ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಕಾಲಿನ ಸ್ನಾಯು ಸೆಳೆತದ ಕಾರಣದಿಂದಾಗಿ ತಂಡದ ದಿಗ್ಗಜ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ಫ್ರಾಂಚೈಸಿ ಶನಿವಾರ (ಮಾರ್ಚ್ 28) ಖಚಿತಪಡಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿರುವ 44 ವರ್ಷದ ಹಿರಿಯ ವಿಕೆಟ್ ಕೀಪರ್ ಬ್ಯಾಟರ್, ಚೇತರಿಕೆಯ ಹಂತದಲ್ಲಿರುವ ಕಾರಣ ಈ ಬಾರಿಯ ಕನಿಷ್ಠ ಮೊದಲ ನಾಲ್ಕು ಪಂದ್ಯಗಳಿಗೆ ಗೈರಾಗುವ ನಿರೀಕ್ಷೆಯಿದೆ.
ಧೋನಿ ತಪ್ಪಿಸಿಕೊಳ್ಳಲಿರುವ ಪಂದ್ಯಗಳು
ತಮ್ಮ ಚೇತರಿಕೆಯ ಅವಧಿಯಲ್ಲಿ ಧೋನಿ ಈ ಕೆಳಗಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ:
ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸ್ಥಳ: ಬರ್ಸಾಪರಾ ಕ್ರೀಡಾಂಗಣ, ಗುವಾಹಟಿ)
ಏಪ್ರಿಲ್ 3: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್
ಏಪ್ರಿಲ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್
ಏಪ್ರಿಲ್ 11: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್
ಟೂರ್ನಿಯ ಆರಂಭಿಕ ಹಂತದಲ್ಲಿಯೇ ಧೋನಿ ಅವರ ಗೈರುಹಾಜರಿಯು, ತಂಡದ ನಾಯಕತ್ವದ ಮಾರ್ಗದರ್ಶನ ಮತ್ತು ಫಿನಿಶಿಂಗ್ ವಿಭಾಗದಲ್ಲಿ ಸಿಎಸ್‌ಕೆ ಪಡೆಯ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಿದೆ.
ಇದನ್ನು ಓದಿದ್ದೀರಾ? ಹೊಸ ಮಾಲೀಕರ ತೆಕ್ಕೆಗೆ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್: ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ವ್ಯಾಪಾರ
ವಿಕೆಟ್ ಕೀಪಿಂಗ್ ಹೊಣೆ ಯಾರಿಗೆ?
ಧೋನಿ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ಅಥವಾ 27 ವರ್ಷದ ಉರ್ವಿಲ್ ಪಟೇಲ್ ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಸಿಎಸ್‌ಕೆ ಫ್ರಾಂಚೈಸಿಯು ಈಗಾಗಲೇ ಸಂಜು ಸ್ಯಾಮ್ಸನ್ ಅವರನ್ನು ಧೋನಿಯವರ ಉತ್ತರಾಧಿಕಾರಿಯನ್ನಾಗಿ ಗುರುತಿಸಿದೆ. ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಟ್ರೇಡ್ ಮಾಡುವ ಮೂಲಕ ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಇನಿಂಗ್ಸ್ ಆರಂಭಿಸಲಿರುವ ಸ್ಯಾಮ್ಸನ್, ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರಿಂದ, ಅವರೇ ಗ್ಲೌಸ್ ತೊಡುವ ಸಾಧ್ಯತೆ ದಟ್ಟವಾಗಿದೆ. ಉರ್ವಿಲ್ ಪಟೇಲ್ ಅವರಿಗೂ ಅವಕಾಶವಿದೆಯಾದರೂ, ಸದ್ಯಕ್ಕೆ ಅದರ ಯಾವುದೇ ಸುಳಿವುಗಳಿಲ್ಲ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗಿನಿಂದ, ಧೋನಿ ಕೇವಲ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಎಲ್ಲಾ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು, 135ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಚಚ್ಚಿದ್ದರು. ಅಷ್ಟೇ ಅಲ್ಲದೆ, ಋತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದಾಗ ಕೆಲಕಾಲ ತಂಡವನ್ನು ಮುನ್ನಡೆಸಿದ್ದರು.
44ನೇ ವಯಸ್ಸಿನಲ್ಲಿರುವ ಧೋನಿ, ಐಪಿಎಲ್‌ನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಂಡು ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿದರೆ, ‘ಐಪಿಎಲ್‌ನಲ್ಲಿ ಆಡಿದ ಅತಿ ಹಿರಿಯ ಭಾರತೀಯ ಆಟಗಾರ’ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ಇದು ಫ್ರಾಂಚೈಸಿಗೆ ಅವರ ಅಗತ್ಯತೆ ಮತ್ತು ಅವರ ಸುದೀರ್ಘ ವೃತ್ತಿಜೀವನಕ್ಕೆ ಕನ್ನಡಿಯಡಿಯಲಿದೆ. ಸದ್ಯಕ್ಕಂತೂ, ಸಿಎಸ್‌ಕೆ ತನ್ನ ಅತಿದೊಡ್ಡ ಐಕಾನ್ ಇಲ್ಲದೆ ಆರಂಭಿಕ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ.




