ಪನವರಂತೆ ಅನೇಕ ಸಮಾಜ ಬಾಂಧವರು ಈ ರೀತಿಯಾಗಿ ಯೋಚಿಸುತ್ತಿದ್ದರು. ಇದು ಅವರನ್ನು ಸದಾ ಕುಟುಕುತ್ತಿತ್ತು.
ಶ್ರೀಪಾದಪ್ಪ ಅಧಿಕಾರಿಯವರು ಅಂದಿನ ದಿನಗಳಲ್ಲಿ ಪ್ರಭಾವಿ ಸ್ಥಾನವೆನಿಸಿದ್ದ ಮಂಡಲ ಪಂಚಾಯತಿಯ ಅಧ್ಯಕ್ಷರಾಗಿದ್ದರು ಮತ್ತು ಸ್ಥಳೀಯ ಪಂಚಮಸಾಲಿ ಸಮಾಜದ ಪ್ರಭಾವಿ ನಾಯಕರಾಗಿದ್ದರು. ಇವರು ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಹೌದು. ಸಹಜವಾಗಿ ಪಕ್ಕದ ಜಿಲ್ಲೆಯ ಪ್ರಮುಖರಾಗಿದ್ದ ಸಚಿವ ಶ್ರೀ ಎಚ್. ಕೆ. ಪಾಟೀಲ, ಬೆಳಗಾವಿಯ ಸಂಸದ ಶ್ರೀ ಎಸ್. ಬಿ. ಸಿದ್ನಾಳ ರವರ ಪರಿಚಿತರು. ಜೊತೆಗೆ ಪಕ್ಕದ ಹುನಗುಂದ ಕ್ಷೇತ್ರದ ಶಾಸಕರಾದ ಶ್ರೀ ಶಿವಶಂಕರಪ್ಪ ಕಾಶಪ್ಪನವರ ಸ್ನೇಹದ ಬಲವೂ ಇತ್ತು. ಪಂಚಮಸಾಲಿ ಸಮಾಜದ ಸಂಘಟನಾ ಪರ್ವ
ಸಂಘಟನೆಯ ಜವಾಬ್ದಾರಿ ವಹಿಸಿದ ಶ್ರೀಪಾದಪ್ಪ ಅಧಿಕಾರಿ ಸಕ್ರಿಯ ರಾಜಕಾರಣದಲ್ಲಿದ್ದರೂ ತಮ್ಮ ಸಮಾಜವು ಕೇವಲ ‘ಮತ ಬ್ಯಾಂಕ್’ ಆಗಿ ಬಳಕೆಯಾಗುತ್ತಿರುವುದನ್ನು ಕಂಡು ಮಮ್ಮಲ ಮರುಗಿದರು. ಯಲಬುರ್ಗಾ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಸಂಚರಿಸಿದಾಗ ಅವರಿಗೆ ಈ ಸಮಾಜದ ಜನರ ಒಳಧ್ವನಿ ಕೇಳಲಾರಂಭಿಸಿತ್ತು. “ನಾವು ಸಂಖ್ಯೆಯಲ್ಲಿ ಹೆಚ್ಚಿದ್ದರೂ ಅಧಿಕಾರದಲ್ಲಿ ಏಕೆ ಶೂನ್ಯ?” ಎಂಬ ಪ್ರಶ್ನೆ ಅವರನ್ನು ಇರಿಯುತ್ತಿತ್ತು. ಈ ಪ್ರಶ್ನೆಗೆ ಉತ್ತರ ಹುಡುಕಲು ಅವರು ದಿನಗಳನ್ನು ಗಂಟೆಗಳನ್ನಾಗಿ ಪರಿವರ್ತಿಸಿದರು. ಈ ಪ್ರಶ್ನೆಯೇ ಮುಂದೆ 1994ರ ಯಲಬುರ್ಗಾ ಅಧಿವೇಶನಕ್ಕೆ ಭದ್ರ ಬುನಾದಿ ಹಾಕಿತು.
