ಇಕಿಗಾಯ್ ಎನ್ನುವುದು ಎಲ್ಲೋ ದೂರದ ಬೆಟ್ಟದಲ್ಲಿ, ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮೊಳಗೇ ಅಡಗಿರುವ ಸುಪ್ತ ಚೈತನ್ಯ. ಧಾವಂತದ ಬದುಕಿನಲ್ಲಿ ಒಮ್ಮೆಯಾದರೂ ನಿಂತು ನಮ್ಮನ್ನು ನಾವು ಆಳವಾಗಿ ಪ್ರಶ್ನಿಸಿಕೊಂಡಾಗ, ನಮ್ಮ ಹೃದಯ ಯಾವುದಕ್ಕಾಗಿ ಮಿಡಿಯುತ್ತದೆಯೋ ಅದೇ ನಮ್ಮ ಇಕಿಗಾಯ್.
ಜಗತ್ತು ತಾಂತ್ರಿಕವಾಗಿ ಎಷ್ಟು ಮುಂದುವರೆಯುತ್ತಿದೆಯೋ, ಅಷ್ಟೇ ವೇಗವಾಗಿ ಮನುಷ್ಯ ತನ್ನ ಅಂತರಂಗದ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಬೆಳಗಿನ ಸೂರ್ಯೋದಯವನ್ನೂ ಸವಿಯುವ ಪುರುಸೊತ್ತಿಲ್ಲದಂತೆ, ಗಡಿಯಾರದ ಮುಳ್ಳಿನೊಂದಿಗೆ ಸ್ಪರ್ಧಿಸುತ್ತಾ ಯಾಂತ್ರಿಕವಾಗಿ ಓಡುತ್ತಿರುವ ನಮಗೆ, ಬದುಕು ಉಸಿರಾಡುವ ಶವವಾಯಿತೇ ಎಂಬ ಆತಂಕ ಆಗಾಗ ಕಾಡುವುದು ಸಹಜ. ಡಿಜಿಟಲ್ ಕ್ರಾಂತಿಯ ಫಲವಾಗಿ ಹೊರಗಿನ ಪ್ರಪಂಚದೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುತ್ತಿದ್ದೇವೆ. ಆದರೆ, ಅನಿವಾರ್ಯವೋ, ಆಯ್ಕೆಯೋ… ನಾವು ನಮ್ಮೊಂದಿಗೇ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿರುವ ನಮಗೆ ಪ್ರತಿ ಉಚ್ಛ್ವಾಸ-ನಿಶ್ವಾಸದಲ್ಲೂ ಸಾರ್ಥಕತೆ ಹುಡುಕುವ, ಪ್ರತಿ ಕ್ಷಣವನ್ನೂ ಆನಂದಮಯವಾಗಿಸಿಕೊಳ್ಳುವ ಒಂದು ಅಪೂರ್ವ ಕಲೆ ಸಿದ್ದಿಸಿದರೆ ಹೇಗಿರುತ್ತದೆ? ಅದೇ ‘ಇಕಿಗಾಯ್’!
ಜಪಾನ್‌ನಲ್ಲಿ ‘ಓಕಿನಾವಾ’ ಎನ್ನುವ ದ್ವೀಪ ಸಮೂಹವೊಂದಿದೆ. 161 ಸಣ್ಣ ದ್ವೀಪಗಳ ನಡುವೆ ಒಂದು ಮುಖ್ಯದ್ವೀಪ. ವಿಶ್ವದ ದೀರ್ಘಾಯುಷಿ ಮಹಿಳೆಯರು ಇಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಇಲ್ಲಿನ ಜನರು ನೂರರ ಗಡಿ ದಾಟುತ್ತಿದ್ದರೂ ಹರೆಯದ ಚೈತನ್ಯ ಹೊಂದಿರುತ್ತಾರೆ. ಅದರ ಹಿಂದಿರುವುದು ಇದೇ ‘ಇಕಿಗಾಯ್’ (Ikigai). ಇದು ಅಂತರಂಗದ ಇಷ್ಟ, ಕೌಶಲ್ಯ, ಸಮಾಜದ ಅಗತ್ಯ ಮತ್ತು ಬದುಕಿನ ಭದ್ರತೆಗಳ ನಡುವೆ ಸಮತೋಲನ ಸಾಧಿಸುವ ಒಂದು ದಿವ್ಯ ಕಲೆ. ಒತ್ತಡದ ಜೀವನದಲ್ಲಿ ನಮಗರಿವಿದ್ದೂ ಕಳೆದುಹೋಗುತ್ತಿರುವ ಆಂತರಿಕ ನೆಮ್ಮದಿಯನ್ನು ಮರಳಿ ಪಡೆಯಲು ಮತ್ತು ನಮ್ಮ ಬದುಕಿಗೊಂದು ಅರ್ಥಪೂರ್ಣ ದಿಕ್ಕು ನೀಡಲು ಈ ಜಪಾನಿ ಸೂತ್ರ ಒಂದು ಅದ್ಭುತ ದಿಕ್ಸೂಚಿಯಾಗಬಲ್ಲದು.

