- ಆದಾಯ ಪಡೆಯಲಾರಂಭಿಸಿದ ನಷ್ಟದಲ್ಲಿದ್ದ ನಾಲ್ಕು ನಿಗಮಗಳು
- ಶಕ್ತಿ ಯೋಜನೆಗೂ ಮುನ್ನ ನಿಗಮಗಳ ದೈನಂದಿನ ಪ್ರಯಾಣಿಕರ ಸಂಖ್ಯೆ 82.51 ಲಕ್ಷ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂನ್ 11ರಂದು ಜಾರಿಗೆ ತಂದಿದೆ. ರಾಜ್ಯಾದ್ಯಂತ ಮಹಿಳೆಯರು ಸಂತಸದಿಂದ ಪ್ರಯಾಣಿಸುತ್ತಿದ್ದು, ಜುಲೈ 3 ರಂದು ಪ್ರಯಾಣಿಕರ ಸಂಖ್ಯೆ 67.15 ಲಕ್ಷದವರೆಗೆ ದಾಖಲಿಸಿದೆ.
ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯು ಯೋಜನೆ ಪ್ರಾರಂಭವಾದಾಗಿನಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯ ಬಜೆಟ್ ನಂತರ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಮರುಪಾವತಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸಾರಿಗೆ ನಿಗಮಗಳು ಯೋಜಿಸುತ್ತಿವೆ.
ಶಕ್ತಿ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೆ 13,72,66,676 ಮಹಿಳಾ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸಿದ್ದು, ನಿಗಮಗಳಿಗೆ ₹325,12,44,089 ವೆಚ್ಚವಾಗಿದೆ. ಈ ಯೋಜನೆ ಜಾರಿಯಾದ ನಂತರ ನಷ್ಟದಲ್ಲಿರುವ ನಾಲ್ಕೂ ನಿಗಮಗಳು ಹೆಚ್ಚಿನ ಆದಾಯವನ್ನು ಪಡೆಯಲಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಶಕ್ತಿ ಯೋಜನೆಯ ಅನುಷ್ಠಾನವು ನಿಗಮಗಳಿಗೆ ಆದಾಯದ ದೃಷ್ಟಿಯಿಂದ ಮತ್ತು ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜಾರಿಗೂ ಮುನ್ನ ನಾಲ್ಕು ನಿಗಮಗಳ ದೈನಂದಿನ ಪ್ರಯಾಣಿಕರ ಸಂಖ್ಯೆ 82.51 ಲಕ್ಷವಾಗಿದ್ದು, ಈಗ 1.09 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಶಕ್ತಿ ಯೋಜನೆಗಿಂತ ಮೊದಲು ದಿನನಿತ್ಯದ ಆದಾಯ ₹24.48 ಕೋಟಿ ಇದ್ದು, ಈಗ ₹28.89 ಕೋಟಿಗೆ ಏರಿಕೆಯಾಗಿದೆ” ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದರು.
“ರಾಜ್ಯ ಬಜೆಟ್ ನಂತರ ಮರುಪಾವತಿಗೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ. ಮರುಪಾವತಿಯನ್ನು ಮಾಸಿಕ ಮಾಡಬೇಕು ಎಂದು ಮನವಿ ಮಾಡುತ್ತೇವೆ” ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, “ಆದಾಯಕ್ಕಿಂತ ಸೇವೆ ಬಹಳ ಮುಖ್ಯ. ನಿಗಮಗಳನ್ನು ಜನಸೇವೆ ಮಾಡುವುದಕ್ಕಾಗಿಯೇ ಸ್ಥಾಪಿಸಲಾಗಿದೆಯೇ ಹೊರತು ಕೇವಲ ಆದಾಯಕ್ಕಾಗಿ ಅಲ್ಲ. ಶಕ್ತಿ ಯೋಜನೆಯು ಎಲ್ಲ ನಾಲ್ಕು ನಿಗಮಗಳಿಗೆ ಆದಾಯವನ್ನು ಗಳಿಸಲು ಮತ್ತು ಅದೇ ಸಮಯದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಸಹಾಯ ಮಾಡಿದೆ” ಎಂದರು.
ಶೂನ್ಯ ಟಿಕೆಟ್‌ಗಳ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ರಾಜ್ಯ ಸರ್ಕಾರ ಮರುಪಾವತಿ ಮಾಡಿದ ನಂತರವೇ ಹೆಚ್ಚುತ್ತಿರುವ ಆದಾಯವು ನಿಗಮಗಳಿಗೆ ವ್ಯತ್ಯಾಸವನ್ನುಂಟು ಮಾಡುತ್ತದೆ.
ನಿಗಮಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಶಕ್ತಿ ಫಲಾನುಭವಿಯ ಹೆಚ್ಚಿನ ಪಾಲನ್ನು ಎನ್‌ಡಬ್ಲೂಕೆಎಸ್‌ಆರ್‌ಟಿಸಿ (52.8%) ಹೊಂದಿದೆ. ನಂತರ ಕೆಎಸ್‌ಆರ್‌ಟಿಸಿ (47.9%), ಕೆಕೆಆರ್‌ಟಿಸಿ (44.3%) ಮತ್ತು ಬಿಎಂಟಿಸಿ (42.2%) ಪಡೆದಿದೆ.
ಈ ಸುದ್ದಿ ಓದಿದ್ದೀರಾ? ಕರಾವಳಿಯಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ
ಶಕ್ತಿ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ನೀಡಲಾಗುವ ಶೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ಡೇಟಾದ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಮರುಪಾವತಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ವಿಶೇಷ ಅನುದಾನ ಮತ್ತು ಹಣಕಾಸಿನ ನೆರವಿನ ಹೊರತಾಗಿ ಬಸ್ ಪಾಸ್‌ಗಳಿಗೆ ಒದಗಿಸಲಾದ ಸಬ್ಸಿಡಿಯನ್ನು ಸರ್ಕಾರವು ವಾಡಿಕೆಯಂತೆ ಮರುಪಾವತಿ ಮಾಡುತ್ತದೆ. ಸರ್ಕಾರವು ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ ನಾಲ್ಕು ನಿಗಮಗಳಿಗೆ ₹3,606.52 ಕೋಟಿ ಮರುಪಾವತಿ ಮಾಡಿದೆ.