ತಮಿಳುನಾಡು ರಾಜಕಾರಣದಲ್ಲಿ ಈಗ ಹಿಂದೆಂದೂ ಕಂಡರಿಯದ ಸಾಂವಿಧಾನಿಕ ಸಂಘರ್ಷವೊಂದು ತಾರಕಕ್ಕೇರಿದೆ! ನೂತನ ಸರ್ಕಾರ ರಚನೆಯ ಕಸರತ್ತು ಜೋರಾಗಿ ನಡೆಯುತ್ತಿದ್ದರೂ, ಜನರ ಆಶೀರ್ವಾದ ಪಡೆದ ಟಿವಿಕೆ (TVK) ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಅಷ್ಟು ಸುಲಭವಾಗಿಲ್ಲ. ಜನಪ್ರಿಯ ನಾಯಕ ದಳಪತಿ ವಿಜಯ್ ಅವರು ಸತತ ಎರಡು ಬಾರಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರೂ, ರಾಜ್ಯಪಾಲರು ಮಾತ್ರ ಟಿವಿಕೆಯ ಸಂಖ್ಯಾಬಲವನ್ನು ಪ್ರಶ್ನಿಸಿ ಪ್ರತಿ ಬಾರಿಯೂ ವಿಜಯ್ ಅವರನ್ನು ಖಾಲಿ ಕೈಯಲ್ಲಿ ವಾಪಸ್ ಕಳುಹಿಸುತ್ತಿದ್ದಾರೆ. ನಾನು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ವಿಜಯ್ ಅಬ್ಬರಿಸಿದರೂ, ರಾಜ್ಯಪಾಲರು ಮಾತ್ರ ಅದಕ್ಕೆ ಅವಕಾಶ ನೀಡದೆ ಮೌನಕ್ಕೆ ಶರಣಾಗಿರುವುದು ಈಗ ಇಡೀ ತಮಿಳುನಾಡಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಟಿವಿಕೆ ಪಕ್ಷಕ್ಕೆ ಸ್ಪಷ್ಟ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ. ಆದರೆ 108 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ತಮಿಳುನಾಡು ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಕೂಡಲೇ ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಬೇಕು. ಈಗಾಗಲೇ ಎರಡು ಬಾರಿ ವಿಜಯ್ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದಾರೆ. 118 ಶಾಸಕರ ಬೆಂಬಲ ಇರುವ ಸಹಿ ಪಟ್ಟಿಯನ್ನು ರಾಜ್ಯಪಾಲರು ಕೇಳಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಚುನಾವಣೆ ಫಲಿತಾಂಶ ಬಂದು 4 ದಿನ ಕಳೆದರೂ ಸರ್ಕಾರ ರಚನೆ ಕೆಲಸ ಆರಂಭವಾಗಿಲ್ಲ. ರಾಜ್ಯಪಾಲರ ನಡೆ ಬಗ್ಗೆ ಕಮಲ್ ಹಾಸನ್, ಪ್ರಕಾಶ್ ರಾಜ್, ನಟ ಕಿಶೋರ್ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ನಡೆಗಳು ತೀವ್ರ ಟೀಕೆಗೆ ಗುರಿಯಾಗಿವೆ.
ವಿಜಯ್ ಅವರ ಪಕ್ಷದ ಸೈದ್ಧಾಂತಿಕ ನಿಲುವುಗಳು ಮತ್ತು ಜನಬೆಂಬಲದ ನಡುವೆಯೂ, ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯಂತೆ ವರ್ತಿಸುತ್ತಿರುವುದು ಸಂವಿಧಾನಾತ್ಮಕ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಿದೆ. ತಮಿಳುನಾಡಿನ ಜನರು ಜನಾದೇಶ ನೀಡಿದರೂ, ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸಿ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಅಥವಾ ಆಡಳಿತದಲ್ಲಿ ಅಡೆತಡೆ ಉಂಟುಮಾಡುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಚುನಾಯಿತ ಪ್ರತಿನಿಧಿಗಳಿಗಿಂತ ನಾಮನಿರ್ದೇಶಿತ ರಾಜ್ಯಪಾಲರೇ ಮೇಲು ಎಂಬಂತೆ ವರ್ತಿಸುತ್ತಿರುವುದು ರಾಜಕೀಯ ಸಂಘರ್ಷವನ್ನು ತಾರಕಕ್ಕೇರಿಸಿದೆ. ಈ ಮಧ್ಯೆ ವಿಜಯ್ ಅವರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಡದಿರುವುದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂಬ ಗಂಭೀರ ಆರೋಪ ಕೂಡ ಕೇಳಿಬರುತ್ತಿದೆ.

