ಹಾಲುಮತ ಸಮಾಜ ಸ್ವಚ್ಛ ಹಾಗೂ ಶ್ರೇಷ್ಠ ಸಮುದಾಯವಾಗಿದ್ದು, ಅದರ ಭಂಡಾರದಲ್ಲಿ ಶಕ್ತಿ ಮತ್ತು ಭಕ್ತಿ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಜೈನಾಪುರ ಗ್ರಾಮದಲ್ಲಿ ಭಾನುವಾರ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ, ನೂತನ ದೇವಾಲಯ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ಜೈನಾಪುರ ಸ್ವಾಭಿಮಾನದ ನೆಲವಾಗಿದೆ. ಬೀರಲಿಂಗೇಶ್ವರ ದೇವಾಲಯಕ್ಕೆ ಈಗಾಗಲೇ ₹15 ಲಕ್ಷ ಅನುದಾನ ನೀಡಿದ್ದು, ಗ್ರಾಮದ ರಸ್ತೆಗಳನ್ನು ಶೀಘ್ರ ಸುಧಾರಿಸಲಾಗುವುದು. ಹಾಲುಮತ ಸಮಾಜ ಸಿದ್ದರಾಮಯ್ಯ ಅವರಂತಹ ನಾಯಕನನ್ನು ನಾಡಿಗೆ ನೀಡಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಶಿವಲಿಂಗ ಶಿವಯೋಗಿ ಸ್ವಾಮೀಜಿ ಮಾತನಾಡಿ, ವಿಜಯಪುರ ಜಿಲ್ಲೆಗೆ ನೀರು ಹರಿಸುವ ಮೂಲಕ ಸಚಿವ ಎಂ.ಬಿ.ಪಾಟೀಲರು ಆಧುನಿಕ ಭಗೀರಥರಾಗಿದ್ದಾರೆ ಎಂದು ಶ್ಲಾಘಿಸಿದರು.
ಬಸವಾದಿ ಶರಣರ ತತ್ವದಂತೆ ಶುದ್ಧ ಮನಸ್ಸು, ತಾಳ್ಮೆ, ನಯ-ವಿನಯ ಹಾಗೂ ಎಲ್ಲರೂ ನಮ್ಮವರೆಂಬ ಭಾವನೆಯೊಂದಿಗೆ ಬದುಕಬೇಕು ಎಂದು ಕರೆ ನೀಡಿದರು.
ಹಾಲುಮತ ಗುರುಪೀಠದ ಸಿದ್ದಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಉಮೇಶ ಮೇಟಿ, ಕುಮಾರ ದೇಸಾಯಿ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



