ವಿಶ್ವಕಪ್ 2023: ನ್ಯೂಜಿಲೆಂಡ್‌ ವಿರುದ್ಧ ಕಳೆದ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಭಾರತ?

Date:

ಭಾರತದ ಸಮಸ್ಯೆ ಎಂದರೆ, ದಿಢೀರ್ ಕುಸಿತ. ನಿರ್ಣಾಯಕ ಪಂದ್ಯಗಳಲ್ಲಿ ಅನಿರೀಕ್ಷಿತವಾಗಿ ಕುಸಿಯುವುದು ಭಾರತ ತಂಡಕ್ಕಂಟಿದ ಮದ್ದಿಲ್ಲದ ಕಾಯಿಲೆ. ಕಳೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದ ಭಾರತ, 5 ರನ್‌ಗಳಿಗೇ ಅಗ್ರ 3 ವಿಕೆಟ್ ಕಳೆದುಕೊಂಡಿತ್ತು. ನ್ಯೂಜಿಲ್ಯಾಂಡ್‌ನ ಸಾಧಾರಣ ಮೊತ್ತದ ಸವಾಲಿನ ಎದುರು ದಯನೀಯವಾಗಿ ಸೋತಿತ್ತು. ಕಳೆದ ಬಾರಿಯ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲಿ ಎನ್ನುವುದು ದೇಶದ ಕ್ರಿಕೆಟ್ ಪ್ರಿಯರ ಆಶಯ.     

ಭಾರತದ ಕ್ರಿಕೆಟ್ ಪ್ರಿಯರ ಹುಚ್ಚು ಪರಾಕಾಷ್ಠೆ ಮುಟ್ಟಿದೆ. ಬುಧವಾರ (15.11.2023) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವೆ ನಡೆಯಲಿರುವ ಸೆಮಿಫೈನಲ್ ಪಂದ್ಯವನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರ ನಡುವೆಯೇ ಹಿಂದಿನ ದಾಖಲೆ, ಅಂಕಿ ಅಂಶಗಳನ್ನು ಹೋಲಿಸಿ ಗೆಲುವಿನ ಲೆಕ್ಕಾಚಾರ ಹಾಕುವವರ ಸಂಖ್ಯೆಯೂ ಹೆಚ್ಚುತ್ತಿದೆ.

2023ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಆಡಿರುವ ಎಲ್ಲ 9 ಪಂದ್ಯಗಳನ್ನೂ ಗೆದ್ದಿರುವ ಭಾರತ, ಸೆಮಿಫೈನಲ್ ಅಷ್ಟೇ ಅಲ್ಲ, ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೂ ಆಗಿದೆ. ಭಾರತ ಯಾವಾಗಲೂ ಬ್ಯಾಟಿಂಗ್‌ನಲ್ಲಿ ಬಲಿಷ್ಠ ತಂಡವೇ. ಈಗಿನ ತಂಡವೂ ಅದಕ್ಕೆ ಹೊರತಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರ ನಂತರದ ಸ್ಥಾನಗಳಲ್ಲಿರುವ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಒಂದಿಬ್ಬರು ವಿಫಲವಾದರೂ ಉಳಿದವರು ಮಿಂಚುತ್ತಾ, ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಿದ್ದಾರೆ. 9 ಪಂದ್ಯಗಳಿಂದ 594 ರನ್‌ಗಳನ್ನು ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. 503 ರನ್‌ ಗಳಿಸಿರುವ ರೋಹಿತ್ ಶರ್ಮಾ ನಾಲ್ಕನೆಯ ಸ್ಥಾನದಲ್ಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತ ತಂಡ

ಭಾರತ ತಂಡದಲ್ಲಿ ನಿಜಕ್ಕೂ ಕೊರತೆ ಇದ್ದದ್ದು ಸಮರ್ಥ ಬೌಲರ್‌ಗಳದ್ದು. ಬೌಲರ್‌ಗಳ ಕೊರತೆ ಇದ್ದಾಗಲೆಲ್ಲ ಭಾರತ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ಇತಿಹಾಸವಿದೆ. ಭಾರತ ಈ ಬಾರಿ ಹೆಚ್ಚು ಬಲಿಷ್ಠವಾಗಿದೆ ಎಂದರೆ, ಅದಕ್ಕೆ ಕಾರಣ, ಬೌಲರ್‌ಗಳು. ಬೇರೆ ಯಾವ ತಂಡದಲ್ಲೂ ಇಲ್ಲದಂಥ ಬೌಲರ್‌ಗಳು ಈ ಬಾರಿ ಭಾರತ ತಂಡದಲ್ಲಿದ್ದಾರೆ.

