ಇರಾನ್ ಹಾಗೂ ಅಮೆರಿಕ ನಡುವಿನ ಯುದ್ಧವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಇರಾನ್ ಯುದ್ಧ ಅಂತ್ಯವಾಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಾರ್ಟಿಯ ಪ್ರಚಾರ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಮುಗಿದ ತಕ್ಷಣವೇ ಇರಾನ್ ಯುದ್ಧ ಕೊನೆಗೊಳ್ಳಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ಇರಾನ್ ದೇಶವು ಅಮೆರಿಕದಲ್ಲಿ ರಾಜಕೀಯ ಬದಲಾವಣೆಯನ್ನು ಬಯಸುತ್ತಿದೆ. ವಾಷಿಂಗ್ಟನ್‌ನಲ್ಲಿ ಅಧಿಕಾರ ಬದಲಾಗಿ, ದುರ್ಬಲ ನಾಯಕರು ಅಧಿಕಾರಕ್ಕೆ ಬಂದರೆ ತನಗೆ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ಸುಲಭವಾಗುತ್ತದೆ ಎಂಬ ಆಶಯದಿಂದ ಇರಾನ್ ಕಾಯುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಇರಾನ್‌ನ ಅರ್ಧದಷ್ಟು ತೈಲವನ್ನು ಅಮೆರಿಕ ಪಡೆಯಲಿದೆ: ಟ್ರಂಪ್
ಇರಾನ್ ಇನ್ನು ಹೆಚ್ಚು ಕಾಲ ಅಮೆರಿಕದ ಪಡೆಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಅವರ ಬಳಿ ಸಂಪನ್ಮೂಲಗಳು ಕ್ಷೀಣಿಸುತ್ತಿದ್ದು, ಕೇವಲ ಅಮೆರಿಕದ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಇರಾನ್‌ನೊಂದಿಗೆ ಯಾವುದೇ ಶಾಂತಿ ಮಾತುಕತೆ ನಡೆಸುವ ಆಸಕ್ತಿ ಅಮೆರಿಕಕ್ಕಿಲ್ಲ. ನಾವು ಪರಮಾಣು ಒಪ್ಪಂದಕ್ಕಿಂತ ಹೆಚ್ಚಿನ ಮಟ್ಟದ ಮಿಲಿಟರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಪಡೆಗಳು ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿರುವುದಾಗಿ ಟ್ರಂಪ್ ದೃಢಪಡಿಸಿದ್ದಾರೆ. ಮತ್ತೊಂದೆಡೆ, ಈ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ $100 ಗಡಿ ದಾಟಿದ್ದು, ಅಮೆರಿಕದಲ್ಲಿ ಇಂಧನ ಬೆಲೆ ಏರಿಕೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಆದರೆ ಇರಾನ್ ವಿರುದ್ಧದ ಮಿಲಿಟರಿ ಸಂಘರ್ಷದಿಂದಾಗಿ ಯುದ್ಧದ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳಿಂದ ಅಮೆರಿಕವೇ ಅತ್ಯಂತ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದೆ ಎಂದು ಜಾಗತಿಕ ಮತ್ತು ಅಮೆರಿಕದ ಆರ್ಥಿಕ ವರದಿಗಳು ಸ್ಪಷ್ಟಪಡಿಸಿವೆ. ಸಮರ ಆರಂಭವಾದ ನಂತರ ಅಮೆರಿಕದಲ್ಲಿ ಇಂಧನ (ಪೆಟ್ರೋಲ್/ಡೀಸೆಲ್) ಬೆಲೆಗಳು ಗಗನಕ್ಕೇರಿದ್ದು, ಅಮೆರಿಕನ್ನರು ಇಂಧನಕ್ಕಾಗಿ ಬರೋಬ್ಬರಿ $100 ಬಿಲಿಯನ್‌ಗಿಂತಲೂ (ಸುಮಾರು ₹8.3 ಲಕ್ಷ ಕೋಟಿ) ಹೆಚ್ಚಿನ ಹಣವನ್ನು ವ್ಯಯಿಸಿದ್ದಾರೆ. ಪ್ರತಿಯೊಂದು ಅಮೆರಿಕನ್ ಕುಟುಂಬವು ಇಂಧನದ ರೂಪದಲ್ಲೇ ಸರಾಸರಿ $760 ರಿಂದ $767 ಹೆಚ್ಚುವರಿ ವೆಚ್ಚ ಭರಿಸಿದೆ.
ಸರಕು ಸಾಗಣೆ, ಕೃಷಿ ಮತ್ತು ಕೈಗಾರಿಕೆಗೆ ಅತ್ಯಗತ್ಯವಾದ ಡೀಸೆಲ್ ಬೆಲೆ ದಾಖಲೆಯ ಗ್ಯಾಲನ್‌ಗೆ $6 ತಲುಪಿದೆ. ಇದರಿಂದಾಗಿ ಸಾಗಣೆ ವೆಚ್ಚ ವಿಪರೀತ ಹೆಚ್ಚಾಗಿದ್ದು, ಅಮೆರಿಕದ ಮಾರುಕಟ್ಟೆಯಲ್ಲಿ ದಿನಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಹಣದುಬ್ಬರ ತೀವ್ರಗೊಂಡಿದೆ. ಇನ್ನೊಂದೆಡೆ ಈ ಸಮರಕ್ಕಾಗಿ ಪೆಂಟಗನ್‌ಗೆ ಬೇಕಾಗುವ ರಕ್ಷಣಾ ವೆಚ್ಚವನ್ನು ಅಮೆರಿಕ ಸರ್ಕಾರ $1.5 ಟ್ರಿಲಿಯನ್‌ಗೆ ಹೆಚ್ಚಿಸಲು ಹೆಜ್ಜೆ ಇಟ್ಟಿದ್ದು, ಇದು ಆಧುನಿಕ ಅಮೆರಿಕ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ವೆಚ್ಚವಾಗಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಹಲವು ಸೇನಾ ನೆಲೆಗಳು, ರೇಡಾರ್ ವ್ಯವಸ್ಥೆಗಳು ಮತ್ತು ಸಮರ ವಿಮಾನಗಳು ಹಾನಿಗೊಳಗಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಶತಕೋಟಿ ಡಾಲರ್ ಆಸ್ತಿ ನಷ್ಟವಾಗಿದೆ.
ಮುಂಬರುವ ನವೆಂಬರ್ ಮಧ್ಯಂತರ ಚುನಾವಣೆಯಲ್ಲಿ ಭಾರಿ ಇಂಧನ ಬೆಲೆ ಏರಿಕೆ ಹಾಗೂ ಹಣದುಬ್ಬರವೇ ಪ್ರಮುಖ ರಾಜಕೀಯ ವಿಷಯವಾಗಿದ್ದು, ಸಾರ್ವಜನಿಕರಲ್ಲಿ ಯುದ್ಧದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಆದರೆ ಟ್ರಂಪ್ ಮಾತ್ರ ಅಮೆರಿಕದಲ್ಲಿ ಎಲ್ಲವೂ ಚೆನ್ನಾಗಿದೆ. ಇರಾನ್ ಎಲ್ಲವನ್ನೂ ಕಳೆದುಕೊಂಡಿದೆ ಎಂದು ಆಗಾಗೇ ಹೇಳಿಕೊಳ್ಳುತ್ತಿದ್ದಾರೆ.




