AI ಔಷಧಿ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಲ್ಲದು: ಅಧ್ಯಯನ ವರದಿ

Date:

AI ನೆರವಿನಿಂದ ಅಭಿವೃದ್ಧಿಪಡಿಸಲಾದ ಔಷಧವೊಂದು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ರಕ್ತದಲ್ಲಿನ ಪ್ರೋಟೀನ್‌ಗಳ ಮಾದರಿಯನ್ನು ಜೈವಿಕವಾಗಿ ಕಿರಿಯ ವಯಸ್ಸಿನಂತಾಗಿಸಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಆದರೆ, ಈ ಫಲಿತಾಂಶವು ಮಾನವರ ವಯಸ್ಸನ್ನು ನಿಜವಾಗಿಯೂ ಹಿಮ್ಮುಖಗೊಳಿಸಿದೆ ಅಥವಾ ಆಯುಷ್ಯವನ್ನು ಹೆಚ್ಚಿಸಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

- Advertisement -

ಈ ಅಧ್ಯಯನವನ್ನು ಅಮೆರಿಕದ ಇನ್ಸಿಲಿಕೋ ಮೆಡಿಸಿನ್‌ ಸಂಸ್ಥೆಯು ಹಾರ್ವರ್ಡ್ ಮೆಡಿಕಲ್‌ ಸ್ಕೂಲ್‌ ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳ ಸಹಯೋಗದಲ್ಲಿ ನಡೆಸಿದೆ. ಈಗಾಗಲೇ ನಡೆದಿದ್ದ ಶ್ವಾಸಕೋಶದ ಕಾಯಿಲೆ ಚಿಕಿತ್ಸೆಯ ಕ್ಲಿನಿಕಲ್‌ ಪ್ರಯೋಗದಲ್ಲಿ ಭಾಗವಹಿಸಿದ್ದ 42 ಮಂದಿಯ ರಕ್ತದ ಮಾದರಿಗಳನ್ನು ಮರುಪರಿಶೀಲಿಸಿ, ಎಐ ಮೂಲಕ ವಿನ್ಯಾಸಗೊಳಿಸಲಾದ ‘ರೆಂಟೊಸರ್ಟಿಬ್‌’ ಔಷಧವು ಜೈವಿಕ ವಯಸ್ಸಿನ ಮೇಲೆ ಬೀರಿದ ಪರಿಣಾಮವನ್ನು ಸಂಶೋಧಕರು ಅಂದಾಜಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

‘ರೆಂಟೊಸರ್ಟಿಬ್‌’ (Rentosertib) ಎಂಬ ಔಷಧವನ್ನು ಶ್ವಾಸಕೋಶದಲ್ಲಿ ಗಾಯದ ಗುರುತುಗಳು ಉಂಟಾಗಿ ಉಸಿರಾಟ ಕಷ್ಟವಾಗುವ ಇಡಿಯೋಪಥಿಕ್‌ ಪಲ್ಮನರಿ ಫೈಬ್ರೋಸಿಸ್‌ (IPF) ಕಾಯಿಲೆಯ ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿದೆ. ಈ ಕಾಯಿಲೆಯಲ್ಲಿ ಉರಿಯೂತ, ಜೀವಕೋಶಗಳ ಹಾನಿ ಮತ್ತು ಅಂಗಾಂಶಗಳ ದುರಸ್ತಿ ಪ್ರಕ್ರಿಯೆಯಲ್ಲಿನ ಅಡಚಣೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಬದಲಾವಣೆಗಳು ವಯಸ್ಸಾಗುವ ಪ್ರಕ್ರಿಯೆಯಲ್ಲೂ ಕಂಡುಬರುತ್ತವೆ. ಈ ಹಿನ್ನೆಲೆ­ಯಲ್ಲಿ, ಶ್ವಾಸಕೋಶದ ಕಾಯಿಲೆಗೆ ಅಭಿವೃದ್ಧಿಪಡಿಸಿದ ಔಷಧವು ವಯಸ್ಸಾಗುವಿಕೆಗೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರುತ್ತದೆಯೇ ಎಂಬುದನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಇನ್‌ಸಿಲಿಕೊ ಮೆಡಿಸಿನ್‌, ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಮತ್ತು ಇತರ ಸಂಸ್ಥೆಗಳ ಸಂಶೋಧಕರು ಹಿಂದಿನ ಕ್ಲಿನಿಕಲ್‌ ಪ್ರಯೋಗದಲ್ಲಿ ಸಂಗ್ರಹಿಸಲಾಗಿದ್ದ ರಕ್ತದ ಮಾದರಿಗಳನ್ನು ಮರುಪರಿಶೀಲಿಸಿದ್ದಾರೆ.