ಭಾರತದ ಬೌಲಿಂಗ್‌ನ ನಾಯಕತ್ವ ವಹಿಸಿರುವವರು ಜಸ್‌ಪ್ರೀತ್ ಬೂಮ್ರಾ. ಪಾಕಿಸ್ತಾನದ ಖ್ಯಾತ ಬೌಲರ್ ವಾಸಿಂ ಅಕ್ರಮ್ ಬೂಮ್ರಾ ಅವರನ್ನು ಸದ್ಯ ಜಗತ್ತಿನ ಅತ್ಯಂತ ಶ್ರೇಷ್ಠ ಬೌಲರ್ ಎಂದಿದ್ದಾರೆ. ಒಂದು ಕಾಲದಲ್ಲಿ ಜಗತ್ತಿನ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನೂ ನಡುಗಿಸುತ್ತಿದ್ದ ವೇಗದ ಬೌಲರ್ ವಾಸಿಂ ಅಕ್ರಮ್‌ ಅಂಥವರೇ ಬೂಮ್ರಾ ಅವರನ್ನು ಕೊಂಡಾಡುತ್ತಿದ್ದಾರೆ. ಬಾಲ್‌ ಮೇಲಿನ ನಿಯಂತ್ರಣ, ವೇಗ, ಸಂದರ್ಭಕ್ಕೆ ತಕ್ಕ ಬದಲಾವಣೆ ಎಲ್ಲವೂ ಮೇಳೈಸಿರುವ ಪರಿಪೂರ್ಣ ಬೌಲರ್ ಬೂಮ್ರಾ ಎನ್ನುವುದು ವಾಸಿಂ ಅಕ್ರಮ್ ವಿಶ್ಲೇಷಣೆ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡುವ ಬೂಮ್ರಾ ಕೌಶಲ್ಯವನ್ನು ಪಾಕಿಸ್ತಾನದ ಮತ್ತೊಬ್ಬ ಆಟಗಾರ ಮಿಸ್ಬಾ ಉಲ್ ಹಕ್ ಕೊಂಡಾಡಿದ್ದಾರೆ. ಇದುವರೆಗೆ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಮತ್ತು ವಿಶಿಷ್ಟ ಬೌಲರ್‌ಗಳಾದ ಗ್ಲೆನ್ ಮೆಕ್‌ಗ್ರಾತ್, ವಾಸಿಂ ಅಕ್ರಮ್, ಲಸಿತ್ ಮಾಲಿಂಗ ಇವರೆಲ್ಲರ ಮಿಶ್ರಣದಂತಿದ್ದಾರೆ ಬೂಮ್ರಾ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ. 9 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಗಳಿಸಿರುವ ಬೂಮ್ರಾ ವಿಶ್ವಕಪ್‌ನ ಅಗ್ರ ಬೌಲರ್‌ಗಳ ಪಟ್ಟಿಯಲ್ಲಿ ಐದನೆಯ ಸ್ಥಾನದಲ್ಲಿದ್ದಾರೆ. ಆದರೆ, 3.65 ಎಕಾನಮಿಯೊಂದಿಗೆ ವಿಶ್ವಕಪ್‌ನಲ್ಲಿ ಅತಿ ಕಡಿಮೆ ರನ್‌ಗಳನ್ನು ಕೊಟ್ಟ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಬೂಮ್ರಾ ತನ್ನ ಮಾರಕ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮೂಲಕ ಭಾರತಕ್ಕೆ ಅತ್ಯುತ್ತಮ ಆರಂಭವನ್ನು ಒದಗಿಸುತ್ತಿದ್ದಾರೆ. ಅದನ್ನು ಮೊಹಮದ್ ಸಿರಾಜ್, ಮೊಹಮದ್ ಶಮಿ, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೇವಲ ಮೂರು ಪಂದ್ಯಗಳನ್ನಾಡಿದ್ದರೂ 16 ವಿಕೆಟ್ ಕಬಳಿಸಿರುವ ಮೊಹಮದ್ ಶಮಿ, ಅಗ್ರ ಬೌಲರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ 16 ವಿಕೆಟ್‌ಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲ್ಯಾಂಡ್ ತಂಡ

