ಇತ್ತೀಚೆಗೆ ಭೋಪಾಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ 33 ವರ್ಷದ ತ್ವಿಶಾ ಶರ್ಮಾ ಅವರ ಶವಪರೀಕ್ಷೆಯ (ಆಟೋಪ್ಸಿ) ವರದಿ ಬಹಿರಂಗವಾಗಿದ್ದು, ಮರಣಕ್ಕೂ ಮುನ್ನ ಅವರ ದೇಹದ ಮೇಲೆ ಗಾಯಗೊಂಡ ಗುರುತುಗಳು ಪತ್ತೆಯಾಗಿವೆ. ಏಮ್ಸ್ (AIIMS) ಭೋಪಾಲ್‌ನಲ್ಲಿ ನಡೆದಿರುವ ಶವಪರೀಕ್ಷೆಯ ವರದಿಯ ಪ್ರಕಾರ, “ಉಸಿರುಗಟ್ಟುವಿಕೆ (ನೇಣು) ಮೂಲಕ ಸಾವು ಸಂಭವಿಸಿದೆ” ಎಂದು ದೃಢಪಡಿಸಲಾಗಿದೆ. ಇದರ ಜೊತೆಗೆ, ದೇಹದ ಮೇಲೆ ಹಲವು ಸಣ್ಣಪುಟ್ಟ ಗಾಯದ ಗುರುತುಗಳನ್ನು (blunt-force injuries) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೇ 12 ರಂದು ರಾತ್ರಿ ಸುಮಾರು 10:26ಕ್ಕೆ ತ್ವಿಶಾ ಶರ್ಮಾ ಅವರು ತಮ್ಮ ಮನೆಯ ಟೆರೇಸ್‌ನಲ್ಲಿ ಜಿಮ್ನಾಸ್ಟಿಕ್ ರಿಂಗ್ ಹಗ್ಗಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇ 13 ರಂದು ಮಧ್ಯರಾತ್ರಿಯ ನಂತರ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಶವಪರೀಕ್ಷೆ ವರದಿಯಲ್ಲಿ ಏನಿದೆ?
ಕುತ್ತಿಗೆಯ ಮೇಲ್ಭಾಗದಲ್ಲಿ ಎರಡು ಕೆಂಪು ಬಣ್ಣದ ನೇಣಿನ ಗುರುತುಗಳನ್ನು ವೈದ್ಯರು ಗುರುತಿಸಿದ್ದಾರೆ. ನೇಣಿನ ಕೆಳಭಾಗದ ಚರ್ಮ ಒಣಗಿದ್ದು, ಕುತ್ತಿಗೆಯ ಹಿಂದಿನ ಭಾಗದಲ್ಲಿ ನೇಣಿನ ಗುರುತು ಅಪೂರ್ಣವಾಗಿದೆ. ಉಸಿರುಗಟ್ಟುವಿಕೆಯ ಲಕ್ಷಣಗಳಾದ ಮುಖದಲ್ಲಿ ರಕ್ತಪರಿಚಲನೆ, ಕಿವಿ ಮತ್ತು ಉಗುರುಗಳಲ್ಲಿ ನೀಲಿ ಬಣ್ಣ, ಹಾಗೂ ಬಲಗಣ್ಣಿನಲ್ಲಿ ರಕ್ತಸ್ರಾವದ ಗುರುತುಗಳು ವರದಿಯಲ್ಲಿ ಕಂಡುಬಂದಿವೆ.
ನೇಣಿನ ಗುರುತುಗಳಲ್ಲದೆ, ಕುತ್ತಿಗೆಯ ಎಡಭಾಗ, ಎಡ ತೋಳು, ಎಡ ಮುಂಗೈ, ಬಲ ಮಣಿಕಟ್ಟು, ಬಲ ಉಂಗುರದ ಬೆರಳು ಹಾಗೂ ತಲೆಯ ಎಡ ಭಾಗದಲ್ಲಿ (2 ಸೆಂ.ಮೀ x 2 ಸೆಂ.ಮೀ) ಮರಣಕ್ಕೂ ಮುನ್ನ ಆದಂತಹ ಗಾಯದ (antemortem injuries) ಗುರುತುಗಳು ಪತ್ತೆಯಾಗಿವೆ. ಶ್ವಾಸಕೋಶದಲ್ಲಿ “ಟಾರ್ಡಿಯಸ್ ಸ್ಪಾಟ್ಸ್” (Tardieu’s spots) ಕಂಡುಬಂದಿದ್ದು, ಇದು ತೀವ್ರವಾಗಿ ಉಸಿರುಗಟ್ಟಿದ್ದರಿಂದ ಆಗಿರುವ ಪರಿಣಾಮ ಎಂದು ಹೇಳಲಾಗಿದೆ. ಮೆದುಳು, ಶ್ವಾಸಕೋಶ ಮತ್ತು ಹೊಟ್ಟೆಯ ಭಾಗದಲ್ಲೂ ಉಸಿರುಗಟ್ಟುವಿಕೆಯ ಲಕ್ಷಣಗಳು ಪತ್ತೆಯಾಗಿವೆ.
ಇದನ್ನು ಓದಿದ್ದೀರಾ? ಇದು 140 ಕೋಟಿ ಜನರ ‘ಟೀಮ್ ಇಂಡಿಯಾ’ನೋ – ‘ಬಿಸಿಸಿಐ ಪ್ರೈವೇಟ್ ಲಿಮಿಟೆಡ್’ ಕಂಪನಿಯೋ?
