ಮುಳವಾಡ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯ ಅಂಚಿನಲ್ಲಿರುವ ಹೆಬ್ಬಾಳಟ್ಟಿ, ಹೊಕ್ಕುಂಡಿ, ಯಕ್ಕುಂಡಿ, ಅರ್ಜುಣಗಿ ಹಾಗೂ ತೊದಲಬಾಗಿ ಗ್ರಾಮಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದ ಅವರು, “ಐದು ಗ್ರಾಮಗಳ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಹಾಗೂ ಜಾನುವಾರುಗಳಿಗೂ ನೀರಿನ ಕೊರತೆ ಎದುರಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆ ನಿರ್ಮಾಣವಾದಾಗಿನಿಂದಲೂ ಕೊನೆಯಂಚಿನ ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪಿದ ಉದಾಹರಣೆಯೇ ಇಲ್ಲ” ಎಂದು ದೂರಿದರು.
“ಆಲಮಟ್ಟಿಯಿಂದ ಬಳ್ಳಾರಿಯ ಜಿಂದಾಲ್‌ವರೆಗೆ ಯಾವುದೇ ಅಡತಡೆಯಿಲ್ಲದೆ ನೀರು ಹರಿಸಲಾಗುತ್ತಿದೆ. ಆದರೆ, ಯೋಜನೆಯ ಸಮೀಪದಲ್ಲಿರುವ ಗ್ರಾಮಗಳಿಗೆ ನೀರು ಒದಗಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ” ಎಂದು ಆರೋಪಿಸಿದರು.
ಕಾಲುವೆಯ ಕೊನೆಯಂಚಿನವರೆಗೆ ನೀರು ತಲುಪಿಸಲು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲಿಸಿ, ಹಗಲಿರುಳು ಕಾರ್ಯನಿರ್ವಹಿಸಿ ಸಮಸ್ಯೆ ಬಗೆಹರಿಸಬೇಕು. ಕೂಡಲೇ ನೀರು ಹರಿಸದಿದ್ದರೆ ಹೋರಾಟ ಮುಂದುವರಿಸಲಾಗುವುದು. ವಿಳಂಬ ನೀತಿ ಅನುಸರಿಸಿದರೆ ಹೋರಾಟದ ಸ್ವರೂಪ ಬದಲಾಯಿಸಬೇಕಾಗುತ್ತದೆ” ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ತುಂಗಭದ್ರಾ ಕಾಲುವೆಗಳಿಗೆ 90 ದಿನ ನೀರು ಹರಿಸಲು ನಿರ್ಧಾರ: ರೈತರ ಮೊಗದಲ್ಲಿ ಮಂದಹಾಸ
ತೊದಲಬಾಗಿಯ ರೈತ ಮುಖಂಡ ರಾಮಪ್ಪ ಕರಜಗಿ ಮಾತನಾಡಿ, “ಈ ಗ್ರಾಮಗಳಲ್ಲಿ ನೀರಿನ ಕೊರತೆಯಿಂದ ಹೈನುಗಾರಿಕೆ ಕ್ಷೀಣಿಸುತ್ತಿದೆ. ಕೆರೆಗಳು ಬತ್ತಿಹೋಗಿದ್ದು, ಬೆಳೆಗಳು ಒಣಗುತ್ತಿವೆ. ರೈತರ ಸಂಕಷ್ಟ ನಿವಾರಿಸಲು ಕೂಡಲೇ ಪಶ್ಚಿಮ ಕಾಲುವೆಗೆ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಬಬಲೇಶ್ವರ ತಾಲೂಕು ಘಟಕದ ಸುರೇಶ ಕಿರಸೂರ, ಸಿದರಾಯ ಸನಸದ, ರಾಜು ಕಂಬಾಗಿ, ಬಸವರಾಜ ಸಿದ್ದಾಪೂರ, ಬಸವರಾಜ ಜಂಗಮಶೆಟ್ಟಿ, ಪಾಂಡು ಹ್ಯಾಟಿ, ಪ್ರಭು ಬಸ್ತವಾಡ, ಶಿವಾನಂದ ಕಡ್ಲಿಮಟ್ಟಿ, ಸುರೇಶ ನಾವದಗಿ, ರಾಜು ನದಾಫ್, ರಾಜು ಕಲಭೋಳಗಿ, ಪ್ರಸನ್ನ ಜಮಖಂಡಿ, ರಮೇಶ ದೇಸಾಯಿ, ಮುತ್ತಪ್ಪ ಕೋಮಾರ, ಈರಪ್ಪ ಹಂಚನಾಳ, ಮಲ್ಲಪ್ಪ ಅಗಸರ ಸೇರಿದಂತೆ ರೈತ ಮುಖಂಡರು ಮತ್ತು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.