ಪ್ರಥಮ ಅಧಿವೇಶನದ ಪೂರ್ವದಲ್ಲಿ, ಅಂದರೆ 1994ರ ಜೂನ್ ತಿಂಗಳ ಮೊದಲ ವಾರದಲ್ಲಿ ಕುಕನೂರಿನಲ್ಲಿ ಸಭೆ ನಡೆದು, ಯಲಬುರ್ಗಿಯಲ್ಲಿ ಅದ್ದೂರಿಯಾಗಿ ಸಮಾವೇಶ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಈಗಾಗಲೇ ಖರೀದಿಸಿದ ಅಂಬಾಸಿಡರ್ ಕಾರು ಪಕ್ಕದ ಗದಗ ಜಿಲ್ಲೆಗೆ ಹೊರಟಿತು. ಪಂಚಮಸಾಲಿಗಳ ತವರೂರು ಗದಗ ಜಿಲ್ಲೆ. ಆ ಜಿಲ್ಲೆಯ ತರುಣ ಶ್ರೀಶೈಲಪ್ಪ ಬಿದರೂರ ಕೂಡ ಸೂಡಿ ಗ್ರಾಮದ ಮಂಡಲ ಪಂಚಾಯತಿಯ ಅಧ್ಯಕ್ಷರಾಗಿದ್ದರು. (ಮುಂದೆ ಅನೇಕ ಬಾರಿ ಶಾಸಕರಾದರು.) ಅವರೊಂದಿಗೆ ಸೇರಿ ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಭೇಟಿ ಕೊಟ್ಟಿತು ಈ ತಂಡ. ಪಂಚಮಸಾಲಿ ಸಮಾಜದ ಸಂಘಟನೆಯ ಸುದ್ದಿ ಕಾಳ್ಗಿಚ್ಚಿನಂತೆ ಪಕ್ಕದ ಜಿಲ್ಲೆಗಳಾದ ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಾಪುರ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಿಗೂ ಹಬ್ಬಿಕೊಂಡಿತು.
ಪಂಚಮಸಾಲಿ ಸಮಾಜದ ಸಂಸ್ಥಾಪಕ ಅಧ್ಯಕ್ಷರ ಆಯ್ಕೆ ಈ ಮಧ್ಯೆ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಒಬ್ಬರಿಗೆ ನೀಡಬೇಕೆಂಬ ಚರ್ಚೆ ಪ್ರಾರಂಭವಾಯಿತು. ಸಂಘಟನೆಗೆ ಅಧ್ಯಕ್ಷರೂ ಪದಾಧಿಕಾರಿಗಳೂ ಬೇಕೆಂದರು ಸಮಾಜದ ಯುವಕರು. ಎಲ್ಲರ ಮನದಲ್ಲಿ ಶ್ರೀಪಾದಪ್ಪ ಅಧಿಕಾರಿ ಸಮಾಜದ ಅಧ್ಯಕ್ಷರಾಗಿದ್ದರೂ ಅವರನ್ನು ಅಧಿಕೃತವಾಗಿ ಚುನಾಯಿಸಿರಲಿಲ್ಲ. ಜೂನ್ 6, 1994ರಂದು ಕುಕನೂರಿನಲ್ಲಿ ಸಾರ್ವಜನಿಕ ಸಭೆ ಕರೆಯಲಾಯಿತು. ಆ ಸಭೆಯ ಅಧ್ಯಕ್ಷತೆಯನ್ನು ಗದುಗಿನ ಪ್ರಸಿದ್ಧ ವೈದ್ಯರಾದ ಬಿ. ಎಂ. ಆಲೂರವರು ವಹಿಸಿಕೊಂಡಿದ್ದರು. ಆ ಸಭೆಯಲ್ಲಿ ಶ್ರೀಪಾದಪ್ಪ ಅಧಿಕಾರಿಯವರನ್ನು ಸಮಾಜದ ಅಧ್ಯಕ್ಷರೆಂದು ಸರ್ವಾನುಮತದಿಂದ ಚುನಾಯಿಸಲಾಯಿತು.

