ಪ್ರಸ್ತುತ ವರ್ಷದ ಮುಂಗಾರು ಮಳೆ ಅಭಾವದಿಂದ ರೈತರ ಬೆಳೆಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರ ನೀಡಲು ಹಾಗೂ ಕಾಮಗಾರಿ ಉದ್ಯೋಗ ನೀಡಲು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ರೈತ ಕೃಷಿ ಕಾರ್ಮಿಕ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿ (ಎಐಕೆಕೆಎಂಎಸ್) ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿತು.
ಸಂಘಟನೆಯ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, “ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ ವಿಫಲವಾಗಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಇದರಿಂದ ಬಿತ್ತನೆ ಮಾಡಲು ಭೂಮಿಯಲ್ಲಿ ಅವಶ್ಯಕ ತೇವಾಂಶ ಇಲ್ಲ. ಇನ್ನು ಕೆಲವು ಪ್ರದೇಶಗಳಲ್ಲಿ ಇರುವ ತೇವಾಂಶದಲ್ಲಿ ಬಿತ್ತನೆ ಮಾಡಿ ರೈತರು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿ ಹೊಲ, ಗದ್ದೆಗಳಲ್ಲಿ ಪೈರು ಬರುವ ಸಮಯವಾದರೂ ಸೂಕ್ತ ಸಮಯದಲ್ಲಿ ಮಳೆಯಾಗದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ” ಎಂದರು.
“ಕೆಲವು ಪ್ರದೇಶದಲ್ಲಿ ಅಲ್ಪ ಸ್ವಲ್ಪ ಚಿಗುರೊಡೆದಿರುವ ಪೈರುಗಳೂ ಕೂಡ ಕ್ರಮೇಣವಾಗಿ ಒಣಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಒಣ ಬರಗಾಲ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಹಜವಾಗಿ ಅಂತಹ ಪರಿಸ್ಥಿತಿಯನ್ನು ಎದುರಿಸಲು ಅವಶ್ಯಕ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಇನ್ನು ಈಗಾಗಲೇ ಬಿತ್ತನೆ ಬೀಜ, ಔಷಧಿ ಇನ್ನಿತರ ಖರ್ಚಿಗಾಗಿ ಸಾಲ ಮಾಡಿರುವ ರೈತರು ಹೈರಾಣಾಗಿದ್ದಾರೆ. ಸಹಜವಾಗಿಯೇ ಅವರ ಬದುಕು ತೀವ್ರ ಕಷ್ಟದಲ್ಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕರಾವಳಿಯಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ
“ಸರ್ಕಾರ ಇಂತಹ ಸಂದರ್ಭದಲ್ಲಿ ರೈತರಿಗೆ ಆಸರೆಯಾಗಿ ನಿಂತು ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಅಂದರೆ ಬೆಳೆ ನಷ್ಟ ಪರಿಹಾರ ನೀಡುವುದು, ನರೇಗಾ ಯೋಜನೆಯಡಿಯಲ್ಲಿ ವರ್ಷ ಪೂರ್ತಿ ಉದ್ಯೋಗ ನೀಡುವುದು, ರೈತರ ಸಾಲ ಮನ್ನಾ ಮಾಡುವುದು, ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿಸುವುದು, ಪ್ರತಿ ಕುಟುಂಬಕ್ಕೆ ಅವಶ್ಯಕವಿರುವಷ್ಟು ಪಡಿತರ ನೀಡುವುದು, ಕೆರೆ ಕಟ್ಟೆಗಳ ಹೂಳೆತ್ತುವುದು, ನೀರಾವರಿ ಕಾಮಗಾರಿ ಸೇರಿದಂತೆ ಇನ್ನಿತರ ಜನ ಕಲ್ಯಾಣ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ” ಎಂದು ಆಲ್ ಇಂಡಿಯಾ ರೈತ ಕೃಷಿ ಕಾರ್ಮಿಕ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹನುಮೇಶ, ಕಚೇರಿ ಕಾರ್ಯದರ್ಶಿ ಗೋವಿಂದ ಕೃಷ್ಣಪ್ಪನವರ್, ಶ್ರೀದೇವಿ ದೊಡ್ಡಮನೆ, ಮಂಜುಳಾ ಜಗದಾಳಿ, ಪರಮೇಶ್, ನದಾಫ್ ಸೇರಿದಂತೆ ಇತರರು ಇದ್ದರು.