“ನಮ್ಮ ದೇಶದಲ್ಲಿ ಕೇವಲ 36 ಶೇಕಡ ಜನರಲ್ಲಿ ಮಾತ್ರ ಚುನಾವಣಾ ಆಯೋಗ ಕೇಳಿರುವ ದಾಖಲೆಗಳಿವೆ. ಉಳಿದ 64 ಶೇಕಡ ಜನರಲ್ಲಿ ದಾಖಲೆಗಳು ಇಲ್ಲ. ಹಾಗಾಗಿ, ಎಸ್ಐಆರ್ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಜನರು ಮತದಾನದ ಹಕ್ಕು ಕಳೆದುಕೊಳ್ಳುವುದು ಖಚಿತ” ಎಂದು ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾದ ಸಂಚಾಲಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಕನ್ನಿ ಅವರು ಕಳವಳ ವ್ಯಕ್ತಪಡಿಸಿದರು.
ಗದಗದ ಪತ್ರಿಕಾ ಭವನದಲ್ಲಿ ಬುಧವಾರ (ಜೂನ.17) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಇಲ್ಲದ ದಾಖಲೆಗಳನ್ನು ಕೇಳಿ, ಲಾಜಿಕಲ್ ಡಿಸ್ಕ್ರಿಪೆನ್ಸಿಯಂತಹ ಹೊಸ ನಿಯಮಗಳ ಮೂಲಕ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ. ಎಸ್‌ಐಆರ್ ಮೂಲಕ ಚುನಾವಣಾ ಆಯೋಗ ನಮ್ಮ ಪೌರತ್ವ ಪರಿಶೀಲನೆಗೆ ಇಳಿದಿದೆ. ಪೌರತ್ವ ನಿರ್ಣಯಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಹಾಗಾಗಿ, ಈ ಪ್ರಕ್ರಿಯೆ ಒಪ್ಪುವಂತದಲ್ಲ” ಎಂದರು.
“ನುಸುಳುಕೋರರನ್ನು ಹೊರಗೆ ಹಾಕುತ್ತೇವೆ ಎಂಬ ನೆಪ ಹೇಳಿ ಎಸ್‌ಐಆರ್ ನಡೆಸುತ್ತಿದ್ದಾರೆ. ಈಗಾಗಲೇ ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಇವರೆಲ್ಲ ನುಸುಳುಕೋರರ?” ಎಂದು ಪ್ರಶ್ನಿಸಿದರು.
ನಂತರ ಸಾಮಾಜಿಕ ಹೋರಾಟಗಾರ್ತಿ ಡಾ. ಇಸಾಬೆಲ್ಲ ಝೇವಿಯರ್ ಮಾತನಾಡಿ, “ಎಸ್‌ಐಆರ್ ಎಂಬುವುದು ಹೆಸರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಆಗಿರಬಹುದು. ಆದರೆ, ಇದರ ಹಿಂದಿನ ಉದ್ದೇಶ ಬೇರೆಯದ್ದೇ ಇದೆ. ಇದುಆರ್‌ಎಸ್‌ಎಸ್ ಹಾಗೂ ಸಂಘಪರಿವಾರದ ಹಿಡನ್ ಅಜೆಂಡಾದ ಜಾರಿ ಪ್ರಕ್ರಿಯೆ” ಎಂದು ಟೀಕಿಸಿದರು.
“ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ” ಎಂದು ಹೇಳಿದರು.
“ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಒಪ್ಪುವಂತದಲ್ಲ. ನಾವು ಮತದಾರರ ಪಟ್ಟಿಯ ಪರಿಷ್ಕರಣೆಯ ವಿರುದ್ದವಿಲ್ಲ, ವಿಶೇಷ ಪರಿಷ್ಕರಣೆಯನ್ನು ವಿರೋಧಿಸುತ್ತೇವೆ. ಲಾಜಿಕಲ್ ಡಿಸ್ಕ್ರಿಪೆನ್ಸಿಯಂತಹ ಕೋಟ್ಯಾಂತರ ಮತದಾರರನ್ನು ಹೊರಗಿಡುವ ಕುತಂತ್ರವನ್ನು ಒಪ್ಪುವುದಿಲ್ಲ” ಎಂದರು.
