ಈ ದಿನ ಸಂಪಾದಕೀಯ | ಕ್ಯಾಂಪಸ್ಸುಗಳಲ್ಲಿ ಜಾತಿ ನಿಂದನೆ- ಬಿಗಿ ಕಾಯಿದೆ ಜಾರಿಯಾಗಲಿ

Date:

ಐಐಟಿ ಮುಂತಾದ ಉನ್ನತ ಅಧ್ಯಯನ ಸಂಸ್ಥೆಗಳನ್ನು ಸೇರುವ ದಲಿತ-ದಮನಿತ ವಿದ್ಯಾರ್ಥಿಗಳನ್ನು ‘ಮೆರಿಟ್’ ವಿಚಾರವನ್ನು ಮುಂದೆ ಮಾಡಿ ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಮೀಸಲಾತಿಯನ್ನು ನಿಂದಿಸಿ ‘ಮೆರಿಟ್’ ಅನ್ನು ಹತಾರಿನಂತೆ ಬಳಸಿ ದಲಿತ ದಮನಿತರನ್ನು ತಿವಿದು ತಿರುಚಲಾಗುತ್ತಿದೆ

ಬಾಂಬೇ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತನ್ನ ಕ್ಯಾಂಪಸ್ಸಿನಲ್ಲಿ ಜಾತಿ ತಾರತಮ್ಯ ವಿರೋಧಿ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳಿಗೆ ನಿಗದಿಪಡಿಸಿದೆ. ಅಧ್ಯಾಪಕರನ್ನು ಈ ಮಾರ್ಗಸೂಚಿಗಳಿಂದ ಹೊರಗಿಡಲಾಗಿದೆ. ಅಧ್ಯಾಪಕವೃಂದ ಜಾತಿವಾದ- ಮನುವಾದದಿಂದ ಮುಕ್ತರಾದದ್ದು ಯಾವಾಗ? ಸಾಮಾಜಿಕ ಪಿಡುಗೇ ಆಗಿ ಹೋಗಿರುವ ಜಾತಿ ತಾರತಮ್ಯವನ್ನು ಬುಡಮಟ್ಟದಿಂದ ಕಿತ್ತೆಸೆಯದೆ ಕೈಗೊಳ್ಳುವ ಇಂತಹ ಮಾರ್ಗಸೂಚಿಗಳ ಕ್ರಮ ಕೇವಲ ಕಣ್ಣೊರೆಸುವ ತುಟಿಯಂಚಿನ ಮಾತು.

ಹೊರಗಣ ಸಮಾಜದಲ್ಲಿ ನೂರಾರು ವರ್ಷಗಳಿಂದ ಆಳಕ್ಕೆ ಬೇರಿಳಿಸಿರುವ ಮತ್ತು ಈಗ ದೇಶದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಮತ್ತು ಅದರ ಮಾತೃಸಂಸ್ಥೆಯು ಪೊರೆಯುತ್ತ ಬಂದಿರುವ ಅನಿಷ್ಟ ಜಾತಿವ್ಯವಸ್ಥೆ. ಈ ಅನಿಷ್ಟದ ಬೇರುಗಳನ್ನು ಕ್ಯಾಂಪಸ್ಸುಗಳಲ್ಲಿ ಮಾತ್ರ ಅದರಲ್ಲೂ ಕೆಲ ಮೇಲ್ಪದರದ ಹಗುರ ಮಾರ್ಗಸೂಚಿಗಳ ಮುಖಾಂತರ ಕದಲಿಸುತ್ತೇವೆ ಎನ್ನುವುದು ಅಪ್ಪಟ ಆಷಾಢಭೂತಿತನ.

ದರ್ಶನ್ ಸಿಂಗ್ ಸೋಲಂಕಿ ಎಂಬ ತನ್ನ ಪ್ರಥಮ ವರ್ಷದ  ವಿದ್ಯಾರ್ಥಿ ಇತ್ತೀಚೆಗೆ ಜಾತಿ ಭೇದಭಾವಕ್ಕೆ ಬಲಿಯಾಗಿದ್ದ. ಪರಿಣಾಮವಾಗಿ ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬಾಂಬೇ ಐಐಟಿ ಈ ಕ್ರಮ ಜರುಗಿಸಿದೆ. ಐಐಟಿ- ಮುಂಬಯಿಯ ಮೊದಲ ವರ್ಷದ ವಿದ್ಯಾರ್ಥಿ ಸೋಲಂಕಿ  ಏಳನೆಯ ಅಂತಸ್ತಿನಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ದಾರುಣ ಜರುಗಿತ್ತು. ಹದಿನೆಂಟರ ಹರೆಯದ ಈ ಎಳೆಯ ದಲಿತ ದಮನಿತ ವರ್ಗಕ್ಕೆ ಸೇರಿದ್ದವನು. ಅಂಬೇಡ್ಕರ್-ಪೆರಿಯಾರ್-ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್ ಸಿ) ಪ್ರಕಾರ ಜಾತಿ ಸಂಬಂಧಿ ತಾರತಮ್ಯವೇ ಈ ಆತ್ಮಹತ್ಯೆಗೆ ಕಾರಣ ಎಂಬುದು ಮತ್ತಷ್ಟು ಕಳವಳಕಾರಿ ವಿದ್ಯಮಾನ. ಬಿ.ಟೆಕ್. (ಕೆಮಿಕಲ್) ಕೋರ್ಸ್ ಸೇರಿದ್ದ ದರ್ಶನ್ ಅಹ್ಮದಾಬಾದಿನವ. ಐಐಟಿ ಸೇರಿ ಮೂರು ತಿಂಗಳಾಗಿತ್ತು. JEE ಪರೀಕ್ಷೆಯಲ್ಲಿ ಕೆಳಹಂತದ ರ‍್ಯಾಂಕ್ ಸಿಕ್ಕಿದ್ದರೂ ಮೀಸಲಾತಿ ಮೂಲಕ ಐಐಟಿ ಪ್ರವೇಶ ಪಡೆದವನೆಂದು ಆತನನ್ನು ಅವಹೇಳನ ಮಾಡಲಾಗುತ್ತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅನಿಕೇತ್ ಅಂಭೋರ್ ಎಂಬ ಮತ್ತೊಬ್ಬ ದಲಿತ ವಿದ್ಯಾರ್ಥಿ 2014ರಲ್ಲಿ ಮುಂಬಯಿ ಐಐಟಿ ಹಾಸ್ಟೆಲಿನ ಆರನೆಯ ಅಂತಸ್ತಿನಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಾವಿನ ಕುರಿತು ರಚಿಸಲಾಗಿದ್ದ ಮೂವರು ಸದಸ್ಯರ ತನಿಖಾ ಸಮಿತಿಯು ದಲಿತ-ಆದಿವಾಸಿ ವಿದ್ಯಾರ್ಥಿಗಳ ಕಲ್ಯಾಣಕ್ಕೆಂದು ಹಲವು ಶಿಫಾರಸುಗಳನ್ನು ಸಲ್ಲಿಸಲಾಗಿತ್ತು. ಈ ಶಿಫಾರಸುಗಳು ಕಾಗದದ ಮೇಲೆಯೇ ಉಳಿದಿವೆ.

ಐಐಟಿ ಮುಂತಾದ ಉನ್ನತ ಅಧ್ಯಯನ ಸಂಸ್ಥೆಗಳನ್ನು ಸೇರುವ ದಲಿತ-ದಮನಿತ ವಿದ್ಯಾರ್ಥಿಗಳನ್ನು ‘ಮೆರಿಟ್’ ವಿಚಾರವನ್ನು ಮುಂದೆ ಮಾಡಿ ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಮೀಸಲಾತಿಯನ್ನು ನಿಂದಿಸಿ ‘ಮೆರಿಟ್’ ನ್ನು ಹತಾರಿನಂತೆ ಬಳಸಿ ದಲಿತ ದಮನಿತರನ್ನು ತಿವಿದು ತಿರುಚಲಾಗುತ್ತಿದೆ.