ಹೌದು, ವಿಜಯ್ ಅವರು ತಮ್ಮ ಸಿದ್ಧಾಂತದಲ್ಲಿ ಬಿಜೆಪಿಯ ರಾಜಕಾರಣವನ್ನು ಬಹಿರಂಗವಾಗಿ ವಿರೋಧಿಸಿದ್ದೇ ರಾಜ್ಯಪಾಲರ ಈ ಕಠಿಣ ಧೋರಣೆಗೆ ಮುಖ್ಯ ಕಾರಣ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ರಾಜ್ಯಪಾಲರ ಹುದ್ದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಚುನಾಯಿತ ನಾಯಕನಿಗೆ ಸಾಂವಿಧಾನಿಕ ಹಕ್ಕು ನಿರಾಕರಿಸುವ ಮೂಲಕ, ರಾಜ್ಯಪಾಲರು ಕೇಂದ್ರದ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಮತ್ತು ವಿಜಯ್ ಮೇಲೆ ರಾಜಕೀಯ ಒತ್ತಡ ಹೇರಲು ಯತ್ನಿಸುತ್ತಿದ್ದಾರೆ ಎಂಬುದು ಸಾರ್ವಜನಿಕ ಚರ್ಚೆಯ ಮುಖ್ಯ ವಿಷಯವಾಗಿದೆ.
ರಾಜ್ಯಪಾಲರ ವಿವೇಚನಾಧಿಕಾರವು ಹೇಗೆ ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಬಳಕೆಯಾಗುತ್ತಿದೆ ಎಂಬುದಕ್ಕೆ ಈ ಕೆಳಗಿನ ನಾಲ್ಕು ಉದಾಹರಣೆಗಳು ಸಾಕ್ಷಿಯಾಗಿವೆ.
ಮಹಾರಾಷ್ಟ್ರ (2019): 2019ರಲ್ಲಿ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ. ಆದರೂ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಬೆಳಗಿನ ಜಾವದ ಗುಪ್ತ ಸಮಾರಂಭದಲ್ಲಿ ಬಿಜೆಪಿ ಮತ್ತು ಎನ್‌ಸಿಪಿಯ ಒಂದು ಬಣಕ್ಕೆ ಪ್ರಮಾಣವಚನ ಬೋಧಿಸಿದರು. ಇದು ಸಂವಿಧಾನದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ನಡೆಯಾಗಿ ಉಳಿಯಿತು.
ಕರ್ನಾಟಕ (2018): 2018ರಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಸ್ಪಷ್ಟ ಸಂಖ್ಯೆ ಇದ್ದರೂ, ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಬಹುಮತವಿಲ್ಲದ ಪಕ್ಷಕ್ಕೆ ಅವಕಾಶ ನೀಡಿದ್ದು ಕುದುರೆ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟಿತು ಎಂಬ ಟೀಕೆ ಕೇಳಿಬಂದಿತು.
ಗೋವಾ (2017): ಗೋವಾದಲ್ಲಿ 2017ರಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ರಾಜ್ಯಪಾಲರು ಆ ಪಕ್ಷವನ್ನು ಆಹ್ವಾನಿಸುವ ಬದಲು ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರು. ಇದು ಸಂವಿಧಾನದ ಸಂಪ್ರದಾಯಗಳ ನೇರ ಉಲ್ಲಂಘನೆಯಾಗಿತ್ತು.
ಮಣಿಪುರ (2017): ಇನ್ನು ಮಣಿಪುರಲ್ಲಿ 2017ರಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದರೂ, ರಾಜ್ಯಪಾಲರು ಬಿಜೆಪಿಯನ್ನು ಆಹ್ವಾನಿಸಿದರು. ಈ ಎಲ್ಲಾ ಪ್ರಕರಣಗಳಲ್ಲಿ ರಾಜ್ಯಪಾಲರು ಕೇಂದ್ರದ ಆಡಳಿತಾರೂಢ ಪಕ್ಷದ ಹಿತಾಸಕ್ತಿಯನ್ನೇ ಕಾಪಾಡಿದರು ಎಂಬುದು ಸ್ಪಷ್ಟವಾಗುತ್ತದೆ.

ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಾಗಲೆಲ್ಲಾ ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಣೆಗೆ ನಿಂತಿದೆ. ವಿಶೇಷವಾಗಿ ಮಹಾರಾಷ್ಟ್ರ (2019) ಪ್ರಕರಣದಲ್ಲಿ, ಮಧ್ಯರಾತ್ರಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಬೆಳಗಿನ ಜಾವ ಗುಟ್ಟಾಗಿ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಕುದುರೆ ವ್ಯಾಪಾರವನ್ನು ತಡೆಯಲು ತಕ್ಷಣವೇ ಅಂದರೆ ಕೇವಲ 24 ಗಂಟೆಯೊಳಗೆ ಬಹಿರಂಗ ಮತದಾನದ ಮೂಲಕ ಬಹುಮತ ಸಾಬೀತುಪಡಿಸಬೇಕು” ಎಂದು ಆದೇಶಿಸಿ ರಾಜ್ಯಪಾಲರ ವಿಳಂಬ ನೀತಿಗೆ ಬ್ರೇಕ್ ಹಾಕಿತ್ತು.
ಇನ್ನು ಕರ್ನಾಟಕ (2018) ಪ್ರಕರಣದಲ್ಲಂತೂ, ಬಹುಮತ ಸಾಬೀತುಪಡಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದ 15 ದಿನಗಳ ಸುದೀರ್ಘ ಕಾಲಾವಕಾಶವನ್ನು ಕಂಡು ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿತ್ತು. ಆ ಕಾಲಾವಕಾಶವನ್ನು ಕೇವಲ 24 ಗಂಟೆಗಳಿಗೆ ಕಡಿತಗೊಳಿಸಿದ ಕೋರ್ಟ್, “ಸಂಖ್ಯಾಬಲವಿಲ್ಲದವರಿಗೆ ಸರ್ಕಾರ ರಚಿಸಲು ಇಷ್ಟು ಕಾಲಾವಕಾಶ ನೀಡುವುದು ಪ್ರಜಾಪ್ರಭುತ್ವದ ಕಗ್ಗೊಲೆಗೆ ದಾರಿ ಮಾಡಿಕೊಟ್ಟಂತೆ” ಎಂದು ಖಾರವಾಗಿ ಎಚ್ಚರಿಸಿತ್ತು. ಈ ತೀರ್ಪುಗಳು ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದಾಗ ಸುಪ್ರೀಂ ಕೋರ್ಟ್ ಹೇಗೆ ಅವರಿಗೆ ‘ಸಾಂವಿಧಾನಿಕ ಮಂಗಳಾರತಿ’ ಮಾಡುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ.
ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ:- ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯಪಾಲರೊಂದಿಗೆ ನಿರಂತರ ತಿಕ್ಕಾಟ ನಡೆಯುತ್ತಿದೆ. ರಾಜ್ಯಪಾಲರು ಕೇವಲ ಸಾಂವಿಧಾನಿಕ ಮುಖ್ಯಸ್ಥರಾಗಿ ಇರದೆ, ಸರ್ಕಾರದ ದೈನಂದಿನ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದ ಗಂಭೀರ ಆರೋಪವಾಗಿತ್ತು.
ತಮಿಳುನಾಡು ವಿಧಾನಸಭೆಯು ಜನರ ಹಿತದೃಷ್ಟಿಯಿಂದ ಅಂಗೀಕರಿಸಿದ ‘ನೀಟ್’ (NEET) ಪರೀಕ್ಷೆ ವಿರೋಧಿ ಮಸೂದೆಯನ್ನು ರಾಜ್ಯಪಾಲರು ದೀರ್ಘಕಾಲ ಅಂಕಿತ ಹಾಕದೆ ತಡೆಹಿಡಿದರು. ಇದು ರಾಜ್ಯದ ಶಾಸಕಾಂಗದ ಸಾರ್ವಭೌಮತ್ವಕ್ಕೆ ಮಾಡಿದ ಅವಮಾನವಾಗಿತ್ತು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲವು ಪ್ರಮುಖ ಅಂಶಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದರು. ಇದು ಸಾಂವಿಧಾನಿಕ ಶಿಷ್ಟಾಚಾರದ ಉಲ್ಲಂಘನೆಯಾಗಿತ್ತು. ಮುಖ್ಯಮಂತ್ರಿಯ ಸಲಹೆಯಿಲ್ಲದೆ ಸಚಿವರೊಬ್ಬರನ್ನು ಸಂಪುಟದಿಂದ ವಜಾಗೊಳಿಸುವ ರಾಜ್ಯಪಾಲರ ಆದೇಶವು ಅವರ ಹಕ್ಕುಗಳ ದುರ್ಬಳಕೆಗೆ ಅತ್ಯಂತ ಕೆಟ್ಟ ಉದಾಹರಣೆಯಾಗಿದೆ. ನಂತರ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಭೀತಿಯಿಂದ ಈ ನಿರ್ಧಾರವನ್ನು ಹಿಂಪಡೆಯಲಾಯಿತು.