ಹಿಂದಿನ ಪ್ರಯೋಗದಲ್ಲಿ IPF ಕಾಯಿಲೆ ಹೊಂದಿದ್ದ 71 ಮಂದಿ ಭಾಗವಹಿಸಿದ್ದರು. ಅವರಿಗೆ ರೆಂಟೊಸರ್ಟಿಬ್‌ನ ಮೂರು ವಿಭಿನ್ನ ಪ್ರಮಾಣಗಳಲ್ಲಿ ಒಂದನ್ನು ಅಥವಾ ಪ್ಲಾಸಿಬೊ ಔಷಧವನ್ನು ನೀಡಲಾಗಿತ್ತು. ಹೊಸ ಅಧ್ಯಯನದಲ್ಲಿ ಸರಾಸರಿ 67 ವರ್ಷ ವಯಸ್ಸಿನ 42 ಮಂದಿಯ ರಕ್ತದ ಮಾದರಿಗಳನ್ನು ಪರಿಶೀಲಿಸಲಾಯಿತು. ರಕ್ತದಲ್ಲಿನ ಸುಮಾರು 3,000 ಪ್ರೋಟೀನ್‌ಗಳ ಮಟ್ಟವನ್ನು ಅಳೆಯಲಾಯಿತು. ಉರಿಯೂತ, ಕಾಯಿಲೆಯ ತೀವ್ರತೆ, ಶಕ್ತಿಯ ಬಳಕೆ, ಅಂಗಾಂಶ ಹಾನಿ ಮತ್ತು ವಯಸ್ಸಾಗುವಿಕೆ ಸೇರಿದಂತೆ ಹಲವು ಪ್ರಕ್ರಿಯೆಗಳ ಗುರುತುಗಳು ಈ ಪ್ರೋಟೀನ್‌ಗಳಲ್ಲಿ ಕಂಡುಬರಬಹುದು. ನಂತರ, ಈ ಪ್ರೋಟೀನ್‌ಗಳ ಮಾದರಿಗಳನ್ನು ಆಧರಿಸಿ ಜೈವಿಕ ವಯಸ್ಸನ್ನು ಅಂದಾಜಿಸುವ ಆರು ವಿಭಿನ್ನ ಮಾದರಿಗಳ ಮೂಲಕ ವಿಶ್ಲೇಷಣೆ ನಡೆಸಲಾಯಿತು. ಇವುಗಳಲ್ಲಿ ಕೆಲವು ವ್ಯಕ್ತಿಯ ವಯಸ್ಸನ್ನು ಅಂದಾಜಿಸಲು, ಇನ್ನು ಕೆಲವು ಆರೋಗ್ಯದ ಅಪಾಯ ಮತ್ತು ಮರಣದ ಸಾಧ್ಯತೆಯನ್ನು ಊಹಿಸಲು ಅಭಿವೃದ್ಧಿಪಡಿಸಲ್ಪಟ್ಟಿದ್ದವು.

ಒಂದೇ ಮಾದರಿಯ ಫಲಿತಾಂಶದ ಮೇಲೆ ಅವಲಂಬಿಸುವ ಬದಲು ಆರು ಮಾದರಿಗಳನ್ನು ಬಳಸಿರುವುದರಿಂದ ಫಲಿತಾಂಶದ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಏಕೆಂದರೆ ಪ್ರತಿ ಮಾದರಿಯೂ ವಿಭಿನ್ನ ಪ್ರೋಟೀನ್‌ಗಳು ಮತ್ತು ಲೆಕ್ಕಾಚಾರದ ವಿಧಾನಗಳನ್ನು ಬಳಸುತ್ತದೆ.

