ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಅಧಿಕೃತ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರು ಮೈದಾನದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವು ಆಡಳಿತಾತ್ಮಕ ಕಾರಣಗಳಿಂದಾಗಿ ಗುಜರಾತ್‌ನ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಬಾರಿಯ ಪ್ಲೇಆಫ್ ಹಂತದ ಪಂದ್ಯಗಳನ್ನು ಒಟ್ಟು ಮೂರು ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಮೇ 26ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ‘ಕ್ವಾಲಿಫೈಯರ್-1’ ಪಂದ್ಯ ನಡೆಯಲಿದೆ. ಬಳಿಕ, ನ್ಯೂ ಚಂಡೀಗಢದ (ಮುಲ್ಲನ್‌ಪುರ) ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 27ರಂದು ‘ಎಲಿಮಿನೇಟರ್’ ಹಾಗೂ ಮೇ 29ರಂದು ‘ಕ್ವಾಲಿಫೈಯರ್-2’ ಪಂದ್ಯಗಳು ಜರುಗಲಿವೆ.
ಪ್ರಶಸ್ತಿ ನಿರ್ಧಾರಕ ಅಂತಿಮ ಹಣಾಹಣಿಗೆ ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಐಪಿಎಲ್ ಫೈನಲ್‌ಗೆ ಆತಿಥ್ಯ ವಹಿಸುತ್ತಿರುವ ನಾಲ್ಕನೇ ಸಂದರ್ಭವಾಗಿದೆ.
ಬೆಂಗಳೂರಿಗೆ ಕೈತಪ್ಪಿದ ಆವಕಾಶ
ನಿಯಮಾವಳಿಗಳ ಪ್ರಕಾರ, ಹಿಂದಿನ ಆವೃತ್ತಿಯ ಚಾಂಪಿಯನ್ ತಂಡವು ಮುಂದಿನ ಆವೃತ್ತಿಯ ಉದ್ಘಾಟನಾ ಹಾಗೂ ಫೈನಲ್ ಪಂದ್ಯದ ಆತಿಥ್ಯ ವಹಿಸುವ ಸಂಪ್ರದಾಯವಿದೆ. ಆದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈ ಅವಕಾಶ ಕೈತಪ್ಪಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, “ಫೈನಲ್ ಪಂದ್ಯದ ಆತಿಥ್ಯಕ್ಕೆ ಬೆಂಗಳೂರನ್ನು ಮೊದಲ ಆಯ್ಕೆಯಾಗಿ ನಿಗದಿಪಡಿಸಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳು ಮುಂದಿಟ್ಟ ಕೆಲವು ಬೇಡಿಕೆಗಳು ಬಿಸಿಸಿಐನ ಮಾರ್ಗಸೂಚಿಗಳು ಹಾಗೂ ಶಿಷ್ಟಾಚಾರಗಳ (ಪ್ರೋಟೋಕಾಲ್) ವ್ಯಾಪ್ತಿಯನ್ನು ಮೀರಿದ್ದವು. ಈ ನಿರ್ವಹಣಾ ಮತ್ತು ವ್ಯವಸ್ಥಾಪನಾ ಸವಾಲುಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸ್ಥಳವನ್ನು ಬದಲಾಯಿಸಲಾಗಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ – ಸವಾಲು ಮೆಟ್ಟಿ ನಿಂತ ಸಾಧಕಿ
ವರದಿಗಳ ಪ್ರಕಾರ, ಶಾಸಕರಿಗೆ ಪಾಸ್/ಟಿಕೆಟ್ ಹಂಚಿಕೆ ಮಾಡುವ ವಿಷಯದಲ್ಲಿ ಎದುರಾದ ಬಿಕ್ಕಟ್ಟು ಹಾಗೂ ಇತರ ಸ್ಥಳೀಯ ಆಡಳಿತಾತ್ಮಕ ಸಮಸ್ಯೆಗಳು ಪಂದ್ಯವನ್ನು ಸ್ಥಳಾಂತರಿಸುವ ನಿರ್ಧಾರದ ಮೇಲೆ ಪ್ರಭಾವ ಬೀರಿದ್ದವು ಎನ್ನಲಾಗಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ 13 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಈ ಬಾರಿಯ ಪ್ಲೇಆಫ್ ಹಂತವು ಅತ್ಯಂತ ಕುತೂಹಲ ಘಟ್ಟ ತಲುಪಿದ್ದು, ತವರಿನಲ್ಲಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕೈತಪ್ಪಿರುವುದು ಬೆಂಗಳೂರಿನ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.