ಸೋರಟೂರ ಸಂಗಪ್ಪನವರ ಆರ್ಥಿಕ ಶಕ್ತಿ ಮತ್ತು ಶ್ರೀಪಾದಪ್ಪ ಅಧಿಕಾರಿಯವರ ರಾಜಕೀಯ ಮುತ್ಸದ್ದಿತನ ಒಂದಾದಾಗ ಸಮಾಜಕ್ಕೆ ಹೊಸ ದಿಕ್ಕು ಸಿಕ್ಕಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಇವರಿಗೆ ಅಂದು ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರ ಆನೆಬಲ ತಂದುಕೊಟ್ಟಿತ್ತು. ಕೇವಲ ರಾಜಕೀಯ ಲಾಭವಲ್ಲದೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾಜವನ್ನು ಮೇಲೆತ್ತಬೇಕು ಎಂಬ ಚಿಂತನೆಯಲ್ಲಿ ಇವರೆಲ್ಲ ಮುಳುಗಿದರು.
ಯಲಬುರ್ಗಾ ಸಮಾವೇಶದ ಸಂಘಟನೆ
ಅಧ್ಯಕ್ಷರು ಮತ್ತು ಹೊಸ ಪದಾಧಿಕಾರಿಗಳೆಲ್ಲ ಸೇರಿಕೊಂಡು ಬೆಳಗಾವಿ ಜಿಲ್ಲೆಯ ಪ್ರಭಾವಿ ಸಂಸದರಾದ ಶ್ರೀ ಎಸ್. ಬಿ. ಸಿದ್ನಾಳರನ್ನು ಆಹ್ವಾನಿಸಲು ಬೆಳಗಾವಿಗೆ ಹೋದರು. ಇವರು ಬಂದ ಕಾರಣ ಕೇಳಿ ಸಿದ್ನಾಳ ಸಾಹೇಬರು ಹೌಹಾರಿದರು. “ಮೆತ್ತಗೆ ಮಾತಾಡಿ, ಅಡಿಗೆ ಮನೆಯ ಒಡತಿ ಬಣಜಿಗ ಸಮುದಾಯದವಳು” ಎಂದು ಪಿಸುಗುಟ್ಟಿದ್ದರಂತೆ ಪ್ರಭಾವಿ ಸಂಸದರು. ಸಭೆಯ ಅಧ್ಯಕ್ಷತೆ ತಾವೇ ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು ಹೊಸದಾಗಿ ಚುನಾಯಿತರಾದ ಪಂಚಮಸಾಲಿ ಅಧ್ಯಕ್ಷರು. “ಆಯಿತು, ಬರುತ್ತೇನೆ. ನನಗೂ ಸಮಾಜದ ಋಣವಿದೆ” ಎಂದು ಒಪ್ಪಿಕೊಂಡರಂತೆ ಸಂಸದರು. ಅಂದಿನ ದಿನಗಳನ್ನು ನಿನ್ನೆ ನಡೆದ ವೃತ್ತಾಂತದಂತೆ ತಮ್ಮ ನೆನಪಿನಂಗಳದಿಂದ ಬಿಚ್ಚಿಡುತ್ತಾರೆ ಯಲಬುರ್ಗಾದ ಶರಣಪ್ಪ ರಾಂಪೂರ.

ಸ್ಥಳೀಯ ಶಾಸಕರ ಸಹಕಾರ
ಪ್ರಾರಂಭದಲ್ಲಿ ಯಲಬುರ್ಗಾದ ಸ್ಥಳೀಯ ಶಾಸಕರೂ ಸಹಕಾರ ನೀಡಿದ್ದರಂತೆ. ಮುಖ್ಯ ಮಂತ್ರಿಗಳನ್ನು ಆಹ್ವಾನಿಸುವ ವಿಚಾರವಾಗಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಿದಾಗ “ನೀವು ಬೆಂಗಳೂರಿಗೆ ಬನ್ನಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ, ಅವರನ್ನು ಕಾರ್ಯಕ್ರಮಕ್ಕೆ ಕರೆತರೋಣ” ಎಂದಿದ್ದರು ಶಾಸಕರಾದ ಬಸವರಾಜ ರಾಯರೆಡ್ಡಿಯವರು. ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಕಂಡಾಗ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯ್ಲಿಯವರು ಸಭೆಗೆ ಬರಲು ಒಪ್ಪಿದರು.

