ಅಮೆರಿಕದ ನಿರ್ಗಮಿತ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ (DNI) ತುಳಸಿ ಗಬ್ಬಾರ್ಡ್ ಅವರು ಕೋವಿಡ್ 19 ಮೂಲದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಉನ್ನತ ವೈದ್ಯಕೀಯ ಸಲಹೆಗಾರರಾಗಿದ್ದ ಡಾ. ಆಂಟನಿ ಫೌಚಿ ಅವರು ಚೀನಾದ ವುಹಾನ್ ಪ್ರಯೋಗಾಲಯಕ್ಕೆ ಅನುದಾನ ನೀಡಿದ್ದಲ್ಲದೆ, ಕೋವಿಡ್‌ಗೆ ಸಂಬಂಧಿಸಿದ ಗುಪ್ತಚರ ವರದಿಗಳನ್ನು ತಿರುಚಲು ಪ್ರಭಾವ ಬೀರಿದ್ದರು ಎಂದು ಗಬ್ಬಾರ್ಡ್ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಬಿಡುಗಡೆ ಮಾಡಿರುವ ಕೆಲವು ಗೌಪ್ಯ ದಾಖಲೆಗಳಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಡಾ. ಫೌಚಿ ಅವರು ಅಮೆರಿಕದ ತೆರಿಗೆದಾರರ ಲಕ್ಷಾಂತರ ಡಾಲರ್ ಹಣವನ್ನು ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆಯುತ್ತಿದ್ದ ಅಪಾಯಕಾರಿ ‘ಗೇನ್-ಆಫ್-ಫಂಕ್ಷನ್’ (ಬಾವಲಿ ಕರೋನವೈರಸ್) ಸಂಶೋಧನೆಗೆ ಒದಗಿಸಿದ್ದರು. ಈ ಸಂಶೋಧನೆಯೇ ಕೊರೊನಾವೈರಸ್ ಸೋರಿಕೆಗೆ ಮತ್ತು ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣ ಎಂದು ವ್ಯಾಪಕವಾಗಿ ನಂಬಲಾಗಿದೆ ಎಂದು ಗಬ್ಬಾರ್ಡ್ ತಿಳಿಸಿದ್ದಾರೆ.
ಫೌಚಿ ಅವರು ಗುಪ್ತಚರ ಇಲಾಖೆಯ ಕೆಲವು ಅಧಿಕಾರಿಗಳೊಂದಿಗೆ ಸೇರಿ ಕೋವಿಡ್ ಮೂಲದ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ. ಲ್ಯಾಬ್ ಸೋರಿಕೆಯ ಸಿದ್ಧಾಂತವನ್ನು ಮುಚ್ಚಿಹಾಕಲು ಮತ್ತು ನೈಸರ್ಗಿಕವಾಗಿ ವೈರಸ್ ಹರಡಿದೆ ಎಂದು ಬಿಂಬಿಸಲು ಗುಪ್ತಚರ ವರದಿಗಳನ್ನು ಪ್ರಭಾವಿಸಿದ್ದರು. ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ಬೆಂಬಲಿಸಿದ ವಿಶ್ಲೇಷಕರಿಗೆ ಬೆದರಿಕೆ ಹಾಕಿ, ಅವರನ್ನು ವೃತ್ತಿಪರವಾಗಿ ಕಡೆಗಣಿಸಲಾಗಿತ್ತು ಎಂದು ಬಿಡುಗಡೆಯಾದ ದಾಖಲೆಗಳು ಉಲ್ಲೇಖಿಸಿವೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಾಸದ ಮೋಡಿ: 39ರ ವಯಸ್ಸಿನಲ್ಲೂ ಮಿಂಚುತ್ತಿರುವ ಮೆಸ್ಸಿ; ಫುಟ್‌ಬಾಲ್ ದಿಗ್ಗಜರ ಸ್ವಾರಸ್ಯಗಳು
ಕೋವಿಡ್ ಸಾಂಕ್ರಾಮಿಕದ ಕುರಿತು 2024ರಲ್ಲಿ ನಡೆದ ವಿಚಾರಣೆ ವೇಳೆ ಡಾ. ಫೌಚಿ ಅವರು ಕಾಂಗ್ರೆಸ್ ಸಮಿತಿಗೆ ಪ್ರಮಾಣವಚನ ಸ್ವೀಕರಿಸಿ ಸುಳ್ಳು ಮಾಹಿತಿ ನೀಡಿದ್ದರು ಎಂದು ಡಿಎನ್‌ಐ ಆರೋಪಿಸಿದೆ. ವಿಶೇಷವೆಂದರೆ, ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಅಧಿಕಾರದ ಕೊನೆಯ ಗಂಟೆಗಳಲ್ಲಿ (ಜನವರಿ 2025) ಡಾ. ಫೌಚಿ ಅವರಿಗೆ ಮುಂಚಿತವಾಗಿಯೇ ಕ್ಷಮಾದಾನ ನೀಡಿರುವುದು ಈ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
“ಕೋವಿಡ್ ಸಾಂಕ್ರಾಮಿಕವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸಂಕಟ ತಂದಿದೆ. ವರ್ಷಗಳ ಸುಳ್ಳು ಮತ್ತು ಮುಚ್ಚಿಡುವಿಕೆಯ ನಂತರ ಜನರಿಗೆ ಸತ್ಯ ತಿಳಿಯುವ ಹಕ್ಕಿದೆ” ಎಂದು ಗಬ್ಬಾರ್ಡ್ ತಿಳಿಸಿದ್ದಾರೆ. ತಮ್ಮ ಪತಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವ ಕಾರಣ, ಅವರ ಆರೈಕೆಗಾಗಿ ತುಳಸಿ ಗಬ್ಬಾರ್ಡ್ ಅವರು ಜೂನ್ 30ರಂದು ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ.




