ಪ್ರತಿ ವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. 1886ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ಕಾರ್ಮಿಕರು 8 ಗಂಟೆಗಳ ಕೆಲಸದ ಅವಧಿಗಾಗಿ ನಡೆಸಿದ ಹೋರಾಟದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಕೊಡುಗೆ, ತ್ಯಾಗ ಮತ್ತು ಹಕ್ಕುಗಳನ್ನು ಈ ದಿನ ಸ್ಮರಿಸಲಾಗುತ್ತದೆ. ಆದರೆ ಸಮಾಜದ ಬೆನ್ನೆಲುಬಾಗಿ ನಿಂತಿರುವ ಅಸಂಘಟಿತ ವಲಯದ ಕಾರ್ಮಿಕರ ಬದುಕಿನಲ್ಲಿ ಮಾತ್ರ ಇಂದಿಗೂ ಕತ್ತಲು ಆವರಿಸಿದೆ.
ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕೂಲಿಗಳು, ಮನೆಗೆಲಸದವರು ಮತ್ತು ಗಾರ್ಮೆಂಟ್ಸ್ ನೌಕರರು – ಹೀಗೆ ಅಸಂಘಟಿತ ವಲಯದ ಕಾರ್ಮಿಕರ ಸುರಿಸಿದ ಬೆವರಿನ ಹನಿಗಳಿಂದಲೇ ನಮ್ಮ ನಗರಗಳು ನಿರ್ಮಾಣವಾಗಿರುವುದು. ಆದರೆ ಈ ಕಾರ್ಮಿಕರ ಬೆವರ ಹನಿಗಳಿಗೆ ಸರಿಯಾದ ಬೆಲೆ ಮಾತ್ರ ಇಂದಿಗೂ ಸಿಗುತ್ತಿಲ್ಲ.
ಇದನ್ನು ಓದಿದ್ದೀರಾ? ದಾವಣಗೆರೆ | ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತೆ ಮಂಡಳಿಯಿಂದ ಓಲ್ಡ್ ಟೈರ್ ರಿಪೇರಿದಾರರಿಗೆ ಲೇಬರ್ ಕಾರ್ಡ್ ವಿತರಣೆ
ಕನಿಷ್ಠ ವೇತನದ ಕೊರತೆ ಅಸಂಘಟಿತ ವಲಯದ ಅತಿದೊಡ್ಡ ದುರಂತ. ಬೆಲೆ ಏರಿಕೆ ಆಕಾಶಕ್ಕೆ ಏಣಿ ಇಟ್ಟು ಮೇಲೆ ಸಾಗುತ್ತಲೇ ಇದೆ. ಇಂತಹ ಕಾಲದಲ್ಲಿ ದಿನವಿಡೀ ದುಡಿದರೂ ಅಸಂಘಟಿತ ವಲಯದ ಕಾರ್ಮಿಕರ ಕೈಗೆ ಬರುವ ಕೂಲಿ ಅತ್ಯಲ್ಪ. ನಮ್ಮ ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುವುದು ಒಂದು ಹೊತ್ತಿನ ದಿನಸಿ ಖರೀದಿಸುವಷ್ಟರಲ್ಲಿ ಮಿಂಚಿನಷ್ಟು ವೇಗದಲ್ಲಿ ಮಾಯವಾಗುವಷ್ಟೇ ಕೂಲಿ. ಈ ಕೂಲಿ ಒಂದು ಹೊತ್ತಿನ ಊಟಕ್ಕೆ ಮತ್ತು ಕುಟುಂಬದ ನಿರ್ವಹಣೆಗೂ ಸಾಕಾಗುತ್ತಿಲ್ಲ. “ಇಂದು ದುಡಿದರೆ ಮಾತ್ರ ಇಂದು ಊಟ” ಎನ್ನುವ ಸ್ಥಿತಿ ಕೋಟ್ಯಂತರ ಜನರದ್ದು. ಹೀಗಿರುವಾಗ ಆರೋಗ್ಯ, ಶಿಕ್ಷಣಕ್ಕಾಗಿ ಹಣ ಉಳಿತಾಯ ಎಂಬುದು ಈ ಕಾರ್ಮಿಕರಿಗೆ ಕನಸಿನ ಮಾತು.
ಸುರಕ್ಷತೆ ಇಲ್ಲದ ಬದುಕು ಅಸಂಘಟಿತ ಕಾರ್ಮಿಕರದ್ದು
ದೇಶ ಇಷ್ಟು ಮುಂದುವರೆದರೂ ಕಾರ್ಮಿಕರ ಮೇಲಿನ ಶೋಷಣೆ ಮುಗಿದಿಲ್ಲ. ಕಾರ್ಪೋರೇಟ್ ದೊರೆಗಳು ಬೆಳೆದಷ್ಟು ಅಸಂಘಟಿತ ವಲಯದ ಕಾರ್ಮಿಕರು ಇನ್ನಷ್ಟೂ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಶೋಷಣೆ ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ. ನೇರವಾಗಿ ಜೀತ ಎಂದು ಹೇಳಲಾಗದಿದ್ದರೂ, ಇಂದಿಗೂ ಇರುವುದು ಪರೋಕ್ಷ ಜೀತ ಪದ್ಧತಿಯೇ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ʼಪುರುಷಹಂಕಾರʼದ ದೌರ್ಜನ್ಯಕ್ಕೆ ಕೊನೆ ಎಂದು?
