ಜೀವನದುದ್ದಕ್ಕೂ ಸ್ವಂತ ಸೂರಿಗಾಗಿ ಹೆಣಗಾಡಿದ್ದ, ಮಣ್ಣನ್ನೇ ಹೊತ್ತು ಮಣ್ಣಿನಲ್ಲೇ ಗುಡಿಸಲು ಕಟ್ಟಿಕೊಂಡಿದ್ದ ನಿವಾಸಿಗಳಿಗೆ ಕೊನೆಗೂ ಸ್ವಂತಕ್ಕೊಂದು ವಸತಿ ಸಿಗುವ ಕಾಲ ಸನ್ನಿಹಿತವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಸುತ್ತಮುತ್ತಲಿನ ಗಣಿ ಬಾಧಿತ ಪ್ರದೇಶಗಳ ನಿವಾಸಿಗಳಿಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ ಸುಸಜ್ಜಿತ ಸೂರು ಕಟ್ಟಿಸಿಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಕೆಎಂಇಆರ್‌ಸಿ ಯೋಜನೆಯಡಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಅರ್ಹ ಫಲಾನುಭವಿಗಳಿಗೆ 1,146 ಕೋಟಿ ರೂಪಾಯಿ ವೆಚ್ಚದಲ್ಲಿ 1,183 ಕುಟುಂಬಗಳಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಮನೆಗಳನ್ನು ಕಲ್ಪಿಸಿಕೊಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಜಿಲ್ಲಾಡಳಿತ ತಯಾರಿಸಿದೆ ನೀಲನಕ್ಷೆ:
ಈಗಾಗಲೇ ಯೋಜನೆಯ ಸಂಪೂರ್ಣ ಬ್ಲ್ಯೂಪ್ರಿಂಟ್ ಸಿದ್ಧವಾಗಿದೆ. ಅದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕೃತ ಅನುಮೋದನೆಯೂ ದೊರೆತಿದೆ. ಜಿಲ್ಲೆಯ ಗಣಿಬಾಧಿತ ಪ್ರದೇಶಗಳಾದ ಜಂಬುನಾಥ ಹಳ್ಳಿ ಕ್ಯಾಂಪ್‌ನಲ್ಲಿ 52 ಕುಟುಂಬಗಳು, ಕೆಎಂಎಂಐ ಕ್ಯಾಂಪಿನ 94 ಕುಟುಂಬ, ಬಾಂಬೆ ಕ್ಯಾಂಪಿನ 90, ಹಂಪಿನಕಟ್ಟೆಯಲ್ಲಿ 83, ಅಂಬೇಡ್ಕರ್ ನಗರದಲ್ಲಿ 84 ಕುಟುಂಬ, ಕಾರಿಗನೂರು ಕ್ಯಾಂಪ್‌ನಲ್ಲಿ 139 ಕುಟುಂಬ, ಕೊಟ್ರೇಶ್ವರ್ ನಗರ ಕ್ಯಾಂಪ್‌ನಲ್ಲಿ 113 ಕುಟುಂಬಗಳು ವಾಸವಾಗಿವೆ.
“ಅರ್ಹ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಲಾಗಿದ್ದು, ಶಿಕಾರಿ ಕ್ಯಾಂಪ್‌ನಲ್ಲಿ 73 ಕುಟುಂಬಗಳು ವಾಸವಾಗಿದ್ದು, ಅದರಲ್ಲಿ 60 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ಇನ್ನುಳಿದ 10 ಕುಟುಂಬಗಳಿಗೆ ನಿವೇಶನ ಕೊರತೆಯಿಂದಾಗಿ ಬಾಕಿ ಉಳಿದಿದೆ. ನಿವೇಶನ ಕಲ್ಪಿಸುವುದರ ಜತೆಗೆ ರಾಜೀವ್ ಗಾಂಧಿ, ಇನ್ನಿತರ ವಸತಿ ಯೋಜನೆಯಡಿ ಇಲ್ಲಿನ ಸುಮಾರು 1,183 ಅರ್ಹ ಫಲಾನುಭವಿಗಳಿಗೆ ನೀರು, ರಸ್ತೆ, ಬೀದಿದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡ ವಸತಿ ನಿರ್ಮಿಸಿಕೊಡಲಾಗುವುದು” ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ತಿಳಿಸಿದ್ದಾರೆ.
ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
“ಗಣಿಬಾಧಿತರಿಗೆ ಸುಸಜ್ಜಿತ ವಸತಿ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿರುವುದರಿಂದ ಪ್ರತಿ ಹಂತದಲ್ಲೂ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಬೇಕು. ಕೇವಲ ಮನೆ ಕಟ್ಟುವುದಷ್ಟೇ ನಮ್ಮ ಗುರಿಯಲ್ಲ, ಮನೆಗಳು ವಾಸಕ್ಕೆ ಸಿದ್ಧವಾಗುವ ಮೊದಲೇ ಕುಡಿಯುವ ನೀರು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕಾರ್ಯ ಪೂರ್ಣಗೊಳ್ಳಬೇಕು. 1,183 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಅರ್ಹ ಗಣಿಬಾಧಿತ ಕುಟುಂಬಗಳಿಗೆ ಮಾತ್ರ ಈ ಸೌಲಭ್ಯ ತಲುಪುವಂತೆ ಹಾಗೂ ಪ್ರತಿ ಅರ್ಹ ಫಲಾನುಭವಿಯೂ ಯೋಜನೆಯಿಂದ ಹೊರಗುಳಿಯದಂತೆ ನಿಗಾವಹಿಸಲು ತಾಕೀತು ಮಾಡಲಾಗಿದೆ. ನಿರ್ಲಕ್ಷ್ಯ ವಹಿಸುವ, ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಸೂರಿಗಾಗಿ ಪರಿತಪಿಸುತಿರುವ ಬಾಧಿತರು
ಜಿಲ್ಲಾಡಳಿತ ವಸತಿ ಭಾಗ್ಯ ಕಲ್ಪಿಸುವ ವಿಷಯ ತಿಳಿದಂತೆ ಗಣಿಭಾದಿತ ನಿವಾಸಿಗಳು ಸಂತಸಗೊಂಡಿದ್ದು, ಬೊಂಬೆ ಕ್ಯಾಂಪ್ ನಿವಾಸಿಯಾಗಿರುವ ವೃದ್ಧೆ ಚೌಡಮ್ಮ ಮಾತನಾಡಿ, “ನಮ್ಮ ಅತ್ತೆಯ ಕಾಲದಿಂದಲೂ ಈ ಕ್ಯಾಂಪಿನಲ್ಲೇ ಇದ್ದೇವೆ. ಮಳೆ ಬಂದರೆ ಮನೆಗಳು ಸೋರುವುದರಿಂದ ಮಲಗಲು ಅಂಗೈ ಅಗಲ ಜಾಗ ಸಿಗದೆ ಪರದಾಡಿದ್ದೇವೆ. ಗೃಹೋಪಯೋಗಿ ವಸ್ತುಗಳೆಲ್ಲ ತೋಯ್ದು ರಾತ್ರಿಯೆಲ್ಲ ಜಾಗರಣೆ ಮಾಡಬೇಕಾಗುತ್ತಿತ್ತು. ಈಗ ಸರ್ಕಾರ ಮನೆ ಕಟ್ಟಿಸಿಕೊಡುವ ಸುದ್ದಿ ಕೇಳಿ ಹಾಲು ಕುಡಿದಷ್ಟೇ ಸಂತೋಷವಾಯಿತು” ಎಂದರು.
ಬೊಂಬೆ ಕ್ಯಾಂಪಿನ ಮತ್ತೊಬ್ಬ ವೃದ್ಧೆ ಯಮುನಮ್ಮ ಮಾತನಾಡಿ, “40-50 ವರ್ಷಗಳಿಂದಲೂ ಗುಡಿಸಲಲ್ಲೇ ವಾಸ ಮಾಡುತ್ತಿದ್ದೇವೆ. ಮನೆಗಾಗಿ ಅಲೆದಾಡಿ ಅಲೆದಾಡಿ ವಯಸ್ಸಾಯಿತೇ ಹೊರತು, ಮನೆ ಸಿಗುವ ಭರವಸೆಗಳೇ ಕಾಣಿಸಲಿಲ್ಲ. ಜಿಲ್ಲಾಡಳಿತ ವಸತಿ ಕಲ್ಪಿಸಿಕೊಡಲು ಮುಂದಾಗಿರುವುದು ಕೊಂಚ ಸಮಾಧಾನ ತಂದಿದೆ” ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ> ಮೇಡಿಹಾಳ ಗ್ರಾಮದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ರೈತರ ಬೆಳೆ-ಮನೆಗಳಿಗೆ ಕಲ್ಲಿನ ಮಳೆ, ಧೂಳಿನ ಪರದೆ
ಇನ್ನು ಕೆಎಂಎಂಐ ಕ್ಯಾಂಪ್ ನಿವಾಸಿಗಳೂ ಹರ್ಷ ವ್ಯಕ್ತಪಡಿಸಿದ್ದು “ಈ ಕ್ಯಾಂಪಿನ ಸುತ್ತ ಕರಡಿಗಳ ವಾಸ್ತವ್ಯವಿದ್ದು, ಜನರು ರಾತ್ರಿ ಹೊತ್ತು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಕಾಡಿನಲ್ಲಿದ್ದೇವೆಂದು ಇಲ್ಲಿನ ಹುಡುಗಿಯರನ್ನು ವಿವಾಹವಾಗಲು ಯಾರೂ ಮುಂದೆ ಬರುತ್ತಿಲ್ಲ. ಕ್ಯಾಂಪ್‌ನ ಹುಡುಗರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈಗಲಾದರೂ ಒಂದು ಸ್ವಂತದ ಸೂರು ಕೊಡಿ. ನಿಮ್ಮ ಹೆಸರು ಹೇಳಿಕೊಂಡು ಉಸಿರು ಇರುವವರೆಗೂ ಜೀವನ ಮಾಡುತ್ತೇವೆ” ಎಂದು ಮನವಿ ಮಾಡಿದ್ದಾರೆ.
ಸದ್ಯ ಗಣಿಬಾಧಿತ ನಿವಾಸಿಗಳಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಭರವಸೆ ನೀಡಿ ನಮ್ಮ ಸ್ವಂತ ನಿವೇಶನದ ಕನಸಿಗೆ ತಣ್ಣೀರೆರಚಿದ ಉದಾಹರಣೆಗಳಿವೆ. ಈ ಬಾರಿಯಾದರೂ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ನೊಂದ ಜೀವಗಳಿಗೆ ನ್ಯಾಯ ಒದಗಿಸಬೇಕು” ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



