ಸನಾ : ಯೆಮನ್‌ನ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರದ ಪಡೆಗಳು, ಹೂತಿಗಳ ವಶದಲ್ಲಿರುವ ಪರ್ವತ ಪ್ರದೇಶವಾದ ಅಲ್-ವಝೀಯಾ ಜಿಲ್ಲೆಯನ್ನು ಮರಳಿ ಪಡೆಯಲು ಸೇನಾ ಕಾರ್ಯಾಚರಣೆ ಆರಂಭಿಸಿವೆ. ಈ ಕಾರ್ಯಾಚರಣೆಯು ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಯನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ದೊಡ್ಡ ಪ್ರಯತ್ನದ ಭಾಗವಾಗಿದ್ದು , ಅಲ್-ವಝೀಯ ಪ್ರದೇಶವು ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದೇ ವೇಳೆ ಸೌದಿ ಅರೇಬಿಯಾ, ಹೂತಿಗಳು ತನ್ನ ನಗರದತ್ತ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಯೆಮನ್‌ನ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಭಾನುವಾರ ಡಾವ್ನ್ ಆಫ್ ಯೆಮನ್ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಹೂತಿಗಳ ವಶದಲ್ಲಿರುವ ರಾಜಧಾನಿ ಸನಾ ಸೇರಿದಂತೆ ಉಳಿದ ಎಲ್ಲಾ ಪ್ರದೇಶಗಳನ್ನು ಮರಳಿ ಪಡೆಯುವುದು ಇದರ ಉದ್ದೇಶವಾಗಿದೆ. ಅದರ ಭಾಗವಾಗಿ ಈ ದಾಳಿಗಳು ನಡೆದಿದೆ ಎಂದು ಹೇಳಲಾಗಿದೆ. ಹೂತಿಗಳು 2014ರಿಂದ ಸನಾವನ್ನು ನಿಯಂತ್ರಿಸುತ್ತಿದ್ದಾರೆ.
ಯೆಮನ್ ಸೇನೆಯ ಮಾಧ್ಯಮ ಕೇಂದ್ರವು ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ, ಸರ್ಕಾರಪರ ಹೋಮ್‌ಲ್ಯಾಂಡ್ ಶೀಲ್ಡ್ ಪಡೆಗಳು ಅಲ್-ವಝೀಯಾವನ್ನು ಮರಳಿ ಪಡೆಯಲು ದೊಡ್ಡ ಪ್ರಮಾಣದ ಕಾರ್ಯಾಚರಣೆ ಆರಂಭಿಸಿವೆ.
ಅಲ್-ಮಂಸೂರಾ ಪ್ರದೇಶದ ಮೇಲಿರುವ ಕೆಲವು ಪ್ರಮುಖ ಬೆಟ್ಟಗಳನ್ನು ತಮ್ಮ ಪಡೆಗಳು ವಶಪಡಿಸಿಕೊಂಡಿದ್ದು, ಹೂತಿ ಪಡೆಗಳು ದೊಡ್ಡ ಪ್ರಮಾಣದಲ್ಲಿ ಹಿಂದೆ ಸರಿಯುತ್ತಿವೆ ಎಂದು ಹೋಮ್ ಲ್ಯಾಂಡ್ ಶೀಲ್ಡ್ ಪಡೆಗಳು ಹೇಳಿರುವುದಾಗಿ ಸೇನಾ ಮೂಲವೊಂದನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
This video cannot be played in your browser. Open the video directly
ಆದರೆ ಹೂತಿಗಳು ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಅಲ್-ವಝೀಯಾದಲ್ಲಿ ಯೆಮನ್ ಸರ್ಕಾರದ ಪಡೆಗಳ ಮುನ್ನಡೆಯನ್ನು ಯಶಸ್ವಿಯಾಗಿ ತಡೆದಿರುವುದಾಗಿ ಅವರು ಹೇಳಿದ್ದಾರೆ.
ಈತನ್ಮಧ್ಯೆ, ಯೆಮನ್‌ನಲ್ಲಿ ಹೂತಿಗಳ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು, ಹೌತಿಗಳು ನೈಋತ್ಯ ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಗರದತ್ತ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದು ನಾಶಪಡಿಸಿರುವುದಾಗಿ ತಿಳಿಸಿದೆ.
“ ಹೂತಿಗಳ ಕ್ಷಿಪಣಿ ಬೆದರಿಕೆಗಳು ಸನಾ ಮತ್ತು ಹೂತಿಗಳ ನಿಯಂತ್ರಣದಲ್ಲಿರುವ ಸಾದಾ ಹಾಗೂ ಅಮ್ರಾನ್ ಪ್ರಾಂತ್ಯಗಳಿಂದ ಬಂದಿವೆ “ಎಂದು ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.
“ಬ್ಯಾಲಿಸ್ಟಿಕ್ ಮತ್ತು ಮೇಲ್ಮೈಯಿಂದ ಮೇಲ್ಮೈಗೆ ಉಡಾಯಿಸುವ ಕ್ಷಿಪಣಿಗಳಿಂದ ಉಂಟಾಗುವ ಬೆದರಿಕೆಯನ್ನು ತಟಸ್ಥಗೊಳಿಸುವುದನ್ನು ಹಾಗೂ ಅವುಗಳ ಉಡಾವಣಾ ಮೂಲಗಳನ್ನು ನಾಶಪಡಿಸುವುದನ್ನು ಮೈತ್ರಿಕೂಟ ಮುಂದುವರಿಸುತ್ತಿದೆ,” ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಮಂಗಳವಾರ, ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರವು ಜಿಜಾನ್ ಮತ್ತು ನಜ್ರಾನ್ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು.
ಈ ದಾಳಿಗಳಿಂದ ವಿವಿಧ ಪ್ರಮಾಣದ ಗಾಯಗಳು ಮತ್ತು ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಅಲ್-ವಝೀಯಾ ಏಕೆ ಮಹತ್ವದ್ದು?
ಪರ್ವತ ಪ್ರದೇಶವಾಗಿರುವ ಅಲ್-ವಝೀಯಾ, ತೈಝ್ ನಗರದ ಪಶ್ಚಿಮ ಭಾಗದಲ್ಲಿದ್ದು, ಕೆಂಪು ಸಮುದ್ರದ ಬಂದರು ಮೊಖಾದ ಪೂರ್ವದಲ್ಲಿದೆ. ಕಳೆದ ತಿಂಗಳು ಹೂತಿಗಳು ದಾಳಿ ನಡೆಸಿ, ಮೊಖಾ ನಗರ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ವರದಿ ಮಾಡಿದ ಅಲ್ ಜಜೀರಾದ ವರದಿಗಾರ ಯೂಸುಫ್ ಮವ್ರಿ ಪ್ರತಿಕ್ರಿಯಿಸಿ , ಮೊಖಾ ನಗರವನ್ನು ವಶಪಡಿಸಿಕೊಳ್ಳುವ ಮೊದಲು ಹೂತಿಗಳು ಈ ಪರ್ವತ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ್ದರು ಎಂದು ಹೇಳಿದರು.
“ಯೆಮನ್ ಸರ್ಕಾರವು ಮೊಖಾ ನಗರವನ್ನು ವಶಪಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿದ್ದರೆ, ಅಲ್-ವಝೀಯಾ ಜಿಲ್ಲೆಯ ಈ ಪ್ರದೇಶವನ್ನು ವಶಪಡಿಸಿಕೊಳ್ಳದೆ ಅದು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.





