ಮತದಾರರ ದೃಷ್ಟಿಯಲ್ಲಿ ಇಬ್ಬರೂ ಸಮಾನರು; ಇಬ್ಬರ ಮೇಲೂ ಭ್ರಷ್ಟಾಚಾರದ ಕಲೆಗಳಿಲ್ಲ ಎಂಬ ಅಭಿಪ್ರಾಯವಿದೆ. ಅನುಭವದ ಆಧಾರದ ಮೇಲೆ ಕೆಲವರು ಹಿತೇಂದ್ರ ನಾಥ್ ಅವರತ್ತ ಒಲವು ತೋರಿದರೆ, ಯುವಜನತೆ ಗೌರವ್ ನಾಯಕತ್ವವನ್ನು ಮೆಚ್ಚುತ್ತಿದ್ದಾರೆ. ಗೌರವ್ ರಾಜ್ಯಾದ್ಯಂತ ಪ್ರಚಾರದಲ್ಲಿ ನಿರತರಾಗಿರುವ ಕಾರಣ, ಜೋರ್ಹತ್‌ನಲ್ಲಿ ಅವರ ಪರವಾಗಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೇ ಪ್ರಚಾರದ ಉಸ್ತುವಾರಿ ವಹಿಸಿದ್ದಾರೆ
ಅಸ್ಸಾಂನ ಜೋರ್ಹತ್ ಪಟ್ಟಣದ ವಸತಿ ಪ್ರದೇಶವೊಂದರಲ್ಲಿ ಮಂಗಳವಾರ ಸಂಜೆ ನಡೆದ ಸಾರ್ವಜನಿಕ ಸಭೆಯು ಅಚ್ಚುಕಟ್ಟಾಗಿತ್ತು. ಅಲ್ಲಿ ನೆರೆದಿದ್ದ ಜನರಿಗಿಂತ ಮಾಧ್ಯಮದವರ ಕ್ಯಾಮೆರಾಗಳೇ ಹೆಚ್ಚು ಗಮನ ಸೆಳೆಯುತ್ತಿದ್ದವು. ಈ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ಗೊಗೊಯ್, “ಇದು ಕೇವಲ ಸರ್ಕಾರ ಬದಲಾಯಿಸುವ ಅಥವಾ ಒಂದು ಪಕ್ಷವನ್ನು ಕಿತ್ತುಹಾಕಿ ಮತ್ತೊಂದನ್ನು ತರುವ ಚುನಾವಣೆಯಲ್ಲ; ಬದಲಾಗಿ ಇದು ಅಸ್ಸಾಂ ರಾಜ್ಯವನ್ನು ಉಳಿಸುವ ಚುನಾವಣೆ” ಎಂದು ಹೇಳಿದರು. 2024ರ ಲೋಕಸಭಾ ಚುನಾವಣೆಯಂತೆಯೇ ಏಪ್ರಿಲ್ 9ರಂದು ನಡೆಯಲಿರುವ ಈ ವಿಧಾನಸಭಾ ಚುನಾವಣೆಯಲ್ಲೂ ಇಡೀ ದೇಶದ ಕಣ್ಣು ಜೋರ್ಹತ್ ಕ್ಷೇತ್ರದ ಮೇಲಿದೆ ಎಂದು ಅವರು ತಿಳಿಸಿದ್ದಾರೆ.
ಮೂರು ಬಾರಿ ಸಂಸದ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕರಾಗಿರುವ 43 ವರ್ಷದ ಗೌರವ್ ಗೊಗೊಯ್, ಇದೇ ಮೊದಲ ಬಾರಿಗೆ ವಿಧಾನಸಭಾ ಕಣಕ್ಕಿಳಿದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಜೋರ್ಹತ್ ಕ್ಷೇತ್ರದಿಂದ ಬಿಜೆಪಿಗೆ ತೀವ್ರ ಪೈಪೋಟಿ ನೀಡಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಈಗ ವಿಧಾನಸಭೆ ಪ್ರವೇಶಿಸಲು ತಮ್ಮದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜೋರ್ಹತ್ ವಿಧಾನಸಭಾ ಕ್ಷೇತ್ರವನ್ನು ಅವರು ಆಯ್ದುಕೊಂಡಿದ್ದಾರೆ.
ಸದ್ಯ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗೌರವ್, ಆರು ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ, ವಿಪಕ್ಷಗಳ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಅವರು ಬಿಂಬಿತವಾಗಿದ್ದಾರೆ. ಜೋರ್ಹತ್‌ನಲ್ಲಿಯೇ ಓದಿ ಬೆಳೆದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ತಂದೆ ದಿವಂಗತ ತರುಣ್ ಗೊಗೊಯ್ ಅವರ ಭದ್ರವಾದ ರಾಜಕೀಯ ಪರಂಪರೆಯ ಅಖಂಡ ಬೆಂಬಲವೂ ಗೌರವ್ ಅವರಿಗಿದೆ.
