‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮದಲ್ಲಿ ಕಡು ಹಿಂದುತ್ವವಾದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಂದೇಶವನ್ನು ಓದಿದ್ದು ಸಿಪಿಐ(ಎಂ) ಪಕ್ಷದ ಜಾತ್ಯತೀತ ವರ್ಚಸ್ಸಿಗೆ ‘ತೀವ್ರ ಮುಜುಗರ’ ತಂದಿದೆ. ಇದು ಪಕ್ಷವು ಹಿಂದುತ್ವ ಕೋಮುವಾದಿ ಶಕ್ತಿಗಳ ಬಗ್ಗೆ ‘ಮೃದು ಧೋರಣೆ’ ಹೊಂದಿದೆ ಎಂಬ ತಪ್ಪು ಸಂದೇಶ ರವಾನೆಯಾಗಲು ಕಾರಣವಾಯಿತು ಹಾಗೂ ಕೇರಳ ಚುನಾವಣಾ ಪ್ರಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಎಡಪಕ್ಷದ ಚುನಾವಣಾ ಪರಾಮರ್ಶನಾ ವರದಿ ತಿಳಿಸಿದೆ.
ಈ ಕಾರ್ಯಕ್ರಮವನ್ನು ದೇವಸ್ವಂ ಮಂಡಳಿಯು ಆಯೋಜಿಸಿದ್ದರೂ, ಯುಪಿ ಸಿಎಂ ಅವರಿಂದ ಸಂದೇಶವನ್ನು ಹೇಗೆ ಪಡೆಯಲಾಯಿತು ಮತ್ತು ರಾಜ್ಯ ಸಚಿವರೂ ಆಗಿರುವ ಪಕ್ಷದ ನಾಯಕ (ವಿ.ಎನ್. ವಾಸವನ್) ಅದನ್ನು ವೇದಿಕೆ ಮೇಲೆ ಓದಲು ಹೇಗೆ ಒಪ್ಪಿದರು ಎಂಬುದು ಅಚ್ಚರಿ ಮೂಡಿಸಿದೆ. ಇದು ಜನರಿಗೆ ತಪ್ಪು ಸಂದೇಶ ರವಾನಿಸಿದೆ ಎಂದು ವರದಿ ಹೇಳಿದೆ. ಇದರ ಜೊತೆಗೆ, ಪ್ರಮುಖ ಒಬಿಸಿ ನಾಯಕ ವೆಳ್ಳಾಪ್ಪಳ್ಳಿ ನಟೇಶನ್ ಅವರ ‘ಮುಸ್ಲಿಂ ವಿರೋಧಿ’ ಹೇಳಿಕೆಗಳಿಗೆ ಪಕ್ಷದ ರಾಜ್ಯ ನಾಯಕತ್ವವು ನೀಡಿದ ಪ್ರತಿಕ್ರಿಯೆಯು, ಕೋಮುವಾದದ ವಿರುದ್ಧದ ಹೋರಾಟದಲ್ಲಿ ಸಿಪಿಐ(ಎಂ) ರಾಜಿ ಮಾಡಿಕೊಳ್ಳುತ್ತಿದೆ ಎಂಬ ತಪ್ಪು ಅಭಿಪ್ರಾಯ ಮೂಡಲು ಕಾರಣವಾಯಿತು ಎಂದು ಈ ತಿಂಗಳ ಆರಂಭದಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಲಾದ ‘ವಿಧಾನಸಭಾ ಚುನಾವಣಾ ಫಲಿತಾಂಶಗಳ ಪರಾಮರ್ಶೆ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಕ್ಷದ ‘ರಾಜಕೀಯ ಸಮಗ್ರತೆ’ಯನ್ನು ಪ್ರಶ್ನಿಸಿ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರ ವಿರುದ್ಧವೂ ವರದಿ ಕಿಡಿಕಾರಿದೆ. ಸಿಪಿಐ(ಎಂ) ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದು ಮತ್ತು ಕೋಮುವಾದಿ ಶಕ್ತಿಗಳ ಬಗ್ಗೆ ಕಾಂಗ್ರೆಸ್ ತೋರಿದ ಮೃದು ಧೋರಣೆಯು ಬಿಜೆಪಿಯ ಬಲವರ್ಧನೆಗೆ ನೆರವಾಯಿತು ಎಂದು ಅದು ಆರೋಪಿಸಿದೆ. ಇನ್ನು, ಇಡೀ ಚುನಾವಣಾ ಪ್ರಚಾರವನ್ನು ಅಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸುತ್ತಲೇ ಕೇಂದ್ರೀಕರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅವರ ವಿರುದ್ಧ ಗುರಿಯಿಟ್ಟು ವಾಗ್ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಿತು. ಇದರಿಂದ ಕಾಂಗ್ರೆಸ್ ಮತ್ತು ಯುಡಿಎಫ್‌ನ ಆಡಳಿತಶಾಹಿ ಪಕ್ಷಪಾತವನ್ನು ಬಯಲಿಗೆಳೆಯುವ ರಾಜಕೀಯ ಅವಕಾಶವನ್ನು ಪಕ್ಷ ಕಳೆದುಕೊಂಡಿತು ಎಂದು ವರದಿ ತಿಳಿಸಿದೆ.