ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡುವಿನ ಹೋಲಿಕೆಯಿಂದ ಕೂಡಿದ ಚರ್ಚೆಗಳು ಮುಂದುವರಿಯುತ್ತಿದ್ದು, ಇದೀಗ ಇಸ್ಲಾಮಾಬಾದ್ ಯುನೈಟೆಡ್ ತಂಡದ ಸಹಾಯಕ ತರಬೇತುದಾರ ಹಾಗೂ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಜೇಕಬ್ ಓರಂ ಅವರ ಪ್ರತಿಕ್ರಿಯೆಯೊಂದು ಭಾರಿ ವೈರಲ್ ಆಗಿದೆ. ‘ಐಪಿಎಲ್ ನಿಜವಾದ ಕ್ರಿಕೆಟ್‌ಗಿಂತ ಒಂದು ಸಿನಿಮಾದಂತೆ ಅನಿಸುತ್ತದೆ’ ಎಂಬ ದಕ್ಷಿಣ ಆಫ್ರಿಕಾ ಬ್ಯಾಟರ್ ರಿಲೀ ರೋಸೋ ಅವರ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಓರಂ ಅವರು ಜೋರಾಗಿ ನಕ್ಕು ಬಿದ್ದ ಪ್ರಸಂಗ ನಡೆದಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧ ಇಸ್ಲಾಮಾಬಾದ್ ಯುನೈಟೆಡ್ ತಂಡವು 6 ವಿಕೆಟ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಬದಲು ಐಪಿಎಲ್ ಹಾಗೂ ಪಿಎಸ್‌ಎಲ್ ಹೋಲಿಕೆಯ ಚರ್ಚೆಯೇ ಮೇಲುಗೈ ಸಾಧಿಸಿತು.
ಪತ್ರಕರ್ತರ ಪ್ರಶ್ನೆಗೆ, ‘ನೀವು ಸಿನಿಮಾದಂತೆ ಎಂದು ಹೇಳಿದಿರಾ?’ ಎಂದು ಜೋರಾಗಿ ನಕ್ಕ ಓರಂ ಅವರು, ನಂತರ ಎರಡೂ ಲೀಗ್‌ಗಳ ಬಗ್ಗೆ ಸಮತೋಲನದ ಉತ್ತರವನ್ನು ನೀಡಿದರು. “ಇವೆರಡೂ ಒಂದೇ ರೀತಿಯ ಟೂರ್ನಮೆಂಟ್‌ಗಳು, ಆದರೆ ತುಂಬಾ ಭಿನ್ನವಾಗಿವೆ. ಐಪಿಎಲ್ ವ್ಯಾಪ್ತಿಯಲ್ಲಿ ಇದಕ್ಕಿಂತ ಎರಡರಷ್ಟು ದೊಡ್ಡದು. ನಾನು ಐಪಿಎಲ್‌ನಲ್ಲಿ ತರಬೇತುದಾರನಾಗಿ ಕೆಲಸ ಮಾಡಿಲ್ಲ, ಆದರೆ ತುಂಬಾ ವರ್ಷಗಳ ಹಿಂದೆ ಅಲ್ಲಿಯೂ ಆಡಿದ್ದೇನೆ. ಇದೀಗ ಅದು ಒಂದು ಬೃಹತ್ ಸ್ಪರ್ಧೆಯಾಗಿ ಬೆಳೆದಿದೆ,” ಎಂದು ಅವರು ವಿವರಿಸಿದರು.
ಇದನ್ನು ಓದಿದ್ದೀರಾ? ‘ಈ ಹುಡುಗನನ್ನು ನೆಟ್ಸ್‌ನಿಂದ ಆಚೆ ಕಳುಹಿಸಿ’: ಬೂಮ್ರಾ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಯುವರಾಜ್ ಸಿಂಗ್
ಇಸ್ಲಾಮಾಬಾದ್ ಯುನೈಟೆಡ್ ತಂಡದ ಮುಖ್ಯ ತರಬೇತುದಾರ ಲೂಕ್ ರೊಂಚಿ ಅವರ ಜೊತೆ ಸಹಾಯಕ ಕೋಚ್ ಆಗಿ ಕೆಲಸ ಮಾಡುತ್ತಿರುವ ಓರಂ, ಪಿಎಸ್‌ಎಲ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. “ಪಿಎಸ್‌ಎಲ್‌ನಲ್ಲಿ ಇದು ನನ್ನ ಮೊದಲ ಅವಕಾಶವಾಗಿದ್ದು, ನಾನು ಇದನ್ನು ಆನಂದಿಸುತ್ತಿದ್ದೇನೆ. ಸಿಬ್ಬಂದಿಯಿಂದ ಹಿಡಿದು ಆಟಗಾರರವರೆಗೆ ಎಲ್ಲರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ,” ಎಂದು ಹೇಳಿದರು. ಅದೇ ಸಮಯದಲ್ಲಿ, ಕ್ರೀಡಾಂಗಣಗಳಲ್ಲಿ ಇನ್ನು ಹೆಚ್ಚಿನ ಪ್ರೇಕ್ಷಕರು ಇದ್ದಿದ್ದರೆ ಇನ್ನೂ ಒಳ್ಳೆಯ ವಾತಾವರಣ ಇರುತ್ತಿತ್ತು ಎಂಬುದನ್ನು ಅವರು ಒಪ್ಪಿಕೊಂಡರು.
ರಿಲೀ ರೋಸೋ ಅವರು ಕರಾಚಿಯಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ನಂತರ ಮಾತನಾಡುತ್ತಾ, “ಐಪಿಎಲ್ ಹಿಂದೆ ಪೂರ್ಣ ಬಾಲಿವುಡ್ ಇರುವುದರಿಂದ ಅದು ಅಸಲಿ ಕ್ರಿಕೆಟ್‌ಗಿಂತ ಒಂದು ಸಿನಿಮಾದಂತೆ ಕಾಣುತ್ತದೆ. ಎರಡೂ ಲೀಗ್‌ಗಳಲ್ಲೂ ತಮ್ಮದೇ ಆದ ಸಾಧಕ-ಬಾಧಕ ಅಂಶಗಳಿವೆ,” ಎಂದು ಹೇಳಿದ್ದ ಪ್ರಸಂಗವೇ ಈ ಚರ್ಚೆಗೆ ಕಾರಣವಾಗಿತ್ತು. ಪಿಎಸ್‌ಎಲ್ ಅನ್ನು ವಿಶ್ವದ ಅತ್ಯುತ್ತಮ ಫ್ರಾಂಚೈಸಿ ಟೂರ್ನಮೆಂಟ್ ಅನ್ನಾಗಿ ಮಾಡುವ ಗುರಿ ಹೊಂದಿದ್ದಾಗಿ ಮೊಹ್ಸಿನ್ ನಖ್ವಿ ಇತ್ತೀಚೆಗೆ ಹೇಳಿದ್ದಾರೆ. ಇದೆಲ್ಲದರ ನಡುವೆಯೂ ಜೇಕಬ್ ಓರಂ ಅವರ ತಟಸ್ಥ ಹಾಗೂ ನಗುವಿನ ಪ್ರತಿಕ್ರಿಯೆ ಎರಡೂ ಲೀಗ್‌ಗಳಿಗೂ ಗೌರವ ತೋರಿಸುವ ರೀತಿಯಲ್ಲಿ ಮೂಡಿಬಂದಿದೆ.




