- ಮುಂಬೈ ಸಮೀಪದ ಥಾಣೆಯ ಬಂದೋಡ್ಕರ್ ಕಾಲೇಜಿನಲ್ಲಿ ನಡೆದ ಘಟನೆ
- ‘ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ’ ಎಂದ ಕಾಲೇಜಿನ ಪ್ರಾಂಶುಪಾಲೆ
ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ನ ಸೀನಿಯರ್ ವಿದ್ಯಾರ್ಥಿಯೊಬ್ಬ ಜೂನಿಯರ್‌ಗಳಿಗೆ ಮನಬಂದಂತೆ ಬಡಿಗೆಯಿಂದ ಥಳಿಸಿ, ಶಿಕ್ಷೆ ನೀಡಿದ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮುಂಬೈ ಸಮೀಪದ ಥಾಣೆಯ ಬಂದೋಡ್ಕರ್ ಕಾಲೇಜಿನಲ್ಲಿನ ಎನ್‌ಸಿಸಿ ತರಬೇತಿಯ ವೇಳೆ ಈ ಬೆಳವಣಿಗೆ ನಡೆದಿದ್ದು, ಘಟನೆಯನ್ನು ದೂರದ ಕಿಟಕಿ ಬಳಿ ನಿಂತು ನೋಡುತ್ತಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಮಳೆ ಬರುತ್ತಿದ್ದರೂ ನೆಲದಲ್ಲಿ ತಲೆ ಕೆಳಗಾಗಿಸಿ ಮಲಗಿಸಿದ್ದ ಸುಮಾರು ಏಳರಿಂದ ಎಂಟು ಮಂದಿ ವಿದ್ಯಾರ್ಥಿಗಳ ಕುಂಡೆಗೆ ಮನಬಂದಂತೆ ಥಳಿಸಿದ್ದಾನೆ. ಒಬ್ಬೊಬ್ಬ ವಿದ್ಯಾರ್ಥಿಗೂ ಸುಮಾರು ನಾಲ್ಕೈದು ಬಾರಿ ಬಡಿಗೆಯಿಂದ ಥಳಿಸಲಾಗಿದೆ. ಓರ್ವ ವಿದ್ಯಾರ್ಥಿ ನಿರಂತರ ಹೊಡೆತದ ನೋವು ಸಹಿಸಲಾರದೆ, ಹೊಡೆಯದಂತೆ ಕೈ ಅಡ್ಡ ಇಟ್ಟು ಅಂಗಲಾಚುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕೋಲು ಹಿಡಿದು ಥಳಿಸಿರುವ ವ್ಯಕ್ತಿಯನ್ನು ಹಿರಿಯ ಎನ್‌ಸಿಸಿ ಕೆಡೆಟ್ ಎಂದು ಗುರುತಿಸಲಾಗಿದೆ. ಡ್ರಿಲ್ ನಡೆಸಲು ವಿಫಲರಾದ ಹಿನ್ನೆಲೆಯಲ್ಲಿ ಈ ರೀತಿಯಾಗಿ ನಡೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ?
ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್, ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥ ಹಿರಿಯ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
‘ಸುಮಾರು 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್ ಸಿಸಿ ತರಬೇತಿ ನಡೆಯುತ್ತಿದೆ. ಎನ್‌ಸಿಸಿಯ ಜವಾಬ್ದಾರಿ ಇರುವ ಶಿಕ್ಷಕರ ಅನುಪಸ್ಥಿತಿಯ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾಡಿರುವ ಕೃತ್ಯ ಕೇವಲ ಮಾನಸಿಕ ಅಸ್ವಸ್ಥರು ಮಾತ್ರ ಮಾಡಲು ಸಾಧ್ಯ’ ಎಂದು ಪ್ರಾಂಶುಪಾಲೆ ತಿಳಿಸಿದ್ದಾರೆ.