ನ್ಯೂಜಿಲ್ಯಾಂಡ್ ತಂಡವೂ ಕಡಿಮೆಯೇನಿಲ್ಲ. ಕ್ಯಾಪ್ಟನ್‌ ವಿಲಿಯಮ್ಸನ್‌, ಮಿಚೆಲ್, ಫಿಲಿಪ್ಸ್‌ನಂಥ ಅನುಭವಿಗಳಿಂದ ಹಿಡಿದು ಹೊಸಬರಾದ ರಚಿನ್ ರವೀಂದ್ರವರೆಗೆ ಅತ್ಯುತ್ತಮವಾಗಿ ಆಡುತ್ತಿದ್ದು, ತಂಡವು ಉತ್ತಮ ಫಾರ್ಮ್‌ನಲ್ಲಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ 23ರ ಹರೆಯದ ರಚಿನ್ ರವೀಂದ್ರ ವಿಶ್ವಕಪ್‌ನ ಒಂದು ಬೆರಗು. 9 ಪಂದ್ಯಗಳಲ್ಲಿ ಒಟ್ಟು 565 ರನ್‌ಗಳನ್ನು ಹೊಡೆದಿರುವ ರಚಿನ್, ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ತಾವಾಡಿದ ಮೊದಲ ವಿಶ್ವಕಪ್‌ನಲ್ಲೇ ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್‌ನಲ್ಲಿನ ಅತಿ ಹೆಚ್ಚು ರನ್‌ಗಳ ಸಾರ್ವಕಾಲಿಕ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ. ಟೂರ್ನಿಯ ಹಲವು ಪಂದ್ಯಗಳಿಂದ ಗಾಯದ ಕಾರಣಕ್ಕೆ ಹೊರಗುಳಿದಿದ್ದ ಕ್ಯಾಪ್ಟನ್‌ ಕೇನ್ ವಿಲಿಯಮ್ಸನ್ ಆಗಮನದೊಂದಿಗೆ ನ್ಯೂಜಿಲ್ಯಾಂಡ್ ತಂಡವು ಮತ್ತಷ್ಟು ಬಲಿಷ್ಠವಾಗಿದೆ. ನಿರ್ಣಾಯಕ ಹಂತದಲ್ಲಿ ಪುಟಿದು ನಿಲ್ಲುವ ಸಾಮರ್ಥ್ಯವಿರುವ ತಂಡ ಅದು. ವಿಶ್ವಕಪ್‌ ಆರಂಭವಾದಾಗಿನಿಂದಲೂ ಒಮ್ಮೆಯೂ ವರ್ಲ್ಡ್ ಕಪ್ ಗೆಲ್ಲದ ನ್ಯೂಜಿಲ್ಯಾಂಡ್ ಈ ಬಾರಿ ಕಪ್ ಗೆಲ್ಲಲೇಬೇಕೆಂಬ ಛಲಕ್ಕೆ ಬಿದ್ದಿದೆ.

