ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅ.27ರಂದು ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ 2.15 ಲಕ್ಷ ಮತದಾರರನ್ನು ಅಂತಿಮ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿದ್ದು, ಎಸ್ಐಆರ್ ಆರಂಭಕ್ಕೂ ಮುನ್ನ ಒಟ್ಟು 14,61,959 ಮತದಾರರಿದ್ದರು. ಎಎಸ್ಡಿಡಿಒ (ಗೈರು, ಶಾಶ್ವತ ಸ್ಥಳಾಂತರ, ಮೃತ, ಡುಪ್ಲಿಕೇಟ್ ಹಾಗೂ ಇತರೆ) ಎಂದು ವರ್ಗೀಕರಣದಿಂದ ಒಟ್ಟು 2,41,044 ಅಂದರೆ ಶೇ 16.49ರಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿತ್ತು.
ಬಳಿಕ ನಡೆದ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಒಟ್ಟು 12,46,746 ಮತದಾರರಿದ್ದು ಇದರಲ್ಲಿ ಪುರುಷರ ಸಂಖ್ಯೆ 6,44,394 ಹಾಗೂ ಮಹಿಳೆಯರ ಸಂಖ್ಯೆ 6,02,321 ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ 31 ಇದೆ. ಎಸ್ಐಆರ್ ನಡೆಯುವ ಮುನ್ನ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,529 ಮತಗಟ್ಟೆಗಳಿದ್ದವು, ಈಗ ನಗರ-ಗ್ರಾಮೀಣ ಸೇರಿ ಒಟ್ಟು 1,579ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳು, ತಹಸೀಲ್ದಾರ್ ಕಚೇರಿಗಳು, ಸಹಾಯಕ ಆಯುಕ್ತರ ಕಚೇರಿಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕಗಳಲ್ಲಿ ಈ ಪಟ್ಟಿಯನ್ನು ಅಂಟಿಸಲಾಗಿದ್ದು, ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಅಧಿಕೃತ https://bidar.nic.in/ ವೆಬ್ಸೈಟ್ನಲ್ಲಿಯೂ ಪ್ರಚುರಪಡಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯ ಒಂದು ಪ್ರತಿಯನ್ನು ಅನುಮೋದಿತ ರಾಜಕೀಯ ಪಕ್ಷಗಳಿಗೂ ನೀಡಲಾಗಿದೆ.
ಬೀದರ್ ಉತ್ತರದಲ್ಲಿ ಹೆಚ್ಚು ಡಿಲೀಟ್!
ಎಸ್ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಬೀದರ್ ಜಿಲ್ಲೆಯಲ್ಲಿ ಒಟ್ಟು 14.61 ಲಕ್ಷ ಮತದಾರರಿದ್ದರು. ಆ.24ರಂದು ಬಿಡುಗಡೆಯಾದ ಮೊದಲ ಹಂತದಲ್ಲಿ ಕರಡು ಪಟ್ಟಿಯಲ್ಲಿ 12.20 ಲಕ್ಷ ಮತದಾರರು ಸ್ಥಾನ ಪಡೆದಿದ್ದರು. ಬಳಿಕ ನಡೆದ ಪ್ರಕ್ರಿಯೆಯಲ್ಲಿ 25, 830 ಹೊಸ ಮತದಾರರು ಸೇರ್ಪಡೆಯಾಗಿದ್ದಕ್ಕೆ ಜಿಲ್ಲೆಯ ಒಟ್ಟು ಅಧಿಕೃತ ಮತದಾರರ ಸಂಖ್ಯೆ 12.46 ಲಕ್ಷ ಆಗಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬೀದರ್ ಉತ್ತರದಲ್ಲಿಯೇ ಹೆಚ್ಚು ಮತದಾರರು ಅನರ್ಹಗೊಂಡಿದ್ದು, ಈ ಹಿಂದೆ ಈ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,48,809 ಇತ್ತು, ಎಸ್ಐಆರ್ ಬಳಿಕ ಅಂತಿಮವಾಗಿ 18,8647 ಕ್ಕೆ ಇಳಿಕೆಯಾಗಿದ್ದು, ಈ ಕ್ಷೇತ್ರದಲ್ಲಿ ಬರೋಬ್ಬರಿ 60,162 ಮತದಾರರನ್ನು ಮತಪಟ್ಟಿಯಿಂದ ಹೊರ ಹಾಕಲಾಗಿದೆ .

ಬೀದರ್ ದಕ್ಷಿಣ ಕ್ಷೇತ್ರದಲ್ಲಿ 33,366 ಮತದಾರರು ಅನರ್ಹಗೊಂಡಿದ್ದಾರೆ. ಈಗ 18,6514 ಮತದಾರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾರರು ಎಂಬಂತಾಗಿದೆ. ಇನ್ನು ಬಸವಕಲ್ಯಾಣದಲ್ಲಿ 28,239, ಹುಮನಾಬಾದ್ನಲ್ಲಿ 36,771, ಭಾಲ್ಕಿಯಲ್ಲಿ 28,389, ಔರಾದ್ ಕ್ಷೇತ್ರದಲ್ಲಿ 28,286 ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.
ಇದನ್ನೂ ಓದಿ : ಬೀದರ್ | ಹಸ್ತಪ್ರತಿ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ: ನಾ.ಗೀತಾಚಾರ್ಯ