ರೆಂಟೊಸರ್ಟಿಬ್‌ ಪಡೆದವರಲ್ಲಿ ಆರು ಮಾದರಿಗಳೂ ಜೈವಿಕ ವಯಸ್ಸು ಕಡಿಮೆಯಾದ ದಿಕ್ಕಿನಲ್ಲಿ ಬದಲಾವಣೆಯನ್ನು ಗುರುತಿಸಿವೆ. ಪ್ಲಾಸಿಬೊ ಪಡೆದವರಲ್ಲಿ ಬದಲಾವಣೆ ಅಲ್ಪವಾಗಿದ್ದು, ಕೆಲವು ಮಾದರಿಗಳು ಜೈವಿಕ ವಯಸ್ಸು ಹೆಚ್ಚಾಗುವ ಸಾಧ್ಯತೆಯನ್ನೂ ಸೂಚಿಸಿವೆ ಎಂದು ಸೈನ್ಸ್‌ಅಲರ್ಟ್ ವರದಿ‌ ಮಾಡಿದೆ. ನಾಲ್ಕು ವಾರಗಳ ಚಿಕಿತ್ಸೆಯ ಬಳಿಕದ ಫಲಿತಾಂಶಗಳು ಹೆಚ್ಚು ಸ್ಪಷ್ಟವಾಗಿದ್ದವು. ದಿನಕ್ಕೆ ಒಮ್ಮೆ 60 ಮಿಲಿಗ್ರಾಂ ಪ್ರಮಾಣದ ಔಷಧ ಪಡೆದ ಗುಂಪಿನಲ್ಲಿ, ಕಾಲಾನುಕ್ರಮದ ವಯಸ್ಸನ್ನು ಅಂದಾಜಿಸುವ ಮಾದರಿಗಳು ಜೈವಿಕ ವಯಸ್ಸಿನಲ್ಲಿ 2.71ರಿಂದ 3.46 ವರ್ಷಗಳಷ್ಟು ಇಳಿಕೆ ಕಂಡುಬಂದಿದೆ ಎಂದು ಸೂಚಿಸಿವೆ. ಆದರೆ, ವಿಭಿನ್ನ ಮಾದರಿಗಳು ಮತ್ತು ಔಷಧದ ಪ್ರಮಾಣಗಳಲ್ಲಿ ವಿಭಿನ್ನ ಅಂಕಿಅಂಶಗಳು ದೊರೆತಿವೆ. ಕೆಲವು ಅನ್ವೇಷಣಾತ್ಮಕ ಮಾದರಿಗಳು ಇನ್ನೂ ಹೆಚ್ಚಿನ ಇಳಿಕೆಯನ್ನು ಸೂಚಿಸಿದ್ದರೂ, ರೆಂಟೊಸರ್ಟಿಬ್‌ ಒಟ್ಟಾರೆ ಎಷ್ಟು ವರ್ಷಗಳಷ್ಟು ಜೈವಿಕ ವಯಸ್ಸನ್ನು ಕಡಿಮೆ ಮಾಡುತ್ತದೆ ಎಂಬ ಒಂದೇ ಸಂಖ್ಯೆಯನ್ನು ಸಂಶೋಧಕರು ನಿಗದಿಪಡಿಸಿಲ್ಲ.

ಸಂಶೋಧಕರ ಪ್ರಕಾರ, ಪ್ರಮುಖ ಅಂಶವೆಂದರೆ ನಿರ್ದಿಷ್ಟ ಸಂಖ್ಯೆಯಲ್ಲ; ಬದಲಾಗಿ, ಪರಸ್ಪರ ಸ್ವತಂತ್ರವಾಗಿ ಅಭಿವೃದ್ಧಿಪಡಿಸಲಾದ ಆರು ಮಾದರಿಗಳೂ ರೆಂಟೊಸರ್ಟಿಬ್‌ ಪಡೆದವರ ರಕ್ತದಲ್ಲಿ ಕಿರಿಯ ವಯಸ್ಸಿನಂತಿರುವ ಪ್ರೋಟೀನ್‌ ಮಾದರಿಗಳನ್ನು ಗುರುತಿಸಿರುವುದು.

