ಒಗ್ಗಟ್ಟಿನ ಕಿಚ್ಚಿಗೆ ಮೌನ ಕರಗಿದೆ. ನ್ಯಾಯದ ಪಯಣ ಜಾರಿಯಾಗಿದೆ. ಇದು ಕೇವಲ ಆರಂಭವಷ್ಟೇ. ಹಕ್ಕೊತ್ತಾಯದ ಬಿಸಿಗೆ ಆಡಳಿತ ಮಣಿದಿದೆ. ನಮ್ಮ ಸಂಘಟಿತ ಧ್ವನಿಗೆ ನ್ಯಾಯ ಸಿಕ್ಕಿದೆ. ಇದು ಮೊದಲ ಫಲಿತ. ಸಂಘಟನೆಯ ಶಕ್ತಿಯ ಮುಂದೆ ಯಾವುದೂ ಶಾಶ್ವತವಲ್ಲ; 16ರ ಜೈಕಾರಕ್ಕೆ ಮೊದಲೇ ವಿಜಯದ ಪಿಸುಮಾತು ಮೊಳಗಿದೆ.
ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧ ಆದೇಶವನ್ನು ಮೂರು ವರ್ಷಗಳ ಬಳಿಕ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಮೇ 16ರಂದು (ನಾಳೆ) ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ ಮುಸ್ಲಿಂ ಸಮಾವೇಶ’ದ ಎಫೆಕ್ಟ್ ಇದೆಂದು ವಿಶ್ಲೇಷಿಸಲಾಗುತ್ತಿದೆ.
”ಸಾಂಪ್ರದಾಯಿಕವಾಗಿ ಧರಿಸುವ ಶಿವದಾರ, ಜನಿವಾರ, ಪೇಟ ಮತ್ತು ಹಿಜಾಬ್‌ಗೆ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ನಿರ್ಬಂಧವಿಲ್ಲ. ಆದರೆ ಸಾಂಪ್ರದಾಯಿಕವಲ್ಲದ ಕೇಸರಿ ಶಾಲು ಧರಿಸಲು ಅನುಮತಿ ಇಲ್ಲ” ಎಂದು ಸರ್ಕಾರ ಹೇಳಿದೆ. ಹಿಜಾಬ್ ಧಾರ್ಮಿಕ ಹಕ್ಕನ್ನು ಮರುಸ್ಥಾಪಿಸುವುದಾಗಿ ಚುನಾವಣಾ ಪೂರ್ವದಲ್ಲೇ ಭರವಸೆ ನೀಡಿದ್ದ ಕಾಂಗ್ರೆಸ್ ಮೂರು ವರ್ಷ ನಿರ್ಲಕ್ಷ್ಯ ತಾಳಿತ್ತು. ”ಅಲ್ಪಸಂಖ್ಯಾತ ಸಮುದಾಯಕ್ಕೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ” ಎಂಬ ಚರ್ಚೆಯನ್ನು ಮುಸ್ಲಿಂ ಸಮಾವೇಶ ಮುನ್ನೆಲೆಗೆ ತರುತ್ತಿರುವ ಹೊತ್ತಲ್ಲೇ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ತನ್ನ ಪ್ರಣಾಳಿಕೆಯನ್ನೇ ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆಗೆ ಸಾಂವಿಧಾನಿಕ ಭರವಸೆಗಳನ್ನು ನೀಡಿತ್ತು. ಬಿಜೆಪಿ ಸರ್ಕಾರ ರದ್ದುಪಡಿಸಿದ್ದ 2ಬಿ ಮೀಸಲಾತಿಯ ಮರುಸ್ಥಾಪನೆ, ಕೋಮುದ್ವೇಷ ಹರಡುವ ವ್ಯಕ್ತಿ ಮತ್ತು ಸಂಘಟನೆಗಳಿಗೆ ಕಡಿವಾಣ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಆದ್ಯತೆ, ಬಿಜೆಪಿ ತಂದಿದ್ದ ವಿವಾದಾತ್ಮಕ ಆದೇಶಗಳ ಮರುಪರೀಶೀಲನೆಯ ಭರವಸೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಹೆಚ್ಚಿಸಿ ಶಿಕ್ಷಣಕ್ಕೆ ಒತ್ತು- ಹೀಗೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿತ್ತು.
ಅವುಗಳ ಸ್ಥಿತಿ ಹೇಗಿದೆ ಎಂಬುದನ್ನು ಮುಸ್ಲಿಂ ಸಮಾವೇಶ ಮುಂದಿಡಲಿದೆ. ”ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?” ಎಂಬ ವಿಶೇಷ ವರದಿಯನ್ನು ಬಿಡುಗಡೆಗೊಳಿಸಲು ಸಮಾವೇಶ ಸಜ್ಜಾಗಿದೆ. ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಕಾರ್ಯವೈಖರಿಯನ್ನು ದಾಖಲಿಸಿರುವ ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್‌ನ ಭರವಸೆಗಳನ್ನು ನೆನಪಿಸಿ ಎಚ್ಚರಿಕೆ ನೀಡಲು ಮುಂದಾಗಿವೆ.
ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ನೀಡಿದ್ದ 10 ಪ್ರಮುಖ ಭರವಸೆಗಳು, ಈಡೇರಿದ ಮತ್ತು ಈಡೇರದ ಭರವಸೆಗಳು, ರಾಜಕೀಯ ಪ್ರಾತಿನಿಧ್ಯದಲ್ಲಿನ ತಾರತಮ್ಯ ಕುರಿತು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಜೊತೆಗೆ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ, ದ್ವೇಷ ಅಪರಾಧ, ಬಜೆಟ್ ಹಂಚಿಕೆ, ವಕ್ಫ್ ವಿಷಯ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ ಮತ್ತು ಶಿಕ್ಷಣ ಕ್ಷೇತ್ರದ ಅನುದಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವರದಿಯಲ್ಲಿ ದಾಖಲಿಸಲಾಗಿದೆ. ಯಾವುದೇ ರಾಜಕಾರಣಿಗಳನ್ನು ಆಹ್ವಾನಿಸದೆ ಸಮುದಾಯ ನಡೆಸುತ್ತಿರುವ ಈ ಸಮಾವೇಶದ ಬಿಸಿ ಈಗಾಗಲೇ ತಟ್ಟಿದ್ದು, ಹಿಜಾಬ್ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
“ಒಗ್ಗಟ್ಟಿನ ಕಿಚ್ಚಿಗೆ ಮೌನ ಕರಗಿದೆ. ನ್ಯಾಯದ ಪಯಣ ಜಾರಿಯಾಗಿದೆ. ಇದು ಕೇವಲ ಆರಂಭವಷ್ಟೇ. ಹಕ್ಕೊತ್ತಾಯದ ಬಿಸಿಗೆ ಆಡಳಿತ ಮಣಿದಿದೆ. ನಮ್ಮ ಸಂಘಟಿತ ಧ್ವನಿಗೆ ನ್ಯಾಯ ಸಿಕ್ಕಿದೆ. ಇದು ಮೊದಲ ಫಲಿತ. ಸಂಘಟನೆಯ ಶಕ್ತಿಯ ಮುಂದೆ ಯಾವುದೂ ಶಾಶ್ವತವಲ್ಲ; 16ರ ಜೈಕಾರಕ್ಕೆ ಮೊದಲೇ ವಿಜಯದ ಪಿಸುಮಾತು ಮೊಳಗಿದೆ. ಹೋರಾಟದ ಹಾದಿಯಲ್ಲಿ ಹಠ ಬಿಡದ ಪಾದಗಳು ನಮ್ಮವು, ಈ ಹಿಂಪಡೆತ ನಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂದ ಗೌರವ. ಬಿಸಿ ಮುಟ್ಟಿದ ಮೇಲೆ ಬೆಣ್ಣೆ ಕರಗಲೇಬೇಕು, ಹಕ್ಕಿಗಾಗಿ ಹೋರಾಡುವ ಧ್ವನಿ ಸದಾ ಗೆಲ್ಲಲೇಬೇಕು” ಎಂದು ಸಂಘಟಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ?: ಎಚ್ಚೆತ್ತ ಮುಸ್ಲಿಂ ಸಮುದಾಯ: ಕಾಂಗ್ರೆಸ್ ಕಾರ್ಯವೈಖರಿ ವಿರುದ್ಧ ಸಮಾವೇಶ
