ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ರಾಜಕೀಯ ಹಾಗೂ ಯುವ ಸಂಘಟನೆಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಈ ಹಿಂದೆ ನೀಟ್ ಅಕ್ರಮಗಳ ವಿಚಾರದಲ್ಲಿ ಈ ಹಿಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವವರೆಗೂ ಹಿಂದೆ ಸರಿಯದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಈಗ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದಿದೆ.
ಸಿಜೆಪಿಯು ಗ್ಯಾನೇಶ್ ಕುಮಾರ್ ಅವರಿಗೆ ನೀಡಿದ್ದ 48 ಗಂಟೆಗಳ ಗಡುವು (ಸೆಪ್ಟೆಂಬರ್ 26) ಮುಕ್ತಾಯಗೊಂಡಿದ್ದು, ಅವರು ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮುಂಬೈನಿಂದ ದೇಶವ್ಯಾಪಿ ಬೃಹತ್ ಪ್ರತಿಭಟನೆ ಆರಂಭಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಚುನಾವಣಾ ಆಯೋಗದ ‘ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸುಮಾರು 13 ಕೋಟಿಗೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಸಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿವೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ದೇಶದ್ರೋಹಿ; ಕೂಡಲೇ ರಾಜೀನಾಮೆ ನೀಡಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ
ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಈ ಸಂಬಂಧ ಆಯೋಗದ ಆಂತರಿಕ ಸಭೆಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆ ಎತ್ತಿದ್ದರೂ ಜ್ಞಾನೇಶ್ ಕುಮಾರ್ ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂಬ ತನಿಖಾ ವರದಿಗಳ ಬೆನ್ನಲ್ಲೇ ಈ ಚಳವಳಿ ತೀವ್ರಗೊಂಡಿದೆ.
ಹಿಂದೆ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾಗಿದ್ದ ಈ ಯುವ ಸಂಘಟನೆ ಸಿಜೆಪಿ, ಈಗ “ಎಲೆಕ್ಷನ್ ಕಮಿಷನ್ ಠೀಕ್ ಕರೋ” ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಸಿಜೆಪಿ ರಾಷ್ಟ್ರೀಯ ಸಂಚಾಲಕ ಅಭಿಜೀತ್ ದೀಪ್ಕೆ ನೀಡಿರುವ ಹೇಳಿಕೆಯಂತೆ, ಗಾಂಧಿ ಜಯಂತಿಯಂದು ಮುಂಬೈನಿಂದ ಆರಂಭವಾಗುವ ಈ ಹೋರಾಟವು ನಂತರ ದೆಹಲಿ (ಜಂತರ್ ಮಂತರ್ 2.0), ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸಲಿದೆ.
ಗ್ಯಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು, SIR ಪ್ರಕ್ರಿಯೆಯ ಆಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಮತ್ತು ಜನವರಿ 2025ರ ಮತದಾರರ ಪಟ್ಟಿಯನ್ನು ಪುನಃಸ್ಥಾಪಿಸಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.
ಮತ್ತೊಂದೆಡೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕರೆಯ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ದೆಹಲಿ, ಗುವಾಹಟಿ, ಬೋಪಾಲ್, ಡೆಹರಾಡೂನ್, ಪಟನಾ ಮತ್ತು ಕರ್ನಾಟಕದಲ್ಲೂ ಬೀದಿಗಿಳಿದು ಸಿಇಸಿ ವಿರುದ್ಧ ಬೃಹತ್ ಪ್ರದರ್ಶನ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ಗೌರವ್ ಗೊಗೊಯ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದ್ದು, ಪಟನಾ ಮತ್ತು ಚಂಡೀಗಢಗಳಲ್ಲಿ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಬಳಸಲಾಗಿದೆ.
ಗ್ಯಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸುವವರೆಗೆ ಮತ್ತು ಮತದಾರರ ಹಕ್ಕುಗಳನ್ನು ಮರುಸ್ಥಾಪಿಸುವವರೆಗೆ ಈ ಸುದೀರ್ಘ ಹೋರಾಟವು ಹಿಂಪಡೆಯುವುದಿಲ್ಲ ಎಂದು ಎರಡೂ ಸಂಘಟನೆಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿವೆ.