ಇನ್ನು ನಾವಿಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಇದೆ. ತಮಿಳುನಾಡಿನ ರಾಜಕೀಯ ಪಕ್ಷಗಳು ಸೈದ್ಧಾಂತಿಕವಾಗಿ ಎಷ್ಟೇ ಭಿನ್ನಾಭಿಪ್ರಾಯ ಹೊಂದಿದ್ದರೂ, ರಾಜ್ಯದ ಹಕ್ಕು ಮತ್ತು ದ್ರಾವಿಡ ಅಸ್ಮಿತೆಯ ಪ್ರಶ್ನೆ ಬಂದಾಗ ಅವೆಲ್ಲವೂ ಒಂದೇ ಧ್ವನಿಯಲ್ಲಿ ನಿಲ್ಲುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆಯೆಂದರೆ, ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚನೆಯ ಪ್ರಯತ್ನದಲ್ಲಿರುವ ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರಿಗೆ ಅವರ ರಾಜಕೀಯ ಬದ್ಧವೈರಿ ಡಿಎಂಕೆ (DMK) ಬೆಂಬಲ ನೀಡುತ್ತಿರುವುದು. ಟಿವಿಕೆ ಪಕ್ಷದ ಉದಯದಿಂದಲೇ ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ಸಹ, ಡಿಎಂಕೆ ಪಕ್ಷವು ಈಗ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸುತ್ತಿರುವುದು ಅಚ್ಚರಿಯಾದರೂ ಸತ್ಯ. ಟಿವಿಕೆ ಸರ್ಕಾರ ರಚನೆಗೆ ಅಡ್ಡಿಯಾಗಿರುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ನಡೆ ತಮಿಳುನಾಡಿನ ಜನಾದೇಶಕ್ಕೆ ಮತ್ತು ರಾಜ್ಯದ ಘನತೆಗೆ ಮಾಡುತ್ತಿರುವ ಅವಮಾನ ಎಂದು ಡಿಎಂಕೆ ತೀವ್ರವಾಗಿ ಗುಡುಗಿದೆ. ಈ ಮೂಲಕ ತಮಿಳು ಮಣ್ಣಿನ ಅಸ್ಮಿತೆಯ ಮುಂದೆ ರಾಜಕೀಯ ವೈರತ್ವ ಗೌಣ ಎಂಬುದನ್ನು ದ್ರಾವಿಡ ಪಕ್ಷಗಳು ಜಗತ್ತಿಗೆ ಸಾರಿವೆ.

ಇಂದು ಭಾರತದ ರಾಜಕಾರಣದಲ್ಲಿ ಒಂದು ವಿಚಿತ್ರ ಮಾದರಿ ಕಂಡುಬರುತ್ತಿದೆ. ಎಲ್ಲಿ ಬಿಜೆಪಿಯೇತರ ಸರ್ಕಾರಗಳಿವೆಯೋ ಅಲ್ಲಿ ರಾಜ್ಯಪಾಲರು ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಕೇರಳದ ವಿಶ್ವವಿದ್ಯಾಲಯಗಳ ವಿವಾದ, ಪಶ್ಚಿಮ ಬಂಗಾಳದ ಆಡಳಿತಾತ್ಮಕ ತಿಕ್ಕಾಟ ಮತ್ತು ಪಂಜಾಬ್‌ನ ವಿಧಾನಸಭೆ ಅಧಿವೇಶನದ ವಿವಾದಗಳೆಲ್ಲವೂ ಈ ಸಂಘರ್ಷದ ಭಾಗಗಳೇ ಆಗಿವೆ. ಇದು ರಾಜ್ಯಪಾಲರ ಹುದ್ದೆಯು ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಸವಾರಿ ಮಾಡಲು ಬಳಸುತ್ತಿರುವ ‘ರಾಜಕೀಯ ಅಸ್ತ್ರ’ ಎಂಬ ಮಾತನ್ನು ಸಾಬೀತುಪಡಿಸುತ್ತಿದೆ.
ಈ ಎಲ್ಲಾ ಬೆಳವಣಿಗೆಗಳು ಒಂದು ಮೂಲಭೂತ ಪ್ರಶ್ನೆಯನ್ನು ಎತ್ತಿವೆ. ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರ ಹುದ್ದೆ ನಿಜಕ್ಕೂ ಅಗತ್ಯವಿದೆಯೇ? ಜನರು ಮತ ಹಾಕಿ ಆರಿಸಿದ ಸರ್ಕಾರವನ್ನು ನಾಮನಿರ್ದೇಶಿತ ವ್ಯಕ್ತಿಯೊಬ್ಬರು ನಿಯಂತ್ರಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಭಾರತವು ರಾಜ್ಯಗಳ ಒಕ್ಕೂಟ. ಇಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ಇದೆ. ಆದರೆ ರಾಜ್ಯಪಾಲರು ಕೇಂದ್ರದ ಅಣತಿಯಂತೆ ಕೆಲಸ ಮಾಡುತ್ತಿರುವುದರಿಂದ ರಾಜ್ಯಗಳ ಹಕ್ಕುಗಳು ಹರಣವಾಗುತ್ತಿವೆ. ಯಾವುದೇ ನೇರ ಜವಾಬ್ದಾರಿ ಇಲ್ಲದಿದ್ದರೂ ರಾಜ್ಯಪಾಲರ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ. ಇದು ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗಬೇಕಾದ ಹಣದ ಅಪವ್ಯಯವಾಗಿದೆ. ನಿವೃತ್ತ ರಾಜಕಾರಣಿಗಳಿಗೆ ಅಥವಾ ಕೇಂದ್ರದ ಆಪ್ತರಿಗೆ ರಾಜ್ಯಪಾಲರ ಹುದ್ದೆ ನೀಡುವುದು ಆ ಹುದ್ದೆಯ ಘನತೆಯನ್ನೂ ಕಡಿಮೆ ಮಾಡಿದೆ.
ತಮಿಳುನಾಡಿನ ವಿಜಯ್ ಅವರ ಪಕ್ಷದ ಉದಯ ಅಥವಾ ಡಿಎಂಕೆ ಸರ್ಕಾರದ ಹೋರಾಟವು ಕೇವಲ ರಾಜಕೀಯವಲ್ಲ, ಅದು ರಾಜ್ಯಗಳ ಅಸ್ಮಿತೆಯ ಹೋರಾಟವಾಗಿದೆ. ರಾಜ್ಯಪಾಲರು ಸಂವಿಧಾನದ ಕಾವಲುಗಾರರಾಗಿರಬೇಕೇ ಹೊರತು ಕೇಂದ್ರದ ದೂತರಾಗಿರಬಾರದು. ಸಂವಿಧಾನ ನೀಡಿದ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡು ಜನರ ಆಶಯವನ್ನು ಹತ್ತಿಕ್ಕುವ ಕೆಲಸ ನಿಲ್ಲಬೇಕು. ಒಂದು ವೇಳೆ ರಾಜ್ಯಪಾಲರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳದಿದ್ದರೆ, ಈ ಹುದ್ದೆಯನ್ನೇ ರದ್ದುಗೊಳಿಸುವ ಅಥವಾ ಅವರ ಅಧಿಕಾರಕ್ಕೆ ಸ್ಪಷ್ಟವಾದ ಕಾನೂನು ಚೌಕಟ್ಟು ವಿಧಿಸುವ ಕಾಲ ದೂರವಿಲ್ಲ. ಪ್ರಜಾಪ್ರಭುತ್ವದ ಬುನಾದಿ ಇರುವುದು ಜನರ ಮತದಲ್ಲಿಯೇ ಹೊರತು ರಾಜಭವನದ ಆದೇಶಗಳಲ್ಲಲ್ಲ.