ಈ ಅದ್ಭುತ ಪರಿಕಲ್ಪನೆಯ ಇತಿಹಾಸ ಕೆದಕಿಕೊಂಡು ಹೋದರೆ, ಜಪಾನ್‌ನ ಹೇಯನ್ (Heian) ಕಾಲಕ್ಕೆ ತಲುಪುತ್ತೇವೆ. ಅಂದು ‘ಗಾಯ್’ ಎಂದರೆ ಅತ್ಯಂತ ಬೆಲೆಬಾಳುವ ‘ಶಂಖ’ ಅಥವಾ ‘ಚಿಪ್ಪು’ ಎಂದರ್ಥವಿತ್ತು. ಇವುಗಳ ಮೌಲ್ಯವೂ ಅಷ್ಟೇ. ಅಂದರೆ, ಜೀವನದ ಮೌಲ್ಯವನ್ನು ಹೆಚ್ಚಿಸುವ ಅಮೂಲ್ಯ ಉದ್ದೇಶ ‘ಇಕಿಗಾಯ್’. ಮೂಲತಃ ಇದು ಜಪಾನಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದರೂ, ಇದನ್ನು ಜಾಗತಿಕವಾಗಿ ಜನಪ್ರಿಯಗೊಳಿಸಿದ್ದು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸೆಸ್ಕ್ ಮಿರಾಲಿಸ್ ಅವರ “Ikigai: The Japanese Secret to a Long and Happy Life” ಎಂಬ ಪ್ರಸಿದ್ಧ ಕೃತಿ. (ಜೆ. ರಾಮಲಿಂಗೇಗೌಡರ ಕನ್ನಡ ಅನುವಾದಿತ ಕೃತಿಯೂ ಲಭ್ಯ- ‘ಇಕಿಗಾಯ್’). ಈ ಪುಸ್ತಕವು ಓಕಿನಾವಾ ದ್ವೀಪದ ಜನರು ನೂರರ ಹರೆಯದಲ್ಲೂ ಹೇಗೆ ಶಕ್ತಿಯುತವಾಗಿ ಮತ್ತು ಉತ್ಸಾಹದಿಂದ ಇರುತ್ತಾರೆ ಎಂಬ ದೀರ್ಘಾಯುಷ್ಯದ ರಹಸ್ಯವನ್ನು ಜಗತ್ತಿಗೆ ಪರಿಚಯಿಸಿತು. ಜಪಾನ್ ದೇಶವು ಎರಡನೇ ಮಹಾಯುದ್ಧದ ನಂತರ ಸಂಪೂರ್ಣವಾಗಿ ಧ್ವಂಸವಾಗಿದ್ದರೂ, ಕೇವಲ ಕೆಲವೇ ದಶಕಗಳಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಲ್ಲಲು ಅಲ್ಲಿನ ಜನರ ಈ ‘ಇಕಿಗಾಯ್’ ಮನೋಭಾವ ಖಂಡಿತ ಮುಖ್ಯ ಕಾರಣವಾಯಿತು. ಈ ಜಂಜಾಟದ ಬದುಕಿನಲ್ಲಿ ದೀರ್ಘಾಯುಷ್ಯ ಇದ್ದು ನಾವು ಮಾಡಬೇಕಿರುವುದಾದರೂ ಏನು? ಎನಿಸಬಹುದು, ಕಡೆಪಕ್ಷ ನೆಮ್ಮದಿಯಾಗಿ ಆದರೂ ಬದುಕಬಹುದು.
