ಮೋದಿ ಉಪನಾಮದ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಆಡಳಿತಾರೂಢ ಬಿಜೆಪಿ ಸರ್ಕಾರದ ನಡೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ ಕವಿರಾಜ್ ಕೂಡ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಇದು ಸರ್ವಾಧಿಕಾರದ ಲಕ್ಷಣ ಎಂದು ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆಗೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕವಿರಾಜ್, “ಸರ್ವಾಧಿಕಾರ ಬಲವಾಗಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ. ಸರ್ವಾಧಿಕಾರದ ಮುಖ್ಯ ಲಕ್ಷಣವೇ ವಿರೋಧಿಗಳ ಬಂಧನ, ಅವರ ಸ್ಥಾನಮಾನಗಳ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ. ಸರ್ಕಾರಿ ಸಂಸ್ಥೆಗಳ ಅಧಿಕಾರ ದುರುಪಯೋಗ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಹಾಗೆ ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇವಲ ಕವಿರಾಜ್ ಮಾತ್ರವಲ್ಲ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅರ್ನಹತೆಯ ವರದಿಯನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು, “ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ರಷ್ಯಾ, ಟರ್ಕಿಯಂತಹ ದೇಶಗಳಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಓದುತ್ತಿದ್ದೆವು. ಆದರೆ, ಈಗ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾಯಿತಗೊಂಡ ಸರ್ಕಾರ ಅದೇ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶಗೊಳಿಸುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಅಂತಹ ದೇಶಗಳ ಸಾಲಿಗೆ ಭಾರತವೂ ಸೇರಿಕೊಂಡಿದೆ” ಎಂದು ಬೇಸರಿಸಿದ್ದಾರೆ.
ರಾಹುಲ್ ಗಾಂಧಿಯವರ ಅನರ್ಹತೆ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಈ ಬೆಳವಣಿಗೆಯನ್ನು ವಿರೋಧಿಸಿ ಟ್ವೀಟ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್, “ಈ ರೀತಿ ಕೀಳುಮಟ್ಟದ, ಪ್ರಗತಿಗೆ ಮಾರಕವಾಗುಂತಹ ರಾಜಕಾರಣ ಮಾಡಲು ನಾಚಿಕೆಯಾಗಬೇಕು. ಇದು ದೇಶಕ್ಕಾಗಿ ನಾವೆಲ್ಲರೂ ಧ್ವನಿ ಎತ್ತ ಬೇಕಿರುವ ಸಂದರ್ಭ. ಇಂತಹ ಹೊತ್ತಿನಲ್ಲಿ ನಾವು ಸುಮ್ಮನೆ ಕೂತರೆ, ಇವತ್ತಿನ ನಮ್ಮ ಮೌನಕ್ಕೆ ನಾಳೆ ದಿನ ನಾವೇ ದುಬಾರಿ ಬೆಲೆ ತೆರಬೇಕಾಗುತ್ತದೆ” ಎಂದು ಜನ ಸಾಮಾನ್ಯರನ್ನು ಎಚ್ಚರಿಸಿದ್ದಾರೆ.