ನೆಲದ ಮೇಲೆ ಮಲಗಿದ್ದ 6 ವಿದ್ಯಾರ್ಥಿನಿಯರಿಗೆ ಹಾವು ಕಡಿದಿದ್ದು, ಮೂವರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನ ಜಪಟ್ಲೈ ವಸತಿ ಶಾಲೆಯಲ್ಲಿ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಶಾಲೆಯ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ಆದೇಶಿಸಿದ್ದಾರೆ.
ಜಪ್ತಲಾಯಿ ಗ್ರಾಮದ ಅನುದಾನಿತ ಪ್ರಾಥಮಿಕ/ಪ್ರೌಢ ಆಶ್ರಮ ಶಾಲೆಯಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ. ಆರು ಬಾಲಕಿಯರಿಗೆ ಹಾವು ಕಡಿದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಬಾಲಕಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಮತ್ತೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಾವು ಕಡಿತಕ್ಕೆ ಒಳಗಾದ ದೀಪಿಕಾ ಮಾದವಿ ಎಂಬ 12 ವರ್ಷದ ವಿದ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ನಾಗಪುರಕ್ಕೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ.
ಶಾಲೆಯ ಆವರಣದಲ್ಲಿ ಒಟ್ಟು 233 ವಿದ್ಯಾರ್ಥಿಗಳಿದ್ದು, ಘಟನೆಯ ಸಂದರ್ಭದಲ್ಲಿ 65 ಬಾಲಕಿಯರು ಅಲ್ಲಿದ್ದರು. ವಿದ್ಯಾರ್ಥಿನಿಯರು ಹಾಸಿಗೆಗಳಿಲ್ಲದೆ ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಮಲಗುತ್ತಿದ್ದರು. ಹಾಸಿಗೆಗಳ ವ್ಯವಸ್ಥೆ ಮಾಡುವಂತೆ ಶಿಕ್ಷಕರು ಹಲವು ಬಾರಿ ಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದಿದ್ದರೂ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪೋಳಾ ಹಬ್ಬದ ಬಳಿಕ ಹಾಸಿಗೆ ನೀಡಲಾಗುವುದು ಎಂದು ತಿಳಿಸಲಾಗಿತ್ತು ಎನ್ನಲಾಗಿದೆ.
ಘಟನೆ ನಡೆದ ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಜವಾಬ್ದಾರಿ ವಹಿಸಬೇಕಿದ್ದ ವಾರ್ಡನ್‌ಗಳೂ ಇರಲಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಶಾಲೆಯಲ್ಲಿ 26 ವರ್ಷಗಳಿಂದ ಗಣಿತ ಮತ್ತು ಮರಾಠಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅನಿಲ್ ಸಹಾರೆ, ಭಾನುವಾರ ರಾತ್ರಿ ಬೋಧಕ ಸಿಬ್ಬಂದಿ ಶಾಲೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಅಂದು ಬೆಳಗ್ಗೆ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ನಡೆದ ಬಳಿಕ ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮ ಮನೆಗಳಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.
ಹಾವು ಸಾಮಾನ್ಯ ಕ್ರೈಟ್ (Common Krait) ಎಂದು ಗುರುತಿಸಲಾಗಿದ್ದು, ಬಳಿಕ ಅದನ್ನು ಹಿಡಿದು ಕೊಲ್ಲಲಾಗಿದೆ. ಹಾವು ಕಿಟಕಿಯ ಮೂಲಕ ಶಾಲೆಯೊಳಗೆ ಪ್ರವೇಶಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಶಾಲೆಯ ಕಿಟಕಿ ರಾತ್ರಿ ತೆರೆದಿಡಲಾಗಿತ್ತು ಎಂಬುದು ಪರಿಶೀಲನೆಯಲ್ಲಿ ಕಂಡುಬಂದಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿರುವುದು ಪ್ರಾಥಮಿಕವಾಗಿ ಗೊತ್ತಾಗಿದೆ ಎಂದು ಗಡ್ಚಿರೋಲಿ ಜಿಲ್ಲಾಧಿಕಾರಿ ಅವಿಷ್ಯಾಂತ್ ಪಾಂಡಾ ತಿಳಿಸಿದ್ದಾರೆ.
ಘಟನೆಯ ಬಳಿಕ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಸುರಕ್ಷತೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಲೋಪಗಳನ್ನು ಗುರುತಿಸಿದೆ. ಶಾಲೆಯ ಪ್ರಾಂಶುಪಾಲರು ಹಾಗೂ ಪುರುಷ ಮತ್ತು ಮಹಿಳಾ ವಾರ್ಡನ್‌ಗಳಿಗೆ ನೋಟಿಸ್ ನೀಡಲಾಗಿದೆ. ಶಾಲೆಯ ನಿರ್ವಹಣಾ ಪ್ರತಿನಿಧಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಬುಡಕಟ್ಟು ಆಯುಕ್ತೆ ಆಯುಷಿ ಸಿಂಗ್ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 500ಕ್ಕೂ ಹೆಚ್ಚು ಆಶ್ರಮ ಶಾಲೆಗಳ ಸುರಕ್ಷತೆ ಮತ್ತು ಮೂಲಸೌಕರ್ಯವನ್ನು ಪರಿಶೀಲಿಸಲು ಮೂರನೇ ವ್ಯಕ್ತಿಯ ಮೂಲಕ ಸಮಗ್ರ ಆಡಿಟ್ ನಡೆಸಲು ಸರ್ಕಾರ ನಿರ್ಧರಿಸಿದೆ. ವಿದರ್ಭ ಪ್ರದೇಶದಲ್ಲಿರುವ ಎಲ್ಲಾ ಅನುದಾನಿತ ಆಶ್ರಮ ಶಾಲೆಗಳನ್ನೂ ಪರಿಶೀಲಿಸಲಾಗುವುದು ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆ ತಿಳಿಸಿದೆ.
ಈ ಶಾಲೆಯನ್ನು ಸ್ಥಳೀಯ ಕಾಂಗ್ರೆಸ್ ನಾಯಕ ವಿಶ್ವಜೀತ್ ಮರೋತ್ರಾವ್ ಕೊವಾಸೆ ಕಾರ್ಯದರ್ಶಿಯಾಗಿರುವ ಟ್ರಸ್ಟ್ ನಡೆಸುತ್ತಿದೆ. ಶಾಲೆಯ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಅಸೆಂಬ್ಲಿಯಲ್ಲಿ ‘ಅಕ್ಕಿ ಹಗರಣ’ ಗದ್ದಲ: 8 ಎಎಪಿ ಶಾಸಕರನ್ನು ಹೊರಹಾಕಿದ ಮಾರ್ಷಲ್‌ಗಳು
ಮೃತ ವಿದ್ಯಾರ್ಥಿನಿಯರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಇದೇ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಆದರೆ, ಪರಿಹಾರದಿಂದ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ನೋವು ಕಡಿಮೆಯಾಗುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಮಾಜಿ ಗಡ್ಚಿರೋಲಿ ಶಾಸಕ ಅಶೋಕ್ ನೇತೇ ಹಾಗೂ ಹಾಲಿ ಶಾಸಕ ಮಿಲಿಂದ್ ನರೋಟೆ ಶಾಲೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಅವರನ್ನು ಘೇರಾವ್ ಮಾಡಿ, ಬಾಲಕಿಯರ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಶಾಲೆಯಲ್ಲಿನ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
1992ರಲ್ಲಿ ಆರಂಭವಾದ ಈ ವಸತಿ ಶಾಲೆಯಲ್ಲಿ ಇಂದಿಗೂ ಮಕ್ಕಳು ಹಾಸಿಗೆಗಳಿಲ್ಲದೆ ನೆಲದ ಮೇಲೆ ಮಲಗಬೇಕಾದ ಪರಿಸ್ಥಿತಿ ಇರುವುದು, ಆದಿವಾಸಿ ಮಕ್ಕಳಿಗಾಗಿ ನಡೆಯುತ್ತಿರುವ ವಸತಿ ಶಿಕ್ಷಣ ವ್ಯವಸ್ಥೆಯ ಮೂಲಸೌಕರ್ಯ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ತಿಂಗಳ ಬಳಿಕ ಹಾಸಿಗೆ ನೀಡುವ ಭರವಸೆ ಇತ್ತಾದರೂ, ಆ ಒಂದು ತಿಂಗಳು ಮುಗಿಯುವ ಮೊದಲೇ ಮೂವರು ಬಾಲಕಿಯರು ಜೀವ ಕಳೆದುಕೊಂಡಿದ್ದಾರೆ.




