ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿ ಬಸವಣ್ಣ. ಅಂದಿನ ಶರಣರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿವೆ ಎಂದು ಪ್ರಗತಿಪರ ಚಿಂತಕಿ ಎಚ್ ಎಸ್ ಅನುಪಮಾ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ದರ್ಬಾರ್ ಮೈದಾನದಲ್ಲಿ ಮೇ ಸಾಹಿತ್ಯ ಮೇಳ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಮೇಳದ ಬಸವ ಅನುಯಾಯಿಗಳ ಸಮಾವೇಶದಲ್ಲಿ ಮಾತನಾಡಿದರು.
“ನಡೆ, ನುಡಿಗಳಲ್ಲಿ ಒಂದಾಗಿದ್ದ ವ್ಯಕ್ತಿ ಬಸವಣ್ಣ, ಜನರಿಗೆ ಅರ್ಥವಾಗದ ದೇವ ಭಾಷೆಯ ಸಂಸ್ಕೃತದ ಬದಲು, ನಮ್ಮದೇ ಕನ್ನಡದಲ್ಲಿ ವಚನಗಳನ್ನು ಬರೆದು ಅರಿವು ಮೂಡಿಸಿದರು. ಊರಿನ ನಡುವೆ ಅನುಭವ ಮಂಟಪ ಕಟ್ಟಿ ಸರ್ವರೂ ಪಾಲ್ಗೊಳ್ಳುವಂತೆ ಅವಕಾಶ ನೀಡಿದರು” ಎಂದು ಹೇಳಿದರು.
“ಜಾತಿ, ಲಿಂಗ, ವರ್ಗ ಭೇದವಿಲ್ಲದ ಶರಣ ಸಂಕುಲವನ್ನು ಕಟ್ಟುವ ಮೂಲಕ ಕಾಯಕವನ್ನೇ ಧರ್ಮವಾಗಿಸಿದವರು ಬಸವಣ್ಣ. ಸಾಮೂಹಿಕ ನಾಯಕತ್ವ ಪ್ರಜಾತಾಂತ್ರಿಕ ವ್ಯವಸ್ಥೆ ಅಂದೇ ಜಾರಿಯಲ್ಲಿತ್ತು. ‘ಅರಸ ಬಿಜ್ಜಳನನ್ನೇ ಪ್ರಶ್ನಿಸುವಷ್ಟು ಬಸವಣ್ಣ ನಿರ್ಭೀತನಾಗಿದ್ದʼ 12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ಮಾಡಿಸಿದ ದಿಟ್ಟ ವ್ಯಕ್ತಿ ವರ್ಗಪ್ರಜ್ಞೆ, ಜಾತಿಪ್ರಜ್ಞೆ ಕಳೆದುಕೊಂಡ ಬಸವಣ್ಣ ಮೇಲ್ಜಾತಿಯಲ್ಲಿ ಹುಟ್ಟಿದ್ದರೂ ಎಲ್ಲ ಜಾತಿಯನ್ನು ಪ್ರೀತಿಸುತ್ತಿದ್ದುದು ವಿಶೇಷ” ಎಂದು ತಿಳಿಸಿದರು.
ಬಸವಪರ ಚಿಂತಕ ಜೆ ಎಸ್ ಪಾಟೀಲ ಮಾತನಾಡಿ, “ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳವಳಿ ನೇತೃತ್ವ ವಹಿಸಿಕೊಂಡಿರುವರು ಫ.ಗು ಹಳಕಟ್ಟಿ. ಅದನ್ನು ನಮ್ಮ ಇತಿಹಾಸಕಾರರು ಮರೆತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ >ವಿಜಯಪುರ | ಸರ್ವ ಜನಾಂಗದ ಸಮಾನತೆಗೆ ಶ್ರಮಿಸಿದವರು ಅಂಬೇಡ್ಕರ್: ಡಾ.ಬಾಬುರಾಜೇಂದ್ರ ನಾಯಕ್
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ, “ಅಂಬೇಡ್ಕರ್ ಸಾಕಷ್ಟು ಅಧ್ಯಯನ ಮಾಡಿದ ಬಳಿಕ, ಭಾರತದಲ್ಲಿ ಜನ್ಮ ತಳೆದ, ನೆಲಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ದಾರ್ಶನಿಕರಾದ ಬುದ್ಧ, ಬಸವ, ಅಂಬೇಡ್ಕರ್ ಮಾನವ ಜನಾಂಗಕ್ಕೆ ಮಾದರಿಯಾಗಿದ್ದಾರೆ” ಎಂದರು.
ಪುಸ್ತಕ ಮೇಳದ ಆಯೋಜಕರಾದ ಬಸವರಾಜ ಸೂಳಿಬಾವಿ, ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಭಾರತೀಯ ಬೌದ್ಧ ಮಹಾಸಭಾ ಕಾರ್ಯದರ್ಶಿ ಬಸವರಾಜ ಹೊಳ್ಕರ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಹರನಾಳ, ರಾಷ್ಟ್ರೀಯ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ಚಂದ್ರಶೇಖರ ಘಂಟಪ್ಪಗೋಳ, ನಾಗರಾಜ ಲಂಬು, ಜಗದೇವಿ ಸೂರ್ಯವಂಶಿ, ಅಭಿಷೇಕ ಚಕ್ರವರ್ತಿ, ದಾನೇಶ ಅವಟಿ, ಜಂಬುನಾಥ ಕಂಚಾರಿ, ಮಿಲನಕುಮಾರ ನಾಮದಾರ, ಪ್ರಭುಗೌಡ ಪಾಟೀಲ ಇದ್ದರು.