ಇಡೀ ರಾಜ್ಯದಾದ್ಯಂತ ಪಕ್ಷದ ಪ್ರಚಾರದ ಜವಾಬ್ದಾರಿ ಹೊತ್ತಿರುವ ಗೌರವ್, ತಮ್ಮ ಕ್ಷೇತ್ರಕ್ಕಿಂತ ಹೆಚ್ಚಾಗಿ ಇತರರ ಗೆಲುವಿಗಾಗಿಯೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಾರ್ಪೇಟಾ, ಭವಾನಿಪುರ-ಸೋರ್ಭೋಗ್, ಟಿಯೋಕ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತೆರಳಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷವನ್ನು ಗೆಲ್ಲಿಸುವುದು ತಮ್ಮ ಮೊದಲ ಆದ್ಯತೆ ಎಂದು ಅವರು ಹೇಳುತ್ತಾರೆ.
ಮತ್ತೊಂದೆಡೆ, ಜೋರ್ಹತ್ ಕ್ಷೇತ್ರದಲ್ಲಿ ಗೌರವ್ ಅವರಿಗೆ ಪ್ರಬಲ ಎದುರಾಳಿಯಾಗಿರುವುದು ಬಿಜೆಪಿಯ ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಹಿತೇಂದ್ರ ನಾಥ್ ಗೋಸ್ವಾಮಿ. ಇದು ಅವರಿಗೆ ಈ ಕ್ಷೇತ್ರದಿಂದ ಆರನೇ ಬಾರಿಯ ಸ್ಪರ್ಧೆಯಾಗಿದೆ. 1991ರಿಂದಲೂ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಅವರು, ಆರಂಭದಲ್ಲಿ ಅಸೋಮ್ ಗಣ ಪರಿಷತ್ (ಎಜಿಪಿ) ಮೂಲಕ 1991 ರಿಂದ 2006 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
2014ರಲ್ಲಿ ಬಿಜೆಪಿ ಸೇರಿದ ನಂತರ ಗೋಸ್ವಾಮಿ ಅವರು 2016 ಹಾಗೂ 2021ರ ಚುನಾವಣೆಗಳಲ್ಲಿ ಸತತವಾಗಿ ಜಯಭೇರಿ ಬಾರಿಸಿದ್ದಾರೆ. 2021ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಣಾ ಗೋಸ್ವಾಮಿ (ಸದ್ಯ ಇವರು ಬಿಜೆಪಿಯಲ್ಲಿದ್ದಾರೆ) ವಿರುದ್ಧ ಸುಮಾರು 6,500 ಮತಗಳ ಅಂತರದಿಂದ ಗೆದ್ದಿದ್ದರು. ವಕೀಲರಾಗಿರುವ ಇವರು ಭ್ರಷ್ಟಾಚಾರ ರಹಿತ ರಾಜಕಾರಣಿ ಎಂಬ ವರ್ಚಸ್ಸು ಹೊಂದಿದ್ದು, ಆರ್ಸೆನಿಕ್-ಮುಕ್ತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ಸೇರ್ಪಡೆಯಾದ ಹೊಸ ಪ್ರದೇಶಗಳತ್ತ ವಿಶೇಷ ಗಮನಹರಿಸಿ ಅವರು ಪ್ರಚಾರ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಪೆಟ್ರೋ ಡಾಲರ್ ಎಂದರೇನು? ಅಮೆರಿಕದ ಅರ್ಥವ್ಯವಸ್ಥೆಯ ಬುಡ ಅಲುಗಾಡುತ್ತಿರುವುದೇಕೆ?
ಗೌರವ್ ಅವರನ್ನು ತಮ್ಮ ‘ಸಹೋದರನಂತೆ’ ಎಂದು ಬಣ್ಣಿಸುವ ಹಿತೇಂದ್ರ ನಾಥ್ ಗೋಸ್ವಾಮಿ, ಅಭಿವೃದ್ಧಿಯ ವಿಚಾರದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಗೌರವ್ ಅವರು ಕಳೆದ ಎರಡು ವರ್ಷಗಳಿಂದ ಸಂಸದರಾಗಿದ್ದರೂ, ಸಂಸದರ ನಿಧಿಯಿಂದ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅವರು ಉತ್ತಮ ವಾಗ್ಮಿಯೇ ಇರಬಹುದು, ಆದರೆ ಜನ ನಿರೀಕ್ಷಿಸಿದ ಕೆಲಸಗಳು ಅವರಿಂದ ಆಗಿಲ್ಲ ಎಂದು ಗೋಸ್ವಾಮಿ ಆರೋಪಿಸಿದ್ದಾರೆ.
