- ಮೊದಲ ಪಟ್ಟಿಯಲ್ಲಿ ಹಾಲಿ, ಮಾಜಿ ಶಾಸಕರಿಗೆ ಕೈ ಟಿಕೆಟ್
- ಫಲ ನೀಡಿದ ಯಡಿಯೂರಪ್ಪ, ಅಮಿತ್ ಶಾ ಸಂಧಾನ
ಕಳೆದ ಕೆಲವು ದಿನಗಳಿಂದ ಬಿಜೆಪಿ ಹಾಲಿ ಶಾಸಕರು ಕೈ ಹಿಡಿಯುತ್ತಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ, ಇವರ್ಯಾರು ಕಾಂಗ್ರೆಸ್ ಸೇರದ ಹಿನ್ನಲೆಯಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದೆ.
ಬಿಜೆಪಿ ಹಾಲಿ ಶಾಸಕರಾದ ಹಿರಿಯೂರಿನ ಕೆ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮತ್ತು ಗೋವಿಂದರಾಜ ನಗರದ ಶಾಸಕ ವಿ ಸೋಮಣ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.
ಆದರೆ, ಯಡಿಯೂರಪ್ಪ ಹಾಗೂ ಅಮಿತ್ ಶಾ ನಡೆಸಿದ ರಾಜಿ ಸಂಧಾನದಿಂದ ಇವರ್ಯಾರು ಕೈ ಹಿಡಿಯದೇ, ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದರಿಂದ ಕೈ ನಾಯಕರು ಈ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.
ಕಳೆದ ವಾರ ಬಿಜೆಪಿ ಎಂಎಲ್ಸಿ ಸ್ಥಾನ ತೊರೆದು ಕಾಂಗ್ರೆಸ್ ಸೇರಿದ್ದ ಪುಟ್ಟಣ್ಣ ಅವರಿಗೆ ರಾಜಾಜಿನಗರದ ಟಿಕೆಟ್ ಘೋಷಣೆ ಮಾಡಿದ್ದು, ಇಲ್ಲಿ ಆಕಾಂಕ್ಷಿಯಾಗಿದ್ದ ಭವ್ಯ ನರಸಿಂಹಮೂರ್ತಿ ಸೇರಿದಂತೆ ಹಲವರಿಗೆ ನಿರಾಸೆಯಾಗಿದೆ.
ಇನ್ನು ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ ಅವರೂ ಕೂಡ ಕಾಂಗ್ರೆಸ್ ಸೇರುವ ಮಾತುಗಳು ಕೇಳಿಬಂದಿದ್ದರೂ, ಜೆಡಿಎಸ್ ನ ದೇವರಾಜ್ ಕಾಂಗ್ರೆಸ್ ಸೇರುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಟಿಕೆಟ್ ಘೊಷಣೆ ಮಾಡಿಲ್ಲ.
ಗುರುಮಿಠಕಲ್ ಕ್ಷೇತ್ರದಲ್ಲಿ ಬಿಜೆಪಿಯು ಬಾಬುರಾವ್ ಚಿಂಚನಸೂರು ಅವರಿಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬಾಬುರಾವ್ ಚಿಂಚನಸೂರು ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಆಗಿಲ್ಲ.
ಇನ್ನು ಹಲವು ನಾಯಕರು ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆ ಇರುವುದರಿಂದ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದೇ ಕಾದು ನೋಡುವ ತಂತ್ರವನ್ನು ಕೈ ನಾಯಕರು ಅನುಸರಿಸಿದ್ದಾರೆ ಎನ್ನಲಾಗಿದೆ.