ಯಾವುದೇ ವಿಮೆ ಇಲ್ಲದೆ, ಜೀವದ ಹಂಗು ತೊರೆದು ಅಪಾಯಕಾರಿ ಜಾಗಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ನಮ್ಮ ವ್ಯವಸ್ಥೆ ಈ ಕಾರ್ಮಿಕರನ್ನು ದೂಡಿದೆ. ಎಂಟು ಗಂಟೆಗಳ ಕೆಲಸದ ನಿಯಮ ಕೇವಲ ಕಾಗದದ ಮೇಲಿದೆ. ಅಸಂಘಟಿತ ವಲಯದಲ್ಲಿ ದುಡಿಮೆಗೆ ಮಿತಿ ಇಲ್ಲ, ಆದರೆ ಅದಕ್ಕೆ ತಕ್ಕ ಪ್ರತಿಫಲವೂ ಇಲ್ಲ. (ಇತರೆ ಕಾರ್ಮಿಕರ ಸ್ಥಿತಿಯೂ ಇದೆ! ಎಂಬುದು ಗಮನಾರ್ಹ). ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯೂ ಇಲ್ಲ. ನಿವೃತ್ತಿ ವೇತನ, ಆರೋಗ್ಯ ವಿಮೆ ಅಥವಾ ಉದ್ಯೋಗದ ಖಾತರಿ ಎಂಬುದು ಇಲ್ಲದೆ ಸದಾ ಅತಂತ್ರ ಸ್ಥಿತಿಯಲ್ಲಿ ಈ ಕಾರ್ಮಿಕರು ಇರುವಂತಾಗಿದೆ.
ಕೇವಲ ಒಂದು ದಿನದ ಆಚರಣೆಯಿಂದ ಕಾರ್ಮಿಕರ ಬದುಕು ಹಸನಾಗುವುದಿಲ್ಲ. ಆದರೆ ಈ ದಿನದ ನೆಪದಲ್ಲಾದರೂ ಕಾರ್ಮಿಕರ ಹಕ್ಕುಗಳನ್ನು ನೆನಪಿಸಿಕೊಳ್ಳುವುದು ಸ್ವಾಗತಾರ್ಹ. ಈ ಹೋರಾಟ ವರ್ಷಪೂರ್ತಿ ಮುಂದುವರೆಸುವ ಹಲವು ಕಾರ್ಮಿಕ ಸಂಘಟನೆಗಳು ನಮ್ಮಲ್ಲಿವೆ. ಇನ್ನುಳಿದಿರುವುದು ಸರ್ಕಾರಗಳ ಮೇಲೆ. ಬಂಡವಾಳಶಾಹಿಗಳೆಡೆ ವಾಲಿರುವ ಸರ್ಕಾರವು ಕಾರ್ಮಿಕರೆಡೆ ನೋಡಲು ಚುನಾವಣೆಗಳು ಬರಬೇಕಷ್ಟೆ. ಕಾರ್ಮಿಕರನ್ನು ಕೇವಲ ‘ಯಂತ್ರ’ಗಳಂತೆ ನೋಡದೆ, ಅವರನ್ನು ಘನತೆಯುಳ್ಳ ಮನುಷ್ಯರೆಂದು ಪರಿಗಣಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು.
ಒಟ್ಟಿನಲ್ಲಿ ಸುಡುವ ಬಿಸಿಲಿನಲ್ಲಿ ರಸ್ತೆ ನಿರ್ಮಾಣ ಮಾಡುವವರಿಗೆ ಇಂದಿಗೂ ನೆರಳಿಲ್ಲ. ಅರಮನೆಯಂತಹ ಕಟ್ಟಡ ಕಟ್ಟುವವರಿಗೆ ಸ್ವಂತ ಮನೆಯಿಲ್ಲ. ಇದು ಇಂದಿನ ವಿಪರ್ಯಾಸ. ಕಾರ್ಮಿಕ ದಿನಾಚರಣೆ ಕೇವಲ ರಜೆಯ ದಿನವಾಗದೆ, ಶೋಷಿತರ ಧ್ವನಿಯಾಗಲಿ. ಕಾರ್ಮಿಕರ ಕೈಗಳಿಗೆ ಶಕ್ತಿ ಸಿಕ್ಕಾಗ ಮಾತ್ರ ದೇಶದ ಪ್ರಗತಿ ಅರ್ಥಪೂರ್ಣ.