ಇಕಿಗಾಯ್ ಎನ್ನುವುದು ಕೇವಲ ಭಾವನಾತ್ಮಕ ಸಿದ್ಧಾಂತವಲ್ಲ. ಇದಕ್ಕೆ ಭದ್ರವಾದ ವೈಜ್ಞಾನಿಕ ಹಿನ್ನೆಲೆಯೂ ಇದೆ. ಜಪಾನಿ ನ್ಯೂರೋಸೈಂಟಿಸ್ಟ್ ಕೆನ್ ಮೋಗಿ ಅವರ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಬದುಕಿನ ಉದ್ದೇಶವನ್ನು ಕಂಡುಕೊಂಡಾಗ ಅವನ ಮೆದುಳಿನಲ್ಲಿ ‘ಡೋಪಮೈನ್’, ‘ಎಂಡಾರ್ಫಿನ್’ ಮತ್ತು ‘ಸಿರೊಟೋನಿನ್’ಗಳಂತಹ ಹಾರ್ಮೋನ್‌ಗಳು ಸಮತೋಲನದಲ್ಲಿ ಬಿಡುಗಡೆಯಾಗುತ್ತವೆ. ಇದು ಮಾನಸಿಕ ಸಂತೋಷದ ಜತೆಗೆ ಶರೀರದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸಿ, ವಯಸ್ಸಾಗುವ ಪ್ರಕ್ರಿಯೆಯನ್ನು (Aging process) ನಿಧಾನಗೊಳಿಸುತ್ತದೆ.
ವಿಶ್ವಖ್ಯಾತ ಮನಶ್ಶಾಸ್ತ್ರಜ್ಞ ವಿಕ್ಟರ್ ಫ್ರಾಂಕಲ್ ಪ್ರತಿಪಾದಿಸಿದ ‘ಲೋಗೋಥೆರಪಿ’ (Logotherapy) ಗೊತ್ತಿರಬಹುದು. ಇಕಿಗಾಯ್ ತತ್ವಕ್ಕೆ ಇದು ಬಹಳ ಹತ್ತಿರವಾಗಿದೆ. ಫ್ರಾಂಕಲ್ ಅವರ ಪ್ರಕಾರ, ಮನುಷ್ಯನಿಗೆ ಬದುಕಲಿಕ್ಕೊಂದು ಭದ್ರವಾದ ‘ಅರ್ಥ’ವಿದ್ದಾಗ ಮಾತ್ರ ಅವನು ಅತ್ಯಂತ ಕಠಿಣ ಜೈಲುವಾಸವನ್ನೂ ಅಥವಾ ಜೀವನದ ಸಂಕಷ್ಟಗಳನ್ನೂ ಎದುರಿಸಿ ಬದುಕಬಲ್ಲ. ಈ ಅರ್ಥವನ್ನು ಹುಡುಕಿಕೊಡುವುದೇ ಇಕಿಗಾಯ್. ಹಾಗೆಯೇ, ಮಿಹಾಲಿ ಸೈಕ್ಸೆಂಟ್ ಮಿಹಾಲಿ ಅವರು ವಿವರಿಸುವ ‘ಫ್ಲೋ’ (Flow) ಸ್ಥಿತಿ ಈ ತತ್ವದ ಜೀವಾಳ. ನಾವು ಮಾಡುವ ಕೆಲಸದಲ್ಲಿ ಸಮಯದ ಅರಿವೇ ಇಲ್ಲದಂತೆ ಸಂಪೂರ್ಣವಾಗಿ ಲೀನವಾಗುವುದೇ ಪರಮಾನಂದ. ಅಂದರೆ, ಒಬ್ಬ ಚಿತ್ರಕಾರ ಚಿತ್ರ ಬಿಡಿಸುವಾಗ ಅಥವಾ ಒಬ್ಬ ಕವಿ ಕವಿತೆ ಬರೆಯುವಾಗ ಅನುಭವಿಸುವ ಆ ತಾದಾತ್ಮ್ಯ (ಎರಡು ವಸ್ತು ಅಥವಾ ವ್ಯಕ್ತಿಗಳು ಒಂದೇ ಆಗಿರುವಿಕೆ ಅಥವಾ ಸಂಪೂರ್ಣ ಮಗ್ನತೆ) ಸ್ಥಿತಿಯೇ ಇಕಿಗಾಯ್‌ನ ಪರಮ ಗುರಿ. ಒಂದು ಕೆಲಸದಲ್ಲಿ ಯಾವ ಅರಿವೂ ಇಲ್ಲದೆ ಸಂಪೂರ್ಣ ಮಗ್ನರಾಗಿದ್ದೀರೆಂದರೆ, ಅದೇ ನಿಮ್ಮ ಇಕಿಗಾಯ್ ಸ್ಥಿತಿ.