ಭಾರತದ ಸಮಸ್ಯೆ ಎಂದರೆ, ದಿಢೀರ್ ಕುಸಿತ. ನಿರ್ಣಾಯಕ ಪಂದ್ಯಗಳಲ್ಲಿ ಅನಿರೀಕ್ಷಿತವಾಗಿ ಕುಸಿಯುವುದು ಭಾರತ ತಂಡಕ್ಕಂಟಿದ ಮದ್ದಿಲ್ಲದ ಕಾಯಿಲೆ. ಕ್ರಿಕೆಟ್ ಚಾನ್ಸೀ ಎನ್ನಬಹುದಾದ ಆಟವಾದ್ದರಿಂದ ಯಾವ ತಂಡವಾದರೂ ದಿಢೀರ್ ಆಗಿ ಕುಸಿಯುವ ಸಾಧ್ಯತೆ ಇದ್ದೇ ಇರುತ್ತದೆ, ಆದರೆ, ಭಾರತ ಎಲ್ಲರಿಗಿಂತ ಈ ವಿಚಾರದಲ್ಲಿ ಮುಂದಿದೆ ಎನ್ನುವುದೇ ಸದ್ಯದ ಆತಂಕ. ಲೀಗ್ ಹಂತದಲ್ಲಿ ಅತ್ಯುತ್ತಮವಾಗಿ ಆಡುವ ಭಾರತವು ನಾಕೌಟ್ ಹಂತದಲ್ಲಿ ಸೋತು ಹಿಂದಿರುಗಿರುವ ಸಾಕಷ್ಟು ಉದಾಹರಣೆಗಳಿವೆ. ಭಾರತದ ಕ್ರೀಡಾಭಿಮಾನಿಗಳಿಗೆ ಪ್ರಸ್ತುತ ಇರುವ ಭಯ ಅದೊಂದೇ.

2019ರ ವಿಶ್ವಕಪ್‌ನಲ್ಲಿಯೂ ಭಾರತ ಕಪ್ ಗೆಲ್ಲುವ ಫೇವರೆಟ್ ಆಗಿತ್ತು. ಲೀಗ್ ಹಂತದಲ್ಲಿ ಭಾರತ 9ರ ಪೈಕಿ ಏಳು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ರೋಹಿತ್ ಶರ್ಮಾ ಐದು ಶತಕ ಬಾರಿಸಿ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದರು. ತಂಡ ಎಲ್ಲ ವಿಧದಲ್ಲೂ ಬಲಿಷ್ಠವಾಗಿತ್ತು. ಬಹುತೇಕ ಕ್ರಿಕೆಟ್ ಪಂಡಿತರು ವರ್ಲ್ಡ್ ಕಪ್ ಕೊಹ್ಲಿ ಪಡೆಯದ್ದೇ ಎಂದು ಭವಿಷ್ಯ ನುಡಿದಿದ್ದರು.

ಧೋನಿ

ಕಳೆದ ಬಾರಿಯ ವಿಶ್ವಕಪ್‌ನಲ್ಲಿಯೂ ಭಾರತವು ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಅನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 8 ವಿಕೆಟ್ ನಷ್ಟಕ್ಕೆ 239 ರನ್‌ಗಳ ಸಾಧಾರಣ ಮೊತ್ತ ಗಳಿಸಿತ್ತು. ಮಳೆಯ ಕಾರಣಕ್ಕೆ ಮೀಸಲು ದಿನಕ್ಕೆ ಮುಂದೂಡಲಾಗಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಕೇವಲ 5 ರನ್‌ಗಳಿಗೆ ಅಗ್ರ ಮೂರು ವಿಕೆಟ್ ಕಳೆದುಕೊಂಡಿತ್ತು. 24 ರನ್‌ಗಳಿಗೆ ನಾಲ್ಕು, 71 ರನ್‌ಗೆ ಐದು, 92 ರನ್‌ಗಳಿಗೆ ಆರು ವಿಕೆಟ್ ಪತನವಾಗಿದ್ದವು. ಕ್ಲಿಷ್ಟ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿ ನಿಂತವರು ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ. ಜಡೇಜಾ ಅವರ ಅಬ್ಬರದ ಆಟಕ್ಕೆ ಧೋನಿ ತಾಳ್ಮೆಯ ಆಟದ ಮೂಲಕ ಸಾಥ್ ನೀಡಿದ್ದರು. ಭಾರತಕ್ಕೆ ಅತ್ಯಂತ ಉಪಯುಕ್ತವಾಗಿದ್ದ ಶತಕದ ಜೊತೆಯಾಟ ಬಂದಿತ್ತು. ರವೀಂದ್ರ ಜಡೇಜಾ 59 ಎಸೆತಗಳಲ್ಲಿ ನಾಲ್ಕು ಸಿಕ್ಸ್ ಸಹಿತ 77 ರನ್‌ಗಳನ್ನು ಬಾರಿಸಿ ವಿಲಿಯಮ್ಸನ್ ಹಿಡಿದ ಉತ್ತಮ ಕ್ಯಾಚ್‌ನಿಂದ ಔಟಾಗಿದ್ದರು. ಧೋನಿ 72 ಎಸೆತಗಳಲ್ಲಿ 50 ರನ್ ಹೊಡೆದು 49ನೇ ಓವರ್‌ನಲ್ಲಿ ಮಾರ್ಟಿನ್ ಕ್ರೋವ್ ಎಸೆತದಲ್ಲಿ ರನ್ ಔಟ್ ಆಗಿದ್ದರು. ಆಗ ಭಾರತಕ್ಕೆ 10 ಬಾಲ್‌ಗಳಲ್ಲಿ 25 ರನ್ ಬೇಕಿತ್ತು. ಮೂರು ವಿಕೆಟ್‌ಗಳು ಕೈಯಲ್ಲಿದ್ದವು. ಆದರೆ, ಭಾರತದ ಬೌಲರ್‌ಗಳಿಂದ ಬ್ಯಾಟಿಂಗ್‌ನಲ್ಲಿ ಯಾವ ಪವಾಡವೂ ನಡೆಯಲಿಲ್ಲ. ಅಂತಿಮವಾಗಿ ಭಾರತ 221 ರನ್‌ಗಳಿಗೆ ಇನ್ನೂ ನಾಲ್ಕು ಎಸೆತಗಳಿರುವಂತೆಯೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ದಯನೀಯವಾಗಿ ಸೋತಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಧೋನಿ ಎಲ್ಲರೂ ಕಣ್ಣೀರು ಹಾಕಿಕೊಂಡು ವಿಶ್ವಕಪ್‌ನಿಂದ ಮರಳಿದ್ದರು. ಭಾರತವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್, ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಶರಣಾಗಿತ್ತು. ಕ್ರಿಕೆಟ್ ಆಟವನ್ನು ರೂಪಿಸಿದ್ದ ಇಂಗ್ಲೆಂಡ್ ದಶಕಗಳ ನಂತರ, ತುಂಬಾ ತಡವಾಗಿ, ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು.