ಪ್ರಭಾವಿ ಸಚಿವರಾದ ಎಚ್. ಕೆ. ಪಾಟೀಲರು “ನಾನು ಬರುತ್ತೇನೆ” ಎಂದರಂತೆ, ವೀರಶೈವ ಮಹಾಸಭೆಯ ಅಧ್ಯಕ್ಷರಾದ ಭೀಮಣ್ಣ ಖಂಡ್ರೆಯವರು ಬರುವುದಾಗಿ ಹೇಳಿದರಂತೆ. ಹುನಗುಂದ ಶಾಸಕರಾದ ಶ್ರೀ ಎಸ್. ಆರ್. ಕಾಶಪ್ಪನವರು ಪೆಂಡಾಲದ ಖರ್ಚು ವಹಿಸಿಕೊಂಡರಂತೆ. ಕೃಷಿಕರಾದ ಪಂಚಮಸಾಲಿ ಸಮಾಜದವರು ದಾಸೋಹಿಗಳು. ಅಪಾರ ಪ್ರಮಾಣದ ಅಕ್ಕಿ ಮತ್ತು ಅಷ್ಟೇ ಪ್ರಮಾಣದ ಸಕ್ಕರೆ ಗಂಗಾವತಿಯಿಂದ ಬಂದಿತಂತೆ. ಸ್ಥಳೀಯರಲ್ಲದೆ ಕೊಪ್ಪಳ ಜಿಲ್ಲೆಯ ಶ್ರೀಮಂತರು ಜಾತಿಭೇದ ಎಣಿಸದೆ ಕೈತುಂಬ ವಂತಿಗೆಯನ್ನು ನೀಡಿದರಂತೆ. ಸಮಾಜದ ನಾಯಕರು ಹಾಗೂ ಪ್ರಮುಖರು ಕೈತುಂಬ ವಂತಿಗೆ ನೀಡಿದರಂತೆ.
ಜಾತಿ ಸಂಘಟನೆಯಿಂದ ದೂರವಿದ್ದ ಕೆಲ ಹಿರಿಯ ನಾಯಕರು
ನನ್ನ ಹತ್ತಿರದ ಸಂಬಂಧಿಯಾದ ಶ್ರೀ ಬಿ. ಎಸ್. ಪಾಟೀಲ (ಮನಗೂಳಿ) ಯವರು ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ನೀರಾವರಿ ರಾಜ್ಯ ಸಚಿವರಾಗಿದ್ದರು. ಆ ಸಮಯದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಯಲಬುರ್ಗಾ ಸಮಾವೇಶದ ಸುದ್ದಿ ಪ್ರಕಟಿವಾಗಿತ್ತು. ಆಶ್ಚರ್ಯ ಚಕಿತನಾಗಿ ನಾನು ಅವರಿಗೆ ಅದನ್ನು ತೋರಿಸಿ “ಕಾಕಾ, ನಾವು ಈ ಸಭೆಗೆ ಹೋಗೋಣ” ಎಂದಿದ್ದೆ.
