ಗ್ರಾಮೀಣ ಮಕ್ಕಳ ಆರೋಗ್ಯ ಸೇವೆಗಾಗಿ ಹಣ ಸಂಗ್ರಹಿಸಲು 12 ವರ್ಷದ ಬಾಲಕನೊಬ್ಬ ಬರೋಬ್ಬರಿ 540 ಕಿ.ಮೀ. ದೂರ ನಡೆಯಲು ಮುಂದಾಗಿದ್ದಾನೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಸಣ್ಣ ಪಟ್ಟಣವಾದ ವಾರನ್ ನಿವಾಸಿ ಡಸ್ಟಿ ಲ್ಯಾಂಗ್ಬಿ ಎಂಬಾತ ಈ ಸಾಹಸಕ್ಕೆ ಕೈಹಾಕಿದ್ದಾನೆ.
ಆಸ್ಟ್ರೇಲಿಯಾದ ಗ್ರಾಮೀಣ ಭಾಗದ ಅನಾರೋಗ್ಯ ಪೀಡಿತ ಮಕ್ಕಳಿಗೆ ಉಚಿತ ವೈದ್ಯಕೀಯ ಸಾರಿಗೆ ಮತ್ತು ಚಿಕಿತ್ಸೆ ಒದಗಿಸುವ ‘ಲಿಟಲ್ ವಿಂಗ್ಸ್’ ಎಂಬ ಸ್ವಯಂಸೇವಾ ಸಂಸ್ಥೆಗೆ 1 ಮಿಲಿಯನ್ ಡಾಲರ್ (ಸುಮಾರು 8.3 ಕೋಟಿ ರೂ) ನಿಧಿ ಸಂಗ್ರಹ ಮಾಡುವುದು ಆತನ ಉದ್ದೇಶವಾಗಿದೆ. ಜೊತೆಗೆ, ಆಸ್ಟ್ರೇಲಿಯಾ ಪ್ರಧಾನಮಂತ್ರಿಯನ್ನು ಭೇಟಿಯಾಗಿ ಗ್ರಾಮೀಣ ಆರೋಗ್ಯ ಸೇವೆಯನ್ನು ಸುಧಾರಿಸುವಂತೆ ಮನವಿಯನ್ನೂ ಮಾಡಲು ಆತ ನಿರ್ಧರಿಸಿದ್ದಾನೆ. ಅದಕ್ಕಾಗಿ, ತನ್ನ ಹುಟ್ಟೂರಿನಿಂದ ಕ್ಯಾನ್‌ಬೆರಾದಲ್ಲಿರುವ ಪಾರ್ಲಿಮೆಂಟ್ ಹೌಸ್‌ವರೆಗೆ ಸುಮಾರು 540 ಕಿ. ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಸಾಗಲು ಡಸ್ಟಿ ಮುಂದಾಗಿದ್ದಾನೆ.
ಡಸ್ಟಿ ಅವರಿಗೆ 3 ವರ್ಷವಿದ್ದಾಗ, ಆತನ ತಂದೆ ಆಂಡ್ರ್ಯೂ ಭೀಕರ ರಸ್ತೆ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಾಯಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರಿಂದ, ಪುಟ್ಟ ವಯಸ್ಸಿನಲ್ಲೇ ಮನೆಯಲ್ಲಿದ್ದುಕೊಂಡು ತನ್ನ ತಂದೆ ಮತ್ತು ತಮ್ಮನ ಆರೈಕೆಯ ಹೊಣೆ ಡಸ್ಟಿ ಮೇಲಿತ್ತು. ಈ ಹೊಣೆಯನ್ನು ಚಿಕ್ಕಂದಿನಿಂದಲೇ ನಿಭಾಯಿದ್ದರಿಂದ, ಆತ ಅತ್ಯಂತ ಸ್ವಾವಲಂಬಿಯಾಗಿ ಬೆಳೆದಿದ್ದನು.
ಇತ್ತೀಚೆಗೆ ಆತನ ತಮ್ಮ ಆಂಗಸ್ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ, ‘ಲಿಟಲ್ ವಿಂಗ್ಸ್’ ಸಂಸ್ಥೆಯು ಉಚಿತ ವಿಮಾನ ಸೇವೆಯ ಮೂಲಕ ಆತನನ್ನು ಸಿಡ್ನಿಯ ತಜ್ಞ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿತ್ತು. ಇದರಿಂದಾಗಿ ಆಂಗಸ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ. ಅಲ್ಲದೆ, ಈ ಸಂಸ್ಥೆಯ ನೆರವಿನಿಂದಲೇ ಪ್ರಸ್ತುತ ವಾರನ್ ಪಟ್ಟಣಕ್ಕೆ ತಿಂಗಳಿಗೊಮ್ಮೆ ತಜ್ಞ ಮಕ್ಕಳ ವೈದ್ಯರು ಬಂದು ಉಚಿತ ತಪಾಸಣೆ ನಡೆಸುತ್ತಿದ್ದಾರೆ.
ತನ್ನ ಕುಟುಂಬ ಹಾಗೂ ಗ್ರಾಮದ ಇತರ ಮಕ್ಕಳಿಗೆ ‘ಲಿಟಲ್ ವಿಂಗ್ಸ್’ ನೀಡಿದ ನೆರವನ್ನು ಕಣ್ಣಾರೆ ಕಂಡ ಡಸ್ಟಿ, ‘ಡಾಲರ್ ಫಾರ್ ಡಸ್ಟಿ’ ಎಂಬ ಹೆಸರಿನಲ್ಲಿ ನಿಧಿ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ. ಆಗಸ್ಟ್ 30 ರಂದು ನಡಿಗೆ ಆರಂಭಿಸಲಿರುವ ಡಸ್ಟಿ, ಪ್ರತಿದಿನ 40 ಕಿ.ಮೀ ನಡೆದು ಸೆಪ್ಟೆಂಬರ್ 14 ರಂದು ಕ್ಯಾನ್‌ಬೆರಾದ ಪಾರ್ಲಿಮೆಂಟ್ ತಲುಪಲು ಯೋಜಿಸಿದ್ದಾರೆ. ಈ ಇಡೀ ಪಯಣದಲ್ಲಿ ಆತನ ತಾಯಿ ಮತ್ತು ಲಿಟಲ್ ವಿಂಗ್ಸ್ ಸಂಸ್ಥೆಯ ಸಿಇಒ ಕ್ಲೇರ್ ಪೀರ್ಸನ್ ಜೊತೆಗಿರಲಿದ್ದಾರೆ.
12 ವರ್ಷದ ಈ ಬಾಲಕನ ಸಾಹಸವು, ಇಡೀ ಆಸ್ಟ್ರೇಲಿಯಾದಾದ್ಯಂತ ಗ್ರಾಮೀಣ ಭಾಗದ ಮಕ್ಕಳ ಆರೋಗ್ಯ ಹಕ್ಕುಗಳ ಪರವಾಗಿ ಧ್ವನಿ ಎತ್ತಲು ಜನರನ್ನು ಪ್ರೇರೇಪಿಸುತ್ತಿದೆ.



