ಬೆಳಗಾವಿ ಜಿಲ್ಲೆಯ ಬೈಲಹೊಂಗಲ ರಸ್ತೆಯಲ್ಲಿ ಬೈಕ್ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಲೆ ಸುತ್ತು ಬಂದು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಯರಗಟ್ಟಿ ತಾಲೂಕಿನ ರೈನಾಪುರ ಗ್ರಾಮದ ಸುವರ್ಣ ದುರಗಪ್ಪ ಕೆಳಗೇರಿ (45) ಮೃತಪಟ್ಟವರು.
ಅದೇ ಗ್ರಾಮದ ಹನಮಂತ ಶ್ಯಾಮಣ್ಣ ಕಾರೆಪ್ಪನವರ (21) ಬೈಕ್ ಚಲಾಯಿಸುತ್ತಿದ್ದನು. ಬೈಕ್ ವೇಗವಾಗಿ ಚಲಿಸುತ್ತಿದ್ದ ವೇಳೆ ಮಹಿಳೆಗೆ ತಲೆ ಸುತ್ತು ಬಂದಿದ್ದು, ಈ ವೇಳೆ ಅವರು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