ಗರ್ಭಾಶಯದಲ್ಲಿ ಸಣ್ಣ ಪ್ರಮಾಣದ ಅಂಶಗಳು ಕಂಡುಬಂದಿದ್ದು, ಸಾವನ್ನಪ್ಪುವ ಒಂದು ವಾರ ಮುಂಚೆ ವೈದ್ಯಕೀಯ ಗರ್ಭಪಾತ (MTP) ಮಾಡಿಸಿಕೊಂಡಿದ್ದ ಇತಿಹಾಸವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೈದ್ಯಕೀಯ ಮಂಡಳಿಯು, ನೇಣು ಹಾಕಿಕೊಂಡಿದ್ದರಿಂದಲೇ ಸಾವು ಸಂಭವಿಸಿದೆ, ಆದರೆ ದೇಹದ ಮೇಲಿರುವ ಇತರೆ ಗಾಯಗಳು ಮರಣಕ್ಕೂ ಮುನ್ನ ಯಾವುದೋ ಮೊಂಡಾದ ವಸ್ತುವಿನಿಂದ ಹೊಡೆದ ಪರಿಣಾಮವಾಗಿವೆ ಎಂದು ತೀರ್ಮಾನಿಸಿದೆ. ರಕ್ತ, ಕೂದಲು ಮತ್ತು ಇತರೆ ಮಾದರಿಗಳನ್ನು ವಿಷಪರೀಕ್ಷೆ (toxicology) ಮತ್ತು ಡಿಎನ್‌ಎ (DNA) ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್ (FSL) ಗೆ ಕಳುಹಿಸಲಾಗಿದೆ.
ಆರೋಪಿಗಾಗಿ ಹುಡುಕಾಟ
ಈ ಪ್ರಕರಣದ ಮುಖ್ಯ ಆರೋಪಿ, ತ್ವಿಶಾ ಅವರ ಪತಿ ಸಮರ್ಥ್ ಸಿಂಗ್‌ಗಾಗಿ ವಿಶೇಷ ತನಿಖಾ ತಂಡ (SIT) ಮತ್ತು ಸ್ಥಳೀಯ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ಸಹಾಯವಾಗುವ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನವನ್ನು ಡಿಸಿಪಿ ಘೋಷಿಸಿದ್ದಾರೆ ಹಾಗೂ ಆತನ ವಿರುದ್ಧ ಲುಕೌಟ್ ನೋಟಿಸ್ ಕೂಡ ಹೊರಡಿಸಲಾಗಿದೆ ಎಂದು ಎಸಿಪಿ ರಜನೀಶ್ ಕಶ್ಯಪ್ ಕೌಲ್ ತಿಳಿಸಿದ್ದಾರೆ.
ತ್ವಿಶಾ ಅವರ ಅತ್ತೆ ಹಾಗೂ ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರು ಪ್ರತಿಕ್ರಿಯಿಸಿ, “ತ್ವಿಶಾ ಅವರಿಗೆ ಗರ್ಭದ ವಿಚಾರ ತಿಳಿದ ಕೂಡಲೇ, ಮಗುವನ್ನು ಹೆರುವ ಇಷ್ಟವಿಲ್ಲವೆಂದು ಗರ್ಭಪಾತ ಮಾಡಿಸಿಕೊಂಡರು. ಇದರಿಂದ ನನ್ನ ಮಗ ಮಾನಸಿಕವಾಗಿ ಕುಗ್ಗಿದ್ದ. ಇದೀಗ ನಮ್ಮ ಕುಟುಂಬದ ಮೇಲೆ ತಪ್ಪು ಆರೋಪ ಹೊರಿಸಲಾಗುತ್ತಿದೆ,” ಎಂದು ಆರೋಪಿಸಿದ್ದಾರೆ.
ಆದರೆ, ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ಜಾಮೀನಿನ ಮೇಲೆ ಹೊರಗಿರುವ ಅತ್ತೆ, ಮಾಧ್ಯಮಗಳ ಮುಂದೆ ನನ್ನ ಮಗಳ ಚಾರಿತ್ರ್ಯವನ್ನು ಹಾಳುಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಎರಡನೇ ಬಾರಿ ಶವಪರೀಕ್ಷೆ ನಡೆಯಬೇಕು ಮತ್ತು ಸುಪ್ರೀಂ ಕೋರ್ಟ್ ಅಥವಾ ಮುಖ್ಯ ನ್ಯಾಯಮೂರ್ತಿಗಳ (CJI) ಸುಪರ್ದಿಯಲ್ಲಿ ಸ್ವತಂತ್ರ ತನಿಖೆಯಾಗಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ನೋಯ್ಡಾ ಮೂಲದ ತ್ವಿಶಾ ಶರ್ಮಾ, ಭೋಪಾಲ್ ಮೂಲದ ಸಮರ್ಥ್ ಸಿಂಗ್ ಅವರನ್ನು ಡಿಸೆಂಬರ್ 2023 ರಲ್ಲಿ ವಿವಾಹವಾಗಿದ್ದರು. ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ, ಎಸ್‌ಐಟಿ (SIT) ರಚಿಸಿ ತನಿಖೆ ಮುಂದುವರಿಸಿದ್ದಾರೆ.




