ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ವಾರ ತ್ರಿಪುರಾದ ಕಾಕ್ ಬರೋಕ್ ಭಾಷೆಯ ಕವಿ ಶೇಫಾಲಿ ದೇಬರ್ಮಾ ಅವರ ಕವಿತೆ “ಏಕೆಂದರೆ ನಾನು ಹೆಣ್ಣು”. ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಹೆಚ್ ಸಿ ಭಾಗ್ಯ
ನನ್ನ ಪಾದದಡಿಯ *ಯಾಖ್ ತೋಮ್ ಅನ್ನು
ಹುಳುಗಳು ತಿಂದು ಹಾಕಿವೆ
ನಾನು ಬಟ್ಟೆ ನೇಯಲು ಆಗುತ್ತಿಲ್ಲ
ಆದರೂ ಮೋಹಕ ಚಿತ್ತಾರ ಕಸೂತಿಗಳನ್ನು ಹೆಣೆಯಬೇಕೆನಿಸುವುದು
ಏಕೆಂದರೆ ನಾನು ಹೆಣ್ಣು.
ಸುಗ್ಗಿಯಲಿ ಭತ್ತದ ಕೊಯ್ಲು ಆದಾಗ
ನನ್ನ ಸ್ನೇಹಿತರಿಗೆ ಹಿಗ್ಗೋಹಿಗ್ಗು
ನಾನು ಸ್ವರವೆತ್ತಿ ಹಾಡಲಾರೆ ನಿಜ
ಆದರೂ ನಾನು ಹಾಡ ಬಯಸುವೆ
ಏಕೆಂದರೆ ನಾನು ಹೆಣ್ಣು.
ಏಳು ಪರ್ವತಗಳು ತೂಕಡಿಸಿದಾಗ
ಏಳು ನದಿಗಳು* ಲಾಂಗ್ ತುಂಬ ಕನಸು ತುಂಬಿಕೊಂಡು ಬತ್ತಿಹೋಗುವಾಗ
ನಾನು ಉದ್ದೋ ಉದ್ದು ಚಾಚಿಕೊಳ್ಳುವೆ
ಏಕೆಂದರೆ ನಾನು ಹೆಣ್ಣು.
1*ಯಾಖ್ ತೋಮ್= ನೇಯುವಾಗ ಒತ್ತಡವನ್ನು ಸರಿದೂಗಿಸಲು ಪಾದದಡಿ ಹಾಕಿಕೊಳ್ಳುವ ಪಾದಹಾಸು.
2*ಲಾಂಗ್= ಬೆನ್ನ ಹಿಂದೆ ಕಟ್ಟಿಕೊಳ್ಳುವ ಬೆತ್ತದ ಅಥವಾ ಬಿದಿರಿನ ಬುಟ್ಟಿ.





