ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿಯ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಧರೆ ಒಣಗಿದೆ, ಡಿಎಪಿ ಮತ್ತು ಯೂರಿಯಾ ಸೇರಿದಂತೆ ಪ್ರಮುಖ ರಸಗೊಬ್ಬರಗಳ ಕೊರತೆ ಹಾಗೂ ಗಗನ್ನಕ್ಕೇರಿದ ಗೊಬ್ಬರದ ಬೆಲೆ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿಯೂ ಉತ್ತಮ ಮುಂಗಾರು ಆಗುವ ನಿರೀಕ್ಷೆಯಲ್ಲಿ ರೈತರು ಕೃಷಿ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಮುಂಗಾರು ಆರಂಭಕ್ಕೂ ಮುನ್ನವೇ ಜಮೀನುಗಳನ್ನು ಹದಗೊಳಿಸಿ, ಬೀಜ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳ ಖರೀದಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದರು. ಆದರೆ ಮುಂಗಾರು ಆರಂಭವಾದ ನಂತರ ಕೆಲ ದಿನಗಳಷ್ಟೇ ಅಲ್ಪ ಪ್ರಮಾಣದ ಮಳೆಯಾಗಿ, ಬಳಿಕ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದ ರೈತರು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ.
ಕೆಲ ರೈತರು ಮೊದಲ ಮಳೆಯನ್ನೇ ನಂಬಿಕೊಂಡು ಹತ್ತಿ, ತೊಗರಿ, ಸಜ್ಜೆ, ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ನಡೆಸಿದ್ದರು. ಆದರೆ ನಂತರ ಮಳೆ ಸುರಿಯದ ಕಾರಣ ಬಿತ್ತಿದ ಬೀಜಗಳು ಮೊಳಕೆಯಾಗದೆ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಮೊಳಕೆಯೊಡೆದ ಗಿಡಗಳು ಸಹ ನೀರಿನ ಕೊರತೆಯಿಂದ ಒಣಗುತ್ತಿವೆ. ಪರಿಣಾಮವಾಗಿ ಹಲವರು ಮರುಬಿತ್ತನೆಗೆ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ಅನೇಕ ಭಾಗಗಳಲ್ಲಿ ಬಿತ್ತನೆ ಕಾರ್ಯಗಳು ಇನ್ನೂ ಆರಂಭವಾಗದೇ ಉಳಿದಿವೆ. ರೈತರ ಮಾಹಿತಿ ಪ್ರಕಾರ, ಯಾದಗಿರಿ ಜಿಲ್ಲೆಯ ಸುಮಾರು ಶೇ.70ರಷ್ಟು ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿಲ್ಲ. ಬಿತ್ತನೆ ಅವಧಿ ವಿಳಂಬವಾದರೆ ಬೆಳೆಗಳ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ಅಂತಿಮವಾಗಿ ಇಳುವರಿ ಕುಸಿತ ಮತ್ತು ಆದಾಯ ನಷ್ಟಕ್ಕೆ ಕಾರಣವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿರುವ ರೈತರು ಈಗಾಗಲೇ ಜಮೀನು ಉಳುಮೆ, ಟ್ರ್ಯಾಕ್ಟರ್ ಬಾಡಿಗೆ, ಬೀಜ ಖರೀದಿ, ಕೂಲಿ ವೆಚ್ಚ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದಾರೆ. ಮಳೆ ಕೈಕೊಟ್ಟರೆ ಈ ಎಲ್ಲ ವೆಚ್ಚಗಳು ನೀರಿನಲ್ಲಿ ಹೋಮವಾದಂತಾಗಲಿದ್ದು, ರೈತರು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಕೃಷಿ ಆಧಾರಿತ ಕುಟುಂಬಗಳಲ್ಲಿ ಭವಿಷ್ಯದ ಬಗ್ಗೆ ಆತಂಕ ಮನೆಮಾಡಿದೆ.
ರಸಗೊಬ್ಬರ ಕೊರತೆ ರೈತರ ಅಸಮಾಧಾನಕ್ಕೆ ಕಾರಣ
ಮಳೆ ಕೊರತೆಯ ಸಮಸ್ಯೆಯ ನಡುವೆಯೇ ರಸಗೊಬ್ಬರದ ಕೊರತೆಯೂ ರೈತರನ್ನು ಕಾಡುತ್ತಿದೆ. ರಾಯಚೂರು ಜಿಲ್ಲೆಯ ದೇವದುರ್ಗ, ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳಲ್ಲಿ ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳ ಕೊರತೆ ಕಂಡುಬಂದಿದೆ ಎಂದು ರೈತರು ಆರೋಪಿಸಿದ್ದಾರೆ.