“ಕೇವಲ ಆದೇಶ ಬದಲಾದರೆ ಸಾಲದು, ಭರವಸೆಗಳು ಈಡೇರಬೇಕು. ಮೇ 16ರ ಮುಷ್ಕರ ಕೇವಲ ಸಭೆಯಲ್ಲ, ಅದು ನಮ್ಮ ಹಕ್ಕುಗಳ ಸ್ಪಷ್ಟ ಪ್ರತಿಧ್ವನಿ” ಎಂದು ತಿಳಿಸಿದ್ದಾರೆ. ಮುಂದುವರಿದು, ”ದ್ವೇಷ ಭಾಷಣ, ದ್ವೇಷ ಅಪರಾಧ, ದ್ವೇಷ ಪ್ರಚಾರಕ್ಕೆ ಕಡಿವಾಣ ಏಕಿಲ್ಲ? ಸರ್ವಜನಾಂಗದ ಶಾಂತಿಯ ತೋಟ ಕೇವಲ ಭಾಷಣಕ್ಕೆ ಸೀಮಿತವೇ?” ಎಂದು ಪ್ರಶ್ನಿಸಿರುವ ಸಂಘಟಕರು, ಕಾನೂನಿನ ಸಮರ್ಪಕ ಜಾರಿಗೆ ಆಗ್ರಹಿಸುತ್ತಿದ್ದಾರೆ.
ಮುನ್ನೆಲೆಗೆ ಬಂದ ಪ್ರಾತಿನಿಧ್ಯದ ಪ್ರಶ್ನೆ
ಶಾಸನಸಭೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಕುಸಿದಿದೆ. ಹೀಗಾಗಿ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಟಿಕೆಟ್ ನಿರೀಕ್ಷಿಸಿತ್ತು. ಆದರೆ ಕಾಂಗ್ರೆಸ್ ಪಕ್ಷವು ನಿರಾಕರಿಸಿತ್ತು. ಮುಸ್ಲಿಮರ ಆಗ್ರಹವನ್ನು ಧಿಕ್ಕರಿಸಿ, ಸಮರ್ಥ್ ಶಾಮನೂರರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡರೂ ಕಾಂಗ್ರೆಸ್ ಗೆಲುವಿನ ಅಂತರ ತಳಪಾಯ ಸೇರಿರುವುದು ಸ್ಪಷ್ಟ. 2023ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ. 57ರಷ್ಟು ಮತಗಳಿಸಿತ್ತು. ಉಪಚುನಾವಣೆಯಲ್ಲಿ ಶೇ. 43.95ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದಿದೆ. ಆದರೆ ಎಸ್‌ಡಿಪಿಐ ಮತಪ್ರಮಾಣ ಶೇ. 0.9ರಿಂದ ಶೇ. 11.99ಕ್ಕೆ ಜಿಗಿದಿದೆ. ಕಾಂಗ್ರೆಸ್ ವಿರೋಧಿ ಮತಗಳು ಎಸ್‌ಡಿಪಿಐ ಕಡೆಗೆ ಹೊರಳಿರುವುದು ಮೇಲುನೋಟಕ್ಕೆ ಕಂಡುಬಂದಿದೆ. ಮುಸ್ಲಿಮರ ಅಸಮಾಧಾನ ಮತ್ತಷ್ಟು ಭುಗಿಲೆದ್ದರೆ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವುದು ಖಚಿತ ಎಂಬುದು ಆಡಳಿತಾರೂಢ ಪಕ್ಷಕ್ಕೂ ಅರ್ಥವಾದಂತೆ ಕಾಣುತ್ತದೆ. ಉಳಿದ ಭರವಸೆಗಳತ್ತ ಕಾಂಗ್ರೆಸ್ ಗಮನ ಹರಿಸುತ್ತದೆಯೋ ಅಥವಾ ಹಿಜಾಬ್ ಒಂದಕ್ಕೆ ಸೀಮಿತವಾಗಿ ಸುಮ್ಮನಾಗುತ್ತದೆಯೋ ಎಂಬುದು ಸದ್ಯದ ಕುತೂಹಲ.