ಮಾರ್ಗಸೂಚಿಯ ಪ್ರಕಾರ ವಿದ್ಯಾರ್ಥಿಗಳು ಪರಸ್ಪರರ JEE Advanced ರ‍್ಯಾಂಕ್ ಅಥವಾ GATE ಅಂಕಗಳನ್ನು ಇಲ್ಲವೇ ನಿರ್ದಿಷ್ಟ ವಿದ್ಯಾರ್ಥಿಯ ಜಾತಿ ಮುಂತಾದ ಮಾಹಿತಿಯನ್ನು ಹೊರಗೆಡವಬಲ್ಲ ಯಾವುದೇ ಸಂಗತಿಯನ್ನು ಕೇಳುವಂತಿಲ್ಲ. ರ‍್ಯಾಂಕ್ ಕೇಳುವುದರ ಅರ್ಥ ಜಾತಿಯನ್ನು ಕಂಡು ಹಿಡಿಯುವ ಅಥವಾ ಜಾತಿ ತಾರತಮ್ಯಕ್ಕೆ ನಾಂದಿ ಹಾಕುವ ಪ್ರಯತ್ನ.
ರ‍್ಯಾಂಕ್ ಕೇಳುವ ವಿದ್ಯಾರ್ಥಿಗೆ ತನ್ನದು ಅಮಾಯಕ ಪ್ರಶ್ನೆಯೆಂದೂ, ಕೇವಲ ಕುತೂಹಲ ಮೂಲದ್ದು ಎಂದೂ ಅನ್ನಿಸಬಹುದು. ಆದರೆ ಈ ಪ್ರಶ್ನೆಗೆ ಉತ್ತರ ಹೇಳಬೇಕಿರುವ ವಿದ್ಯಾರ್ಥಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜಾತಿ, ಧರ್ಮ ಅಥವಾ ಸಾಮಾಜಿಕ-ಆರ್ಥಿಕ ಸ್ಥಾನಮಾನಗಳನ್ನು ಬದಿಗಿಟ್ಟು ಪರಸ್ಪರ ಬಾಂಧವ್ಯ ಬೆಸೆದುಕೊಳ್ಳಬೇಕೆಂಬುದು ಸಂಸ್ಥೆಯ ಬಯಕೆ ಎಂದೂ ಮಾರ್ಗಸೂಚಿಗಳು ಗೊತ್ತು ಮಾಡಿವೆ. ದರ್ಶನ್ ಸೋಲಂಕಿ ಎಂಬ ದಲಿತ ವಿದ್ಯಾರ್ಥಿಯ ರ‍್ಯಾಂಕ್ ಗೊತ್ತಾದ ನಂತರ ಕಲೆತು ಬೆರೆಯುವುದನ್ನು ತಗ್ಗಿಸಿದ್ದ ಆತನ ಹಾಸ್ಟೆಲ್ ಕೋಣೆ ಹಂಚಿಕೊಂಡಿದ್ದ ‘ಮೇಲ್ಜಾತಿ’ ವಿದ್ಯಾರ್ಥಿ.

