ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿದ ನಂತರ ಆರಂಭವಾದ ಯುದ್ಧವು ಆರು ತಿಂಗಳಿಂದ ಮುಂದುವರೆದಿದೆ. ಅಮೆರಿಕದ ಆಕ್ರಮಣಕಾರಿ ಕ್ರೌರ್ಯಕ್ಕೆ ಮಣಿಯದ ಇರಾನ್ ಪ್ರಬಲವಾಗಿ ಪ್ರತಿರೋಧ ಒಡ್ಡುತ್ತಿದೆ. ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಶಾಂತಿ ಮಾತುಕತೆಗಳು ಮುರಿದುಬಿದ್ದಿವೆ. ಈ ನಡುವೆ, ತಾವು ಈಗಲೂ ರಾಜತಾಂತ್ರಿಕ ಮಾತುಕತೆಗೆ ಇನ್ನೂ ಸಿದ್ಧರಾಗಿದ್ದೇವೆ ಎಂದು ಇರಾನ್ ಹೇಳಿದೆ. ಆದಾಗ್ಯೂ, “ಅಮೆರಿಕವು ತನ್ನ ಒತ್ತಡದ ರಾಜಕಾರಣವನ್ನು ಬಿಟ್ಟು, ನಮ್ಮ ಹಕ್ಕುಗಳನ್ನು ಒಪ್ಪಿಕೊಂಡು, ಹಿಂದಿನ ಬದ್ಧತೆಗಳನ್ನು ಗೌರವಿಸಿದಾಗ ಮಾತ್ರ ಮಾತುಕತೆಗೆ ಅರ್ಥವಿರುತ್ತದೆ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಬ್ಬಾಸ್, “ರಾಜತಾಂತ್ರಿಕ ಮಾರ್ಗವನ್ನು ಮತ್ತೆ ಆರಂಭಿಸುವುದು ಅಸಾಧ್ಯವಲ್ಲ. ಆದರೆ, ಒತ್ತಡದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು” ಎಂದು ಬರೆದಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ ಯುದ್ಧದ ಬಳಿಕ ಪಶ್ಚಿಮ ಏಷ್ಯಾದ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. ಯುದ್ಧ ಆರಂಭವಾದ ಬಳಿಕ ಇರಾನ್ ಹೋರ್ಮುಝ್ ಜಲಸಂಧಿಯನ್ನು ಮುಚ್ಚಿತ್ತು. ಜಾಗತಿಕ ತೈಲ ಸಾಗಣೆಯಲ್ಲಿ ಅತ್ಯಂತ ಮಹತ್ವದ ಮಾರ್ಗವಾಗಿರುವ ಈ ಜಲಸಂಧಿಯ ಮುಚ್ಚುವಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪರಿಣಾಮ ಬೀರಿದೆ. ಹಲವು ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಇದೆಲ್ಲವನ್ನೂ ಶಮನಗೊಳಿಸಲು ಮತ್ತು ಯುದ್ಧವನ್ನು ಅಂತ್ಯಗೊಳಿಸಲು ಪಾಕಿಸ್ತಾನ, ಕತಾರ್ ಸೇರಿದಂತೆ ಹಲವು ದೇಶಗಳು ಮಧ್ಯಸ್ಥಿಕೆ ವಹಿಸಿದ್ದರೂ, ಇದುವರೆಗೆ ಶಾಶ್ವತ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.
ಏಪ್ರಿಲ್ನಲ್ಲಿ ಕದನ ವಿರಾಮದ ಒಪ್ಪಂದವಾಗಿತ್ತು. ನಂತರ ಜೂನ್ನಲ್ಲಿ ಅಂತಿಮ ಶಾಂತಿ ಒಪ್ಪಂದದತ್ತ ಸಾಗಲು ಪರಸ್ಪರ ತಿಳುವಳಿಕೆ ಪತ್ರಕ್ಕೂ ಸಹಿ ಹಾಕಲಾಗಿತ್ತು. ಆದರೆ, ಶಾಂತಿ ಒಪ್ಪಂದವು ಅನುಷ್ಠಾನಗೊಳ್ಳದೆ ಉದ್ವಿಗ್ನತೆ ಮತ್ತೆ ಮುಂದುವರಿದಿದೆ. ಇತ್ತೀಚೆಗೆ, ಅಮೆರಿಕವು ಇರಾನ್ ವಿರುದ್ಧ ‘ಆರ್ಥಿಕ ಯುದ್ಧ’ ಘೋಷಿಸಿದೆ.
ಇತ್ತೀಚಿನ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಅಬ್ಬಾಸ್ ಅವರು ತೆಹ್ರಾನ್ನಲ್ಲಿ ಕತಾರ್ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಹೋರ್ಮುಝ್ ಜಲಸಂಧಿಯ ಭವಿಷ್ಯದ ಕುರಿತು ಗುರುವಾರ ಚರ್ಚಿಸಿದ್ದಾರೆ. ಇದೇ ವಾರ ಇರಾನ್ ಒಮಾನ್ ಮತ್ತು ಪಾಕಿಸ್ತಾನ ಜೊತೆಗೂ ಮಾತುಕತೆ ನಡೆಸಿದೆ.