ಆರು ಬಾರಿಶಾಸಕರಾಗಿ ಸಚಿವರಾಗಿದ್ದ ಅವರು ಜಾತಿಯ ಹೆಸರಿನಲ್ಲಿ ಎಂದೂ ಮತ ಕೇಳಿದವರಲ್ಲ. ಮೇಲಾಗಿ ಜಾತಿ,ಧರ್ಮ ಸಂಘಟನೆಗಳನ್ನು ಅವರು ಇಷ್ಟಪಡುತ್ತಿರಲಿಲ್ಲ. ಸುದ್ದಿಯ ತುಣಕನ್ನು ನೋಡಿ ಅವರು ಗಾಬರಿಯಾದರು. ಜಾತಿ, ಮತ, ಪಂಥಗಳ ಮೇಲೆ ನಂಬಿಕೆ ಇರದ ಅವರು “ಬೇಡಪ್ಪ, ನಮಗೆ ಅವೆಲ್ಲ ಬೇಡ” ಎಂದು ನನ್ನ ಕೋರಿಕೆಯನ್ನು ತಳ್ಳಿಹಾಕಿದರು. ವೈಯಕ್ತಿಕವಾಗಿ ನಾನೂ ಪ್ರಥಮ ಅಧಿವೇಶನಕ್ಕೆ ಹೋಗಲಿಲ್ಲ.

ಐತಿಹಾಸಿಕ ಅಧಿವೇಶನ
ಆಗಸ್ಟ್ 8, 1994 ಯಲಬುರ್ಗಾ ಕ್ಷೇತ್ರ ಮಾತ್ರವಲ್ಲದೆ ಇಡೀ ಕರ್ನಾಟಕದ ರಾಜಕೀಯ ಇತಿಹಾಸ ಬದಲಾಯಿಸಿದ ಐತಿಹಾಸಿಕ ದಿನವದು. ಅಂದು ಯಲಬುರ್ಗಾದಲ್ಲಿ ನೆರೆದಿದ್ದ ಆ ಬೃಹತ್ ಜನಸಾಗರ ಅಕ್ಷರಶಃ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನದ ದಿನವಾಗಿತ್ತು. ಅಲ್ಲಿಯವರೆಗೆ ಹೊಲ, ತೋಟ-ಪಟ್ಟಿಗಳಲ್ಲಿ ಬೆವರು ಸುರಿಸುತ್ತಿದ್ದ ರೈತ ಸಮುದಾಯಕ್ಕೆ ತಾನೂ ಕೂಡ ಒಂದು ಸಂಘಟಿತ ಶಕ್ತಿಯಾಗಬಲ್ಲೆನೆಂಬ ಅರಿವು ಮೂಡಿತು. ಉತ್ತರ ಕರ್ನಾಟಕದ ಎಲ್ಲ ದಾರಿಗಳು ಯಲಬುರ್ಗಾಕ್ಕೆ ಎಂಬಂತೆ ದೂರದ ವಿಜಾಪುರ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಜನಸಾಗರ ಹರಿದು ಬಂದಿತ್ತು. ಪಕ್ಕದ ಜಿಲ್ಲೆಯ ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಸಾವಿರಾರು ಜನ ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದರೆಂದು ಹೇಳುತ್ತಿದ್ದರು ನಂತರದಲ್ಲಿ ಕೊಪ್ಪಳದಿಂದ ಶಾಸಕರಾಗಿ ಆಯ್ಕೆಯಾದ ಸಂಗಣ್ಣ ಕರಡಿಯವರು. ಸಭೆಯ ಪರಿಣಾಮವಾಗಿ (ನಂತರ ನಡೆದ ಚುನಾವಣೆಯಲ್ಲಿ) ಶಾಸಕರಾಗಿ ಚುನಾಯಿತರಾದ ಶ್ರೀಶೈಲಪ್ಪ ಬಿದರೂರ ರವರು “ಅಪಾರ ಜನ ಸೇರಿದ್ದರು” ಎಂದಿದ್ದರು. “ಎರಡು ಲಕ್ಷ ಜನರಿರಬಹುದು” ಎಂದು ಈ ಲೇಖನ ಬರೆಯುವ ಸಮಯದಲ್ಲಿ ಲೇಖಕರಿಗೆ ತಿಳಿಸಿದರು ಸಂಸ್ಥಾಪಕ ಅಧ್ಯಕ್ಷರಾದ ಶ್ರೀಪಾದಪ್ಪ ಅಧಿಕಾರಿಯವರು. ಈ ಸಭೆಯೊಂದು ಐತಿಹಾಸಿಕ ದಾಖಲೆಯಾಗಿ ಉಳಿಯಿತು.