ಕ್ರೀಡೆ, ಸಂಗೀತ, ಸಿನೆಮಾ, ಶಾಲೆ ಕಾಲೇಜು, ಗ್ರಾಮ, ಪಟ್ಟಣ, ಹವ್ಯಾಸ ವಿವರಗಳ ವಿನಿಮಯದ ಮೂಲಕ ವಿದ್ಯಾರ್ಥಿಗಳು ಸ್ನೇಹ ಸಲುಗೆ ಬೆಳೆಸಿಕೊಳ್ಳಬೇಕು. ದ್ವೇಷಪೂರಿತ, ಜಾತಿವಾದದ, ಧರ್ಮಾಂಧತೆಯ, ಲಿಂಗತಾರತಮ್ಯದ ಬೈಗುಳಗಳ ‘ಜೋಕ್’ಗಳ ಮೆಸೇಜ್ ಗಳನ್ನು ಹಂಚಿಕೊಳ್ಳಬಾರದು. ಹಂಚಿಕೊಳ್ಳುವುದು ಕಿರುಕುಳದ ಅಥವಾ ಹೆದರಿಸಿ ದಬಾಯಿಸುವ ಕ್ರಿಯೆ ಎಂದು ಪರಿಗಣಿಸಿ ತೀವ್ರ ಶಿಕ್ಷೆ ವಿಧಿಸಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಯಪಡಿಸಲಾಗಿದೆ.

2014ರಿಂದ 2021ರ ನಡುವೆ ಐಐಟಿಗಳು, ಐಐಎಂಗಳು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ 122 ಕ್ಕಿಂತಲೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. 2021ರಲ್ಲಿ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಅಂಕಿ ಅಂಶವಿದು. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಲಿತರು. ಜಾತಿಪದ್ಥತಿಯ ಮಾರಕ ರೋಗಾಣು ನಮ್ಮ ಕ್ಯಾಂಪಸ್ ಗಳನ್ನು ಕವಿದು ಮುತ್ತಿರುವ ಮಾತಿಗೆ ಪುರಾವೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸುವ ಕುರಿತು ನಮ್ಮ ಉನ್ನತ ಅಧ್ಯಯನ ಸಂಸ್ಥೆಗಳು ಕೆಡಿಸಿಕೊಂಡಿಲ್ಲ.

2015ರಲ್ಲಿ ರೂಡ್ಕಿಯ ಐಐಟಿಯು ಕೆಳದರ್ಜೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಜಾ ಮಾಡಿತು. ಇಲ್ಲವೇ ಆ ವಿದ್ಯಾರ್ಥಿಗಳು ತಾವಾಗಿಯೇ ಐಐಟಿ ಶಿಕ್ಷಣವನ್ನು ತೊರೆದರು. ಈ ಪೈಕಿ ಶೇ.90ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ- ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿದವರು. ಸರ್ಕಾರಿ ಶಾಲಾ ಶಿಕ್ಷಣ ಪಡೆದವರು. ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ‘ಮೀಸಲಾತಿ’ಯಡಿ ಪ್ರವೇಶ ಪಡೆದು ನಿತ್ಯ ತಾರತಮ್ಯ ಎದುರಿಸುವವರು. 2011ರಲ್ಲಿ ಐಐಟಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಶೇ.80ರಷ್ಟು ದಲಿತರೇ ಇದ್ದರು. ‘ಮೇಲ್ಜಾತಿ’ಗಳ ವಿದ್ಯಾರ್ಥಿಗಳು ಐಐಟಿಗಳಲ್ಲಿ ಸಾಮಾನ್ಯ ವರ್ಗಗಳಡಿ ತಮ್ಮ ಪ್ರಮಾಣ ಮೀರಿ ಪ್ರವೇಶ ಪಡೆಯುತ್ತಾರೆ.

ರ‍್ಯಾಗಿಂಗ್ ಕುರಿತು ತಲೆಕೆಡಿಸಿಕೊಂಡು ಬಿಗಿ ಕಾನೂನು ಜಾರಿ ಮಾಡಲಾಗಿದೆ. ಆದರೆ ಅದಕ್ಕಿಂತ ದೊಡ್ಡ ಪಿಡುಗಾಗಿರುವ ಜಾತಿ ನಿಂದನೆಯನ್ನು ಕುರಿತು ಕ್ರೂರ ಮೌನ ತಳೆದಿರುವುದು ಅಕ್ಷಮ್ಯ. 

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...