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒಂದು ವರ್ಗದಲ್ಲಿ ಕಂಡುಬಂದ ಅಹಂಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಐಷಾರಾಮಿ ಜೀವನಶೈಲಿಯಿಂದಾಗಿ ಜನರು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡರು. ಇದನ್ನು ತಕ್ಷಣವೇ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾಯಕತ್ವ ವಿಫಲವಾಯಿತು ಎಂದು ವರದಿ ಅಸಮಾಧಾನ ವ್ಯಕ್ತಪಡಿಸಿದೆ. ಜನಪ್ರಿಯ ನಾಯಕಿ ಕೆ.ಕೆ. ಶೈಲಜಾ ಅವರ ಕ್ಷೇತ್ರವನ್ನು ಬದಲಾಯಿಸಿದ್ದು ವಿರೋಧಿಗಳಿಗೆ ವ್ಯಾಪಕ ಪ್ರಚಾರ ನಡೆಸಲು ಅಸ್ತ್ರವಾಯಿತು ಹಾಗೂ ಇದು ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರಿತು. ನಾವು ಏನೇ ಸಾಂಸ್ಥಿಕ ಸಮರ್ಥನೆಗಳನ್ನು ನೀಡಿದರೂ, ಜನರ ಗ್ರಹಿಕೆ ನಮ್ಮ ಪರವಾಗಿರಲಿಲ್ಲ ಎಂದು ವರದಿ ಒಪ್ಪಿಕೊಂಡಿದೆ.
ತಮಿಳುನಾಡಿನಲ್ಲಿ, ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಸದಸ್ಯರೇ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ವರದಿಗಳಿವೆ. ಡಿಎಂಕೆ ಕಡಿಮೆ ಸೀಟುಗಳನ್ನು ನೀಡುವ ಪ್ರಸ್ತಾವನೆಗೆ ಮೈತ್ರಿಪಕ್ಷ ಸಿಪಿಐ ಮೊದಲು ಸಹಿ ಹಾಕಿದ್ದರಿಂದ, ಅನಿವಾರ್ಯವಾಗಿ ಸಿಪಿಐ(ಎಂ) ಕೂಡ ಅದಕ್ಕೆ ಸಮ್ಮತಿಸಬೇಕಾಯಿತು ಎಂದು ದೂರಲಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ, ಪಕ್ಷದ ರಾಜಕೀಯ ನಿಲುವು, ಸಾಂಸ್ಥಿಕ ಸಾಮರ್ಥ್ಯ ಹಾಗೂ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಅವಕಾಶದ ಬಗ್ಗೆ ಜನರಿಗೆ ನಂಬಿಕೆ ಮೂಡಿಸಲು ಸಾಧ್ಯವಾಗಲಿಲ್ಲ. ವಾಸ್ತವ ಸ್ಥಿತಿಗಳ ಆಧಾರದ ಮೇಲೆ ಸ್ಪರ್ಧಿಸಲು ಎಡರಂಗದ ಮೈತ್ರಿಪಕ್ಷಗಳು ನಿರಾಕರಿಸಿದ್ದರಿಂದ ಹಾಗೂ ಸೀಟು ಹಂಚಿಕೆಯಲ್ಲಿನ ವಿಳಂಬದಿಂದಾಗಿ ಟಿಎಂಸಿ ಹಾಗೂ ಬಿಜೆಪಿಯನ್ನು ಮಣಿಸುವ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಎಡರಂಗ ವಿಫಲವಾಯಿತು ಎಂದು ವರದಿ ಪರಾಮರ್ಶಿಸಿದೆ.





