ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಪ್ರಭು ಅವರು, ರಕ್ತದಾನವು ಅತ್ಯಂತ ಶ್ರೇಷ್ಠ ಸೇವೆಯಾಗಿದ್ದು ರಕ್ತದಾನ ಮಹಾದಾನ ಎಂಬ ಮನೋಭಾವದೊಂದಿಗೆ ಪ್ರತಿಯೊಬ್ಬರೂ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಳೆದ ಹತ್ತು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆ ಸುಮಾರು 1 ಲಕ್ಷ 7 ಸಾವಿರ ಯುನಿಟ್ ರಕ್ತ ಸಂಗ್ರಹಿಸಿರುವುದು ಶ್ಲಾಘನೀಯ ಸಾಧನೆ. ರಕ್ತ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆರಿಗೆ,ಅಪಘಾತ ಹಾಗೂ ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅಗತ್ಯ ಹೆಚ್ಚಾಗಿರುವುದರಿಂದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಈ ಸಾಧನೆ ಜಿಲ್ಲೆಯ ಜನರ ಸಾಮಾಜಿಕ ಕಳಕಳಿ ಹಾಗೂ ರಕ್ತದಾನಿಗಳ ಸಾಮಾಜಿಕ ಜವಾಬ್ದಾರಿಯಿಂದ ಸಾಧ್ಯವಾಗಿದೆ ಎಂದು ತಿಳಿಸಿ, ರಕ್ತದಾನಿಗಳಿಗೆ ಹಾಗೂ ಸಂಸ್ಥೆಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಮಂಜುನಾಥ್ ಅವರು ಮಾತನಾಡಿ,ಮನುಷ್ಯ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ ಜೀವ ಉಳಿಸಲು ಮಾನವ ರಕ್ತವೇ ಅಗತ್ಯವಾಗಿರುವುದರಿಂದ ಪ್ರತಿಯೊಬ್ಬರೂ ರಕ್ತದಾನದಂತಹ ಮಹಾದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ವಾರಾಂತ್ಯಗಳಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಭಾರತೀಯ ಸರ್ಜನ್ಸ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಶಾಂತ್ ಎಸ್. ಮೂರ್ತಿ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಈಗ ಯುವಜನರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಒಬ್ಬರು ರಕ್ತದಾನ ಮಾಡಿದರೆ ಮೂವರು ಜೀವ ಉಳಿಸಬಹುದು. ರಕ್ತಕ್ಕೆ ಬದಲಿಯಾಗಿ ಬೇರೆ ಯಾವುದನ್ನೂ ನೀಡಲು ಸಾಧ್ಯವಿಲ್ಲ ಎಂದರು.
ಇದನ್ನು ಓದಿದ್ದೀರಾ..?ಕೋಲಾರ | ದಲಿತ ಚಳುವಳಿಯ ಹೆಜ್ಜೆ ಗುರುತುಗಳೇ ಯುವಕರಿಗೆ ಸ್ಪೂರ್ತಿಯಾಗಬೇಕು: ಎಂಎಲ್ಸಿ ಅನಿಲ್ ಕುಮಾರ್
ರಕ್ತದಾನಿಗಳ ಹೆಚ್ಚಿನ ಭಾಗವಹಿಸುವಿಕೆಯಿಂದ ಗರ್ಭಿಣಿ ಸ್ತ್ರೀಯರ ಸಾವಿನ ಪ್ರಮಾಣವೂ ಕಡಿಮೆಯಾಗಲು ನೆರವಾಗಿದೆ. ಇಂದು ಆಯೋಜಿಸಿರುವ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ವೈದ್ಯರು, ತರಬೇತಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಉದ್ಯೋಗಿಗಳು ರಕ್ತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಸುನಿಲ್ ಜೋಶಿ, ಅರುಣ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.



