ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಹೊಗಳಿದ್ದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಪದ್ಮಭೂಷಣ ನೀಡುವುದು ತೀರಾ ಸಣ್ಣ ವಿಷಯ, ಅವರನ್ನೇ ಪ್ರಧಾನಿ ಹುದ್ದೆಗೆ ಕೂರಿಸಿ” ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಕಟುವಾಗಿ ಲೇವಡಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಾಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹಿಂಸಾಚಾರ ರಹಿತ ಚುನಾವಣೆ ನಡೆಸಿದ್ದರು ಎಂದು ಹೇಳಿ ಸಿಇಸಿ ಗ್ಯಾನೇಶ್ ಕುಮಾರ್ ಅವರಿಗೆ ಕನಿಷ್ಠ ‘ಪದ್ಮಭೂಷಣ’ ಪ್ರಶಸ್ತಿಯನ್ನಾದರೂ ನೀಡಬೇಕು ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಏಕಪಕ್ಷೀಯ ನಿರ್ಧಾರ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಬಿ ಕೆ ಹರಿಪ್ರಸಾದ್ ಆಗ್ರಹ: ನಾಳೆ ಪ್ರತಿಭಟನೆ
ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಿಇಸಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದ್ದರು.
ಬಿಜೆಪಿ ನಾಯಕನ ಈ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ಪದ್ಮಭೂಷಣ ಪ್ರಶಸ್ತಿ ಅತ್ಯಂತ ಸಣ್ಣ ಸಂಗತಿ. ಬೇರೆಯವರನ್ನು ಪ್ರಧಾನಿ ಮಾಡಲು ಸಾಧ್ಯವಿರುವ ವ್ಯಕ್ತಿಯನ್ನು ಸ್ವತಃ ಪ್ರಧಾನಿಯನ್ನಾಗಿಯೇ ಮಾಡುವುದು ಸೂಕ್ತ” ಎಂದು ಟೀಕಿಸಿದರು.
ಚುನಾವಣಾ ಆಯೋಗದ ‘ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆ ಮತ್ತು ನಿರ್ಧಾರಗಳ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದು, ಈ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಹೇಳಿಕೆ-ಪಟಾಕ್ಷಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.