ರೆಂಟೊಸರ್ಟಿಬ್‌ ಪಡೆದವರಲ್ಲಿ 326 ಪ್ರೋಟೀನ್‌ಗಳ ಮಟ್ಟದಲ್ಲಿ ಬದಲಾವಣೆ ಕಂಡುಬಂದಿದೆ. ಪ್ಲಾಸಿಬೊ ಗುಂಪಿನಲ್ಲಿ ಕೇವಲ ಎರಡು ಪ್ರೋಟೀನ್‌ಗಳಲ್ಲಿ ಬದಲಾವಣೆ ಕಂಡುಬಂದಿತ್ತು. ಬದಲಾಗಿರುವ ಪ್ರೋಟೀನ್‌ಗಳಲ್ಲಿ ಕೆಲವು ಶ್ವಾಸಕೋಶದ ಗಾಯದ ಗುರುತುಗಳು ಮತ್ತು ಅಂಗಾಂಶ ದುರಸ್ತಿಗೆ ಸಂಬಂಧಿಸಿದ್ದಾಗಿದ್ದರೆ, ಇನ್ನು ಕೆಲವು ಉರಿಯೂತ, ಶಕ್ತಿಯ ಬಳಕೆ, ಜೀವಕೋಶಗಳ ಒತ್ತಡ ಮತ್ತು ಹಳೆಯ ಅಥವಾ ಹಾನಿಗೊಳಗಾದ ಜೀವಕೋಶಗಳ ಚಟುವಟಿಕೆಗೆ ಸಂಬಂಧಿಸಿದ್ದಾಗಿದ್ದವು.

12 ವಾರಗಳ ಅಧ್ಯಯನದ ಅವಧಿಯಲ್ಲಿ ಹಲವು ಪ್ರೋಟೀನ್‌ಗಳ ಬದಲಾವಣೆ ಮುಂದುವರಿದಿದ್ದರೂ, ಜೈವಿಕ ವಯಸ್ಸು ಕಡಿಮೆಯಾಗುತ್ತಿರುವಂತೆ ಕಂಡುಬಂದ ಪರಿಣಾಮವು ನಾಲ್ಕನೇ ವಾರದ ಬಳಿಕ ಹೆಚ್ಚಾಗದೆ ಒಂದು ಹಂತದಲ್ಲಿ ಸ್ಥಿರಗೊಂಡಿತು. ಇದಕ್ಕೆ ದೇಹವು ಔಷಧಕ್ಕೆ ಹೊಂದಿಕೊಂಡಿರುವುದು, ಬೇರೆ ಪ್ರಮಾಣದ ಚಿಕಿತ್ಸೆಯ ಅಗತ್ಯವಿರುವುದು ಅಥವಾ ಜೈವಿಕ ವಯಸ್ಸಿನ ಮಾದರಿಗಳು ಅಳೆಯಬಹುದಾದ ಮಿತಿಗೆ ತಲುಪಿರುವುದು ಕಾರಣವಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ಮಾನವ ನೌಕರನನ್ನು ಕೆಲಸದಿಂದ ವಜಾಗೊಳಿಸಿದ AI ಬಾಸ್

