- ಸೇವೆ ಕೊರತೆಗೆ ಫ್ಲಿಪ್‌ಕಾರ್ಟ್ ಮತ್ತು ಅದರ ಚಿಲ್ಲರೆ ವ್ಯಾಪಾರಿಗಳು ಜವಾಬ್ದಾರರು; ಆಯೋಗ
- ಸೇವೆಯ ಕೊರತೆಯಿಂದ ಅನುಭವಿಸಿದ ಮಾನಸಿಕ ಸಂಕಟಕ್ಕೆ ಪರಿಹಾರ ನೀಡಲು ಆದೇಶ
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಆಪಲ್ ಐಫೋನ್‌ನ ಬದಲಾಗಿ ಸಣ್ಣ ಕೀಪ್ಯಾಡ್ ಫೋನ್ ಮತ್ತು ‘ನಿರ್ಮಾ’ ಸೋಪ್ ಕಳುಹಿಸಿದ್ದ ಫ್ಲಿಪ್‌ಕಾರ್ಟ್ ಸಂಸ್ಥೆಗೆ ಗ್ರಾಹಕ ಆಯೋಗವು 25,000 ರೂ. ದಂಡ ವಿಧಿಸಿದೆ.
2021ರಲ್ಲಿ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಹರ್ಷ ಎಸ್ ಎಂಬುವವರು ಫ್ಲಿಪ್‌ಕಾರ್ಟ್‌ನಲ್ಲಿ ₹48,999 ಮೊತ್ತದ ಐಫೋನ್ (Apple iPhone 11 [Green 65GB])ನನ್ನು ಆರ್ಡರ್ ಮಾಡಿದ್ದರು. ಈ ಸಮಯದಲ್ಲಿ ಸಂಪೂರ್ಣ ಮೊತ್ತವನ್ನು ಆನ್‌ಲೈನ್ ಪೆಮೇಂಟ್ ಮೂಲಕ ಪಾವತಿ ಮಾಡಿದ್ದರು. ಆದರೆ, ಆಪಲ್ ಐಫೋನ್ ಬದಲಾಗಿ 140 ಗ್ರಾಂನ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು ಒಂದು ಡಿಟರ್ಜೆಂಟ್ ಸೋಪ್ ಮನೆಗೆ ಬಂದಿತ್ತು.
ಇದರಿಂದ ಆತಂಕಗೊಂಡ ಹರ್ಷ ಅವರು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೇನ್ ರಿಟೇಲ್ಸ್ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
“ಐಫೋನ್‌ಗಾಗಿ ₹48,999 ಪಾವತಿಸಿದ್ದೇನೆ. ಫ್ಲಿಫ್‌ಕಾರ್ಟ್‌ನಿಂದ ಬಂದ ಪಾರ್ಸೆಲ್ ಅನ್ನು ತೆರೆದ ನಂತರ ಆಘಾತಕ್ಕೊಳಗಾಗಿದ್ದೇನೆ. ನಾನು ಭರಿಸಿದ್ದ ಹಣವನ್ನು ಮರುಪಾವತಿ ಮಾಡಬೇಕು. ಸೇವೆಯ ಕೊರತೆಯಿಂದ ಅನುಭವಿಸಿದ ಮಾನಸಿಕ ಸಂಕಟಕ್ಕೆ ಪರಿಹಾರವನ್ನು ನೀಡಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಎ ಜಿ ಮಾಲ್ದಾರ್, ಮಹಿಳಾ ಸದಸ್ಯೆ ಜಿ ಇ ಸೌಭಾಗ್ಯಲಕ್ಷ್ಮಿ ಮತ್ತು ಸದಸ್ಯ ಜಿ ಎಸ್ ಪಾಟೀಲ್ ಅವರನ್ನೊಳಗೊಂಡ ಸಮಿತಿಯು, “ಫ್ಲಿಪ್‌ಕಾರ್ಟ್ ಮತ್ತು ಚಿಲ್ಲರೆ ವ್ಯಾಪಾರಿಗಳು ಸೇವಾ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಕಾರಣದಿಂದ ಸಂತ್ರಸ್ತರಿಗೆ ₹10,000 (ಮಾನಸಿಕ ತೊಂದರೆ, ಸಂಕಟ, ದೈಹಿಕ ಕಿರುಕುಳ) ಮತ್ತು ದಾವೆ ವೆಚ್ಚ ₹15,000 ಒಟ್ಟಾರೆಯಾಗಿ ₹25000 ದಂಡ ಪಾವತಿಸಬೇಕು ಹಾಗೂ ಫೋನ್ ಬೆಲೆಯ ₹48,999 ಮರುಪಾವತಿಸಬೇಕು. ಹಣವನ್ನು ಎಂಟು ವಾರಗಳಲ್ಲಿ ಪಾವತಿ ಮಾಡಬೇಕು” ಎಂದು ಆದೇಶಿಸಿದೆ.
“ಇಂದಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಎಲ್ಲೆಡೆ ಹರಡುತ್ತಿದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಆದರೆ, ವಸ್ತುಗಳನ್ನು ಮಾರಾಟ ಮಾಡಿದ ನಂತರ ಕಂಪನಿಗಳ ಜವಾಬ್ದಾರಿಗಳು ಮುಗಿಯುವುದಿಲ್ಲ. ಉತ್ಪನ್ನಗಳಿಂದ ತಮ್ಮ ಗ್ರಾಹಕರನ್ನು ತೃಪ್ತಿಪಡಿಸುವುದು ಕಂಪನಿಗಳ ಬದ್ಧ ಕರ್ತವ್ಯವಾಗಿದೆ. ಏಕೆಂದರೆ, ಗ್ರಾಹಕರಿಗೆ ಮೋಸ ಮಾಡಲು ಮತ್ತು ಗ್ರಾಹಕರಿಂದ ಹಣವನ್ನು ದೋಚಲು ತಪ್ಪು ವಸ್ತುಗಳನ್ನು/ಉತ್ಪನ್ನವನ್ನು ಕಳುಹಿಸುವ ಮೂಲಕ ಗ್ರಾಹಕರ ಹಣವನ್ನು ಕಸಿದುಕೊಳ್ಳಲು ಯಾವುದೇ ಸ್ವಾತಂತ್ರ್ಯವಿಲ್ಲ” ಎಂದು ಹೇಳಿದೆ.
“ಸೇವೆಯ ಕೊರತೆಗೆ ಫ್ಲಿಪ್‌ಕಾರ್ಟ್ ಮತ್ತು ಅದರ ಚಿಲ್ಲರೆ ವ್ಯಾಪಾರಿಗಳು ಜವಾಬ್ದಾರರಾಗಿರುತ್ತಾರೆ. ವಸ್ತುವನ್ನು ಖರೀದಿಸಿದಕ್ಕೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಿದ್ದರೂ, ವಸ್ತುಗಳ ಬದಲಾವಣೆ ಮಾಡಿದ್ದು ತಪ್ಪು. ಖರೀದಿಸಿದ ವಸ್ತುಗಳ ಬದಲಾಗಿ ಮತ್ತೊಂದು ವಸ್ತು ಕಳುಹಿಸುವುದು ಅನ್ಯಾಯದ ವ್ಯಾಪಾರದ ಅಭ್ಯಾಸದ ಅಡಿಯಲ್ಲಿ ಬರುತ್ತದೆ” ಎಂದು ತಿಳಿಸಿದೆ.