ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ವಾಣಿಜ್ಯ ಕಟ್ಟಡ ಹಾಗೂ ಶಾಪಿಂಗ್ ಮಳಿಗೆ ನಿರ್ಮಿಸಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಚಿಕ್ಕೋಡಿ ಪುರಸಭೆ ಅಧಿಕಾರಿಗಳನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಚಿಕ್ಕೋಡಿ ಉಪವಿಭಾಗಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಪ್ರಕರಣವೊಂದನ್ನು ಪರಿಶೀಲಿಸಿದ ಅವರು, ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೂ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹಲವು ಪ್ರಕರಣಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.