ಸರ್ಕಾರದ ದರದಲ್ಲಿ ಲಭ್ಯವಾಗಬೇಕಾದ ರಸಗೊಬ್ಬರಗಳು ಕೆಲ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಡಿಎಪಿ ಚೀಲವನ್ನು ₹1,800ರವರೆಗೆ ಹಾಗೂ ಯೂರಿಯಾವನ್ನು ₹400ರಿಂದ ₹500ರವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡದೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದರಿಂದ ರೈತರು ಹೆಚ್ಚುವರಿ ಹಣ ನೀಡಿ ಗೊಬ್ಬರ ಖರೀದಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ನಿರ್ಣಾಯಕ ಸಮಯದಲ್ಲಿ ರಸಗೊಬ್ಬರ ದೊರೆಯದಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದ್ದು, ಹಲವರು ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ವಲಸೆ ಭೀತಿ ವ್ಯಕ್ತಪಡಿಸಿದ ರೈತರು
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ರೈತ ಮುಖಂಡ ನಿಂಗಣ್ಣ ಕರಡಿ ಯಕ್ಷಿಂತಿ, “ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ರೈತರು ಈಗಾಗಲೇ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ, ಮಳೆ ಬಾರದಿದ್ದರೆ ಬೆಳೆಗಳು ನಾಶವಾಗಲಿದ್ದು, ರೈತರು ಮತ್ತಷ್ಟು ಸಾಲದ ಹೊರೆ ಹೊರುವ ಪರಿಸ್ಥಿತಿ ಎದುರಾಗಲಿದೆ” ಎಂದು ಸಂಕಟ ವ್ಯಕ್ತಪಡಿಸಿದರು.
“ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಬೆಂಗಳೂರು, ಮಹಾರಾಷ್ಟ್ರ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಬಹುದು. ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆಯೂ ಇದರ ದುಷ್ಪರಿಣಾಮ ಬೀಳಲಿದೆ” ಎಂದು ಅವರು ಎಚ್ಚರಿಸಿದರು.
ತಕ್ಷಣ ಕ್ರಮಕ್ಕೆ ರೈತರ ಆಗ್ರಹ
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯು ರೈತರ ಅಗತ್ಯತೆಗಳನ್ನು ಅರಿತು ವೈಜ್ಞಾನಿಕವಾಗಿ ರಸಗೊಬ್ಬರ ವಿತರಣೆ ವ್ಯವಸ್ಥೆ ರೂಪಿಸಬೇಕು. ಪ್ರತಿ ಎಕರೆಗೆ ಕನಿಷ್ಠ ಒಂದು ಡಿಎಪಿ ಹಾಗೂ ಒಂದು ಯೂರಿಯಾ ಚೀಲ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು. ಕಾಳಸಂತೆಗೆ ಕಡಿವಾಣ ಹಾಕಿ ನ್ಯಾಯಯುತ ಬೆಲೆಯಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಪರಿಹಾರ ಯೋಜನೆಗಳನ್ನು ಜಾರಿಗೊಳಿಸಬೇಕು. ಬೆಳೆ ನಷ್ಟದ ಸಾಧ್ಯತೆಯನ್ನು ಮನಗಂಡು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೃಷಿ ಸಾಲ ಮರುಪಾವತಿಗೆ ಅವಧಿ ವಿಸ್ತರಣೆ, ಬಡ್ಡಿ ವಿನಾಯಿತಿ ಹಾಗೂ ಅಗತ್ಯ ನೆರವು ನೀಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿರುವುದು, ರಸಗೊಬ್ಬರ ಕೊರತೆ ಮತ್ತು ದುಬಾರಿ ಬೆಲೆ ಎಂಬ ತ್ರಿವಳಿ ಸಂಕಷ್ಟದಿಂದ ರೈತರು ತತ್ತರಿಸಿದ್ದು, ಮಳೆರಾಯನ ಕೃಪೆ ಹಾಗೂ ಸರ್ಕಾರದ ತುರ್ತು ಹಸ್ತಕ್ಷೇಪಕ್ಕಾಗಿ ಎದುರುನೋಡುತ್ತಿದ್ದಾರೆ.