ಗೌರವ್ ಅವರು ರಾಜ್ಯಾದ್ಯಂತ ಪ್ರಚಾರದಲ್ಲಿ ನಿರತರಾಗಿರುವುದರಿಂದ, ಜೋರ್ಹತ್‌ನಲ್ಲಿ ಕಾಂಗ್ರೆಸ್‌ನ ಸ್ಥಳೀಯ ಕಾರ್ಯಕರ್ತರು ಮತ್ತು ಈ ಹಿಂದೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ನಾಯಕರುಗಳೇ ಪ್ರಚಾರದ ಹೊಣೆ ಹೊತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಶಾನು ಬರುವಾ ಹೇಳುವಂತೆ, ಹಗಲಿನಲ್ಲಿ ರಾಜ್ಯ ಸುತ್ತುವ ಗೌರವ್, ರಾತ್ರಿ ವೇಳೆ ಜೋರ್ಹತ್‌ನಲ್ಲಿ ತಂಗಿ ಸಾಧ್ಯವಾದಷ್ಟು ಸಭೆಗಳನ್ನು ನಡೆಸುತ್ತಾರೆ. ಉಳಿದಂತೆ ಕಾರ್ಯಕರ್ತರು ಮಂಡಲವಾರು ಬೂತ್ ಸಭೆಗಳು ಹಾಗೂ ಮನೆ-ಮನೆ ಪ್ರಚಾರ ನಡೆಸುತ್ತಿದ್ದಾರೆ. ಕಣದಲ್ಲಿರುವ ತಮ್ಮ ಅಭ್ಯರ್ಥಿಯೇ ಮುಂದಿನ ಮುಖ್ಯಮಂತ್ರಿ ಎಂಬ ಅಂಶ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಕಾರಾತ್ಮಕ ಭಾವನೆ ಹಾಗೂ ಹೆಚ್ಚಿನ ಉತ್ಸಾಹ ತುಂಬಿದೆ.
ಆದರೆ 40 ವರ್ಷದ ಸ್ಥಳೀಯ ನಿವಾಸಿ ಮದನ್ ಗೊಗೊಯ್ ಹೇಳುವಂತೆ, “ಅನುಭವ ಮತ್ತು ವ್ಯಕ್ತಿತ್ವದಲ್ಲಿ ಇಬ್ಬರೂ ಸಮಾನರು ಹಾಗೂ ಭ್ರಷ್ಟಾಚಾರದ ಕಲೆ ಇಲ್ಲದ ಸಭ್ಯರು. ಸಾಮಾನ್ಯವಾಗಿ ಬಿಜೆಪಿಯ ಅಲೆ ಇದ್ದರೂ, ಯುವಕರು ಗೌರವ್ ಅವರನ್ನು ಇಷ್ಟಪಡುತ್ತಿದ್ದಾರೆ” ಎಂದಿದ್ದಾರೆ. ಇವರ ಸ್ನೇಹಿತ, 51 ವರ್ಷದ ಅಶಿಮ್ ಕುಮಾರ್ ಭಟ್ಟಾಚಾರ್ಯ ಅವರು, ಗೋಸ್ವಾಮಿ ಅವರ ಅನುಭವವನ್ನು ಮೆಚ್ಚಿದ್ದು, ಅವರಲ್ಲಿ ಯಾವುದೇ ನಕಾರಾತ್ಮಕ ಅಂಶ ಕಂಡಿಲ್ಲ ಎಂದು ಒಲವು ವ್ಯಕ್ತಪಡಿಸಿದ್ದಾರೆ
ಮತದಾರರ ದೃಷ್ಟಿಯಲ್ಲಿ ಇಬ್ಬರೂ ಸಮಾನರು; ಇಬ್ಬರ ಮೇಲೂ ಭ್ರಷ್ಟಾಚಾರದ ಕಲೆಗಳಿಲ್ಲ ಎಂಬ ಅಭಿಪ್ರಾಯವಿದೆ. ಅನುಭವದ ಆಧಾರದ ಮೇಲೆ ಕೆಲವರು ಹಿತೇಂದ್ರ ನಾಥ್ ಅವರತ್ತ ಒಲವು ತೋರಿದರೆ, ಯುವಜನತೆ ಗೌರವ್ ನಾಯಕತ್ವವನ್ನು ಮೆಚ್ಚುತ್ತಿದ್ದಾರೆ. ಗೌರವ್ ರಾಜ್ಯಾದ್ಯಂತ ಪ್ರಚಾರದಲ್ಲಿ ನಿರತರಾಗಿರುವ ಕಾರಣ, ಜೋರ್ಹತ್‌ನಲ್ಲಿ ಅವರ ಪರವಾಗಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೇ ಪ್ರಚಾರದ ಉಸ್ತುವಾರಿ ವಹಿಸಿದ್ದಾರೆ. ತಮ್ಮ ಅಭ್ಯರ್ಥಿಯೇ ಮುಂದಿನ ಮುಖ್ಯಮಂತ್ರಿ ಎಂಬ ಅಂಶ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮೂಡಿಸಿದ್ದು, ಈ ಕದನ ತೀವ್ರ ಕುತೂಹಲ ಕೆರಳಿಸಿದೆ.
ವರದಿ ಮೂಲ: ಇಂಡಿಯನ್ ಎಕ್ಸ್‌ಪ್ರೆಸ್