ಜೀವನ ಸುಮಧುರ ಸಂಗೀತವಾಗಬೇಕಾದರೆ ನಾಲ್ಕು ಪ್ರಮುಖ ತಂತಿಗಳು ಸಮತೋಲನದಲ್ಲಿರಬೇಕು..
- ಪ್ಯಾಶನ್ (Passion- ನಿಮ್ಮ ಅಭಿರುಚಿ): ಯಾವ ಕೆಲಸ ಮಾಡುವಾಗ ನಿಮಗೆ ಸುಸ್ತಾಗುವುದಿಲ್ಲವೋ, ನೀರಸ ಎನಿಸುವುದಿಲ್ಲವೋ ಅದೇ ನಿಮ್ಮ ಪ್ಯಾಶನ್.
- ಪ್ರೊಫೆಷನ್ (Profession– ನೀವು ಯಾವುದರಲ್ಲಿ ಸಮರ್ಥರು?): ಜಗತ್ತಿನ ಬೇರೆಯವರಿಗಿಂತ ನಿಮ್ಮನ್ನು ಭಿನ್ನವಾಗಿಸುವ ನಿಮ್ಮದೇ ಕೌಶಲ್ಯ.
- ಮಿಷನ್ (Mission- ಜಗತ್ತಿಗೆ ಯಾವುದರ ಅಗತ್ಯವಿದೆ?): ಸಮಾಜದ ಕಲ್ಯಾಣಕ್ಕೆ ನಿಮ್ಮ ಕೊಡುಗೆ. ನೀವು ಇಲ್ಲದಿದ್ದರೆ ಜಗತ್ತು ಏನನ್ನು ಕಳೆದುಕೊಳ್ಳುತ್ತಿತ್ತು?
- ವೊಕೇಷನ್ (Vocation– ಯಾವುದಕ್ಕಾಗಿ ಸಂಭಾವನೆ ಸಿಗುತ್ತದೆ?): ನಿಮ್ಮ ಬದುಕಿನ ಆರ್ಥಿಕ ಭದ್ರತೆ. ಗೌರವಯುತ ಜೀವನ ನಡೆಸಲು ಬೇಕಾದ ಆರ್ಥಿಕ ಸಂಪನ್ಮೂಲ.
ಈ ನಾಲ್ಕೂ ವೃತ್ತಗಳು ಎಲ್ಲಿ ಸಂಧಿಸುತ್ತವೆಯೋ ಅದೇ ನಿಮ್ಮ ಇಕಿಗಾಯ್. ಕಾರ್ಪೊರೇಟ್ ಜಗತ್ತಿನ ಬಹುತೇಕರದ್ದು ಇಷ್ಟವಾಗುವುದನ್ನು ದಕ್ಕಿಸಿಕೊಳ್ಳಲಾಗದ, ಸಿಕ್ಕಿದ್ದನ್ನು ಮೆಚ್ಚಿಕೊಳ್ಳಲಾಗದ ಪರಿಸ್ಥಿತಿ. ಇದರಿಂದ ಅವರಲ್ಲಿ ‘ಬರ್ನ್ ಔಟ್’ ಅಥವಾ ಮಾನಸಿಕ ಜಡತ್ವ ಆವರಿಸುತ್ತಿದೆ. ಇಕಿಗಾಯ್ ಈ ಯಾಂತ್ರಿಕ ರೋಗಕ್ಕೆ ಮದ್ದು.
