ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ನಾರ್ವೆ ನಂ.1, ಭಾರತ 157; ಈ ಕುಸಿತಕ್ಕೆ ಕಾರಣಗಳೇನು?

Date:

ನಾರ್ವೆಯು ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ಜೀವನಾಡಿಗಳಾಗಿ ಗೌರವಿಸಿ, ಅವುಗಳಿಗೆ ಸಂಪೂರ್ಣ ರಕ್ಷಣೆ ಮತ್ತು ಆರ್ಥಿಕ ಸ್ವಾಯತ್ತತೆ ನೀಡುವ ಮೂಲಕ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಆದರೆ, ವಿಶ್ವಗುರು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಭಾರತದಲ್ಲಿ ಮಾಧ್ಯಮಗಳ ಮೇಲಿನ ರಾಜಕೀಯ ಒತ್ತಡ, ಕಾರ್ಪೊರೇಟ್ ಹತೋಟಿ ಹಾಗೂ ಪತ್ರಕರ್ತರ ಸುರಕ್ಷತೆಯ ಕೊರತೆಯು ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕ ಮಾತ್ರವಲ್ಲ, ಘನತೆಯನ್ನೂ ಕುಸಿಯುವಂತೆ ಮಾಡಿದೆ.

ಪ್ರಧಾನಿ ಮೋದಿ ಅವರು ನಾರ್ವೆ ಪ್ರವಾಸದಲ್ಲಿದ್ದ ಸಮಯದಲ್ಲಿ ಅವರಿಗೆ ನಾರ್ವೇಜಿಯನ್ ಪತ್ರಕರ್ತೆ ಹೆಲ್ಲೆ ಲಿಂಗ್ ಕೇಳಿದ ಪ್ರಶ್ನೆಗಳು ಮತ್ತು ಮೋದಿ ಅವರ ನಿರುತ್ತರ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೆಲ್ಲೆ ಲಿಂಗ್ ಅವರು ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕದಲ್ಲಿ ನಾರ್ವೆ ದೇಶ ಹೊಂದಿರುವ ಅಗ್ರಸ್ಥಾನವನ್ನು ಉಲ್ಲೇಖಿಸಿದ ಪ್ರಶ್ನೆಯು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ ಮತ್ತು ಅದನ್ನು ಜಾಗತಿಕವಾಗಿ ಹೇಗೆ ಅರ್ಥೈಸಲಾಗುತ್ತದೆ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹೇಗೆ ರೂಪಿಸಲಾಗುತ್ತದೆ ಎಂಬುದರ ಕುರಿತೂ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

- Advertisement -

ಅಂದಹಾಗೆ, ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಕರೆಯಲ್ಪಡುವ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಗತಿಯನ್ನು ಅಳೆಯುವ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ ಪ್ರತಿವರ್ಷ ಜಾಗತಿಕ ಮಾಧ್ಯಮಗಳ ಪರಿಸ್ಥಿತಿಯನ್ನು ವಿವರಿಸುತ್ತದೆ. ಇದನ್ನು ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ (RSF) ಪ್ರಕಟಿಸುತ್ತದೆ. ಆರ್‌ಎಸ್‌ಎಫ್‌ ಸಂಸ್ಥೆಯು 2002ರಿಂದಲೂ ಈ ಸೂಚ್ಯಂಕವು ಜಗತ್ತಿನ 180 ದೇಶಗಳಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಕಾರ್ಯನಿರ್ವಹಿಸುವ ವಾತಾವರಣವನ್ನು ಆಧರಿಸಿ ಅವುಗಳಿಗೆ ಶ್ರೇಯಾಂಕವನ್ನು ನೀಡುತ್ತಾ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಈ ಪಟ್ಟಿಯಲ್ಲಿ ದೇಶಗಳಿಗೆ 0ಯಿಂದ 100ರವರೆಗಿನ ಅಂಕಗಳನ್ನು ನೀಡಲಾಗುತ್ತದೆ. ಇದರಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ದೇಶಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಬಲವಾದ ಮತ್ತು ಪೂರಕವಾದ ವಾತಾವರಣವನ್ನು ಹೊಂದಿವೆ ಎಂಬುದನ್ನು ಸೂಚಿಸುತ್ತದೆ. ಈ ಶ್ರೇಯಾಂಕಗಳನ್ನು ಮಾಧ್ಯಮದ ವರದಿಗಾರಿಕೆಯ ಗುಣಮಟ್ಟ ಅಥವಾ ಅವುಗಳ ಸೈದ್ಧಾಂತಿಕ ಒಲವನ್ನು ಅಳೆಯಲು ಬಳಸದೆ, ಕೇವಲ ಪತ್ರಕರ್ತರಿಗೆ ಅಲ್ಲಿ ಸಿಗುವ ಸ್ವಾತಂತ್ರ್ಯದ ಮಟ್ಟವನ್ನು ಮೌಲ್ಯಮಾಪನ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ ನಾರ್ವೆ ದೇಶವು ಸತತವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ವರ್ಷದಿಂದ ವರ್ಷಕ್ಕೆ ಕೆಳ ಹಂತಕ್ಕೆ ಕುಸಿಯುತ್ತಿದೆ. ಕಳೆದ ವರ್ಷ 153ನೇ ಸ್ಥಾನದಲ್ಲಿದ್ದ ಭಾರತ, ಈಗ 157 ಸ್ಥಾನಕ್ಕೆ ಇಳಿದಿದೆ.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ 92.72 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆ ರಾಷ್ಟ್ರದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಸಂಪೂರ್ಣ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಆರ್‌ಎಸ್‌ಎಫ್‌ ಒತ್ತಿಹೇಳಿದೆ. ನಂತರ ಸ್ಥಾನಗಳಲ್ಲಿ ನೆದರ್ಲ್ಯಾಂಡ್ಸ್ (88.92), ಎಸ್ಟೋನಿಯಾ (88.54), ಡೆನ್ಮಾರ್ಕ್ (88.47), ಸ್ವೀಡನ್ (87.61), ಫಿನ್ಲ್ಯಾಂಡ್ (86.22), ಐರ್ಲೆಂಡ್ (85.93), ಸ್ವಿಟ್ಜರ್ಲ್ಯಾಂಡ್ (84.83), ಲಕ್ಸೆಂಬರ್ಗ್ (84.14) ಹಾಗೂ ಪೋರ್ಚುಗಲ್ (83.71) ರಾಷ್ಟ್ರಗಳಿವೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು 31.28 ಅಂಕಗಳೊಂದಿಗೆ 157ನೇ ಸ್ಥಾನಕ್ಕೆ ಕುಸಿದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಸ್ವಾಯತ್ತತೆಗೆ ಸಂಬಂಧಿಸಿದಂತೆ ನಾರ್ವೆ ಮತ್ತು ಭಾರತದ ನಡುವೆ ಇರುವ ಬೃಹತ್ ವ್ಯತ್ಯಾಸ ಮತ್ತು ಅದಕ್ಕೆ ಕಾರಣವಾಗಿರುವ ರಾಜಕೀಯ, ಸಾಮಾಜಿಕ ಹಾಗೂ ಕಾನೂನಿನ ಚೌಕಟ್ಟುಗಳನ್ನು ನೋಡುವ ಅಗತ್ಯವೂ ಇದೆ.

ನಾರ್ವೆ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವುದು ಹೇಗೆ?

ನಾರ್ವೆ ದೇಶವು ಪತ್ರಿಕಾ ಸ್ವಾತಂತ್ರ್ಯದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆಯುತ್ತಿರುವ ಯಶೋಗಾಥೆಗೆ ಕೇವಲ ಆ ದೇಶದ ಆರ್ಥಿಕ ಸಮೃದ್ಧಿ ಕಾರಣವಲ್ಲ. ಬದಲಿಗೆ, ಅಲ್ಲಿನ ಅತ್ಯಂತ ಭದ್ರವಾದ ಸಾಂಸ್ಥಿಕ ಮತ್ತು ಸಾಂವಿಧಾನಿಕ ಚೌಕಟ್ಟು ಮುಖ್ಯ ಕಾರಣ. ಜಗತ್ತಿನಲ್ಲೇ ಅತ್ಯಂತ ಹಳೆಯ ಮತ್ತು ಇಂದಿಗೂ ಚಾಲ್ತಿಯಲ್ಲಿರುವ ಸಂವಿಧಾನಗಳಲ್ಲಿ ಒಂದಾದ ನಾರ್ವೆಯ ಸಂವಿಧಾನದ 100ನೇ ವಿಧಿಯು ಪ್ರತಿಯೊಬ್ಬ ಪ್ರಜೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಹಕ್ಕನ್ನು ಖಾತರಿಪಡಿಸುತ್ತದೆ. ಅಲ್ಲಿನ ರಾಜಕೀಯ ವ್ಯವಸ್ಥೆಯು ಎಷ್ಟೇ ಬದಲಾದರೂ, ಯಾವುದೇ ಸಿದ್ಧಾಂತದ ಸರ್ಕಾರ ಅಧಿಕಾರಕ್ಕೆ ಬಂದರೂ ಮಾಧ್ಯಮಗಳ ಆಂತರಿಕ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮಾಧ್ಯಮಗಳನ್ನು ನಿಯಂತ್ರಿಸುವ ಯಾವುದೇ ನೇರ ಅಥವಾ ಪರೋಕ್ಷ ಪ್ರಯತ್ನಕ್ಕೆ ಕೈಹಾಕುವುದಿಲ್ಲ. ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರಿ ಪ್ರಾಯೋಜಿತ ಸೆನ್ಸಾರ್‌ಶಿಪ್ ಮಂಡಳಿಗಳಾಗಲಿ ಅಥವಾ ಪತ್ರಕರ್ತರ ಧ್ವನಿ ಅಡಗಿಸುವ ಕಠಿಣ ಕಾನೂನುಗಳಾಗಲಿ ಅಲ್ಲಿ ಅಸ್ತಿತ್ವದಲ್ಲಿಲ್ಲ.

ಆದ್ದರಿಂದ, ಆಡಳಿತಾರೂಢ ಸರ್ಕಾರ ಅಥವಾ ಪ್ರಧಾನಮಂತ್ರಿಯನ್ನು ಕಟುವಾಗಿ ಪ್ರಶ್ನಿಸುವುದು ಅಲ್ಲಿನ ಪತ್ರಿಕೋದ್ಯಮದ ಸಹಜ ಸಂಸ್ಕೃತಿಯಾಗಿದೆ. ರಾಜಕಾರಣಿಗಳು ಕೂಡ ಅದನ್ನು ಪ್ರಜಾಪ್ರಭುತ್ವದ ಒಳಿತಿಗಾಗಿ ಮುಕ್ತವಾಗಿ ಸ್ವೀಕರಿಸುತ್ತಾರೆ. ಮಾಧ್ಯಮ ಸಂಸ್ಥೆಗಳು ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ಯಾವುದೇ ರಾಜಕೀಯ ಪಕ್ಷದ ಅಥವಾ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗೆ ಬಲಿಯಾಗದೆ ಮುಕ್ತವಾಗಿ ಕಾರ್ಯನಿರ್ವಹಿಸುತ್ತವೆ.

ಮತ್ತೊಂದು ಪ್ರಮುಖ ಕಾರಣವೆಂದರೆ, ನಾರ್ವೆಯಲ್ಲಿ ‘ವಿಶಿಷ್ಟ ಆರ್ಥಿಕ ಸಬ್ಸಿಡಿ ನೀತಿ ಮತ್ತು ಕಾರ್ಪೊರೇಟ್ ಮುಕ್ತ ವಾತಾವರಣ’ವಿದೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಮಾಧ್ಯಮಗಳು ದೊಡ್ಡ ಕಾರ್ಪೊರೇಟ್ ಕಂಪನಿಗಳ ಧನಸಹಾಯ ಅಥವಾ ಸರ್ಕಾರದ ಬೃಹತ್ ಜಾಹೀರಾತುಗಳ ಮೇಲೆ ಬದುಕುತ್ತವೆ. ಇದರಿಂದಾಗಿ ಜಾಹೀರಾತು ನೀಡುವವರ ಹಿತಾಸಕ್ತಿಗೆ ತಕ್ಕಂತೆ ಸುದ್ದಿಗಳು ಬದಲಾಗುತ್ತವೆ. ಆದರೆ, ನಾರ್ವೆ ಈ ಸಮಸ್ಯೆಯನ್ನು ತಡೆಯಲು ಅತ್ಯಂತ ವಿಶಿಷ್ಟವಾದ ‘ಮಾಧ್ಯಮ ಧನಸಹಾಯ ನೀತಿ’ಯನ್ನು ಅಳವಡಿಸಿಕೊಂಡಿದೆ. ಅಲ್ಲಿನ ಸರ್ಕಾರವು ಸಣ್ಣ ಪತ್ರಿಕೆಗಳಿಗೆ, ಪ್ರಾದೇಶಿಕ ಸುದ್ದಿ ಸಂಸ್ಥೆಗಳಿಗೆ ಹಾಗೂ ಭಿನ್ನ ಸಿದ್ಧಾಂತಗಳ ಮಾಧ್ಯಮಗಳಿಗೆ ನೇರ ಆರ್ಥಿಕ ಸಬ್ಸಿಡಿಯನ್ನು ನೀಡುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಹಣವನ್ನು ಹಂಚಿಕೆ ಮಾಡಲು ಸ್ವತಂತ್ರ ಮಂಡಳಿ ಇದೆ. ಸರ್ಕಾರಕ್ಕೆ ಇಷ್ಟ ಬಂದವರಿಗೆ ಹಣ ನೀಡುವುದು, ತನ್ನನ್ನು ವಿಮರ್ಶಿಸುವವರ ಜಾಹೀರಾತು ಕಡಿತಗೊಳಿಸುವಂತಹ ತಾರತಮ್ಯಕ್ಕೆ ಅಲ್ಲಿ ಅವಕಾಶವೇ ಇಲ್ಲ. ಈ ಆರ್ಥಿಕ ಭದ್ರತೆಯಿಂದಾಗಿ ನಾರ್ವೆಯ ಪತ್ರಕರ್ತರು ಯಾವುದೇ ಉದ್ಯಮಿಗಳ ಅಥವಾ ರಾಜಕಾರಣಿಗಳ ಹಂಗಿಲ್ಲದೆ, ಕೇವಲ ಸತ್ಯದ ಪರವಾಗಿ ವರದಿಗಾರಿಕೆ ಮಾಡಲು ಸಾಧ್ಯವಾಗಿದೆ.

ಅಂತೆಯೇ, ನಾರ್ವೆಯಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರಿ ಕಾನೂನುಗಳಿಲ್ಲದಿದ್ದರೂ, ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತವೆ. ಇದಕ್ಕೆ ಕಾರಣ ಅಲ್ಲಿನ ‘ನಾರ್ವೇಜಿಯನ್ ಪ್ರೆಸ್ ಕಂಪ್ಲೇಂಟ್ಸ್ ಕಮಿಷನ್’ (PFU) ಎಂಬ ಸ್ವಯಂ-ನಿಯಂತ್ರಕ ಸಂಸ್ಥೆ. ಈ ಸಂಸ್ಥೆಯನ್ನು ಪತ್ರಕರ್ತರು ಮತ್ತು ಮಾಧ್ಯಮ ಮಾಲೀಕರೇ ಸೇರಿ ಮುನ್ನಡೆಸುತ್ತಾರೆ. ಯಾವುದೇ ಪ್ರಜೆಗೆ ಮಾಧ್ಯಮವೊಂದರ ವರದಿಯ ಬಗ್ಗೆ ಆಕ್ಷೇಪವಿದ್ದರೆ ಅಥವಾ ಅದು ಸುಳ್ಳು ಸುದ್ದಿ ಎಂದು ಅನಿಸಿದರೆ ಈ ಮಂಡಳಿಗೆ ದೂರು ನೀಡಬಹುದು. ಇಲ್ಲಿ ತನಿಖೆ ನಡೆದು ತಪ್ಪಿತಸ್ಥ ಮಾಧ್ಯಮಕ್ಕೆ ದಂಡ ಅಥವಾ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆದೇಶಿಸಲಾಗುತ್ತದೆ. ಮಾಧ್ಯಮ ರಂಗವೇ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಇಂತಹ ಬಲವಾದ ಸ್ವಯಂ-ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವುದರಿಂದ, ಸಾರ್ವಜನಿಕರಲ್ಲಿ ಮಾಧ್ಯಮಗಳ ಮೇಲಿನ ನಂಬಿಕೆ ಅತ್ಯಂತ ಹೆಚ್ಚಾಗಿದೆ. ಯೆಲ್ಲೋ ಜರ್ನಲಿಸಂ ಅಥವಾ ಟಿಆರ್‌ಪಿಗಾಗಿ ಸುದ್ದಿ ಸೃಷ್ಟಿಸುವ ಪ್ರವೃತ್ತಿ ಅಲ್ಲಿ ಇಲ್ಲ.

ಈ ಲೇಖನ ಓದಿದ್ದೀರಾ?: ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

ಗಮನಾರ್ಹ ಸಂಗತಿ ಎಂದರೆ, ಜಾಗತಿಕ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿರಲು ಪತ್ರಕರ್ತರ ಜೀವಕ್ಕೆ ಇರುವ ರಕ್ಷಣೆ ಮತ್ತೊಂದು ಪ್ರಮುಖ ಕಾರಣ. ನಾರ್ವೆಯಲ್ಲಿ ಭ್ರಷ್ಟಾಚಾರ ಅಥವಾ ಅಪರಾಧ ಜಗತ್ತಿನ ವಿರುದ್ಧ ವರದಿ ಮಾಡುವ ಪತ್ರಕರ್ತರಿಗೆ ದೈಹಿಕ ಹಲ್ಲೆ, ಪ್ರಾಣ ಬೆದರಿಕೆ ಅಥವಾ ಆಡಳಿತ ವ್ಯವಸ್ಥೆಯಿಂದ ಸುಳ್ಳು ಮೊಕದ್ದಮೆಗಳ ಭಯವಿಲ್ಲ. ಜೊತೆಗೆ, ಅಲ್ಲಿನ ‘ಮಾಹಿತಿ ಹಕ್ಕು ಕಾಯ್ದೆ’ ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ, ಸರ್ಕಾರದ ಯಾವುದೇ ರಹಸ್ಯ ದಾಖಲೆಗಳನ್ನು ಅಥವಾ ಸಾರ್ವಜನಿಕ ಹಣದ ವೆಚ್ಚದ ವಿವರಗಳನ್ನು ಪತ್ರಕರ್ತರು ಅತ್ಯಂತ ಸುಲಭವಾಗಿ ಮತ್ತು ಪಾರದರ್ಶಕವಾಗಿ ಪಡೆದುಕೊಳ್ಳಬಹುದು. ಅಧಿಕಾರಿಗಳು ಮಾಹಿತಿಯನ್ನು ಮುಚ್ಚಿಡುವಂತಿಲ್ಲ. ಆದರೆ, ಇದರಲ್ಲಿನ ಯಾವುದೇ ಒಂದು ಅಂಶವೂ ಭಾರತದಲ್ಲಿಲ್ಲ. ಇದ್ದರೂ ಅನುಷ್ಠಾನಕ್ಕೆ ಬರುವುದಿಲ್ಲ.

ಭಾರತದ ಶ್ರೇಯಾಂಕ ಕುಸಿಯುತ್ತಲೇ ಇರುವುದೇಕೆ?

ನಾರ್ವೆಯ ಶ್ರೇಯಾಂಕ ಹೆಚ್ಚುತ್ತಲೇ ಇರುವಾಗ, ಭಾರತದ ಶ್ರೇಯಾಂಕ ಕುಸಿಯುತ್ತಲೇ ಇದೆ. ಕೇಂದ್ರದಲ್ಲಿ ಮೊದಲ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ, 2014ರಲ್ಲಿ ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 140ನೇ ಸ್ಥಾನದಲ್ಲಿತ್ತು. ಆದರೆ, ಕಳೆದ 12 ವರ್ಷಗಳಲ್ಲಿ ನಿರಂತರ ಕುಸಿತದೊಂದಿಗೆ ಈಗ 157 ಸ್ಥಾನಕ್ಕೆ ಬಿದ್ದಿದೆ. ಇದು, ಅಕ್ಷರಶಃ ಆತಂಕಕಾರಿ ಸಂಗತಿ.

ಭಾರತದ ಕಳಪೆ ಪ್ರದರ್ಶನಕ್ಕೆ ಪ್ರಮುಖವಾಗಿ ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ದೈಹಿಕ ದೌರ್ಜನ್ಯಗಳು ಮತ್ತು ಕಾನೂನು ಕ್ರಮಗಳು ಕಾರಣವೆಂದು ವಿಶ್ಲೇಷಿಸಲಾಗುತ್ತದೆ. ಪ್ರಾದೇಶಿಕ ಮಟ್ಟದಲ್ಲಿ ಭ್ರಷ್ಟಾಚಾರ, ಮರಳು ಮಾಫಿಯಾ ಅಥವಾ ರಾಜಕೀಯ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ತಳಮಟ್ಟದ ವರದಿಗಾರರು ಮತ್ತು ಸೋಷಿಯಲ್ ಮೀಡಿಯಾ ಪತ್ರಕರ್ತರು ನಿರಂತರವಾಗಿ ಬೆದರಿಕೆ, ಹಲ್ಲೆ ಹಾಗೂ ಕೊಲೆ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕ ಮಾಧ್ಯಮ ಕಾವಲು ಸಂಸ್ಥೆಗಳ ವರದಿಗಳ ಪ್ರಕಾರ, ಪತ್ರಕರ್ತರಿಗೆ ಭಾರತವು ಇಂದಿಗೂ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲೇ ಮುಂದುವರಿದಿದೆ.

ಕಳೆದ ಕೆಲವು ವರ್ಷಗಳಲ್ಲಿ ಪತ್ರಕರ್ತರು ಮತ್ತು ಸ್ವತಂತ್ರ ಮಾಧ್ಯಮ ಸಂಸ್ಥೆಗಳ ವಿರುದ್ಧ ದೇಶದ ಕಠಿಣ ಕಾನೂನುಗಳನ್ನು ಬಳಸುವ ಪ್ರವೃತ್ತಿ ಗಣನೀಯವಾಗಿ ಹೆಚ್ಚಾಗಿದೆ. ಸರ್ಕಾರದ ನೀತಿಗಳನ್ನು ಟೀಕಿಸುವ ಅಥವಾ ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸುವ ಪತ್ರಕರ್ತರ ವಿರುದ್ಧ ದೇಶದ್ರೋಹದ ಮೊಕದ್ದಮೆಗಳು, ಯುಎಪಿಎ ರೀತಿಯ ಕಠಿಣ ಭಯೋತ್ಪಾದನಾ ನಿರೋಧಕ ಕಾಯ್ದೆಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಅತ್ಯಂತ ಕ್ಷುಲ್ಲಕ ಕಾರಣಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೂ ಪತ್ರಕರ್ತರನ್ನು ಬಂಧಿಸಿ ದೀರ್ಘಕಾಲದವರೆಗೆ ಜೈಲಿನಲ್ಲಿಡುವ ಪ್ರವೃತ್ತಿ ಹೆಚ್ಚಾಗಿದೆ. ಜೊತೆಗೆ, ತೆರಿಗೆ ವಂಚನೆಯ ಆರೋಪದಡಿ ಪ್ರಮುಖ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ನಿರಂತರ ದಾಳಿ ನಡೆಸುವುದು ಎಗ್ಗಿಲ್ಲದೆ ಮುಂದುವರೆದಿದೆ. ಇದೆಲ್ಲವೂ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ತಂತ್ರವಾಗಿ ಬಳಕೆಯಾಗುತ್ತಿವೆ.

ಕೋಮು ರಾಜಕಾರಣದ ವಿರುದ್ಧ ಗಟ್ಟಿ ದನಿಯಲ್ಲಿ ಬರೆಯುತ್ತಿದ್ದ ಗೌರಿ ಲಂಕೇಶ್‌ರಂತಹ ಪತ್ರಕರ್ತರನ್ನು ಹತ್ಯೆಗಯ್ಯಲಾಗಿದೆ. ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಕಾಶ್ಮೀರದ ಇರ್ಫಾನ್ ಮೆಹ್ರಾಜ್ ಮತ್ತು ಫಹಾದ್ ಶಾ, ಜಾರ್ಖಂಡ್‌ನ ರೂಪೇಶ್ ಕುಮಾರ್ ಸಿಂಗ್, ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ, ಕೇರಳದ ಸಿದ್ದಿಕ್ ಕಪ್ಪನ್‌ರಂತಹ ಹಲವಾರು ಪತ್ರಕರ್ತರು ಜೈಲು ಸೇರಿದ್ದಾರೆ ಮತ್ತು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಕಾನೂನು ಪ್ರಕ್ರಿಯೆಗಳ ಕಿರುಕುಳವು ಪತ್ರಕರ್ತರು ತಾವಾಗಿಯೇ ‘ಸ್ವಯಂ-ಸೆನ್ಸಾರ್ಶಿಪ್’ ಮಾಡಿಕೊಳ್ಳುವಂತೆ ಮಾಡಿದೆ. ಅಂದರೆ, ತೊಂದರೆ ತಪ್ಪಿಸಿಕೊಳ್ಳಲು ಸತ್ಯವನ್ನು ಮರೆಮಾಚುವ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ.

ಅದಷ್ಟೇ ಅಲ್ಲ, ಭಾರತೀಯ ಮಾಧ್ಯಮಗಳು ಕಾರ್ಪೊರೇಟೀಕರಣ ಮತ್ತು ‘ಗೋದಿ ಮೀಡಿಯಾ’ಗಳಾಗಿ ಮಾರ್ಪಟ್ಟಿವೆ. ಇದು ಶ್ರೇಯಾಂಕದ ಕುಸಿತಕ್ಕೆ ಮತ್ತೊಂದು ಮುಖ್ಯ ಕಾರಣವಾಗಿದೆ.

ಪ್ರಸ್ತುತ ಭಾರತದ ಬಹುತೇಕ ಪ್ರಮುಖ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಅಂಬಾನಿ-ಅದಾನಿಯಂತಹ ದೇಶದ ಬೃಹತ್ ಕಾರ್ಪೊರೇಟ್ ಉದ್ಯಮಿಗಳ ಒಡೆತನದಲ್ಲಿವೆ. ಈ ಮಾಧ್ಯಮ ಸಂಸ್ಥೆಗಳ ಮುಖ್ಯ ಉದ್ದೇಶ ಜನಸಾಮಾನ್ಯರ ಧ್ವನಿಯಾಗುವುದಕ್ಕಿಂತ ಹೆಚ್ಚಾಗಿ ಲಾಭ ಗಳಿಸುವುದು ಮತ್ತು ಆಳುವವರ ಪರಿವಾಗಿ ತುತ್ತೂರಿ ಊದುವುದೇ ಆಗಿದೆ. ಸರ್ಕಾರದ ದೊಡ್ಡ ಮಟ್ಟದ ಜಾಹೀರಾತುಗಳ ಹಣ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಮೇಲೆ ದಂಬಾಲು ಬಿದ್ದಿವೆ.

ಈ ಲೇಖನ ಓದಿದ್ದೀರಾ?: ಕೋರ್ಟ್‌ಗೂ ಮುನ್ನವೇ ‘AI’ ತೀರ್ಪು: ದರ್ಶನ್ ಪ್ರಕರಣವನ್ನು ‘ಸಿನಿಮಾ’ ಮಾಡುತ್ತಿರುವ ಮಾಧ್ಯಮಗಳು!

ಭಾರತೀಯ ಮಾಧ್ಯಮಗಳು ಜನಸಾಮಾನ್ಯರ ನೈಜ ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಕುಸಿತ, ಹಣದುಬ್ಬರ, ಜನವಿರೋಧಿ ನೀತಿಗಳು ಹಾಗೂ ಶಿಕ್ಷಣ-ಆರೋಗ್ಯದಂತಹ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸುವ ಬದಲು, ರಾಜಕೀಯ ಧ್ರುವೀಕರಣ, ಕೋಮು ದ್ವೇಷ ಪ್ರಚೋದನೆ ಹಾಗೂ ಸರ್ಕಾರದ ಪರ ಏಕಪಕ್ಷೀಯ ಪ್ರಚಾರದಲ್ಲಿ ತೊಡಗುತ್ತಿವೆ.

ಸಾಂಪ್ರದಾಯಿಕ ಮಾಧ್ಯಮಗಳು ಸರ್ಕಾರದ ಪರವಾಗಿ ಬದಲಾದಾಗ, ದೇಶದಲ್ಲಿ ಸತ್ಯವನ್ನು ಹೊರಹಾಕಲು ಯೂಟ್ಯೂಬ್ ಮತ್ತು ಸ್ವತಂತ್ರ ವೆಬ್‌ಸೈಟ್‌ಗಳಂತಹ ಡಿಜಿಟಲ್ ಮಾಧ್ಯಮಗಳು ಮುಂಚೂಣಿಗೆ ಬಂದಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸ ಐಟಿ ನಿಯಮಗಳ ಮೂಲಕ ಡಿಜಿಟಲ್ ಮಾಧ್ಯಮಗಳ ಮೇಲೂ ಸರ್ಕಾರ ತನ್ನ ಬಿಗಿಹಿಡಿತವನ್ನು ಸಾಧಿಸಲು ಹವಣಿಸುತ್ತಿದೆ. ತನಗೆ ಇಷ್ಟವಿಲ್ಲದ ವೀಡಿಯೊಗಳನ್ನು ಬ್ಲಾಕ್ ಮಾಡುವುದು, ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಮಾನತುಗೊಳಿಸುವುದು ಹಾಗೂ ಮುಕ್ತವಾಗಿ ಆಕ್ರೋಶ ಹೊರಹಾಕುವ ಯುವಜನರು ಮತ್ತು ಸ್ವತಂತ್ರ ಪತ್ರಕರ್ತರ ಧ್ವನಿಯನ್ನು ತಾಂತ್ರಿಕವಾಗಿ ಹತ್ತಿಕ್ಕುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಮಾಹಿತಿ ಹರಿವಿನ ಮೇಲಿನ ಇಂತಹ ಡಿಜಿಟಲ್ ಕಣ್ಗಾವಲು ಕೂಡ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ದೊಡ್ಡ ಹೊಡೆತ ನೀಡಿದೆ.

ನಾರ್ವೆಯು ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ಜೀವನಾಡಿಯಾಗಿ ಗೌರವಿಸಿ, ಅವುಗಳಿಗೆ ಸಂಪೂರ್ಣ ರಕ್ಷಣೆ ಮತ್ತು ಆರ್ಥಿಕ ಸ್ವಾಯತ್ತತೆ ನೀಡುವ ಮೂಲಕ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಆದರೆ, ವಿಶ್ವಗುರು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಭಾರತದಲ್ಲಿ ಮಾಧ್ಯಮಗಳ ಮೇಲಿನ ರಾಜಕೀಯ ಒತ್ತಡ, ಕಾರ್ಪೊರೇಟ್ ಹತೋಟಿ ಹಾಗೂ ಪತ್ರಕರ್ತರ ಸುರಕ್ಷತೆಯ ಕೊರತೆಯು ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕ ಮಾತ್ರವಲ್ಲ, ಘನತೆಯನ್ನೂ ಕುಸಿಯುವಂತೆ ಮಾಡಿದೆ. ಮೋದಿ ಸೇರಿದಂತೆ ದೇಶದ ನಾಯಕರು ಜಾಗತಿಕ ವೇದಿಕೆಯಲ್ಲಿ ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದು ಹೆಮ್ಮೆಯಿಂದ ಕರೆದುಕೊಳ್ಳುವಾಗ, ಆಂತರಿಕ ಪತ್ರಿಕಾ ಸ್ವಾತಂತ್ರ್ಯವನ್ನು ಗಮನಿಸಬೇಕಾದ ಅಗತ್ಯವಂತೂ ಇದೆ…!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...