ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ಪೊಲೀಸ್ ಠಾಣೆಗಳಲ್ಲಿ ರಚಿಸಲಾದ ವಿಶೇಷ ತಂಡಗಳು ಫೆಬ್ರುವರಿ 1ರಿಂದ ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬಿಟ್ಟುಹೋಗಿದ್ದ ಸುಮಾರು 1,412 ವಾಹನಗಳನ್ನು ಗುರುತಿಸಿದ್ದು, ಅವುಗಳಲ್ಲಿ 918 ವಾಹನಗಳನ್ನು ವಿಲೇವಾರಿ ಮಾಡಲಾಗಿದೆ.
ರಸ್ತೆಯಲ್ಲಿ ಬಿಟ್ಟುಹೋಗಿದ್ದ ವಾಹನಗಳು ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡುತ್ತವೆ. ರಸ್ತೆಯ ಜಾಗ ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೈ ಬಿಟ್ಟ ವಾಹನಗಳಲ್ಲಿ 706 ಆಟೋರಿಕ್ಷಾಗಳಾಗಿವೆ. 521 ದ್ವಿಚಕ್ರ ವಾಹನ ಹಾಗೂ 93 ಲಘು ಸರಕುಗಳ ವಾಹನಗಳಾಗಿವೆ. ಈ ಪೈಕಿ 350 ಆಟೋಗಳು, 449 ದ್ವಿಚಕ್ರ ವಾಹನಗಳು ಹಾಗೂ 68 ಲಘು ಸರಕು ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಕೈಬಿಡಲಾದ ವಾಹನಗಳಲ್ಲಿ ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ಸರಕುಗಳ ವಾಹನಗಳೂ ಸೇರಿವೆ.
ರಸ್ತೆ ಬದಿ ಹಾಗೆಯ ಬಿಟ್ಟು ತೆರಳಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸುತ್ತಾರೆ. ಒಂದು ವೇಳೆ, ವಾಹನ ಪಡೆಯಲು ಮಾಲೀಕರು ಬರದೇ ಹೋದಲ್ಲಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ವಾಹನಗಳನ್ನು ಸಾರ್ವಜನಿಕ ಹರಾಜು ಹಾಕುತ್ತಾರೆ.
ಈ ಸುದ್ದಿ ಓದಿದ್ದೀರಾ? ಬೇಸಿಗೆ | ಬಿಯರ್ ಮೊರೆ ಹೋದ ಮದ್ಯಪ್ರಿಯರು: 11 ದಿನದಲ್ಲಿ 27 ಲಕ್ಷ ಲೀ. ಬಿಯರ್ ಮಾರಾಟ
“ವಶಪಡಿಸಿಕೊಂಡ ವಾಹನಗಳ ಪೈಕಿ ಹೆಚ್ಚಿನ ವಾಹನಗಳು 10 ವರ್ಷ ಅಥವಾ ಅದಕ್ಕಿಂತ ಹಳೆಯವು. ಇವು ದೀರ್ಘಕಾಲದವರೆಗೆ ಬಳಕೆಯಲ್ಲಿಲ್ಲ. ಶಿವಾಜಿನಗರ ಮತ್ತು ಆರ್‌ಟಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಗುರುತಿಸಿ ತೆಗೆದುಹಾಕಲಾಗಿದೆ” ಎಂದು ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಹೇಳಿದ್ದಾರೆ.