ಭಾರತೀಯರಿಗೆ ಇಕಿಗಾಯ್ ತತ್ವ ತೀರಾ ಹೊಸದಲ್ಲ. ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಿರುವ ‘ಧರ್ಮ‘ ಮತ್ತು ‘ಕರ್ಮ‘ ಸಿದ್ಧಾಂತಗಳಿಗೂ, ಈ ಜಪಾನಿ ಜೀವನ ಸೂತ್ರಕ್ಕೂ ಅವಿನಾಭಾವ ಸಂಬಂಧವಿದೆ. ಅತಿಯಾದ ಪೈಪೋಟಿ, ಒತ್ತಡ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಿಲುಕಿ ಮಂಕಾಗಿರುವ ಭಾರತೀಯ ವೃತ್ತಿಪರರಿಗೆ ಮತ್ತು ಯುವಜನತೆಗೆ ಇಕಿಗಾಯ್ ಒಂದು ಮಾರ್ಗಸೂಚಿ. ನಾವು ‘ಯಾರೋ ಆಗಬೇಕು’ ಎಂಬ ಒತ್ತಡಕ್ಕೆ ಮಣಿಯದೆ, ‘ನಾವು ನಾವಾಗಿಯೇ’ ಬೆಳೆಯಲು ಇದು ಪ್ರೇರೇಪಿಸುತ್ತದೆ. ಭಾರತದ ಸಣ್ಣ ಹಳ್ಳಿಗಳಲ್ಲಿ ತಮ್ಮ ಕೆಲಸವನ್ನು ದೈವವೆಂದು ಪೂಜಿಸುವ ಕುಂಬಾರರು, ಶಿಲ್ಪಕಲಾವಿದರು, ಕೃಷಿಕರು, ಕ್ಷೌರಿಕರು, ಬಡಗಿಗಳು ಅಥವಾ ನೇಕಾರರಲ್ಲಿ ಈ ಇಕಿಗಾಯ್ ಅನ್ನು ಕಾಣಬಹುದು. ಅವರು ಮಾಡುವ ‘ಕಾಯಕವೇ ಕೈಲಾಸ’ ತತ್ವವೇ ಜಪಾನಿನ ಇಕಿಗಾಯ್ ಎನ್ನಬಹುದು.

ಓಕಿನಾವಾ ದ್ವೀಪದ ಜನರ ಆರೋಗ್ಯದ ಗುಟ್ಟು ಅವರ ಮಾನಸಿಕ ಸ್ಥಿತಿಯಿಂದ ಹಿಡಿದು, ಆಹಾರ ಮತ್ತು ದೈಹಿಕ ಶಿಸ್ತಿನಲ್ಲೂ ಇದೆ. ಅವರು ಪಾಲಿಸುವ ‘ಹರಾ ಹಚಿ ಬು’ (Hara Hachi Bu) ಎಂಬ ನಿಯಮ ಇದಕ್ಕೆ ಉತ್ತಮ ಉದಾಹರಣೆ. ಹೊಟ್ಟೆ ಎಂಭತ್ತು ಪ್ರತಿಶತ ತುಂಬಿದ ಕೂಡಲೇ ಊಟ ನಿಲ್ಲಿಸುವುದು ದೀರ್ಘಾಯುಷ್ಯದ ಗುಟ್ಟು ಎಂದು ಅವರು ನಂಬುತ್ತಾರೆ. ಅತಿಯಾದ ಆಹಾರ ಸೇವನೆಯು ಆಲಸ್ಯಕ್ಕೆ ಕಾರಣವಾದರೆ, ಹಿತಮಿತವಾದ ಆಹಾರ ಚೈತನ್ಯ ನೀಡುತ್ತದೆ. ಇದರೊಂದಿಗೆ ‘ಮೋಯಿ’ (Moai) ಎಂಬ ಸಾಮಾಜಿಕ ವ್ಯವಸ್ಥೆಯೂ ಅಲ್ಲಿನ ಜನರಲ್ಲಿದೆ. ಅಂದರೆ, ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಒಂದು ಆತ್ಮೀಯ ಗೆಳೆಯರ ಬಳಗ. ಒಂಟಿತನವು ಮನುಷ್ಯನ ಆಯಸ್ಸನ್ನು ಕುಂಠಿತಗೊಳಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಹೀಗಾಗಿ, ಪ್ರಕೃತಿಯೊಂದಿಗೆ ಬೆರೆಯುವುದು, ತಾಜಾ ಆಹಾರ ಸೇವಿಸುವುದು ಮತ್ತು ಸದಾ ಸಕ್ರಿಯರಾಗಿರುವುದು ಇಕಿಗಾಯ್ ಜೀವನಶೈಲಿ ಅವಿಭಾಜ್ಯ ಅಂಗ.