ಅಧ್ಯಯನದ ಫಲಿತಾಂಶಗಳು ಕುತೂಹಲಕಾರಿ­ಯಾಗಿದ್ದರೂ, ಕೆಲವು ಪ್ರಮುಖ ಮಿತಿಗಳಿವೆ. ಅಧ್ಯಯನದಲ್ಲಿ ಭಾಗವಹಿಸಿದ ಎಲ್ಲರೂ ಗಂಭೀರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ರೆಂಟೊಸರ್ಟಿಬ್‌ ಅವರ ಕಾಯಿಲೆಯನ್ನು ನಿಯಂತ್ರಿಸಿದ್ದರೆ, ಅದರಿಂದಲೇ ರಕ್ತದ ಪ್ರೋಟೀನ್‌ಗಳ ಮಾದರಿ ಜೈವಿಕವಾಗಿ ಕಿರಿಯದಾಗಿ ಕಾಣಿಸಿಕೊಂಡಿರಬಹುದು. ಹೀಗಾಗಿ, ಔಷಧವು ನಿಜವಾಗಿಯೂ ವಯಸ್ಸಾಗುವ ಪ್ರಕ್ರಿಯೆಯನ್ನು ಬದಲಾಯಿಸಿತೇ ಅಥವಾ ಕಾಯಿಲೆಯ ಸುಧಾರಣೆಯಿಂದ ರಕ್ತದ ಮಾದರಿ ಬದಲಾಗಿತೇ ಎಂಬುದನ್ನು ಅಧ್ಯಯನವು ಸಂಪೂರ್ಣವಾಗಿ ಬೇರ್ಪಡಿಸಿಲ್ಲ. ಇದಲ್ಲದೆ, ವಿಶ್ಲೇಷಣೆಯಲ್ಲಿ ಕೇವಲ 42 ಮಂದಿ ಭಾಗವಹಿಸಿದ್ದು, ಅಧ್ಯಯನವು 12 ವಾರಗಳಷ್ಟೇ ನಡೆದಿತ್ತು. ರೋಗಿಗಳು ನಿಜವಾಗಿಯೂ ಕಿರಿಯರಾಗಿದ್ದಾರೆ, ದೀರ್ಘಕಾಲ ಆರೋಗ್ಯವಾಗಿರುತ್ತಾರೆ ಅಥವಾ ಹೆಚ್ಚು ವರ್ಷ ಬದುಕುತ್ತಾರೆ ಎಂಬುದನ್ನು ಇದು ಸಾಬೀತುಪಡಿಸುವುದಿಲ್ಲ.

ರೆಂಟೊಸರ್ಟಿಬ್‌ ಅಭಿವೃದ್ಧಿಪಡಿಸುತ್ತಿರುವ ಇನ್‌ಸಿಲಿಕೊ ಮೆಡಿಸಿನ್‌ ಸಂಸ್ಥೆಯ ಹಲವು ಲೇಖಕರು ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಪ್ರಮುಖ ಲೇಖಕ ಅಲೆಕ್ಸ್‌ ಝಾವೊರೊಂಕೊವ್‌ ಆ ಸಂಸ್ಥೆಯ ಸಂಸ್ಥಾಪಕ ಮತ್ತು ಸಹಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಹೀಗಾಗಿ, ಸದ್ಯಕ್ಕೆ ರೆಂಟೊಸರ್ಟಿಬ್‌ ಅನ್ನು ವಯಸ್ಸು ಕಡಿಮೆ ಮಾಡುವ ಔಷಧ ಎಂದು ಕರೆಯಲು ಸಾಧ್ಯವಿಲ್ಲ. ದೊಡ್ಡ ಸಂಖ್ಯೆಯ ಜನರನ್ನು ಒಳಗೊಂಡ ದೀರ್ಘಾವಧಿಯ ಅಧ್ಯಯನಗಳು, ವಿಶೇಷವಾಗಿ IPF ಕಾಯಿಲೆ ಇಲ್ಲದವರ ಮೇಲಿನ ಪ್ರಯೋಗಗಳು ಅಗತ್ಯವಿದೆ. ಆದಾಗ್ಯೂ, ಆರು ವಿಭಿನ್ನ ಜೈವಿಕ ವಯಸ್ಸಿನ ಮಾದರಿಗಳೂ ಒಂದೇ ದಿಕ್ಕಿನ ಬದಲಾವಣೆಯನ್ನು ತೋರಿಸಿರುವುದು ಗಮನಾರ್ಹವಾಗಿದೆ. ವಯೋಸಹಜ ಕಾಯಿಲೆಗಳಿಗೆ ಅಭಿವೃದ್ಧಿಪಡಿಸುವ ಔಷಧಗಳು ಮುಂದಿನ ದಿನಗಳಲ್ಲಿ ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಯಷ್ಟೇ ಅಲ್ಲದೆ, ವಯಸ್ಸಾಗುವಿಕೆಗೆ ಸಂಬಂಧಿಸಿದ ವಿಶಾಲ ಜೈವಿಕ ಪ್ರಕ್ರಿಯೆಗಳನ್ನು ಬದಲಾಯಿಸಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ನೆರವಾಗಬಹುದು ಎಂಬ ನಿರೀಕ್ಷೆಯನ್ನು ಈ ಅಧ್ಯಯನ ಮೂಡಿಸಿದೆ ಎನ್ನುತ್ತಾರೆ ಸಂಶೋಧಕರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...