“ಎಸ್‌ಐಆರ್ ಹೆಚ್ಚು ಪರಿಣಾಮ ಎದುರಿಸುವವರು ನಮ್ಮ ಹೆಣ್ಣು ಮಕ್ಕಳು. ಅವರಿಗೆ ತಂದೆಯ ಮನೆಯಲ್ಲಿ ಒಂದು ಹೆಸರಿದ್ದರೆ, ಮದುವೆಯಾದ ಮೇಲೆ ಮತ್ತೊಂದು ಹೆಸರಿರುತ್ತದೆ. ಎಸ್‌ಐಆರ್‌ನಲ್ಲಿ ಒಂದು ಸ್ಲೆಲ್ಲಿಂಗ್ ತಪ್ಪಿದರೂ ನಾವು ಮತದಾರರ ಪಟ್ಟಿಯಿಂದ ಹೊರ ಬೀಳುತ್ತೇವೆ. ಹೀಗಿರುವಾಗ ಹೆಸರು ಬದಲಿಸುವ ಹೆಣ್ಣು ಮಕ್ಕಳ ಗತಿಯೇನು” ಎಂದು ಪ್ರಶ್ನಿಸಿದರು.
ಎಸ್‌ಐಆರ್‌ನಲ್ಲಿ ಹೆಚ್ಚು ಸಮಸ್ಯೆಗೆ ಸಿಲುಕುವವರು ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹೆಣ್ಣು ಮಕ್ಕಳು. ಅವರಲ್ಲಿ ಚುನಾವಣಾ ಆಯೋಗ ಕೇಳಿದ ದಾಖಲೆಗಳು ಇರಲು ಸಾಧ್ಯವೇ ಇಲ್ಲ. ಹಾಗಾಗಿ, ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುವುದಾದರೆ ನಾವು ಮುಂದಿಟ್ಟಿರುವ ಬೇಡಿಕೆಗಳಿಗೆ ಆಯೋಗ ಸ್ಪಂದಿಸಬೇಕು. ಒಬ್ಬರೇ ಒಬ್ಬರು ಅರ್ಹರು ಮತದಾರರ ಪಟ್ಟಿಯಿಂದ ಹೊರ ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು” ಎಂದರು.
ಮೈ ಓಟ್ ಮೈ ರೈಟ್ ಆಂದೋಲನದ ನಾಯಕ ಆರಿಫುಲ್ಲಾ ಮಾತನಾಡಿ, ಚುನಾವಣಾ ಆಯೋಗದ ಮುಂದೆ ಜನ ಸಂಘಟನೆಗಳು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕು. ಜನರ ಮತದಾನದ ಹಕ್ಕನ್ನು ಉಳಿಸುವ ಕೆಲಸವನ್ನು ಆಯೋಗ ಮಾಡಬೇಕು. ರಾಜ್ಯ ಸರ್ಕಾರ ಕೂಡ ತ್ವರಿತ ಗತಿಯಲ್ಲಿ ಜನರಿಗೆ ದಾಖಲೆಗಳನ್ನು ನೀಡಿ ಅವರ ಮತದಾನದ ಹಕ್ಕನ್ನು ಉಳಿಸುವ ಕೆಲಸ ಮಾಡಬೇಕು. ಆಯೋಗದ ಮೇಲೆ ಒತ್ತಡ ಹೇರಲು ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ಆಯೋಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಗದಗ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ, ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಜುನೈದ್, ಸಂವಿಧಾನ ಸಂರಕ್ಷರ ಪಡೆಯ ಸರೋವರ್ ಬೆಂಕಿಕೆರೆ, ಗದಗ-ಬೆಟಗೇರಿ ಅಂಜುಮಾನ್ ಎ ಇಸ್ಲಾಮಿ ಅಧ್ಯಕ್ಷ ಅನ್ವರ್ ಬಾಗೇವಾಡಿ, ಸಾಮಾಜಿಕ ಕಾರ್ಯಕರ್ತ ಮುತ್ತು ಇದ್ದರು.
ಸುದ್ದಿಗೋಷ್ಠಿಗೂ ಮುನ್ನ ಎಸ್‌ಐಆರ್ ವಿರೋಧಿ ಜನಜಾಗೃತಿ ತಂಡ ಗದಗ-ಬೆಟಗೇರಿ ನಗರಸಭೆಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿತು. ಸ್ಥಳೀಯರ ಮುಖಂಡರು ಈ ವೇಳೆ ಸಾಥ್ ನೀಡಿದರು.