ಯಲಬುರ್ಗಾ ಪಟ್ಟಣ ದಾಸೋಹ ಭವನವಾಗಿ ಬದಲಾಯಿತು
ತಾಲ್ಲೂಕು ಕೇಂದ್ರ ಯಲಬುರ್ಗಾದಲ್ಲಿ ಹೋಟೆಲುಗಳ ಸಂಖ್ಯೆ ಕಡಿಮೆ. ಲಕ್ಷಾಂತರ ಜನ ಹೊರಗಿನಿಂದ ಬಂದರೆ ಸಣ್ಣ ಊರುಗಳು ತಡೆಯುವುದೆಂತು? ಊಟ, ತಿಂಡಿ, ನೀರನ್ನು ಹೇಗೆ ಪೂರೈಸೀತು ಯಲಬುರ್ಗಾ ಪಟ್ಟಣ? ಬಂದ ಅತಿಥಿಗಳು ಹಸಿವಿನಿಂದ ಇರಬಾರದೆಂದು ಅಕ್ಕಂದಿರು, ತಾಯಂದಿರು ಅಡುಗೆ ಮನೆ ಸೇರಿದರು. ಟಪ್ಪ ಟಪ್ಪ ಎಂದು ರೊಟ್ಟಿ ಬಡಿಯುವ ಸದ್ದು ಇಡೀ ಯಲಬುರ್ಗಾದಲ್ಲಿ ಕೇಳಲಾರಂಭಿಸಿತು. ಜಾತಿ ಮತ ಪಂಥವೆನ್ನದೆ ಎಲ್ಲರ ಮನೆಯ ತಲಬಾಗಿಲುಗಳು ತೆರೆದುಕೊಂಡವು. ಮನೆಯ ಮಕ್ಕಳು ರಸ್ತೆಯಲ್ಲಿ ಹೋಗುವವರಿಗೆ ‘ಕಾಕಾ, ಮುತ್ತ್ಯಾ, ಊಟ ತಯಾರಿದೆ, ಊಟ ಮಾಡ ಬರ್ರಿ’ ಎಂದು ಕೈ ಹಿಡಿದು ಎಳೆದುಕೊಂಡು ಹೋಗುತ್ತಿದ್ದವು. ರೊಟ್ಟಿ ಬಡಿಯುವ ಕೈಗಳಿಗಾಗಲಿ, ಕೈಹಿಡಿದು ಕರೆಯುವ ಪುಟ್ಟ ಪುಟ್ಟ ಕೈಗಳಿಗಾಗಲಿ ಯಾವ ಜಾತಿಯವರಿಗೆ ಅನ್ನ ಹಾಕುತ್ತಿದ್ದೇವೆ ಎಂದು ಗೊತ್ತಿರಲಿಲ್ಲ. ಅಂದು ಅವರೆಲ್ಲ ಸಾಕ್ಷಾತ್ ಶರಣ ಸಂತತಿಯಾಗಿದ್ದರು. ಅವರು ಒಂದೇ ಸಮಾಜಕ್ಕೆ ಸೀಮಿತವಾಗಿರಲಿಲ್ಲ. “ಇಡೀ ಪಟ್ಟಣವೇ ದಾಸೋಹ ಭವನವಾಗಿತ್ತು” ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ಗದುಗಿನ ಪೊಲೀಸ್ ಪಾಟೀಲರು.
ಮಧ್ಯಾಹ್ನ ಸಭೆ ಪ್ರಾರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ದೂರದಿಂದ ಬಂದಿದ್ದರು ಸಂಸದರಾದ ಶ್ರೀ ಎಸ್. ಬಿ. ಸಿದ್ನಾಳರು.
ಮುಂದುವರಿಯುವುದು…….

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ



