ನಮ್ಮ ಹಿರಿಯರು ಪ್ರಕೃತಿಯನ್ನ ನೋಡಿ ಮಳೆ, ಬೆಳೆ ಮತ್ತು ಬರಗಾಲದ ಬಗ್ಗೆ ಹೇಳುತ್ತಿದ್ದ ನುಡಿಗಟ್ಟುಗಳ ಬಗ್ಗೆ ನಾವ್ಯಾರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಏನೋ ಹೇಳುವರಲ್ಲ ಎಂದು ಕೇಳಿ ಹ್ಞೂಂಗುಡುತ್ತೇವಷ್ಟೇ. ಆದರೆ, ಅದರ ಹಿಂದೆ ಆಧುನಿಕ ವಿಜ್ಞಾನಕ್ಕೂ ನಿಲುಕದ ಅದ್ಭುತ ಪರಿಸರ ಜ್ಞಾನ ಅಡಗಿರುತ್ತೆಂದರೆ ನಂಬಲೇಬೇಕು. ಸಸ್ಯಗಳ ‘ಉಳಿವಿನ ತಂತ್ರ’ (Survival Mechanism), ಪ್ರಾಣಿ-ಪಕ್ಷಿಗಳ ಹವಾಮಾನ ಮುನ್ಸೂಚನಾ ಸಾಮರ್ಥ್ಯ ಗುರುತಿಸಿಸುವುದರೊಂದಿಗೆ ಅವರು ಪ್ರಕೃತಿಯೊಂದಿಗೇ ಬೆರೆತು ಬಾಳುತ್ತಿದ್ದರು. ಮರೆತುಹೋದ ಪ್ರಕೃತಿಯ ಭಾಷೆಯನ್ನ ಮತ್ತೆ ಮೆಲುಕೋಣ!
“ಈ ವರ್ಷ ಮರದ್ ತುಂಬಾ ಎಲೆ ಕಾಣ್ದಂಗೆ ಬರೀ ನೇರಳೆ ಹಣ್ಣೇ ತುಂಬ್ಕೊಂಡವಲ್ಲ, ಬರ್ಗಾಲ ಬರದ್ ಗ್ಯಾರಂಟಿ ಅಂದಂಗಾಯ್ತು!” ಎಂದು ಹಳ್ಳಿಯ ಹಿರಿಯರೊಬ್ಬರು ಹೇಳಿದರೆ, ನಾವು ಅದನ್ನು ಬರೀ ಹಳೇ ಕಾಲದ ನಂಬಿಕೆ ಎಂದು ಲಘುವಾಗಿ ಪರಿಗಣಿಸುತ್ತೇವೆ. ಆದರೆ, ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಪ್ರಕೃತಿಯನ್ನು ಪಠ್ಯಪುಸ್ತಕವನ್ನಾಗಿ ಓದುತ್ತಿದ್ದ ಪರಿ ನಮಗೆ ತಿಳಿದಿದೆಯೇ? ಪ್ರಕೃತಿಯಲ್ಲಿನ ಸಣ್ಣ ಬದಲಾವಣೆಗಳು ಮುಂಬರುವ ಅನಾಹುತಗಳ ಅಥವಾ ಶುಭ ಸುದ್ದಿಗಳ ‘ಮುನ್ಸೂಚನಾ ರೇಡಾರ್’ಗಳಾಗಿ ಹೇಗೆ ಕೆಲಸ ಮಾಡುತ್ತವೆ ಎಂಬುದು ವಿಜ್ಞಾನದ ದೃಷ್ಟಿಯಿಂದಲೂ ರೋಚಕ ಸಂಗತಿ. ಅತಿಯಾದ ನೇರಳೆ ಫಸಲು, ಮಂಡಿ ನೋವಿನಿಂದ ತಿಳಿಯುವ ಮಳೆ, ಪ್ರಾಣಿ-ಪಕ್ಷಿಗಳ ವಿಚಿತ್ರ ವರ್ತನೆಗಳ ಹಿಂದಿರುವ ಆ ಅದ್ಭುತ ವೈಜ್ಞಾನಿಕ ಸತ್ಯಗಳನ್ನು ಎಂದೂ ಗಂಭೀರವಾಗಿ ಆಲೋಚಿಸಿರುವುದಿಲ್ಲ.
ಹಿರಿಯರು ಹೇಳುತ್ತಿದ್ದ ಪ್ರತಿಯೊಂದರ ಹಿಂದೆಯೂ ಪ್ರಕೃತಿಯ ಒಂದು ರೋಚಕ ‘ಸರ್ವೈವಲ್ ಗೇಮ್’ ಅಡಗಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಪ್ರಕೃತಿಯು ತಾನು ಸಮತೋಲನ ಕಳೆದುಕೊಂಡಾಗ ಮನುಷ್ಯನಿಗೆ ಅಥವಾ ಪರಿಸರಕ್ಕೆ ಸಣ್ಣ ಸಣ್ಣ ಸುಳಿವುಗಳನ್ನು ನೀಡುತ್ತಲೇ ಇರುತ್ತದೆ. ನೇರಳೆ ಹಣ್ಣಿನ ಅತಿಯಾದ ಇಳುವರಿ ಎಂದರೆ ಅದು ಬರೀ ಒಳ್ಳೆಯ ಫಸಲು ಎಂದರ್ಥವಲ್ಲ, ಆ ಮರ ತಾನು ಎದುರಿಸುತ್ತಿರುವ ಯಾವುದೋ ಒಂದು ಆಂತರಿಕ ಒತ್ತಡವನ್ನು ಹೊರಹಾಕುತ್ತಿದೆ ಎಂದರ್ಥ. ಸಸ್ಯಶಾಸ್ತ್ರದ ಭಾಷೆಯಲ್ಲಿ ಇದನ್ನು ‘ಮಾಸ್ಟ್ ಸೀಡಿಂಗ್’ ಎಂದು ಕರೆಯುತ್ತಾರೆ. ಮರವು ಮುಂದೆ ತೀವ್ರ ಬರಗಾಲ ಬರಲಿದೆ ಅಥವಾ ಮಣ್ಣಿನಲ್ಲಿ ನೀರಿನಂಶ ಕಡಿಮೆಯಾಗಲಿದೆ ಎಂಬುದನ್ನು ತನ್ನ ಬೇರುಗಳ ಮೂಲಕವೇ ಗ್ರಹಿಸುತ್ತದೆ. ಆಗ ಆ ಮರ ತಾನು ಸತ್ತರೂ ಪರವಾಗಿಲ್ಲ, ತನ್ನ ವಂಶದ ಬೀಜಗಳಾದರೂ ಉಳಿಯಬೇಕು ಎಂಬ ಬಯಕೆಯಿಂದ ತನ್ನಲ್ಲಿರುವ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡು ವಿಪರೀತವಾಗಿ ಹಣ್ಣು ಮತ್ತು ಬೀಜಗಳನ್ನು ಉತ್ಪಾದಿಸುತ್ತದೆ. ಇದು ಪ್ರಕೃತಿಯ ಒಂದು ಸ್ವಯಂ-ರಕ್ಷಣಾ ತಂತ್ರ. ಬದುಕಿನ ಅಸ್ತಿತ್ವ ಉಳಿಸಿಕೊಳ್ಳಲು ಸಸ್ಯಗಳು ನಡೆಸುವ ಹೋರಾಟದ ಸಂಕೇತ.

ಮರಗಳು ನಮ್ಮಂತೆ ಸುಮ್ಮನೆ ಒಂದೆಡೆ ನಿಂತಿರುವ ʼಜೀವವಿಲ್ಲದ ವಸ್ತುʼಗಳಲ್ಲ. ಅವುಗಳ ಅಡಿಯಲ್ಲಿ ಭೂಮಿಯ ಒಳಗೆ ಒಂದು ಅದ್ಭುತ ಸಂಪರ್ಕ ಜಾಲವಿದೆ. ವಿಜ್ಞಾನಿಗಳು ಇದನ್ನು ‘ವುಡ್ ವೈಡ್ ವೆಬ್’ ಎಂದು ಕರೆಯುತ್ತಾರೆ. ಇದು ಶಿಲೀಂಧ್ರಗಳ ಸಹಾಯದಿಂದ ನಿರ್ಮಾಣವಾದ ಒಂದು ಜೈವಿಕ ಜಾಲ. ಒಂದು ಮರದ ಮೇಲೆ ಕೀಟಗಳ ದಾಳಿ ನಡೆದರೆ, ಆ ಮರವು ರಾಸಾಯನಿಕ ಸಂಕೇತಗಳ ಮೂಲಕ ಅಕ್ಕಪಕ್ಕದ ಮರಗಳಿಗೆ ಎಚ್ಚರಿಕೆ ನೀಡುತ್ತದೆ. ಅದನ್ನು ಸ್ವೀಕರಿಸುವ ಮರಗಳು ತಕ್ಷಣವೇ ತಮ್ಮ ಎಲೆಗಳಲ್ಲಿ ಕೀಟಗಳನ್ನು ದೂರವಿಡುವ ವಿಷಕಾರಿ ಅಂಶಗಳನ್ನು ಉತ್ಪಾದಿಸುತ್ತವೆ. ಅಷ್ಟೇ ಅಲ್ಲ, ಕಾಡಿನ ದೊಡ್ಡ ದೊಡ್ಡ ತಾಯಿ ಮರಗಳು ಸೂರ್ಯನ ಬೆಳಕು ತಲುಪದ ತಮ್ಮದೇ ಸಣ್ಣ ಸಸಿಗಳಿಗೆ ಬೇರುಗಳ ಮೂಲಕವೇ ಪೋಷಕಾಂಶಗಳನ್ನು ಪೂರೈಸುತ್ತವೆ. ಪ್ರಕೃತಿಯಲ್ಲಿ ಅಂತಹ ಮಮತೆಯ ಬಂಧವಿರುವುದನ್ನು ಕಂಡು ನಮಗೆ ಅರೇ ಹೌದಾ? ಎನ್ನಿಸದೆ ಇರದು. ಇದೇ ರೀತಿ ಪ್ರಾಣಿ ಮತ್ತು ಪಕ್ಷಿಗಳ ನಡವಳಿಕೆಯೂ ನಮಗೆ ಹವಾಮಾನದ ಮುನ್ಸೂಚನೆ ನೀಡುತ್ತವೆ. ಮಳೆ ಬರುವ ಮುನ್ನ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಾಗ ಕಪ್ಪೆಗಳು ಕೂಗಲು ಪ್ರಾರಂಭಿಸುತ್ತವೆ, ಇದು ಸಂತಾನೋತ್ಪತ್ತಿಗೆ ಸೂಕ್ತ ಸಮಯ ಎಂಬುದನ್ನು ಅವು ಅರಿತಿರುತ್ತವೆ. ಹಾಗೆಯೇ ಇರುವೆಗಳು ಭವಿಷ್ಯದ ಮಳೆಯನ್ನು ಗ್ರಹಿಸಿ ತಮ್ಮ ಮೊಟ್ಟೆಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುತ್ತವೆ. ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ರಕ್ಷಣಾ ವ್ಯವಸ್ಥೆ ಇದೆ.
ಚಂದ್ರನ ಸುತ್ತ ಕಾಣಿಸುವ ಆ ಪ್ರಕಾಶಮಾನವಾದ ವಲಯ ಅಥವಾ ʼಹಾಲೋʼ, ಮಂಜಿನ ಕಣಗಳಿಂದಾಗುತ್ತದೆ. ಇದು ಮುಂಬರುವ ಮಳೆ ಅಥವಾ ಚಂಡಮಾರುತದ ಮುನ್ಸೂಚನೆ ಎಂಬುದು ವೈಜ್ಞಾನಿಕವಾಗಿ ಸತ್ಯವಾದದ್ದು. ಬಿದಿರು ಹೂ ಬಿಟ್ಟರೆ ಕ್ಷಾಮ ಬರುತ್ತದೆ ಎಂಬ ಮಾತಿನ ಹಿಂದೆಯೂ ಒಂದು ಗಂಭೀರ ಇತಿಹಾಸವಿದೆ. ಬಿದಿರು ದಶಕಕ್ಕೊಮ್ಮೆ ಹೂ ಬಿಟ್ಟಾಗ ಅತಿಯಾದ ಬೀಜಗಳು ಬಿದ್ದು ಇಲಿಗಳ ಸಂತತಿ ಹೆಚ್ಚಾಗುತ್ತದೆ. ಆ ಇಲಿಗಳು ಹೊಲದ ಬೆಳೆಯನ್ನೆಲ್ಲಾ ತಿಂದು ಹಾಕಿ ಕ್ಷಾಮ ಉಂಟುಮಾಡುತ್ತಿದ್ದವು. ಇಂತಹ ಎಷ್ಟೋ ನಂಬಿಕೆಗಳ ಹಿಂದೆ ವಿಜ್ಞಾನ ಅಡಗಿದೆ. ಉದಾಹರಣೆಗೆ, “ಮಳೆ ಬರುವ ಮುನ್ನ ಮಂಡಿ ನೋವು ಹೆಚ್ಚಾಗುತ್ತದೆ” ಎಂದು ಹಿರಿಯರು ಹೇಳುತ್ತಾರೆ. ಇದು ಮೂಢನಂಬಿಕೆಯಲ್ಲ, ವಾತಾವರಣದಲ್ಲಿನ ಒತ್ತಡದ ಬದಲಾವಣೆಯು ನಮ್ಮ ಕೀಲುಗಳಲ್ಲಿನ ದ್ರವದ ಮೇಲೆ ಒತ್ತಡ ಹೇರುವುದರಿಂದ ಉಂಟಾಗುವ ನೋವು. ಹಾಗೆಯೇ ಸಂಜೆಯ ಆಕಾಶ ತಾಮ್ರದ ಬಣ್ಣದಲ್ಲಿದ್ದರೆ ಮರುದಿನ ಗಾಳಿಯ ಒತ್ತಡ ಬದಲಾಗಿ ಮಳೆ ಬರಲಿದೆ ಎಂಬುದು ಹವಾಮಾನ ಶಾಸ್ತ್ರದ ಒಂದು ಭಾಗವೇ ಆಗಿದೆ. ಸಂಜೆಯ ಸೂರ್ಯನ ಬೆಳಕು ವಾತಾವರಣದ ಧೂಳಿನ ಕಣಗಳ ಮೂಲಕ ಹಾದು ಬರುವಾಗ ಬೆಳಕಿನ ಚದುರುವಿಕೆಯಿಂದ ಈ ಬಣ್ಣ ಉಂಟಾಗುತ್ತದೆ, ಇದು ಮುಂಬರುವ ವಾತಾವರಣದ ಬದಲಾವಣೆಯ ಸ್ಪಷ್ಟ ಸೂಚನೆ. ಇದೇ ವಿಜ್ಞಾನ!

ಪಕ್ಷಿಗಳ ಹಾರಾಟವನ್ನೇ ನೋಡಿ, ಬಲವಾದ ಗಾಳಿ ಬೀಸುವ ಮುನ್ನ ಅವು ಬೇಗ ಗೂಡಿಗೆ ಮರಳುತ್ತವೆ. ಯಾಕೆಂದರೆ ಗಾಳಿಯ ವೇಗವನ್ನು ಎದುರಿಸಿ ಹಾರುವುದು ಅವುಗಳಿಗೆ ಕಷ್ಟವಾಗುತ್ತದೆ. ಇದು ಕೇವಲ ಅವುಗಳ ಸಮಯಪಾಲನೆಯಲ್ಲ, ಗಾಳಿಯ ಒತ್ತಡವನ್ನೂ ಅವು ಗ್ರಹಿಸುವ ಸಾಮರ್ಥ್ಯ. ಇನ್ನು ಮೀನುಗಳು ನೀರಿನ ಮೇಲ್ಮೈಯಲ್ಲಿ ಬಂದು ಬಾಯಿ ತೆರೆದು ನೀರನ್ನು ಮೇಲಕ್ಕೆ ಚಿಮ್ಮಿಸುವುದು ಮಳೆ ಬರುವ ಸಂಕೇತ, ಏಕೆಂದರೆ ಮಳೆ ಬರುವ ಮುನ್ನ ಗಾಳಿಯಲ್ಲಿನ ತೇವಾಂಶ ಮತ್ತು ಒತ್ತಡ ಮೀನುಗಳಿಗೆ ಉಸಿರಾಡಲು ಸ್ವಲ್ಪ ಕಷ್ಟವಾಗಬಹುದು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯು ತನ್ನಲ್ಲಿನ ಬದಲಾವಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತಲೇ ಇರುತ್ತದೆ. ಅವುಗಳನ್ನು ಗ್ರಹಿಸಲು ನಮ್ಮದು ಸೂಕ್ಷ್ಮಮತಿಯಾಗಿರಬೇಕಷ್ಟೇ.
ಹಿರಿಯರು ಪ್ರಕೃತಿಯನ್ನು ಒಂದು ಸಂಪನ್ಮೂಲವನ್ನಾಗಿ ನೋಡದೆ, ಅದೊಂದು ಸುದೀರ್ಘ ಸಂಭಾಷಣೆಯಂತೆ ನೋಡುತ್ತಿದ್ದರು. ನಾವು ಈ ಸಂಭಾಷಣೆಯನ್ನು ಮುಂದುವರಿಸಬೇಕು. ಮಣ್ಣಿನ ವಾಸನೆ, ಗಾಳಿಯ ದಿಕ್ಕು, ಹಕ್ಕಿಗಳ ಚಿಲಿಪಿಲಿ ಮತ್ತು ಮರಗಳ ಅಕಾಲಿಕ ಫಲವತ್ತತೆ.. ಇವೆಲ್ಲವೂ ನಮಗೆ ಎಚ್ಚರಿಕೆಯ ಅಥವಾ ಅನುಕೂಲಕರ ವಾತಾವರಣದ ಸಂದೇಶಗಳೇ. ಆಧುನಿಕ ವಿಜ್ಞಾನವು ಇಂದು ಇವುಗಳನ್ನೆಲ್ಲಾ ದೃಢಪಡಿಸುತ್ತಿದೆ ಎಂದರೆ, ನಮ್ಮ ಹಿರಿಯರ ಅವಲೋಕನ ಶಕ್ತಿ ಅಷ್ಟು ಪ್ರಬಲವಾಗಿತ್ತು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಸಸ್ಯಗಳು ತಮ್ಮ ಪರಿಸರಕ್ಕೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತವೆ ಎಂಬುದು ನಮಗೆ ಅಚ್ಚರಿಯನ್ನುಂಟು ಮಾಡುತ್ತದೆ. ಮನುಷ್ಯರು ಮಾತ್ರವಲ್ಲ, ಪ್ರಕೃತಿಯ ಪ್ರತಿಯೊಂದು ಜೀವಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಿದೆ. ಈ ತಂತ್ರಗಳೇ ನಮ್ಮ ಇಡೀ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಟ್ಟಿವೆ.
ಇದನ್ನೂ ಓದಿ: ʼಡಬ್ಲೆಟ್ʼಗಳಿಂದ ನಡುಗಿದ ವೆನೆಜುವೆಲಾ; ಏನಿದು ಅವಳಿ ಭೂಕಂಪ? ಯಾಕಿಷ್ಟು ಅಪಾಯಕಾರಿ?
ನೇರಳೆ ಹಣ್ಣಿನ ಅತಿಯಾದ ಇಳುವರಿ ಪ್ರಕೃತಿಯಲ್ಲಿನ ಅಸಮತೋಲನವನ್ನು ಸೂಚಿಸುವ ಒಂದು ಕನ್ನಡಿ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಎಷ್ಟು ಲೀನವಾಗಿದ್ದರೆಂದರೆ, ಪ್ರತಿಯೊಂದು ಸಣ್ಣ ಕೀಟದ ಚಲನವಲದ ಉದ್ದೇಶವೂ ಅರ್ಥವಾಗುತ್ತಿತ್ತು. ಇಂದಿನ ದಿನಗಳಲ್ಲಿ ನಾವು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಹೋಗಿ ಹವಾಮಾನ ವೈಪರೀತ್ಯದಂತಹ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮಗೀಗ ಆಧುನಿಕ ಹವಾಮಾನ ವರದಿ ಸಿಗಬಹುದು, ಆದರೆ ನಮ್ಮ ಹಿರಿಯರಿಗೆ ಇಡೀ ಪ್ರಕೃತಿಯೇ ಒಂದು ಜೀವಂತ ಪಠ್ಯಪುಸ್ತಕವಾಗಿತ್ತು. ಅವರ ಪ್ರತಿಯೊಂದು ನುಡಿಗಟ್ಟು ಲಕ್ಷಾಂತರ ಬಾರಿಯ ವೀಕ್ಷಣೆಯ ಫಲಿತಾಂಶ. ನಾವು ಮತ್ತೆ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಕಲಿಯಬೇಕು. ಪ್ರಕೃತಿಯು ಒಂದು ದೊಡ್ಡ ಜೈವಿಕ ಜಾಲ, ಇಲ್ಲಿ ಪ್ರತಿಯೊಂದು ಮರ, ಪ್ರಾಣಿ ಮತ್ತು ಕೀಟವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಇದನ್ನು ಅರ್ಥಮಾಡಿಕೊಂಡರೆ ಮಾತ್ರ ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಸಾಧ್ಯ.
ಪ್ರಕೃತಿಯು ತನ್ನದೇ ಆದ ಭಾಷೆ ಹೊಂದಿದೆ. ಆ ಭಾಷೆಯನ್ನು ಅರ್ಥಮಾಡಿಕೊಳ್ಳುವ ಕಿವಿ ಮತ್ತು ಕಣ್ಣು ನಮ್ಮಲ್ಲಿರಬೇಕು. ಪ್ರತಿ ಗಿಡ, ಮರ, ಪ್ರಾಣಿ ಮತ್ತು ಪಂಚಭೂತಗಳು ನಮಗೆ ಬದುಕಿನ ಪಾಠವನ್ನು ಹೇಳಿಕೊಡುತ್ತಲೇ ಇರುತ್ತವೆ. ನಾವು ಅದನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ ಅಷ್ಟೆ. ಪ್ರಕೃತಿಯೊಂದಿಗೆ ನಾವು ಹೊಂದಿರುವ ಈ ಸುಂದರ ಸಂಬಂಧ ಮನುಕುಲದ ಭವಿಷ್ಯಕ್ಕೆ ಭದ್ರ ಬುನಾದಿ. ಪ್ರಕೃತಿಯನ್ನು ಗೌರವಿಸೋಣ, ಅದನ್ನು ಅರ್ಥಮಾಡಿಕೊಳ್ಳೋಣ ಮತ್ತು ಅದರೊಂದಿಗೆ ಸಾಮರಸ್ಯದಿಂದ ಬಾಳೋಣ. ಪ್ರಕೃತಿಯೇ ನಮ್ಮ ಮೊದಲ ಶಿಕ್ಷಕ.




