ಅಮೆರಿಕ - ಚೀನಾ ನಡುವೆ ತಂತ್ರಜ್ಞಾನ ಮತ್ತು ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ಶೀತಲ ಸಮರವು ತುಸು ಕಡಿಮೆಯಾದರೆ, ಭಾರತಕ್ಕೆ ಪರೋಕ್ಷ ಹೊಡೆತ ಬೀಳಲಿದೆ. ಅಮೆರಿಕದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಭಾರತವನ್ನು ಬಿಟ್ಟು ಚೀನಾದ ಬೃಹತ್ ಮಾರುಕಟ್ಟೆಯ ಕಡೆಗೆ ಗಮನ ಹರಿಸಿದರೆ, ಕೃತಕ ಬುದ್ಧಿಮತ್ತೆ (AI) ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಭಾರತದ ಕನಸಿಗೆ ಕಲ್ಲು ಬೀಳಲಿದೆ.
ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಗೆ ಭೇಟಿ ನೀಡಿದ್ದರು. ಅವರ ಭೇಟಿಯು ಇರಾನ್ ಯುದ್ಧವನ್ನು ಕೊನೆಗಾಣಿಸಬಹುದು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಾತ್ರಿಪಡಿಸಬಹುದು ಎಂಬ ಆಶಾವಾದ ಹಲವು ರಾಷ್ಟ್ರಗಳಲ್ಲಿತ್ತು. ಆದರೆ, ಅದು ಸಂಭವಿಸಲಿಲ್ಲ. ಬದಲಾಗಿ, ಚೀನಾದಿಂದ ಮರಳಿದ ಟ್ರಂಪ್, ಇರಾನ್ ವಿರುದ್ಧ ಮತ್ತೆ ದಾಳಿ ನಡೆಸುವ ಸಂಭಾವ್ಯತೆಯನ್ನು ಸೂಚಿಸಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಅವರ ಭೇಟಿಯನ್ನು ಹಲವರು ಕೇವಲ ಪ್ರಚಾರ ಮತ್ತು ರಾಜತಾಂತ್ರಿಕ ಸಂಕೇತವೆಂದು ಕಡೆಗಣಿಸಿದ್ದಾರೆ.
ಆದಾಗ್ಯೂ, ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಯು ನ್ಯಾಟೋ ರಾಷ್ಟ್ರಗಳು ಮತ್ತು ಭಾರತಕ್ಕೆ ನಾನಾ ರೀತಿಯ ಸಂದೇಶಗಳನ್ನು ರವಾನಿಸಿವೆ ಎಂದೂ ಹಲವು ತಜ್ಞರು ಭಾವಿಸಿದ್ದಾರೆ. ಈ ಬೆಳವಣಿಗೆಯು ಭಾರತವು ತನ್ನ ರಾಷ್ಟ್ರೀಯ ಭದ್ರತೆಗಾಗಿ ಇತರ ವಿದೇಶಿ ಶಕ್ತಿಗಳನ್ನು ನೆಚ್ಚಿಕೊಳ್ಳುವ ಬದಲು, ಸ್ವಾವಲಂಬನೆಯ ಹಾದಿ ಹಿಡಿಯುವುದು ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ಹಿರಿಯ ಚಿಂತಕ ವಿವೇಕ್ ಕಟ್ಜು ವಿಶ್ಲೇಷಿಸಿದ್ದಾರೆ.
ಪ್ರಸ್ತುತ ಜಾಗತಿಕ ಪರಿಸ್ಥಿತಿಯು ಅತ್ಯಂತ ಆತಂಕಕಾರಿ ಮತ್ತು ಸವಾಲಿನಿಂದ ಕೂಡಿದೆ. ಜಗತ್ತಿನ ಈ ಇಬ್ಬರು ಶಕ್ತಿಶಾಲಿ ನಾಯಕರು ಇರಾನ್ ಬಿಕ್ಕಟ್ಟಿನಂತಹ ಗಂಭೀರ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಬೇಕಾಗಿತ್ತು. ಅಮೆರಿಕವು ಈ ಯುದ್ಧದ ನೇರ ಭಾಗಿದಾರನಾಗಿರುವುದರಿಂದ ಅದು ಏಕಪಕ್ಷೀಯವಾಗಿ ಯುದ್ಧವನ್ನು ನಿಲ್ಲಿಸಬಹುದಿತ್ತಾದರೂ ಟ್ರಂಪ್ ಆಡಳಿತದಲ್ಲಿ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಚೀನಾವು ಇರಾನ್ ಜೊತೆಗೆ ಉತ್ತಮ ರಾಜತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಹೊಂದಿದ್ದರೂ ಸಹ, ತನ್ನ ಸಾಂಪ್ರದಾಯಿಕ ರಾಜತಾಂತ್ರಿಕ ಶೈಲಿಯನ್ನು ದಾಟಿ ಅಮೆರಿಕದೊಂದಿಗೆ ಜಂಟಿ ಕಾರ್ಯವಿಧಾನಕ್ಕೆ ಮುಂದಾಗಲಿಲ್ಲ. ಎರಡು ದೇಶಗಳ ನಡುವಿನ ಪರಸ್ಪರ ಅಪನಂಬಿಕೆಯು ಜಾಗತಿಕ ಹಿತಾಸಕ್ತಿಯನ್ನು ಅತಂತ್ರಗೊಳಿಸಿದೆ.
ಭೇಟಿಯ ಸಂದರ್ಭ ಅಥವಾ ಭೇಟಿಯ ನಂತರ ಟ್ರಂಪ್-ಜಿನ್‌ಪಿಂಗ್ ಯಾವುದೇ ಜಂಟಿ ಹೇಳಿಕೆಯನ್ನೂ ನೀಡದೇ ಇರುವುದು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕನ್ನಡಿ ಹಿಡಿದಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯುವ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ವಿಷಯವನ್ನು ಜಿನ್‌ಪಿಂಗ್ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಚೀನಾ ವಿದೇಶಾಂಗ ಸಚಿವಾಲಯವು ಅದನ್ನು ನಿರಾಕರಿಸಿದೆ. ಚೀನಾದ ವಕ್ತಾರರು ಟ್ರಂಪ್ ಅವರ ಹೆಸರನ್ನು ಹೇಳದೆಯೇ, ”ಈ ಯುದ್ಧವು ಸಂಭವಿಸಬಾರದಿತ್ತು. ಇರಾನ್ ವಿಷಯದಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಎಲ್ಲ ಪಾಲುದಾರರ ಕಳಕಳಿಗಳನ್ನು ಆಲಿಸಬೇಕು” ಎಂದು ಹೇಳಿದ್ದಾರೆ. ಅವರ ಹೇಳಿಕೆ ಟ್ರಂಪ್ ಅವರ ಆಕ್ರಮಣಕಾರಿ ನೀತಿಯನ್ನು ಖಂಡಿಸುವ ರೀತಿಯಲ್ಲಿದೆ.
ಆದರೂ, ಈ ಭೇಟಿ ಚೀನಾ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕತೆಯನ್ನು ಒಂದು ಹಂತಕ್ಕೆ ಸುಧಾರಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು ಎಂಬ ಅಭಿಪ್ರಾಯಗಳೂ ಇವೆ. ಅದರಲ್ಲೂ, ಚೀನಾ-ಅಮೆರಿಕದ ಹೊಂದಾಣಿಕೆ ಸಾಧ್ಯವಾದರೆ, ಅಮೆರಿಕ ನೇತೃತ್ವದ ‘ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ’ಯ (ನ್ಯಾಟೋ) ಭವಿಷ್ಯವೂ ಅವನತಿಯ ಹಾದಿ ಹಿಡಿಯುವ ಸಾಧ್ಯತೆಗಳೂ ಇವೆ.
ನ್ಯಾಟೋದಲ್ಲಿ ಅಮೆರಿಕ, ಟರ್ಕಿ ಹಾಗೂ ಯುರೋಪಿನ ಬಹುತೇಕ ರಾಷ್ಟ್ರಗಳಿವೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮದೇ ನೇತೃತ್ವದ ನ್ಯಾಟೋ ವಿರುದ್ಧ ಟ್ರಂಪ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಮೆರಿಕದಿಂದಲೇ ನ್ಯಾಟೋ ಜೀವಂತವಾಗಿದೆ. ಅಮೆರಿಕದ ಮಿಲಿಟರಿ ಶಕ್ತಿಯಿಂದ ನ್ಯಾಟೋ ಪ್ರಬಲವಾಗಿದೆ ಎನ್ನುತ್ತಿದ್ದಾರೆ. ಆದರೂ, ಈವರೆಗೆ ನ್ಯಾಟೋ ಅಧಿಕೃತವಾಗಿ ಟ್ರಂಪ್ ಉಪಟಳಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಕ್ಕೂಟದ ಭಾಗವಾಗಿರುವ ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ಇಟಲಿಯಂತಹ ಕೆಲವು ರಾಷ್ಟ್ರಗಳ ಟ್ರಂಪ್ ಅವರ ಧೋರಣೆಯನ್ನು ಖಂಡಿಸಿವೆ. ಟ್ರಂಪ್ ಅವರು ಗ್ರೀನ್‌ಲ್ಯಾಂಡ್‌ಅನ್ನು ತಮ್ಮ ವಶಕ್ಕೆ ಪಡೆಯುವ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿವೆ. ಇದು, ಟ್ರಂಪ್ ಅವರ ಅಹಂಗೆ ಹೊಡೆತ ನೀಡಿದೆ. ಅವರ ನ್ಯಾಟೋ ತೊರೆಯುವ ಮಾತನಾಡುತ್ತಿದ್ದಾರೆ.
ನ್ಯಾಟೋ ಒಪ್ಪಂದದಿಂದ ಯಾವುದೇ ರಾಷ್ಟ್ರ ಸುಲಭವಾಗಿ ಹೊರನಡೆಯಲು ಅವಕಾಶವಿದ್ದರೂ, ಆ ಅವಕಾಶ ಅಮೆರಿಕಗೆ ಇಲ್ಲ. ಯಾಕೆಂದರೆ, ಅಮೆರಿಕದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (NDAA) ಪ್ರಕಾರ, ಯಾವುದೇ ಒಬ್ಬ ಅಮೆರಿಕದ ಅಧ್ಯಕ್ಷರು ಸಂಸತ್ತಿನ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ನ್ಯಾಟೋದಿಂದ ಹೊರಬರಲು ಸಾಧ್ಯವಿಲ್ಲ. ಹೊರಬರಬೇಕೆಂದರೆ, ಅಮೆರಿಕ ಸಂಸತ್ತಿನ 2/3 ಬಹುಮತದ ಅನುಮೋದನೆ ಬೇಕು ಅಥವಾ ಇಡೀ ಸಂಸತ್ತಿನಲ್ಲಿ ವಿಶೇಷ ಕಾಯ್ದೆಯನ್ನು ಅಂಗೀಕರಿಸಬೇಕು. ಅದು ಟ್ರಂಪ್‌ಗೆ ಸಾಧ್ಯವಿಲ್ಲ. ಆದ್ದರಿಂದ, ನ್ಯಾಟೋವನ್ನೇ ದುರ್ಬಲಗೊಳಿಸುವ ತಂತ್ರಕ್ಕೆ ಟ್ರಂಪ್ ಕೈಹಾಕಿದಂತಿದೆ.
ಪ್ರಸ್ತುತ ಸನ್ನಿವೇಶದಲ್ಲಿ, ಹಳೆಯ ಒಪ್ಪಂದ/ಒಕ್ಕೂಟಗಳು ಕುಸಿಯುತ್ತಿವೆ. ಹೊಸ ಮೈತ್ರಿಗಳು ಬೆಸೆದುಕೊಳ್ಳುತ್ತಿವೆ. ಇಂತಹ ಬದಲಾವಣೆಯ ಸಮಯದಲ್ಲಿ, ಅಮೆರಿಕ ಹೊಸ ಮೈತ್ರಿಗಳನ್ನು ಹೆಣೆಯುತ್ತಲೇ ತನ್ನ, ಸಾಮ್ರಾಜ್ಯವಾದಿ, ವಿಸ್ತರಣಾವಾದಿ, ಅಕ್ರಮಕಾರಿ ನೀತಿಗಳನ್ನು ಬಲವಾಗಿ ಮುಂದುವರೆಸುತ್ತಿದೆ. ತನ್ನ ವಿಸ್ತರಣಾವಾದಕ್ಕೆ ಕೈಜೋಡಿಸುವಂತೆ ಕೇಳಲು ಚೀನಾದ ಬಾಗಿಲು ಬಡಿಯುತ್ತಿದೆ. ತನ್ನದೇ ಆದ ಯಾವುದೇ ಮಿಲಿಟರಿ ಒಕ್ಕೂಟವನ್ನು ಹೊಂದಿಲ್ಲದ ಚೀನಾ ಜೊತೆಗೂಡಿ, ಒಕ್ಕೂಟ ಕಟ್ಟುವ ತಂತ್ರ ಟ್ರಂಪ್‌ಗೆ ಇದ್ದಂತಿದೆ. ಆದರೆ, ಟ್ರಂಪ್ ಧೋರಣೆಗೆ ಸದ್ಯಕ್ಕೆ ಚೀನಾ ಮಣೆಹಾಕುತ್ತಿಲ್ಲ.
ಟ್ರಂಪ್ ಅವರು ನ್ಯಾಟೋ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವುದು, ಏಕಪಕ್ಷೀಯವಾಗಿ ಮಿಲಿಟರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು, ಇರಾನ್ ಮೇಲಿನ ಯುದ್ಧ, ಚೀನಾ ಭೇಟಿಯನ್ನು ನ್ಯಾಟೋದ ಇತರ ಸದಸ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಟ್ರಂಪ್ ಮೇಲೆ ಒತ್ತಡ ಹೇರಲು ಎದುರು ನೋಡುತ್ತಿವೆ.
ಆದರೆ, ಟ್ರಂಪ್ ನೇತೃತ್ವದ ಅಮೆರಿಕ ಸಾಮ್ರಾಜ್ಯವಾದಕ್ಕೆ ಮೋದಿ ನೇತೃತ್ವದ ಭಾರತವೂ ಬಾಲಂಗೋಚಿಯಾಗಿ ವರ್ತಿಸುತ್ತಿದೆ. ಟ್ರಂಪ್ ಧೋರಣೆಗಳಿಗೆ ಮಣೆ ಹಾಕುತ್ತಿದೆ. ಟ್ರಂಪ್ ಚೀನಾದಲ್ಲಿದ್ದ ಸಮಯದಲ್ಲಿಯೇ, ಮೋದಿ ಅವರು ಯುಎಇಗೆ ಭೇಟಿ ನೀಡಿದ್ದರು. ಮೋದಿ ನೇತೃತ್ವದ ಭಾರತವು ಅಮೆರಿಕ, ಇಸ್ರೇಲ್, ಯುಎಇ ಜೊತೆಗೆ ಹೊಸ ಮೈತ್ರಿಕೂಟವನ್ನು ಕಟ್ಟಿಕೊಂಡಿದೆ. ಈ ಬೆಳವಣಿಗೆಯೊಂದಿಗೆ, ಮಧ್ಯಪ್ರಾಚ್ಯದಲ್ಲಿನ ದುಷ್ಟಕೂಟಕ್ಕೆ ಭಾರತ ಸೇರಿಕೊಂಡಿದೆ.
ಮೋದಿ ಆಡಳಿತದಲ್ಲಿ ಭಾರತ ಕೇವಲ ಅಮೆರಿಕದ ಬಾಲಂಗೋಚಿಯಾಗುತ್ತಿಲ್ಲ. ಅಮೆರಿಕದ ಬಾಲಂಗೋಚಿಯಾಗಿರುವ ಇಸ್ರೇಲ್‌ನ ಬಾಲಂಗೋಚಿಯೂ ಆಗುತ್ತಿದೆ. ಭಾರತದ ಈ ವಿದೇಶಾಂಗ ನೀತಿ ಭಾರತಕ್ಕೆ ಹೆಚ್ಚು ಸಮಸ್ಯೆಯನ್ನು ತಂದೊಡ್ಡಿದೆ. ಅದರ ಪರಿಣಾಮ, ಇಂಧನ ಬಿಕ್ಕಟ್ಟಿನೊಂದಿಗೆ ಈಗಾಗಲೇ ದೇಶಾದ್ಯಂತ ಕಾಣುತ್ತಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗೆ, ಮುಖ್ಯವಾಗಿ ಇರಾನ್‌ನೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿತ್ತು. ಇರಾನ್ ಕಡಿಮೆ ಬೆಲೆ ಮತ್ತು ರೂಪಾಯಿಯಲ್ಲಿಯೇ ಭಾರತಕ್ಕೆ ಕಚ್ಚಾತೈಲವನ್ನು ಸರಬರಾಜು ಮಾಡುತ್ತಿತ್ತು. ಆದರೆ, ಮೋದಿ ಸರ್ಕಾರ, ಇಸ್ರೇಲ್ ಪರವಾದ ನಿಲುವು ತಳೆದು, ವಿದೇಶಾಂಗ ನೀತಿಗಳನ್ನೇ ಬುಡಮೇಲು ಮಾಡಿತು. ಆದ್ದರಿಂದಲೇ, ಸದ್ಯ ಸಂಕಟ ಪರಿಸ್ಥಿತಿ ಎದುರಿಸುತ್ತಿದೆ.
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉದ್ಯಮಗಳು ಹೆಚ್ಚಾಗಿ ಇಂಧನದ ಮೇಲೆ ಅವಲಂಬಿತವಾಗಿವೆ. ಪೆಟ್ರೋಲಿಯಂ ಉತ್ಪನ್ನಗಳಿಲ್ಲದಿದ್ದರೆ, ಎಲ್ಲ ರೀತಿಯ ಉದ್ಯಮಗಳು ನಾಶಗೊಳ್ಳುತ್ತವೆ. ಅಂತಹ ಪರಿಸ್ಥಿತಿ ಎದುರಾದರೆ, ಅದು ಮೋದಿ ಸರ್ಕಾರ ಬೃಹತ್ ವಿದೇಶಾಂಗ ವೈಫಲ್ಯವಾಗಿರಲಿದೆ. ಇದರ ಹೊಣೆ ಮೋದಿ ಸರ್ಕಾರದ್ದೇ ಆಗಿದೆ. ಆದರೆ, ಅದರ ಪರಿಣಾಮಗಳನ್ನು ಮೋದಿ ಮತ್ತು ಅವರ ಪಾಳಯ ಸಾರ್ವಜನಿಕರ ಹೆಗಲಿಗೆ ವರ್ಗಾಯಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಜಿನ್‌ಪಿಂಗ್ ಮತ್ತು ಟ್ರಂಪ್ ಭೇಟಿ ನಡೆದಿದೆ. ಒಂದು ವೇಳೆ, ಅಮೆರಿಕ – ಚೀನಾ ನಡುವೆ ತಂತ್ರಜ್ಞಾನ ಮತ್ತು ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ಶೀತಲ ಸಮರವು ತುಸು ಕಡಿಮೆಯಾದರೆ, ಭಾರತಕ್ಕೆ ಪರೋಕ್ಷ ಹೊಡೆತ ಬೀಳಲಿದೆ. ಅಮೆರಿಕದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಭಾರತವನ್ನು ಬಿಟ್ಟು ಚೀನಾದ ಬೃಹತ್ ಮಾರುಕಟ್ಟೆಯ ಕಡೆಗೆ ಗಮನ ಹರಿಸಿದರೆ, ಕೃತಕ ಬುದ್ಧಿಮತ್ತೆ (AI) ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಭಾರತದ ಕನಸಿಗೆ ಕಲ್ಲು ಬೀಳಲಿದೆ. ಅಲ್ಲದೆ, ಇಂಡೋ-ಪೆಸಿಫಿಕ್ ವಲಯ ಮತ್ತು ಕ್ವಾಡ್ (QUAD) ಒಕ್ಕೂಟದ ಜವಾಬ್ದಾರಿಗಳ ಕುರಿತು ಅಮೆರಿಕ ಯಾವುದೇ ಬದ್ಧತೆ ಪ್ರದರ್ಶಿಸದೇ ಇದ್ದರೆ, ಭಾರತವು ತನ್ನ ಭದ್ರತೆಯನ್ನು ತಾನೇ ನೋಡಿಕೊಳ್ಳಬೇಕಾದ ಕಹಿ ಸತ್ಯವೂ ನಮ್ಮ ಮುಂದಿದೆ.