ನಮ್ಮಲ್ಲಿನ ಇಕಿಗಾಯ್ ಅನ್ವೇಷಣೆ ಹೇಗೆ?
- ಸಣ್ಣ ಆರಂಭ: ಪ್ರತಿದಿನ ಎದ್ದಾಗ ಇಂದು ನಾನು ಮಾಡಲಿರುವ ಒಂದು ಖುಷಿಯ ಕೆಲಸ ಯಾವುದೆಂದು ಯೋಚಿಸಿ. ಅದು ಗಿಡಕ್ಕೆ ನೀರು ಹಾಕುವುದಿರಲಿ ಅಥವಾ ಪ್ರೀತಿಪಾತ್ರರಿಗೆ ಫೋನ್ ಮಾಡುವುದಿರಲಿ.
- ಅವಸರ ಬಿಡಿ: ನಿಧಾನವಾಗಿ ಕೆಲಸ ಮಾಡುವುದನ್ನು ಕಲಿಯಿರಿ. ಅವಸರದ ಬದುಕು ನಮ್ಮನ್ನು ಗುರಿಯ ಹತ್ತಿರ ತಲುಪಿಸಬಹುದು, ಆದರೆ ಪಯಣದ ಸುಖವನ್ನು ಕಸಿದುಕೊಳ್ಳುತ್ತದೆ.
- ಕೃತಜ್ಞತೆ: ನಿಮ್ಮಲ್ಲಿ ಏನಿದೆಯೋ ಅದಕ್ಕೆ ಕೃತಜ್ಞರಾಗಿರಿ. ಇದು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.
- ವರ್ತಮಾನದಲ್ಲಿ ಬದುಕಿ: ಭೂತಕಾಲದ ಪಶ್ಚಾತ್ತಾಪ ಮತ್ತು ಭವಿಷ್ಯದ ಆತಂಕವನ್ನು ಬಿಟ್ಟು ಈ ಕ್ಷಣವನ್ನು ಆನಂದಿಸಿ.
ಇದನ್ನೂ ಓದಿ: ಸಾವೇ ಇಲ್ಲದ ‘ಜೆಲ್ಲಿಫಿಶ್’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?
ಇಕಿಗಾಯ್ ಎನ್ನುವುದು ಎಲ್ಲೋ ದೂರದ ಬೆಟ್ಟದಲ್ಲಿ, ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮೊಳಗೇ ಅಡಗಿರುವ ಸುಪ್ತ ಚೈತನ್ಯ. ಧಾವಂತದ ಬದುಕಿನಲ್ಲಿ ಒಮ್ಮೆಯಾದರೂ ನಿಂತು ನಮ್ಮನ್ನು ನಾವು ಆಳವಾಗಿ ಪ್ರಶ್ನಿಸಿಕೊಂಡಾಗ, ನಮ್ಮ ಹೃದಯ ಯಾವುದಕ್ಕಾಗಿ ಮಿಡಿಯುತ್ತದೆಯೋ ಅದೇ ನಮ್ಮ ಇಕಿಗಾಯ್. ಪ್ರತಿಯೊಬ್ಬರಿಗೂ ಒಂದು ಪರಿಪೂರ್ಣ ಜೀವನ ನಡೆಸುವ ಹಕ್ಕಿದೆ. ಪ್ಯಾಶನ್ ಮತ್ತು ಅಗತ್ಯಗಳ ನಡುವೆ ಸೇತುವೆ ಕಟ್ಟೋಣ. ಕೆಲಸವು ನಮಗೆ ಆದಾಯದ ಜೊತೆಗೆ ಆತ್ಮತೃಪ್ತಿಯನ್ನೂ ನೀಡುತ್ತಿದೆಯಾ ಕಂಡುಕೊಳ್ಳೋಣ. ಬದುಕು ಎಂದರೆ ಪ್ರತಿಕ್ಷಣವನ್ನು ಅರ್ಥಪೂರ್ಣವಾಗಿ ಜೀವಿಸುವುದು!




