ಅಮೆರಿಕ ಮತ್ತು ಇರಾನ್ ನಡುವೆ ಕಳೆದ 4 ತಿಂಗಳುಗಳಿಂದ (108 ದಿನಗಳು) ನಡೆಯುತ್ತಿದ್ದ ಭೀಕರ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳು ಐತಿಹಾಸಿಕ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಶಾಂತಿ ಒಪ್ಪಂದಕ್ಕೆ ಡಿಜಿಟಲ್ ಅಂಕಿತ ಹಾಕಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಜಾಗತಿಕ ಆರ್ಥಿಕತೆಗೆ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದ್ದ ನೌಕಾ ದಿಗ್ಬಂಧನಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಆರಂಭದಲ್ಲಿ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೇರ್ ಗಾಲಿಬಾಫ್ ಅವರು ಡಿಜಿಟಲ್ ರೂಪದಲ್ಲಿ ಇದಕ್ಕೆ ಸಹಿ ಹಾಕಿದ್ದರು. ತದನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದಾಗ ಈ ಒಪ್ಪಂದದ ಪತ್ರಕ್ಕೆ ಸಹಿ ಹಾಕಿದ್ದಾರೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಅಧಿಕೃತವಾಗಿ ಇದಕ್ಕೆ ಎಲೆಕ್ಟ್ರಾನಿಕ್ ಸಹಿ ಹಾಕಿ ಒಪ್ಪಂದವನ್ನು ಜಾರಿಗೆ ತಂದಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ-ಇರಾನ್ ಯುದ್ಧ ಅಂತ್ಯ: ನೀರಿನೊಳಗಿನ ಸ್ಫೋಟಕ ಪತ್ತೆ ಹಚ್ಚಿ ತೆರವುಗೊಳಿಸುವುದೇ ಸವಾಲು!
ಪಾಕಿಸ್ತಾನ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ 14 ಅಂಶಗಳ ಒಪ್ಪಂದ ನಡೆದಿದೆ. ಒಪ್ಪಂದದ ಪ್ರಕಾರ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಒಪ್ಪಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಮೇಲಿನ ಆರ್ಥಿಕ ಮತ್ತು ವ್ಯಾಪಾರ ದಿಗ್ಬಂಧನಗಳನ್ನು ಹಿಂಪಡೆಯಲು ಅಮೆರಿಕ ಸಮ್ಮತಿಸಿದೆ.
ಉಭಯ ದೇಶಗಳು ಗಡಿ ಹಾಗೂ ಸಮುದ್ರ ಮಾರ್ಗಗಳಲ್ಲಿ ಜಂಟಿ ಕಣ್ಗಾವಲನ್ನು ಕಡಿಮೆಗೊಳಿಸಿ, ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಲು ಒಪ್ಪಿವೆ. ಇರಾನ್ ತಕ್ಷಣದಿಂದಲೇ ಜಾಗತಿಕ ಮಾರುಕಟ್ಟೆಗೆ ಕಚ್ಚಾ ತೈಲ ರಫ್ತು ಮಾಡಲು ಅಮೆರಿಕದ ಹಣಕಾಸು ಇಲಾಖೆಯು ವಿಶೇಷ ವಿನಾಯಿತಿಗಳನ್ನು ನೀಡಿದೆ. ಮುಂದಿನ 60 ದಿನಗಳಲ್ಲಿ ಉಭಯ ದೇಶಗಳು ಚರ್ಚಿಸಿ ಅಂತಿಮ ಶಾಂತಿ ಒಪ್ಪಂದದ ನಿಯಮಗಳನ್ನು ರೂಪಿಸಲಿವೆ.
ಉಭಯ ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.