ಇದನ್ನು ಓದಿದ್ದೀರಾ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಳಾಗಲು ಜಯ್ ಶಾ ಕಾರಣ: ಅರ್ಜುನ ರಣತುಂಗ ಸ್ಫೋಟಕ ಹೇಳಿಕೆ

ಕಳೆದ ಸೆಮಿಫೈನಲ್‌ನ ಸೋಲು ಭಾರತವನ್ನು ಇಂದಿಗೂ ಕಾಡುತ್ತಲೇ ಇದೆ. ಅದರ ಸೇಡನ್ನು ಈ ಬಾರಿ ತೀರಿಸಿಕೊಳ್ಳಲು ಕಾತರದಿಂದ ರೋಹಿತ್ ಬಳಗ ಕಾಯುತ್ತಿದೆ. ಆದರೆ, ದಿಢೀರ್ ಕುಸಿತದ ರೋಗದಿಂದ ಪಾರಾದರೆ ಮಾತ್ರ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಗೆಲ್ಲಲು ಸಾಧ್ಯ. ಇದೆಲ್ಲದರ ಆಚೆಗೆ ಕ್ರಿಕೆಟ್ ಮೈದಾನದಲ್ಲಿ ಏನು ಬೇಕಾದರೂ ಘಟಿಸಬಹುದು ಎನ್ನುವ ಅರಿವಿನೊಂದಿಗೇ ನಾವು ಇಂದಿನ ಪಂದ್ಯವನ್ನೂ ನೋಡಬೇಕಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಪಾಕ್ ವಿರುದ್ಧ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ; 119ಕ್ಕೆ ಆಲೌಟ್!

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ನ...

UFC ಫೈನಲ್ : ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ನಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪೂಜಾ ತೋಮರ್

ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‍ಶಿಪ್ (UFC)ನಲ್ಲಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಫೈನಲ್ಸ್ ಗೆಲ್ಲುವ...

ಟಿ20 ಭಾರತ – ಪಾಕ್ ಟಿಕೆಟ್ ಬೆಲೆ 1.46 ಕೋಟಿ ರೂ.ಗೆ ಮಾರಾಟ?

ಭಾರತ – ಪಾಕ್‌ ಪಂದ್ಯವೆಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ...